ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಸ್‌ ಪಾಸ್‌ ವಿಳಂಬ; ವಿದ್ಯಾರ್ಥಿಗಳ ಪರದಾಟ

Last Updated 16 ಜುಲೈ 2019, 15:28 IST
ಅಕ್ಷರ ಗಾತ್ರ

ಬೆಳಗಾವಿ: ಪದವಿಪೂರ್ವ ಹಾಗೂ ಪದವಿ ಕಾಲೇಜುಗಳ ಪ್ರಸಕ್ತ ಸಾಲಿನ ಶೈಕ್ಷಣಿಕ ವರ್ಷ ಆರಂಭವಾಗಿ ಒಂದು ತಿಂಗಳಿಗಿಂತ ಹೆಚ್ಚು ಸಮಯ ಕಳೆದಿದ್ದರೂ ರಿಯಾಯಿತಿ ದರದ ಬಸ್‌ ಪಾಸ್‌ಗಳಿನ್ನೂ ವಿದ್ಯಾರ್ಥಿಗಳ ಕೈ ಸೇರಿಲ್ಲ. ಪ್ರತಿದಿನ ನೂರಾರು ರೂಪಾಯಿ ಬಸ್‌ ಟಿಕೆಟ್‌ಗೆ ಖರ್ಚು ಮಾಡಿಕೊಂಡು ಕಾಲೇಜಿಗೆ ಬರಲಾಗದ ಸಾಕಷ್ಟು ಬಡವಿದ್ಯಾರ್ಥಿಗಳು ಗೈರಾಗುತ್ತಿದ್ದಾರೆ.

ಸಾಮಾನ್ಯವಾಗಿ ಕಾಲೇಜುಗಳು ವಿದ್ಯಾರ್ಥಿಗಳ ಪ್ರವೇಶ ಪ್ರಕ್ರಿಯೆ ಆರಂಭಿಸಿದಾಗಲೇ, ರಿಯಾಯಿತಿ ದರದ ಬಸ್‌ ಪಾಸ್‌ ನೀಡುವಿಕೆಯ ಪ್ರಕ್ರಿಯೆಯೂ ಆರಂಭಗೊಳ್ಳಬೇಕಿತ್ತು. ಆದರೆ, ಈ ಸಲ ವಿಳಂಬವಾಗಿದೆ. ಕಾಲೇಜಿಗೆ ಪ್ರವೇಶ ಪಡೆದು ತಿಂಗಳು ಕಳೆದರೂ ಬಸ್‌ ಪಾಸ್‌ ವಿತರಣೆಯಾಗುತ್ತಿಲ್ಲ.

ಕಾಲೇಜಿಗೆ ಪ್ರವೇಶ ಪಡೆದ ವಿದ್ಯಾರ್ಥಿಗಳು ಈಗಾಗಲೇ, ನಿಗದಿತ ಅರ್ಜಿ ನಮೂನೆ ಭರ್ತಿ ಮಾಡಿದ್ದಾರೆ. ಭಾವಚಿತ್ರ ಸಮೇತ ಶುಲ್ಕದ ಹಣವನ್ನು ಕೂಡ ಕೊಟ್ಟಿದ್ದಾರೆ. ಆದರೆ, ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಅವರಿಗೆ ಇದುವರೆಗೆ ಪಾಸ್‌ ವಿತರಿಸಿಲ್ಲ. ಇಂದು, ನಾಳೆ ಎನ್ನುತ್ತ ಸಾರಿಗೆ ಅಧಿಕಾರಿಗಳು ದಿನಗಳನ್ನು ದೂಡುತ್ತಿದ್ದಾರೆ. ಇದರಿಂದಾಗಿ ತಮಗೆ ಆರ್ಥಿಕ ಹೊರೆಯಾಗಿದೆ ಎಂದು ವಿದ್ಯಾರ್ಥಿಗಳು ಅಳಲು ತೋಡಿಕೊಂಡಿದ್ದಾರೆ.

‘ಪ್ರತಿ ವರ್ಷ ಕಾಲೇಜಿಗೆ ಪ್ರವೇಶ ಪಡೆದ ಒಂದು ವಾರದಲ್ಲಿಯೇ ಬಸ್‌ ಪಾಸ್‌ ಸಿಗುತ್ತಿತ್ತು. ಅದರಿಂದಾಗಿ, ಸಂಚರಿಸಲು ಅನುಕೂಲವಾಗುತ್ತಿತ್ತು. ಮೊದಲ ದಿನದಿಂದಲೇ ಪಾಠ ಪ್ರವಚನ ಕೇಳಲು ಸಾಧ್ಯವಾಗುತ್ತಿತ್ತು. ಆದರೆ, ಈ ಸಲ ಒಂದು ತಿಂಗಳಿಗಿಂತಲೂ ಹೆಚ್ಚು ಸಮಯ ಕಳೆದಿದ್ದರೂ ಪಾಸ್‌ ನೀಡುತ್ತಿಲ್ಲ’ ಎಂದು ಬೆಳಗಾವಿ ನಗರದ ಕಾಲೇಜಿನ ವಿದ್ಯಾರ್ಥಿಯೊಬ್ಬರು ಹೇಳಿದರು.

ದಿನಾಂಕ ವಿಸ್ತರಣೆಯೂ ಸ್ಥಗಿತ:ಕಳೆದ ವರ್ಷ ಪ್ರವೇಶ ಪಡೆದಿದ್ದ ಹಿರಿಯ ವಿದ್ಯಾರ್ಥಿಗಳ ಬಸ್‌ ಪಾಸ್‌ಗೆ ದಿನಾಂಕವನ್ನು ಇದುವರೆಗೆ ವಿಸ್ತರಿಸಿ ನೀಡಲಾಗಿತ್ತು. ಅದನ್ನೂ ಈಗ ನಿಲ್ಲಿಸಲಾಗಿದೆ. ಹಿರಿಯ ವಿದ್ಯಾರ್ಥಿಗಳು ಕೂಡ ಬಸ್‌ ಪಾಸ್‌ ಇಲ್ಲದೇ ಪರದಾಡುವಂತಾಗಿದೆ.

ಹಾಜರಾತಿ ಕಡಿಮೆ:‘ವೇಳಾಪಟ್ಟಿಯಂತೆ ಕಾಲೇಜುಗಳಲ್ಲಿ ಪಾಠ ಪ್ರವಚನ ಆರಂಭಿಸಿ ಬಿಟ್ಟಿದ್ದೇವೆ. ಹಲವು ವಿಭಾಗಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಗಣನೀಯವಾಗಿ ಕಡಿಮೆ ಇದೆ. ಮುಖ್ಯವಾಗಿ ಸುತ್ತಮುತ್ತಲಿನ ಪ್ರದೇಶಗಳಿಂದ ಆಗಮಿಸುವ ವಿದ್ಯಾರ್ಥಿಗಳ ಸಂಖ್ಯೆಯಲ್ಲಿ ತುಂಬಾ ಕಡಿಮೆ ಇದೆ. ವಿದ್ಯಾರ್ಥಿಗಳು ಕಡಿಮೆ ಇದ್ದರೂ ನಾವು ಪಾಠ ಮುಂದುವರಿಸಲೇಬೇಕಾಗಿದೆ. ಇದರಿಂದಾಗಿ ಗೈರಾಗಿರುವ ವಿದ್ಯಾರ್ಥಿಗಳಿಗೆ ನಷ್ಟ ಉಂಟಾಗಲಿದೆ’ ಎಂದು ಕಾಲೇಜ್‌ವೊಂದರ ಕಲಾ ವಿಭಾಗದ ಉಪನ್ಯಾಸಕರು ನುಡಿದರು.

ಬಸ್‌ ಪಾಸ್‌ ತೊಂದರೆಯಿಲ್ಲ: ‘ಯಾವುದೇ ರೀತಿಯಲ್ಲಿ ಬಸ್‌ ಪಾಸ್‌ ಕೊರತೆ ಇಲ್ಲ. ಕಾಲೇಜಿನ ಸಿಬ್ಬಂದಿಯು ತಕ್ಷಣ ಹಣ ಕಟ್ಟಿ, ಪಾಸ್‌ ತೆಗೆದುಕೊಂಡು ಹೋಗಬಹುದು’ ಎಂದು ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ವಿಭಾಗೀಯ ನಿಯಂತ್ರಣಾಧಿಕಾರಿ ಎಂ.ಆರ್‌.ಮುಂಜಿ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT