ಶುಕ್ರವಾರ, ಫೆಬ್ರವರಿ 26, 2021
20 °C
ಹಲವು ವರ್ಷಗಳಿಂದಲೂ ಅಧಿಕಾರಿಗಳ ಮೌನ

ಆಥಣಿಯ ಕನ್ನಡ ಶಾಲೆಯಲ್ಲಿ ಮರಾಠಿ ಪಾಠ

ಪರಶುರಾಮ ನಂದೇಶ್ವರ Updated:

ಅಕ್ಷರ ಗಾತ್ರ : | |

Prajavani

ಅಥಣಿ: ತಾಲ್ಲೂಕಿನ ಗಡಿಭಾಗದ ಅರಳಿಹಟ್ಟಿ ಕನ್ನಡ ಸರ್ಕಾರಿ ಪ್ರೌಢಶಾಲೆಯಲ್ಲಿ ಹಲವು ವರ್ಷಗಳಿಂದಲೂ ಮರಾಠಿ ಮಾಧ್ಯಮ ನಡೆಸಲಾಗುತ್ತಿದೆ ಎಂಬ ಆರೋಪ ಕೇಳಿಬಂದಿದೆ.

1984ರಲ್ಲಿ ರಾಜ್ಯ ಸರ್ಕಾರವು ಈ ಶಾಲೆ ಸ್ಥಾಪಿಸಿದೆ. ಆಗ ಕನ್ನಡ ಮತ್ತು ಸಂಸ್ಕೃತಿ ಸಚಿವರಾಗಿದ್ದ ಲೀಲಾದೇವಿ ಆರ್. ಪ್ರಸಾದ್ ಅವರು ₹ 15 ಲಕ್ಷ ಮಂಜೂರು ಮಾಡಿಸಿದ್ದರು. ಆದೇ ವರ್ಷ ಶಾಲೆಯನ್ನು ಅವರೇ ಉದ್ಘಾಟಿಸಿದ್ದರು. 1895-1986ರವರೆಗೆ ಅದು ಕನ್ನಡ ಮಾಧ್ಯಮ ಪ್ರೌಢಶಾಲೆಯಾಗಿತ್ತು. ಹೆಚ್ಚಿನ ಮಕ್ಕಳು ಉತ್ತಮ ಶಿಕ್ಷಣ ಪಡೆಯುತ್ತಿದ್ದರು. ಕರ್ನಾಟಕದ ಕೊನೆಯ ಹಳ್ಳಿಯಾದ ಅಲ್ಲಿ ಕ್ರಮೇಣ ಮರಾಠಿ ಶಾಲೆಯಾಗಿ ಪರಿವರ್ತನೆಯಾಗಿದೆ. ಮರಾಠಿ ಭಾಷಿಕ ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಪ್ರವೇಶ ಪಡೆಯುತ್ತಿದ್ದಾರೆ ಎನ್ನಲಾಗುತ್ತಿದೆ.

ಇದು, ಸರ್ಕಾರಿ ದಾಖಲೆಗಳಲ್ಲಿ ಮಾತ್ರ ಕನ್ನಡ ಮಾಧ್ಯಮ ಪ್ರೌಢಶಾಲೆಯಾಗಿದೆ! ಇದರ ಬಗ್ಗೆ ಸಂಬಂಧಿಸಿದ ಅಧಿಕಾರಿಗಳು ಗಮನಹರಿಸುತ್ತಿಲ್ಲ. ಮರಾಠಿ ಮಾಧ್ಯಮದ ಶಾಲೆ ಎಂದೇ ಪತ್ರ ವ್ಯವಹಾರ ನಡೆಸುತ್ತಿದ್ದಾರೆ ಎಂದು ಆರೋಪಿಸಲಾಗಿದೆ.

ಶಾಲೆಗೆ ಮೂಲ ಸೌಕರ್ಯದ ಕೊರತೆ ಇಲ್ಲ. 11 ಕೊಠಡಿಗಳಿವೆ. ಆಟದ ಮೈದಾನ, ಆಡುಗೆ ಕೋಣೆ, ಶೌಚಾಲಯಗಳು, ಶುದ್ಧ ಕುಡಿಯುವ ನೀರಿನ ಘಟಕ, ಗ್ರಂಥಾಲಯ ಇದೆ. ಗ್ರಂಥಾಲಯದಲ್ಲಿ 10ಸಾವಿರಕ್ಕೂ ಹೆಚ್ಚಿನ ಕನ್ನಡ ಪುಸ್ತಕಗಳಿವೆ. 11 ಜನ ಶಿಕ್ಷಕರಿದ್ದಾರೆ.

‘ಗಡಿ ಭಾಗದ ಹಳ್ಳಿಗಳಲ್ಲಿ ಕನ್ನಡ ಶಾಲೆಗಳ ಸ್ಥಿತಿ ಶೋಚನೀಯವಾಗಿದೆ. ಸರ್ಕಾರ ಸವಲತ್ತುಗಳನ್ನು ನೀಡುವ ಜೊತೆಗೆ ಅಗತ್ಯವಿದ್ದಲ್ಲಿ ಕನ್ನಡ ಶಿಕ್ಷಕರನ್ನು ನೇಮಿಸಬೇಕು. ಶಿಥಿಲಗೊಂಡಿರುವ ಶಾಲೆಗಳ ಕೊಠಡಿಗಳನ್ನು ದುರಸ್ತಿಪಡಿಸಬೇಕು. ಅರಳಿಹಟ್ಟಿ ಗ್ರಾಮದಲ್ಲಿ ಕನ್ನಡ ಮಾಧ್ಯಮ ಶಾಲೆಯಲ್ಲಿ ಮರಾಠಿ ಶಿಕ್ಷಣ ನಡೆಯುತ್ತಿರುವ ಬಗ್ಗೆ ತನಿಖೆ ನಡೆಸಬೇಕು’ ಎಂದು ಕನ್ನಡಪರ ಹೋರಾಟಗಾರ ಮತ್ತು ಕೃಷ್ಣಾ ನದಿ ನೀರು ಹೋರಾಟ ಸಮಿತಿ ಅಧ್ಯಕ್ಷ ಬಸನಗೌಡ ಪಾಟೀಲ ಒತ್ತಾಯಿಸುತ್ತಾರೆ.

‘ಗಡಿಯಲ್ಲೂ ಕನ್ನಡಕ್ಕೆ ಒತ್ತು ಕೊಡಬೇಕಾದುದು ಶಿಕ್ಷಣ ಇಲಾಖೆ ಕರ್ತವ್ಯ. ಅಧಿಕಾರಿಗಳು ಈಗಲಾದರೂ ಎಚ್ಚೆತ್ತುಕೊಳ್ಳಬೇಕು’ ಎಂದು ಶಿಕ್ಷಕ ಸಂತೋಷ ಬಡಕಂಬಿ ಆಗ್ರಹಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು