ಗುರುವಾರ , ಅಕ್ಟೋಬರ್ 22, 2020
24 °C

ಪತ್ನಿಯನ್ನು ಅಪಹರಿಸಿ ಮೋಸ: ಚಲನಚಿತ್ರ ಸಾಹಿತಿ ಕೆ. ಕಲ್ಯಾಣ್‌ರಿಂದ ದೂರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಳಗಾವಿ: ‘ಅಡುಗೆ ಕೆಲಸದ ಮಹಿಳೆ ತನ್ನ ಪರಿಚಯದ ವ್ಯಕ್ತಿಯೊಂದಿಗೆ ಸೇರಿಕೊಂಡು ತಮ್ಮ ಪತ್ನಿ, ಅತ್ತೆ ಹಾಗೂ ಮಾವನನ್ನು ಅಪಹರಿಸಿ ಆಸ್ತಿ ಬರೆಸಿಕೊಂಡಿದ್ದಾರೆ’ ಎಂದು ಚಲನಚಿತ್ರ ಸಾಹಿತಿ ಕೆ. ಕಲ್ಯಾಣ್ ಇಲ್ಲಿನ ಮಾಳಮಾರುತಿ ಠಾಣೆಗೆ ದೂರು ನೀಡಿದ್ದಾರೆ.

ಬಾಗಲಕೋಟೆಯ ಗಂಗಾ ಕುಲಕರ್ಣಿ ಹಾಗೂ ಬೀಳಗಿಯ ಶಿವಾನಂದ ಬಸವರಾಜ ವಾಲಿ ವಿರುದ್ಧ ಸೆ. 30ದೂರು ನೀಡಿರುವುದು ಶನಿವಾರ ಬೆಳಕಿಗೆ ಬಂದಿದೆ. 

ಕಲ್ಯಾಣ್ ಪತ್ನಿ ಆಶ್ವಿನಿ ಇಲ್ಲಿನ ಮಹಾಂತೇಶ ನಗರದ ಕಣಬರ್ಗಿ ರಸ್ತೆಯ ಸಮೀಪದಲ್ಲಿ ವಾಸವಿದ್ದಾರೆ.

‘ಆರೋಪಿ ಗಂಗಾ ಮನೆಯಲ್ಲಿ ಅಡುಗೆ ಕೆಲಸಕ್ಕೆಂದು ಸೇರಿಕೊಂಡಿದ್ದರು. ಕುಟುಂಬದವರ ಸ್ನೇಹ ಬೆಳೆಸಿದ್ದರು. ಶಿವಾನಂದನನ್ನೂ ಪರಿಚಯಿಸಿದ್ದರು. ಆ ಇಬ್ಬರೂ ಸೇರಿ ಪತ್ನಿ ಅಶ್ವಿನಿ, ಅತ್ತೆ ರಾಧಿಕಾ ಸಾತ್ವಿಕ್ ಹಾಗೂ ಮಾವ ಕೃಷ್ಣ ಸಾತ್ವಿಕ್ ಅವರನ್ನು ಪುಸಲಾಯಿಸಿ ಮೋಸ ಮಾಡಿದ್ದಾರೆ. ಮೂವರ ಬ್ಯಾಂಕ್‌ ಖಾತೆಯಿಂದ ಶಿವಾನಂದ ಅವರ ಖಾತೆಗೆ ₹ 19.80 ಲಕ್ಷ ವರ್ಗಾವಣೆ ಮಾಡಿಸಿಕೊಂಡಿದ್ದಾರೆ. ಅವರ ಹೆಸರಿನಲ್ಲಿ ಜಂಟಿ ಖಾತೆಯಲ್ಲಿದ್ದ ಸಿಟಿಎಸ್ ನಂ.1096/ಎ ನಿವೇಶನವನ್ನು ತನ್ನ ಹೆಸರಿಗೆ ಮಾಡಿಸಿಕೊಂಡು ಮೋಸ ಎಸಗಿದ್ದಾರೆ. ಮೂವರನ್ನೂ ಅಪಹರಿಸಿ ಗೌಪ್ಯವಾಗಿಟ್ಟು ವ್ಯವಹರಿಸಿದ್ದಾರೆ’ ಎಂದು ಕಲ್ಯಾಣ ದೂರು ನೀಡಿದ್ದಾರೆ.

‘ಇದೇ ವರ್ಷದ ಜೂನ್‌ 5ರಿಂದ 15ರವರೆಗೆ ಈ ಕೃತ್ಯ ನಡೆದಿದೆ’ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ಆರೋಪಿ ಶಿವಾನಂದ ಮಂತ್ರವಾದಿ ಎಂದು ತಿಳಿದುಬಂದಿದೆ. ಮಂತ್ರ–ತಂತ್ರ ಅಪಹರಿಸಿ ಆಸ್ತಿ ಬರೆಸಿಕೊಂಡಿದ್ದಾರೆ ಎನ್ನಲಾಗುತ್ತಿದೆ.

ಕಲ್ಯಾಣ್ ಪತ್ನಿ ಶನಿವಾರ ಠಾಣೆಗೆ ಹಾಜರಾಗಿದ್ದರು.

‘ಪ್ರಕರಣ ದಾಖಲಾಗಿದೆ. ಅಶ್ವಿನಿ ಅವರನ್ನು ವಿಚಾರಣೆಗೆ ಒಳಪಡಿಸಲಾಗಿದೆ. ಆರೋಪಿ ಶಿವಾನಂದನನ್ನು ವಶಕ್ಕೆ ಪಡೆಯಲಾಗಿದೆ. ತನಿಖೆ ಮುಂದುವರಿದಿದೆ. ದೂರನ್ನು ಪರಿಶೀಲಿಸಲಾಗುತ್ತಿದೆ. ತಡವಾಗಿ ದೂರು ನೀಡಿದ್ದೇಕೆ ಎನ್ನುವ ಬಗ್ಗೆಯೂ ತನಿಖೆ ನಡೆಸಲಾಗುತ್ತಿದೆ. ಪತ್ನಿಯಿಂದ ಪ್ರತಿ ದೂರು ದಾಖಲಾಗಿಲ್ಲ’ ಎಂದು ಮಾಳಮಾರುತಿ ಠಾಣೆ ಇನ್‌ಸ್ಪೆಕ್ಟರ್‌ ಬಿ.ಆರ್. ಗಡ್ಡೇಕರ ‘ಪ್ರಜಾವಾಣಿ’ಗೆ ತಿಳಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು