ಸೋಮವಾರ, ಜುಲೈ 4, 2022
21 °C
ಸಮ್ಮತಿ ಸೂಚಿಸಿದ ಗ್ರೇಡ್–2 ತಹಶೀಲ್ದಾರ್

ಖಾನಾಪುರ: ಮರಾಠಿಯಲ್ಲಿ ಮಾಹಿತಿ ಫಲಕ ಅಳವಡಿಕೆಗೆ ಶಾಸಕಿ ಅಂಜಲಿ ನಿಂಬಾಳ್ಕರ್‌ ಸೂಚನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಖಾನಾಪುರ (ಬೆಳಗಾವಿ ಜಿಲ್ಲೆ): ‘ಇಲ್ಲಿನ ತಹಶೀಲ್ದಾರ್ ಕಚೇರಿಯಲ್ಲಿ ಮತ್ತು ಗ್ರಾಮ ಒನ್ ಕೇಂದ್ರಗಳಲ್ಲಿ ಕನ್ನಡದೊಂದಿಗೆ ಮರಾಠಿ ಭಾಷೆಯಲ್ಲೂ ಮಾಹಿತಿ ಫಲಕ ಅಳವಡಿಸಬೇಕು’ ಎಂದು ಕಾಂಗ್ರೆಸ್ ಶಾಸಕಿ ಡಾ.ಅಂಜಲಿ ನಿಂಬಾಳ್ಕರ್‌ ಅವರು ಗ್ರೇಡ್–2 ತಹಶೀಲ್ದಾರ್‌ ಕೆ.ವೈ. ಬಿದರಿ ಅವರಿಗೆ ಸೂಚಿಸಿರುವ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಶನಿವಾರ ವೈರಲ್ ಆಗಿದೆ.

ಸ್ವತಃ ಶಾಸಕಿಯೇ ತಮ್ಮ ಟ್ವಿಟರ್ ಖಾತೆಯಲ್ಲಿ ವಿಡಿಯೊ ಹಂಚಿಕೊಂಡಿದ್ದಾರೆ. ‘ಇದು ಸರಳ... ತಾಲ್ಲೂಕಿನ ಎಲ್ಲ ಗ್ರಾಮ ಒನ್ ಕೇಂದ್ರಗಳಲ್ಲೂ ಸರ್ಕಾರದ ಎಲ್ಲ ಯೋಜನೆಗಳ ಮಾಹಿತಿ ಫಲಕವು ಕನ್ನಡದೊಂದಿಗೆ ಮರಾಠಿ ಭಾಷೆಯಲ್ಲೂ ಇರಬೇಕು. ಇದರಲ್ಲಿ ರಾಜಕಾರಣವಿಲ್ಲ, ಜನರಿಗಾಗಿ ಈ ಕೆಲಸ’ ಎಂದು ಬರೆದುಕೊಂಡಿದ್ದಾರೆ.

ಹೊರವಲಯದ ಗಾಂಧಿನಗರದಲ್ಲಿ ಕೇಂದ್ರ ಉದ್ಘಾಟಿಸಿದ ಶಾಸಕಿ, ‘ತಾಲ್ಲೂಕಿನಲ್ಲಿರುವ ಮರಾಠಿ ಭಾಷಿಗರಿಗೆ ಕನ್ನಡ ಭಾಷೆ ಅರ್ಥ ಆಗುವುದಿಲ್ಲ. ಅವರು ಅಭ್ಯಾಸ ಮಾಡುತ್ತಿದ್ದಾರೆ. ಅವರು ಪೂರ್ಣ ಕಲಿಯುವವರೆಗೂ ಕನ್ನಡದ ಜೊತೆ ಮರಾಠಿಯಲ್ಲೂ ಮಾಹಿತಿ ಕೊಡಬೇಕು’ ಎಂದು ಸೂಚಿಸಿದ್ದಾರೆ.

‘ಈ ಹಿಂದೆ ತಹಶೀಲ್ದಾರ್‌ ಕಚೇರಿಯಲ್ಲಿ ಸಕಾಲ ಯೋಜನೆಯ ಫಲಕಗಳನ್ನೂ ಮರಾಠಿ ಭಾಷೆಯಲ್ಲೂ ಫಲಕ ಅಳವಡಿಸುವಂತೆ ಸೂಚಿಸಿದ್ದೆ. ಅವರು ಹಾಕಿದ್ದರು. ನಾವು ಜನ ಸೇವೆ ಮಾಡುತ್ತಿದ್ದೇವೆ; ಅವರಿಗೆ ಅರ್ಥವಾಗುವ ಭಾಷೆಯಲ್ಲಿ ತಿಳಿಸಬೇಕಾಗುತ್ತದೆ’ ಎಂದಿದ್ದಾರೆ.

ಇದಕ್ಕೆ ತಹಶೀಲ್ದಾರರು ಸಮ್ಮತಿ ಸೂಚಿಸಿರುವುದು ವಿಡಿಯೊದಲ್ಲಿದೆ.

ವಿಡಿಯೊಗೆ ಪ್ರತಿಕ್ರಿಯಿಸಿರುವ ನೆಟ್ಟಿಗರು, ಶಾಸಕರ ನಡೆಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ‘ಮರಾಠಿ ಪ್ರೇಮ ಬಿಡಿ; ಕನ್ನಡ ಭಾಷಾಭಿಮಾನ ಬೆಳೆಸಿಕೊಳ್ಳಿ’ ಎಂದಿದ್ದಾರೆ. ‘ಹೀಗಾದರೆ, ಮರಾಠಿ ಭಾಷಿಗರು ಕನ್ನಡ ಕಲಿಯುವುದು ಯಾವಾಗ? ಮಹಾರಾಷ್ಟ್ರದಲ್ಲಿರುವ ಕನ್ನಡಿಗರು ಮರಾಠಿ ಕಲಿತಿಲ್ಲವೇ’ ಎಂಬಿತ್ಯಾದಿಯಾಗಿ ಪ್ರಶ್ನಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು