ಮಂಗಳವಾರ, ಮಾರ್ಚ್ 28, 2023
33 °C
ಆಹಾರ ಇಲಾಖೆ ಅಧಿಕಾರಿಗಳಿಂದ ಪತ್ತೆ, ರದ್ದು

ಐಟಿ ತುಂಬುವವರೂ ಬಿ‍ಪಿಎಲ್ ಚೀಟಿ ಪಡೆದರು!

ಎಂ.ಮಹೇಶ Updated:

ಅಕ್ಷರ ಗಾತ್ರ : | |

ಬೆಳಗಾವಿ: ಸಾರ್ವಜನಿಕ ವಿತರಣಾ ವ್ಯವಸ್ಥೆಯಲ್ಲಿ ಉಚಿತವಾಗಿ ಅಕ್ಕಿ ಮೊದಲಾದ ಸೌಲಭ್ಯಗಳನ್ನು ಪಡೆಯುವುದಕ್ಕೆ ನೆರವಾಗುವ ನಿಟ್ಟಿನಲ್ಲಿ ಬಡತನ ರೇಖೆಗಿಂತ ಕೆಳಗಿರುವವರಿಗೆ ಸರ್ಕಾರದಿಂದ ನೀಡಲಾಗುವ ‘ಬಿಪಿಎಲ್ ಪಡಿತರ ಚೀಟಿ’ಗಳನ್ನು ಅಕ್ರಮವಾಗಿ ಪಡೆದಿರುವ ಶ್ರೀಮಂತರ ವಿರುದ್ಧದ ಕಾರ್ಯಾಚರಣೆ ಮುಂದುವರಿದಿದೆ.

ಆಹಾರ, ನಾಗರಿಕ ಪೂರೈಕೆ ಹಾಗೂ ಗ್ರಾಹಕ ವ್ಯವಹಾರಗಳ ಇಲಾಖೆಯಿಂದ ಸಮೀಕ್ಷೆ ನಡೆಸಿ, ಶಿಸ್ತು ಕ್ರಮ ಜರುಗಿಸುವ ಕಾರ್ಯಾಚರಣೆ ಕೈಗೊಳ್ಳುತ್ತಿದ್ದರೂ ‘ಅನರ್ಹರು’ ಎಚ್ಚೆತ್ತುಕೊಂಡಿಲ್ಲ. ಅಧಿಕಾರಿಗಳೇ ‘ಬಿಸಿ’ ಮುಟ್ಟಿಸುತ್ತಿದ್ದಾರೆ.

ಹೀಗೆ ಪಡೆದವರಲ್ಲಿ ಬಹುತೇಕ ಸರ್ಕಾರಿ ನೌಕರರೇ ಇರುವುದು ಗೊತ್ತಾಗಿದೆ. ಸರ್ಕಾರಿ ನೌಕರಿ ಸಿಕ್ಕ ಮೇಲೆ ಹೆಸರುಗಳನ್ನು ತೆಗೆಸುವ ಕೆಲಸ ಮಾಡದವರೂ ಇದ್ದಾರೆ. ಸುಳ್ಳು ಮಾಹಿತಿ ನೀಡಿ ಸೌಲಭ್ಯ ಗಳಿಸಿದವರ ವಿರುದ್ಧ ಕ್ರಮ ಜರುಗಿಸಲಾಗಿದೆ. ಶಿಕ್ಷಕರು, ಪೊಲೀಸರು, ಇಂಧನ ಇಲಾಖೆಯವರು ಅಕ್ರಮ ಎಸಗಿರುವುದು ಕಂಡುಬಂದಿದೆ.

ದಂಡ ವಸೂಲಿ:

ಜಿಲ್ಲೆಯಲ್ಲಿ 2020ರ ಏಪ್ರಿಲ್‌ನಿಂದ ಈ ವರ್ಷದ ಜೂನ್‌ ಅಂತ್ಯದವರೆಗೆ ಒಟ್ಟು 7,892 ಅನರ್ಹ ಬಿಪಿಎಲ್‌ ಪಡಿತರ ಚೀಟಿಗಳನ್ನು ರದ್ದುಪಡಿಸಿ, ₹ 1.61 ಲಕ್ಷ ದಂಡ ವಿಧಿಸಲಾಗಿದೆ. ಬೆಳಗಾವಿ ತಾಲ್ಲೂಕಿನಲ್ಲಿ ಅತಿ ಹೆಚ್ಚು ಅಂದರೆ 1,529 ಚೀಟಿಗಳನ್ನು ರದ್ದುಪಡಿಸಲಾಗಿದೆ. ಅತಿ ಹೆಚ್ಚು ದಂಡ ವಿಧಿಸಿರುವುದು ಅಥಣಿ ತಾಲ್ಲೂಕಿನಲ್ಲಿ (₹1,21,350). ಬೈಲಹೊಂದಲ್ಲಿ ₹ 34,314 ಮತ್ತು ಗೋಕಾಕದಲ್ಲಿ ₹ 6,170 ದಂಡ ವಸೂಲಾಗಿದೆ. 2021ನೇ ಸಾಲಿನಲ್ಲಿ ಅಂದರೆ ಏಪ್ರಿಲ್‌ನಿಂದ ಜೂನ್‌ವರೆಗೆ 4ಸಾವಿರ ಚೀಟಿಗಳು ರದ್ದಾಗಿವೆ.

3,273 ಮಂದಿ ಆದಾಯ ತೆರಿಗೆ (ಐಟಿ) ಪಾವತಿಸುವವರು, ವಾರ್ಷಿಕ ₹ 1.20 ಲಕ್ಷಕ್ಕಿಂತ ಹೆಚ್ಚಿನ ವರಮಾನ ಹೊಂದಿರುವ 1,321 ಮಂದಿ, ಸರ್ಕಾರಿ ಮತ್ತು ಅರೆ ಸರ್ಕಾರಿ ನೌಕರಿಯಲ್ಲಿರುವ 29 ಮಂದಿ ಅನಧಿಕೃತವಾಗಿ ಬಿಪಿಎಲ್ ಪಡಿತರ ಚೀಟಿ ಪಡೆದಿದ್ದು, ಅವುಗಳನ್ನು ರದ್ದುಗೊಳಿಸಲಾಗಿದೆ ಎಂದು ಇಲಾಖೆಯ ಜಂಟಿ ನಿರ್ದೇಶಕ ಚನ್ನಬಸಪ್ಪ ಕೊಡ್ಲಿ ‘ಪ್ರಜಾವಾಣಿ’ಗೆ ತಿಳಿಸಿದರು.

ಜಿಲ್ಲೆಯಲ್ಲಿ 11,43,065 ಬಿಪಿಎಲ್‌ ಪಡಿತರ ಚೀಟಿದಾರರಿದ್ದಾರೆ. ಎರಡು ವರ್ಷಗಳಲ್ಲಿ 13,331 ಚೀಟಿಗಳನ್ನು ರದ್ದುಪಡಿಸಲಾಗಿತ್ತು. 8,842 ಕಾರ್ಡ್‌ಗಳನ್ನು ಎಪಿಎಲ್‌ಗೆ ಪರಿವರ್ತಿಸಲಾಗಿತ್ತು. ಸುಳ್ಳು ಮಾಹಿತಿ ನೀಡಿ ಅಕ್ರಮವಾಗಿ ಪಡೆದಿದ್ದವರಿಂದ ₹ 42.63 ಲಕ್ಷ ದಂಡ (ಇದೇ ವರ್ಷದ ಫೆಬ್ರುವರಿ 16ರವರೆಗೆ) ವಿಧಿಸಲಾಗಿತ್ತು.

ಅನಧಿಕೃತವಾಗಿ ‍ಪಡೆದಿದ್ದ ಕೆಲವರು ಸ್ವಯಂಪ್ರೇರಣೆಯಿಂದ ಹಿಂತರುಗಿಸಿದ್ದಾರೆ. ಅಧಿಕಾರಿಗಳೇ ಪತ್ತೆ ಹಚ್ಚಿ ರದ್ದುಪಡಿಸಿದರೆ, ಪಡಿತರ ಚೀಟಿದಾರರು  ತೆಗೆದುಕೊಂಡಿರುವ ‘ಅನ್ನಭಾಗ್ಯ’ ಅಕ್ಕಿ ಪ್ರಮಾಣವನ್ನು ಲೆಕ್ಕ ಹಾಕಿ ಮುಕ್ತ ಮಾರುಕಟ್ಟೆಯಲ್ಲಿ ಕೆ.ಜಿ.ಗೆ ಇರುವಷ್ಟು ಹಣವನ್ನು ದಂಡವಾಗಿ ವಸೂಲಿ ಮಾಡಲಾಗುತ್ತಿದೆ. ದಂಡ ಕಟ್ಟದಿದ್ದಲ್ಲಿ ಕ್ರಿಮಿನಲ್ ಪ್ರಕರಣ ದಾಖಲಿಸಲು ಕೂಡ ಅವಕಾಶವಿದೆ. ಬಹುತೇಕರು ದಂಡ ಪಾವತಿಸಿದ್ದಾರೆ. ಮರಳಿಸಿದವರಿಗೆ ಎಪಿಎಲ್‌ ಚೀಟಿಗೆ ಪರಿವರ್ತಿಸಿಕೊಡಲಾಗಿದೆ.

ಅನಧಿಕೃತ ಚೀಟಿಗಳ ಮಾಹಿತಿ

ತಾಲ್ಲೂಕು;ಸಂಖ್ಯೆ

ಅಥಣಿ;714

ಬೈಲಹೊಂಗಲ;433

ಬೆಳಗಾವಿ;1,529

ಚಿಕ್ಕೋಡಿ;1,193

ಗೋಕಾಕ;1,155

ಹುಕ್ಕೇರಿ;476

ಖಾನಾಪುರ;432

ರಾಯಬಾಗ;819

ರಾಮದುರ್ಗ;504

ಸವದತ್ತಿ;637

ಒಟ್ಟು;7892

ಕಾರ್ಯಾಚರಣೆ ಮುಂದುವರಿಕೆ

ಅಕ್ರಮ ಮತ್ತು ಅನಧಿಕೃತವಾಗಿ ಬಿಪಿಎಲ್‌ ಪಡಿತರ ಚೀಟಿ ಪಡೆದಿರುವವರ ವಿರುದ್ಧದ ಕಾರ್ಯಾಚರಣೆ ಮುಂದುವರಿಯಲಿದೆ.

– ಚನ್ನಬಸಪ್ಪ ಕೊಡ್ಲಿ, ಜಂಟಿ ನಿರ್ದೇಶಕ, ಆಹಾರ ಇಲಾಖೆ

ಮುಖ್ಯಾಂಶಗಳು

15 ತಿಂಗಳಲ್ಲಿ 7,892 ಚೀಟಿ ರದ್ದು

ಬೆಳಗಾವಿ ತಾಲ್ಲೂಕಿನಲ್ಲಿ ಅತಿ ಹೆಚ್ಚು

ಎಚ್ಚೆತ್ತುಕೊಳ್ಳದ ‘ಉಳ್ಳವರು’

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು