ರಾಮದುರ್ಗ: ಮಳೆಯಾಗದ ಹಿನ್ನೆಲೆಯಲ್ಲಿ ಗ್ರಾಮೀಣ ಪ್ರದೇಶದಲ್ಲಿ ಕುಡಿಯುವ ನೀರು ಪೂರೈಕೆಯಲ್ಲಿ ಯಾವುದೇ ಅಡಚಣೆಯಾಗದಂತೆ ಅಧಿಕಾರಿಗಳು ಎಚ್ಚರ ವಹಿಸಬೇಕು. ನಿರ್ಲಕ್ಷ ಮಾಡಿದರೆ ಶಿಸ್ತುಕ್ರಮ ಕೈಗೊಳ್ಳಬೇಕಾಗುವುದು ಎಂದು ಶಾಸಕ ಅಶೋಕ ಪಟ್ಟಣ ಎಚ್ಚರಿಕೆ ನೀಡಿದರು.
ಸೋಮವಾರ ತಾಲ್ಲೂಕು ಪಂಚಾಯ್ತಿ ಸಭಾಭವನದಲ್ಲಿ ನಡೆದ ಪ್ರಸಕ್ತ ಸಾಲಿನ ಪ್ರಥಮ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಕುಡಿಯುವ ನೀರಿನ ಕಾಮಗಾರಿಗೆ ಯಾರೇ ಅಡಚಣೆ ಮಾಡಿದರೂ ಅಧಿಕಾರಿಗಳು ಸಮಸ್ಯೆ ಪರಿಹಾರ ಕಂಡುಕೊಂಡು ನೀರು ಪೂರೈಕೆಗೆ ಕ್ರಮ ಕೈಗೊಳ್ಳಬೇಕು ಎಂದರು.
ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಎಇಇ ಶ್ರೀನಿವಾಸ, ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಮೂಲಕ ಗ್ರಾಮೀಣ ಪ್ರದೇಶಗಳಿಗೆ ಒಂದು ವಾರದಷ್ಟು ನೀರು ಪೂರೈಕೆ ಸಾಧ್ಯವಿದ್ದು, ಮಳೆಯಾಗದಿದ್ದರೆ ಮತ್ತೊಮ್ಮ ಮಲಪ್ರಭಾ ನದಿಗೆ ನೀರು ಹರಿಸಬೇಕಾಗುತ್ತದೆ. ಇಲ್ಲದಿದ್ದರೆ ತಾಲ್ಲೂಕಿನ ಮುದೇನೂರ, ಸೊಪ್ಪಡ್ಲ ಮತ್ತು ಕೆ.ಚಂದರಗಿ ಗ್ರಾಮಗಳಿಗೆ ಟ್ಯಾಂಕರ್ ಮೂಲಕ ನೀರು ಪೂರೈಕೆ ಮಾಡಬೇಕಾಗುತ್ತದೆ ಎಂದು ಹೇಳಿದರು.
ಕಳೆದ ಐದು ವರ್ಷಗಳ ಹಿಂದೆ ಮಂಜೂರಾದ 9 ಕನಕ ಭವನ ಕಾಮಗಾರಿ ಅರ್ಧಕ್ಕೆ ನಿಂತಿರುವುದಕ್ಕೆ ಜಿ.ಪಂ ಎಂಜಿನಿಯರಿಂಗ್ ವಿಭಾಗದ ಪ್ರಭಾರಿ ಎಇಇ ಶ್ರೀನಿವಾಸ ವಿಶ್ವಕರ್ಮ ಅವರನ್ನು ಶಾಸಕ ಅಶೋಕ ಪಟ್ಟಣ ತರಾಟೆಗೆ ತೆಗೆದುಕೊಂಡರು.
ಅಧಿಕಾರಿಗಳು ಮಂಜೂರಾದ ಅನುದಾನ ಸಮರ್ಪಕ ಬಳಕೆಗೆ ಮುಂದಾದರೆ ಮಾತ್ರ ಜನಪ್ರತಿನಿಧಿಗಳಿಗೆ ಒಳ್ಳೆಯ ಹೆಸರು ಬರುತ್ತದೆ. ಈ ರೀತಿ ನಿರ್ಲಕ್ಷ್ಯ ವಹಿಸಿದರೆ ಹೇಗೆ ಎಂದು ಪ್ರಶ್ನಿಸಿದರು.
ಕೆಡಿಪಿ ಸಭೆ ಕಾಟಾಚಾರದ ಸಭೆಯಾಗುತ್ತಿದ್ದು, ಇಲಾಖೆಯ ಮುಖ್ಯಸ್ಥರು ಕಡ್ಡಾಯವಾಗಿ ಸಭೆಗೆ ಆಗಮಿಸಬೇಕು. ಕೆಳಮಟ್ಟದ ಅಧಿಕಾರಿಗಳನ್ನು ಕಳುಹಿಸಬೇಡಿ. ಕಳಿಸಿದರೆ ಅಂತಹ ಅಧಿಕಾರಿಗಳ ಮೇಲೆ ಕಠಿಣ ಕ್ರಮಕ್ಕೆ ಶಿಫಾರಸ್ಸು ಮಾಡಬೇಕಾಗುತ್ತದೆ ಎಂದರು.
ಹೆಸ್ಕಾಂ ಇಲಾಖೆಯ ರಾಮದುರ್ಗ ವಿಭಾಗದ ಕಾರ್ಯನಿರ್ವಾಹಕ ಅಭಿಯಂತರು ಕಿರಣ್ಣ ಸಣ್ಣಕ್ಕಿ ಸಭೆಗೆ ಆಗಮಿಸಿಲ್ಲ. ಇದು ಮುಂದುವರೆಯಬಾರದು ಎಂದು ಹೆಸ್ಕಾಂ ಎಇಇ ಶಿವಪ್ರಕಾಶ ಕರಡಿಗೆ ತಾಕೀತು ಮಾಡಿದರು.
ರೈತರ ಕೃಷಿ ಪಂಪ್‌ಸೆಟ್‌ಗಳ ಪರಿವರ್ತಕ ಸುಟ್ಟರೆ ಮೊದಲು ಒಂದು ದಿನದಲ್ಲಿ ರಿಪೇರಿ ಮಾಡಲಾಗುತ್ತಿತ್ತು. ಆದರೆ ಹೆಚ್ಚು ಕೆಲಸದ ಒತ್ತಡದಿಂದ ಎರಡು ದಿನ ಬೇಕಾಗುತ್ತದೆ. ಸರ್ಕಾರದ ಗೃಹಜ್ಯೋತಿ ಯೋಜನೆಗೆ ಉತ್ತಮ ಸ್ಪಂದನೆ ಇದೆ ಎಂದು ಹೇಳಿದರು.
ಸಿಪಿಐ ಐ.ಆರ್. ಪಟ್ಟಣಶೆಟ್ಟಿ ರಾಮದುರ್ಗ ನಗರದಲ್ಲಿ ಸಂಚಾರ ದಟ್ಟಣೆ ಹೆಚ್ಚಾಗಿದ್ದು ನಿಗದಿತ ಸ್ಥಳದಲ್ಲಿ ನಿಲುಗಡೆಗೆ ವ್ಯವಸ್ಥೆ ಮಾಡಲಾಗುತ್ತಿದೆ. ಸಂಚಾರ ದಟ್ಟಣೆ ನಿವಾರಣೆಗೆ ಸಾರ್ವಜನಿಕರ ಸಹಕಾರ ಅಗತ್ಯವಾಗಿದೆ. ಪಟ್ಟಣ ಪ್ರದೇಶದಲ್ಲಿ ಮಿಂಚುಬೋರ್ಡ್ ವ್ಯವಸ್ಥೆ ಮಾಡಲು ಪುರಸಭೆಗೆ ಸೂಚಿಸಬೇಕು ಎಂದಾಗ, ಮುಖ್ಯಾಧಿಕಾರಿ ರವಿ ಬಾಗಲಕೋಟ ವ್ಯವಸ್ಥೆ ಮಾಡುವುದಾಗಿ ಹೇಳಿದರು.
ಸಭೆಯಲ್ಲಿ ತಾಲ್ಲೂಕು ನೋಡಲ್‍ಅಧಿಕಾರಿ ನಾಗರಾಜ, ತಹಶೀಲ್ದಾರ ಬಸವರಾಜ ನಾಗರಾಳ, ಇಒ ಪ್ರವೀಣಕುಮಾರ ಸಾಲಿ ಸೇರಿದಂತೆ ತಾಲ್ಲೂಕು ಮಟ್ಟದ ಅಧಿಕಾರಿಗಳಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.