ಬುಧವಾರ, ಮೇ 18, 2022
23 °C
ಕ್ಷೇತ್ರಮಟ್ಟದಲ್ಲಿ ರೈತರಿಗೆ ಮಾಹಿತಿ ನೀಡುವಲ್ಲಿ ತೊಡಕು

ಬೆಳಗಾವಿ ಜಿಲ್ಲೆಯಲ್ಲಿ ಕೃಷಿ ಅಧಿಕಾರಿಗಳೇ ಇಲ್ಲ: ಮಂಜೂರು 214, ಖಾಲಿ 160!

ಇಮಾಮ್‌ಹುಸೇನ್‌ ಗೂಡುನವರ Updated:

ಅಕ್ಷರ ಗಾತ್ರ : | |

Prajavani

ಬೆಳಗಾವಿ: ಮುಂಗಾರು ಹಂಗಾಮಿಗಾಗಿ ರೈತರು ಭೂಮಿ ಹದಗೊಳಿಸುತ್ತಿದ್ದಾರೆ. ಆದರೆ, ಕ್ಷೇತ್ರ ಮಟ್ಟದಲ್ಲಿ ಅವರಿಗೆ ಮಾರ್ಗದರ್ಶನ ನೀಡಲು ಸಮರ್ಪಕವಾಗಿ ಸಹಾಯಕ ಕೃಷಿ ಅಧಿಕಾರಿ(ಎಎಒ)ಗಳೇ ಇಲ್ಲ.

ರೈತರಿಗೆ ಉತ್ತೇಜನ ನೀಡಲು ರಾಜ್ಯ ಸರ್ಕಾರ ಹಲವು ಯೋಜನೆ ಜಾರಿಗೊಳಿಸುತ್ತಿವೆ. ಅವುಗಳ ಮಾಹಿತಿ ತಲುಪಿಸಲು ಮತ್ತು ರೈತರೊಂದಿಗೆ ನೇರ ಸಂಪರ್ಕದಲ್ಲಿರಲು ರಾಜ್ಯದಲ್ಲಿ 2,099 ಎಎಒ ಹುದ್ದೆ ಮಂಜೂರುಗೊಳಿಸಿದೆ. ಆದರೆ, ಕೇವಲ 460 ಮಂದಿ ಕಾರ್ಯನಿರ್ವಹಿಸುತ್ತಿದ್ದು, 1,639 ಹುದ್ದೆ ಹಲವು ವರ್ಷಗಳಿಂದ ಖಾಲಿ ಇವೆ. ಜಿಲ್ಲೆಯೊಂದರಲ್ಲೇ 160 ಎಎಒ(214 ಮಂಜೂರು) ಹುದ್ದೆ ಖಾಲಿ ಇವೆ.

ಹಲವರಿಗೆ ಬಡ್ತಿ: ‘ಈ ಹಿಂದೆ ಪದವಿ ವ್ಯಾಸಂಗ ಮಾಡಿರದವರನ್ನು ಎಎಒ ಆಗಿ ಸರ್ಕಾರ ನೇಮಿಸಿತ್ತು. ಆದರೆ, ಇತ್ತೀಚಿನ ವರ್ಷಗಳಲ್ಲಿ ಕೃಷಿ ಪದವೀಧರರನ್ನೇ ನೇಮಿಸಿಕೊಳ್ಳಲಾಗುತ್ತಿದೆ. ಕಳೆದ ವರ್ಷ ಸೇವಾನುಭವ ಆಧರಿಸಿ ಸರ್ಕಾರವು ಹಲವರಿಗೆ ಹೋಬಳಿ ಮಟ್ಟದ ಅಧಿಕಾರಿಗಳಾಗಿ ಬಡ್ತಿ ನೀಡಿದೆ. ಆದರೆ, ಸೇವಾನಿವೃತ್ತಿ, ಬಡ್ತಿ ಮತ್ತಿತರ ಕಾರಣಗಳಿಂದ ತೆರವಾದ ಎಎಒ ಹುದ್ದೆ ಭರ್ತಿಗೊಳಿಸದ್ದರಿಂದ ಸಮಸ್ಯೆ ಸೃಷ್ಟಿಯಾಗಿದೆ’ ಎಂದು ಕೃಷಿ ಇಲಾಖೆ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ಏನೇನು ಸಮಸ್ಯೆ?: ಎಎಒಗಳು ಗ್ರಾಮ ಪಂಚಾಯ್ತಿ ಮಟ್ಟದಲ್ಲಿ ಕೆಲಸ ಮಾಡುತ್ತಾರೆ. ರೈತರಿಗೆ ಬಿತ್ತನೆ ಬೀಜ, ರಸಗೊಬ್ಬರ, ಕೃಷಿ ಪರಿಕರಗಳು, ಬೆಳೆ ವಿಮೆ ಮತ್ತಿತರ ಮಾಹಿತಿ ನೀಡುತ್ತಾರೆ. ಕೃಷಿ ವಿಸ್ತರಣೆ ಕೆಲಸದಲ್ಲಿ ಮಹತ್ವದ ಪಾತ್ರ ವಹಿಸುತ್ತಾರೆ. ಗ್ರಾಮಸಭೆಯಲ್ಲಿ ಭಾಗವಹಿಸಿ ಸರ್ಕಾರಿ ಯೋಜನೆಗಳನ್ನು ತಿಳಿಸುತ್ತಾರೆ. ಹೊಲಗಳಿಗೆ ಭೇಟಿ ನೀಡಿ ಮಾರ್ಗದರ್ಶನ ನೀಡುತ್ತಾರೆ. ಸರ್ಕಾರ ಮತ್ತು ಕೃಷಿ ಇಲಾಖೆ ಮಧ್ಯೆ ಸಂಪರ್ಕ ಕೊಂಡಿಯಾಗಿ ಕೆಲಸ ಮಾಡುತ್ತಾರೆ. ಯೋಜನೆಗಳ ಅನುಷ್ಠಾನಕ್ಕೆ ಶ್ರಮಿಸುತ್ತಾರೆ. ರೈತರ ಸಮಸ್ಯೆಗಳನ್ನು ಇಲಾಖೆ ಗಮನಕ್ಕೆ ತಂದು ಪರಿಹರಿಸುತ್ತಾರೆ.

ಆದರೆ, ಶೇ.78ರಷ್ಟು ಹುದ್ದೆ ಖಾಲಿ ಇರುವುದರಿಂದ ಕ್ಷೇತ್ರಮಟ್ಟದಲ್ಲಿ ತಮಗೆ ಸರಿಯಾದ ಮಾಹಿತಿ ಸಿಗುತ್ತಿಲ್ಲ ಎನ್ನುವ ಆರೋಪ ರೈತರದಾಗಿದೆ. ಅಧಿಕಾರಿಗಳಿಗೆ ಕಾರ್ಯಭಾರವೂ ಹೆಚ್ಚುತ್ತಿದೆ.

‘ಲಭ್ಯವಿರುವ ಸಹಾಯಕ ಕೃಷಿ ಅಧಿಕಾರಿಗಳನ್ನೇ ಗರಿಷ್ಠವಾಗಿ ಬಳಸಿಕೊಂಡು ಕ್ಷೇತ್ರ ಮಟ್ಟದಲ್ಲಿ ರೈತರಿಗೆ ಮಾಹಿತಿ ಒದಗಿಸಲು ಪ್ರಯತ್ನಿಸಲಾಗುತ್ತಿದೆ. ಯೋಜನೆಗಳ ಪರಿಣಾಮಕಾರಿ ಅನುಷ್ಠಾನಕ್ಕೆ ಶ್ರಮಿಸಲಾಗುತ್ತಿದೆ’ ಎಂದು ಜಂಟಿ ನಿರ್ದೇಶಕ ಶಿವನಗೌಡ ಪಾಟೀಲ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

ಪ್ರಸ್ತಾವ
ರಾಜ್ಯದಲ್ಲಿ ಖಾಲಿ ಇರುವ ಸಹಾಯಕ ಕೃಷಿ ಅಧಿಕಾರಿಗಳ ಭರ್ತಿ ಸಂಬಂಧ ಹಣಕಾಸು ಇಲಾಖೆಗೆ ಪ್ರಸ್ತಾವ ಸಲ್ಲಿಸಲಾಗಿದೆ. ಅನುಮೋದನೆ ಸಿಕ್ಕ ತಕ್ಷಣ ಕ್ರಮ ಕೈಗೊಳ್ಳಲಾಗುವುದು.
–ಬಿ.ಸಿ. ಪಾಟೀಲ, ಕೃಷಿ ಸಚಿವ

ಸ್ಪಂದಿಸಿಲ್ಲ
8–10 ಗ್ರಾಮ ಪಂಚಾಯ್ತಿಗಳಿಗೆ ಒಬ್ಬರು ಎಒಒ ಇರುವುದರಿಂದ ರೈತರಿಗೆ ಸಕಾಲಕ್ಕೆ ಮಾರ್ಗದರ್ಶನ ಸಿಗುತ್ತಿಲ್ಲ. ಹುದ್ದೆ ಭರ್ತಿಗಾಗಿ ಸರ್ಕಾರಕ್ಕೆ ಹಲವು ಮನವಿ ಸಲ್ಲಿಸಿದರೂ ಸ್ಪಂದಿಸಿಲ್ಲ.
–ರವಿ ಸಿದ್ದಮ್ಮನವರ, ಕಾರ್ಯಾಧ್ಯಕ್ಷ, ಜಿಲ್ಲಾ ಘಟಕ, ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು