ಭಾನುವಾರ, 14 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕನ್ನಡದಲ್ಲೇ ಕನ್ನಡಿಗ–ಕನ್ನಡತಿ ಲಗ್ನ

ಗಡಿ ಕನ್ನಡಿಗರ ವಿಶಿಷ್ಟ ಮದುವೆ, ಸಾಹಿತ್ಯ ಸಮ್ಮೇಳನ ವೇದಿಕೆಯಂತೆ ಕಂಗೊಳಿಸಿದ ಕಲ್ಯಾಣ ಮಂಟಪ
Published 27 ಫೆಬ್ರುವರಿ 2024, 4:21 IST
Last Updated 27 ಫೆಬ್ರುವರಿ 2024, 4:21 IST
ಅಕ್ಷರ ಗಾತ್ರ

ಬೆಳಗಾವಿ: ಗಡಿನಾಡು ಬೆಳಗಾವಿಯಲ್ಲಿ ಸೋಮವಾರ ಕನ್ನಡಮಯವಾದ ಮದುವೆ ನೆರವೇರಿತು. ಸಂಪ್ರದಾಯದ ಕಟ್ಟು‍ಪಾಡು ಮೀರಿದ ಜೋಡಿ ಅಚ್ಚುಕಟ್ಟಾಗಿ, ಕನ್ನಡವನ್ನೇ ಅನುಸರಿಸಿ ಹೊಸಬಾಳಿಗೆ ಕಾಲಿಟ್ಟಿತು.

ಖಾಸಗಿ ಕಂಪನಿಯ ಉದ್ಯೋಗಿಗಳಾದ ಬೆಳಗಾವಿ ತಾಲ್ಲೂಕಿನ ಶಿಂಧೋಳಿಯ ದೀಪಕ್‌ ಮುಂಗರವಾಡಿ ಮತ್ತು ಚನ್ನಮ್ಮನ ಕಿತ್ತೂರು ತಾಲ್ಲೂಕಿನ ದೇವಗಾಂವದ ರಾಜೇಶ್ವರಿ ವಾಂಗಿ ಅವರ ಮದುವೆ ಕನ್ನಡ ಸಾಹಿತ್ಯ ಸಮ್ಮೇಳನದ ವಾತಾವರಣ ನೆನಪಿಸಿತು. ಜೋಡಿಯು ಉಂಗುರದಿಂದ ಹಿಡಿದು ಕಲ್ಯಾಣ ಮಂಟಪದವರೆಗೆ ಸಂಪೂರ್ಣವಾಗಿ ಕನ್ನಡ ಅನುಸರಿಸಿತು.

ಪ್ರವೇಶದ್ವಾರದ ಬಳಿ ಕಿತ್ತೂರು ರಾಣಿ ಚನ್ನಮ್ಮ ಮತ್ತು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅವರ ಪ್ರತಿಮೆಗಳು ಸ್ವಾಗತಿಸಿದರೆ, ಇಡೀ ಕಲ್ಯಾಣ ಮಂಟಪಕ್ಕೆ ಕನ್ನಡ ಧ್ವಜ, ಕನ್ನಡದ ವರ್ಣಮಾಲೆಗಳು ಸೊಬಗು ತಂದವು. ದಿನವಿಡೀ ನಾಡು– ನುಡಿಯ ಹಾಡುಗಳು ರಂಜಿಸಿದವು. ಮದುವೆಗೆ ಬಂದವರೆಲ್ಲ ಸಾಹಿತಿಗಳ ಪುಸ್ತಕ, ಚಿತ್ರ, ಕನ್ನಡ ಧ್ವಜಗಳನ್ನು ಉಡುಗೊರೆಯಾಗಿ ನೀಡಿದರು.

‘ನನ್ನ ಮದುವೆ ರಕ್ತಸಂಬಂಧಿಗಳ ಸಮಾಗಮವಲ್ಲ; ಕನ್ನಡ ನಾಡ ಸಂಬಂಧಿಕರ ಸಮಾಗಮ’ ಎಂಬುದು ಸೇರಿ ಕನ್ನಡ ಪರ ಗೋಡೆ ಬರಹಗಳ ಕಂಡವು. ಕರುನಾಡಿನ ನಕ್ಷೆ ಸಿದ್ಧಪಡಿಸಿ ‘ಸೆಲ್ಫಿ ಸ್ಪಾಟ್‌’ ಕೂಡ ಮಾಡಲಾಗಿತ್ತು.

12 ಪುಟಗಳ ಲಗ್ನಪತ್ರಿಕೆಯಲ್ಲೂ ಕನ್ನಡತನ ಕಾಣಸಿಕ್ಕಿತು. ಮುಖ‍‍ಪುಟದಲ್ಲಿ ಭುವನೇಶ್ವರಿ ಚಿತ್ರ, ಕನ್ನಡ ನಕ್ಷೆ, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರ ಭಾವಚಿತ್ರಗಳು, ಕವಿಗಳು, ಶರಣರು, ಸಂತರು, ಚಿತ್ರರಂಗದ ತಾರೆಗಳ ಚಿತ್ರಗಳು ಖುಷಿ ಕೊಟ್ಟವು. ‘ಕನ್ನಡಿಗರ ಮುಂದಿರುವ ಸವಾಲುಗಳು’ ಎಂಬ ವಿಷಯದ ಕುರಿತು ಒಂದು ಪುಟ ಮೀಸಲಿಡಲಾಗಿದೆ.

‘ಸಭಾಂಗಣಕ್ಕೆ ಕಾಲಿಟ್ಟ ನಂತರ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಬಂದ ಭಾವ ಮೂಡಿತು’ ಎಂದು ಮದುವೆ ಶಾಸ್ತ್ರ ನೆರವೇರಿಸಿದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

‘ಇದು ಕೇವಲ ಮದುವೆಯಲ್ಲ; ದೇಹದ ಕಣಕಣದಲ್ಲೂ ಕನ್ನಡವೇ ಮೇಳೈಸಿದ ಮದುವೆ. ಈ ದಂಪತಿ ಕನ್ನಡ ಪ್ರೇಮ ಶ್ಲಾಘನೀಯ’ ಎಂದು ಜಿಲ್ಲಾ ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿ ಅಧ್ಯಕ್ಷ ಅಶೋಕ ಚಂದರಗಿ ಹೇಳಿದರು.

‘ಕನ್ನಡವೇ ನಮಗೆ ಜಾತಿ, ಧರ್ಮ ಎಲ್ಲವೂ. ಕನ್ನಡ ಪ್ರೇಮ ಬರೀ ಮಾತಲ್ಲಿ ಇದ್ದರೆ ಸಾಲದು. ಬದುಕಿನಲ್ಲೂ ಅಳವಡಿಸಿಕೊಳ್ಳಬೇಕೆಂದು ಸಾರಲು ಈ ರೀತಿ ಮದುವೆಯಾಗಿದ್ದೇವೆ’ ಎಂದರು ದೀಪಕ್‌–ರಾಜೇಶ್ವರಿ ದಂಪತಿ.

ಬೆಳಗಾವಿಯಲ್ಲಿ ಸೋಮವಾರ ನಡೆದ ದೀಪಕ್‌ ಹಾಗೂ ರಾಜೇಶ್ವರಿ ಅವರ ಮದುವೆಗಾಗಿ ರಾಣಿ ಚನ್ನಮ್ಮ ಹಾಗೂ ಸಂಗೊಳ್ಳಿ ರಾಯಣ್ಣ ಅವರ ಪ್ರತಿಮೆಗಳನ್ನು ಇಟ್ಟು ಕನ್ನಡಮಯ ವಾತಾವರಣ ನಿರ್ಮಿಸಲಾಯಿತು – ಪ್ರಜಾವಾಣಿ ಚಿತ್ರ
ಬೆಳಗಾವಿಯಲ್ಲಿ ಸೋಮವಾರ ನಡೆದ ದೀಪಕ್‌ ಹಾಗೂ ರಾಜೇಶ್ವರಿ ಅವರ ಮದುವೆಗಾಗಿ ರಾಣಿ ಚನ್ನಮ್ಮ ಹಾಗೂ ಸಂಗೊಳ್ಳಿ ರಾಯಣ್ಣ ಅವರ ಪ್ರತಿಮೆಗಳನ್ನು ಇಟ್ಟು ಕನ್ನಡಮಯ ವಾತಾವರಣ ನಿರ್ಮಿಸಲಾಯಿತು – ಪ್ರಜಾವಾಣಿ ಚಿತ್ರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT