ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

SSLC Results | ಶೇ 20ರಷ್ಟು ಕುಸಿತ: ಬೆಳಗಾವಿ, ಚಿಕ್ಕೋಡಿ ಜಿಲ್ಲೆಗಳ ಕಳಪೆ ಸಾಧನೆ

ಹಳಿಗೆ ಬಾರದ ಶಿಕ್ಷಣ ಇಲಾಖೆ, ಡಿಸಿಪಿಐ ಕೊರತೆ
ಇಮಾಮ್‌ಹುಸೇನ್‌ ಗೂಡುನವರ / ಚಂದ್ರಶೇಖರ ಎಸ್‌.ಚಿನಕೇಕರ
Published 10 ಮೇ 2024, 6:08 IST
Last Updated 10 ಮೇ 2024, 6:08 IST
ಅಕ್ಷರ ಗಾತ್ರ

ಬೆಳಗಾವಿ/ ಚಿಕ್ಕೋಡಿ: ‘ಶೈಕ್ಷಣಿಕ ಹಬ್‌’ ಎಂದು ಗುರುತಿಸಿಕೊಂಡ ಬೆಳಗಾವಿ ಜಿಲ್ಲೆಯಲ್ಲಿ ಈ ಬಾರಿ ಎಸ್ಸೆಸ್ಸೆಲ್ಸಿ ವಾರ್ಷಿಕ ಪರೀಕ್ಷೆ ಫಲಿತಾಂಶ ಗಣನೀಯವಾಗಿ ಇಳಿಕೆಯಾಗಿದ್ದು, ಸರ್ಕಾರಿ ಮತ್ತು ಖಾಸಗಿ ಶಾಲೆಗಳಲ್ಲಿ ಶೈಕ್ಷಣಿಕ ಗುಣಮಟ್ಟ ಕುಸಿಯುತ್ತಿದೆಯೇ ಎಂಬ ಆತಂಕ ತಲೆದೋರಿದೆ.

ಪ್ರತಿಬಾರಿ ಪರೀಕ್ಷೆ ಫಲಿತಾಂಶದಲ್ಲಿ ಸಣ್ಣ–ಪುಟ್ಟ ವ್ಯತ್ಯಾಸ ಇರುತ್ತಿತ್ತು. ಆದರೆ, ಈ ಬಾರಿ ಬೆಳಗಾವಿ ಮತ್ತು ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಗಳಲ್ಲಿ ಫಲಿತಾಂಶ ಪ್ರಮಾಣ ಶೇ 20ಕ್ಕಿಂತ ಹೆಚ್ಚು ಕಡಿಮೆಯಾಗಿರುವುದು ನಿರಾಸೆಗೆ ಕಾರಣವಾಗಿದೆ.

2021–22ನೇ ಸಾಲಿನ ಪರೀಕ್ಷೆಯಲ್ಲಿ ಶೇ 89.99 ಫಲಿತಾಂಶ ದಾಖಲಿಸಿದ್ದ ಚಿಕ್ಕೋಡಿ 16ನೇ ಸ್ಥಾನ ಗಳಿಸಿತ್ತು. ಮಾರನೇ ವರ್ಷ ಶೇ 90.39 ಫಲಿತಾಂಶದೊಂದಿಗೆ 13ನೇ ಸ್ಥಾನಕ್ಕೇರಿತ್ತು. 2021–22ರಲ್ಲಿ ಶೇ 87.8 ಫಲಿತಾಂಶದೊಂದಿಗೆ 18ನೇ ಸ್ಥಾನದಲ್ಲಿದ್ದ ಬೆಳಗಾವಿ, 2022–23ರಲ್ಲಿ ಶೇ 85.85 ಫಲಿತಾಂಶದೊಂದಿಗೆ 26ನೇ ಸ್ಥಾನಕ್ಕೆ ಕುಸಿದಿತ್ತು. ಕಳೆದ ವರ್ಷಕ್ಕೆ ಹೋಲಿಸಿದರೆ, ಈ ಬಾರಿ ಚಿಕ್ಕೋಡಿಯ ಫಲಿತಾಂಶದಲ್ಲಿ ಶೇ 20.57 ಮತ್ತು ಬೆಳಗಾವಿಯ ಫಲಿತಾಂಶದಲ್ಲಿ ಶೇ 20.92 ಇಳಿಕೆಯಾಗಿದೆ.

ಒಂದು ಕಾಲಕ್ಕೆ ಅಗ್ರಸ್ಥಾನಕ್ಕಾಗಿ ಪೈಪೋಟಿ ನಡೆಸುತ್ತಿದ್ದ, 10 ಸ್ಥಾನದೊಳಗೆ ಸದಾ ಸ್ಥಾನ ಗಿಟ್ಟಿಸುತ್ತಿದ್ದ ಚಿಕ್ಕೋಡಿ, ಈಗ ಪಾತಾಳಕ್ಕೆ ಕುಸಿದಿರುವುದು ಅಚ್ಚರಿಗೆ ಕಾರಣವಾಗಿದೆ. ‘ಫಲಿತಾಂಶ ಸುಧಾರಣೆಯಲ್ಲಿ ಅಧಿಕಾರಿಗಳು ಮತ್ತು ಶಿಕ್ಷಕರು ಎಡವಿದ್ದು ಎಲ್ಲಿ’ ಎಂಬುದು ಚರ್ಚೆಗೆ ಕಾರಣವಾಗಿದೆ.

ರಾಜ್ಯದಲ್ಲಿ ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯೇ ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ಮೊದಲ ಸ್ಥಾನ ಗಿಟ್ಟಿಸಿಕೊಂಡಿದ್ದು ಸಾಕಷ್ಟು ಬಾರಿ. ಆದರೆ, 10 ವರ್ಷಗಳಿಂದ ಫಲಿತಾಂಶ ತುಂಬಾ ಕಳಪೆಯಾಗಿದ್ದು ವಿದ್ಯಾರ್ಥಿಗಳಲ್ಲಿ, ಪಾಲಕರಲ್ಲಿ ನಿರಾಶೆಗೆ ಕಾರಣವಾಗಿದೆ.

2002ನೇ ಸಾಲಿನಲ್ಲಿ ಶೇ 56.76 ಫಲಿತಾಂಶದೊಂದಿಗೆ ರಾಜ್ಯಕ್ಕೆ 14ನೇ ಸ್ಥಾನ ಗಿಟ್ಟಿಸಿದ್ದ ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯು, 2003ರಲ್ಲಿ ಶೇ 64.64 ಫಲಿತಾಂಶ ಪಡೆದು ರಾಜ್ಯಕ್ಕೆ 4ನೇ ಸ್ಥಾನ ಪಡೆದುಕೊಂಡಿತ್ತು. 2004ರಲ್ಲಿ ಶೇ 80.70 ಫಲಿತಾಂಶದೊಂದಿಗೆ 3ನೇ ಸ್ಥಾನ, 2005ರಲ್ಲಿ ಶೇ 78.62 ಫಲಿತಾಂಶದಿಂದ 2ನೇ ಸ್ಥಾನ, 2006ರಲ್ಲಿಯೂ ಕೂಡ 81.95 ಫಲಿತಾಂಶದಿಂದ ಮತ್ತೇ 2ನೇ ಸ್ಥಾನ ಗಳಿಸಿತ್ತು. 2007ರಲ್ಲಿ ಶೇ 87.25, 2008ರಲ್ಲಿ ಶೇ 84.96 ಫಲಿತಾಂಶದೊಂದಿಗೆ ರಾಜ್ಯದಲ್ಲಿಯೇ ಮೊದಲ ಸ್ಥಾನಕ್ಕೇರಿದ್ದು, ರಾಜ್ಯವೇ ಚಿಕ್ಕೋಡಿಯತ್ತ ನೋಡುವಂತಹ ಫಲಿತಾಂಶ ಬಂದಿತ್ತು.

2009ರಲ್ಲಿ ಶೇ 82.23 ರಷ್ಟು ಫಲಿತಾಶ ಪಡೆದು 3ನೇ ಸ್ಥಾನಕ್ಕೆ ಕುಸಿದಿತ್ತು. 2010ರಲ್ಲಿ ಶೇ 79.92 ಫಲಿತಾಂಶದೊಂದಿಗೆ ಮತ್ತೇ ರಾಜ್ಯದಲ್ಲಿ ಮೊದಲನೇ ಸ್ಥಾನ ಗಿಟ್ಟಿಕೊಂಡಿತ್ತು. 2011ರಲ್ಲಿ ದ್ವಿತೀಯ, 2012ರಲ್ಲಿ 5ನೇ ಸ್ಥಾನಕ್ಕೆ ಕುಸಿದ ಫಲಿತಾಂಶ 2013ರಲ್ಲಿ ಶೇ 89.86 ಫಲಿತಾಂಶದ ಮೂಲಕ ಮೊದಲ ಸ್ಥಾನ ಪಡೆದುಕೊಂಡು ಬೀಗಿತು. 2014ರಲ್ಲಿ ಶೇ 91ರಷ್ಟು ಫಲಿತಾಂಶ ಪಡೆಯುವ ಮೂಲಕ ಮತ್ತೇ ಮೊದಲ ಸ್ಥಾನ ಉಳಿಸಿಕೊಂಡಿತ್ತು. ಆದರೆ, ಈಗ ಇದೆಲ್ಲವೂ ಕನಸು ಎಂಬಂತಾಗಿದೆ.

ಏಳು ತಿಂಗಳಿಂದ ಒಬ್ಬರೇ ಡಿಡಿಪಿಐ: ‘ಭೌಗೋಳಿಕವಾಗಿ ರಾಜ್ಯದಲ್ಲೇ ದೊಡ್ಡ ಜಿಲ್ಲೆಯಾದ ಬೆಳಗಾವಿ ಎರಡು ಶೈಕ್ಷಣಿಕ ಜಿಲ್ಲೆ ಒಳಗೊಂಡಿದೆ. ಇಲ್ಲಿ 3,394 ಸರ್ಕಾರಿ ಪ್ರಾಥಮಿಕ, ಪ್ರೌಢಶಾಲೆಗಳಿವೆ. ಜಿಲ್ಲಾ ಕೇಂದ್ರದಿಂದ ಅಥಣಿ ತಾಲ್ಲೂಕಿನ ಕೆಲವು ಹಳ್ಳಿಗಳು 180 ಕಿ.ಮೀ ದೂರದಲ್ಲಿವೆ. ಆದರೆ, 2023ರ ಅಕ್ಟೋಬರ್‌ನಿಂದ ಬೆಳಗಾವಿ ಡಿಡಿಪಿಐ ಹುದ್ದೆ ಖಾಲಿ ಇದೆ.

ಚಿಕ್ಕೋಡಿ ಡಿಡಿಪಿಐ ಆಗಿರುವ ಮೋಹನಕುಮಾರ ಹಂಚಾಟೆ ಅವರೇ ಬೆಳಗಾವಿ ಪ್ರಭಾರ ಡಿಡಿಪಿಐ ಆಗಿ ಏಳು ತಿಂಗಳಿಂದ ಕೆಲಸ ಮಾಡುತ್ತಿದ್ದಾರೆ. ಒಬ್ಬರೇ ಅಧಿಕಾರಿ ಎರಡೂ ಶೈಕ್ಷಣಿಕ ಜಿಲ್ಲೆಗಳ ಚಟುವಟಿಕೆಗಳ ಮೇಲೆ ನಿಗಾ ವಹಿಸುವುದು ಕಷ್ಟ. ಇದರಿಂದಾಗಿ ಆಯಾ ವಲಯಗಳಲ್ಲಿ ಪರಿಣಾಮಕಾರಿಯಾಗಿ ಶೈಕ್ಷಣಿಕ ಚಟುವಟಿಕೆ ನಡೆದಿಲ್ಲ. ಬೆಳಗಾವಿಗೆ ಪೂರ್ಣಕಾಲಿಕ ಡಿಡಿಪಿಐ ಇಲ್ಲದಿರುವುದರಿಂದಲೂ ಫಲಿತಾಂಶ ಕುಸಿದಿರಬಹುದು’ ಎಂದು ವಿಶ್ಲೇಷಿಸಲಾಗುತ್ತಿದೆ.

‘ಜಿಲ್ಲೆಯಲ್ಲಿ ಶಿಕ್ಷಕರ ಕೊರತೆ ದೊಡ್ಡ ಪ್ರಮಾಣದಲ್ಲಿದೆ. ಕೆಲವು ಸರ್ಕಾರಿ ಶಾಲೆಗಳಲ್ಲಿ ಕನಿಷ್ಠ ಮೂಲಸೌಕರ್ಯವೂ ಇಲ್ಲ. ಇದರಿಂದಾಗಿಯೂ ಪರೀಕ್ಷೆ ಫಲಿತಾಂಶ ಇಳಿಕೆಯಾಗುತ್ತ ಸಾಗಿದೆ’ ಎಂಬ ಅಭಿಪ್ರಾಯವೂ ಕೇಳಿಬರುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT