ಮಂಗಳವಾರ, 17 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಕಿತ್ತೂರು ಉತ್ಸವ: ಇಲ್ಲಿದೆ ಮೂರು ದಿನಗಳ ವೈವಿಧ್ಯಮಯ ಕಾರ್ಯಕ್ರಮಗಳ ವಿವರ

ಫಾಲೋ ಮಾಡಿ
Comments

ಬೆಳಗಾವಿ: ‘ರಾಜ್ಯಮಟ್ಟದ ಕಿತ್ತೂರು ಉತ್ಸವಕ್ಕೆ ಸಿದ್ಧತೆ ಪೂರ್ಣಗೊಂಡಿದ್ದು, ಮೂರು ದಿನಗಳ ಕಾಲವೈವಿಧ್ಯಮಯ ಕಾರ್ಯಕ್ರಮ ಜರುಗಲಿವೆ. ಅ.23ರಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಉದ್ಘಾಟಿಸಲಿದ್ದಾರೆ’ ಎಂದು ಚನ್ನಮ್ಮನ ಕಿತ್ತೂರು ಶಾಸಕ ಮಹಾಂತೇಶ ದೊಡ್ಡಗೌಡರ ಹೇಳಿದರು.

ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಈ ಹಿಂದೆ ಕಿತ್ತೂರು ಉತ್ಸವಕ್ಕೆ ₹30 ಲಕ್ಷ ಅನುದಾನ ಬರುತ್ತಿತ್ತು. ಈ ಬಾರಿ ಸರ್ಕಾರ ₹2 ಕೋಟಿ ಅನುದಾನ ನೀಡಿದೆ. ಮಹಿಳಾ ಉತ್ಸವ, ಕ್ರೀಡೋತ್ಸವ, ವಿಚಾರಗೋಷ್ಠಿ, ಕವಿಗೋಷ್ಠಿ ಸೇರಿ ಹಲವು ವಿಶೇಷ ಕಾರ್ಯಕ್ರಮಗಳಿಗೆ ಐತಿಹಾಸಿಕ ನೆಲ ಸಾಕ್ಷಿಯಾಗಲಿದೆ. ಸ್ಥಳೀಯ ಕಲಾವಿದರಿಗೆ ಆದ್ಯತೆ ನೀಡಲಾಗಿದೆ. ಚನ್ನಮ್ಮನ ಅಭಿಮಾನಿಗಳು ಉತ್ಸವದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ನಾಡಾಭಿಮಾನ ಮೆರೆಯಬೇಕು’ ಎಂದು ಕೋರಿದರು.

‘ಅ.23ರಂದು ಬೆಳಿಗ್ಗೆ 8.30ಕ್ಕೆ ತಾಲ್ಲೂಕಿನ ಕಾಕತಿಯಲ್ಲಿ ರಾಣಿ ಚನ್ನಮ್ಮನ ಪ್ರತಿಮೆಗೆ ಪೂಜೆ ಸಲ್ಲಿಸಲಾಗುವುದು. ಮುಖ್ಯ ಅತಿಥಿಯಾಗಿ ಸಂಸದ ಅಣ್ಣಾಸಾಹೇಬ ಜೊಲ್ಲೆ ಆಗಮಿಸುವರು. ಶಾಸಕ ಸತೀಶ ಜಾರಕಿಹೊಳಿ ಅಧ್ಯಕ್ಷತೆ ವಹಿಸುವರು. ಕಾಕತಿಯ ಶಿವಪೂಜಾಮಠದ ರಾಚಯ್ಯ ಸ್ವಾಮೀಜಿ, ಉದಯ ಸ್ವಾಮೀಜಿ ಸಾನ್ನಿಧ್ಯ ವಹಿಸುವರು’ ಎಂದರು.

‘ಉತ್ಸವ ಅಂಗವಾಗಿ ಅ.2ರಂದು ಬೆಂಗಳೂರಿನಲ್ಲಿ ವೀರಜ್ಯೋತಿ ಯಾತ್ರೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಚಾಲನೆ ನೀಡಿದ್ದರು. ಇದೇ ಮೊದಲ ಸಲ ರಾಜ್ಯದಾದ್ಯಂತ ಸಂಚರಿಸಿದ ವೀರಜ್ಯೋತಿಯನ್ನು ಬೆಳಿಗ್ಗೆ 10ಕ್ಕೆ ಚನ್ನಮ್ಮನ ಕಿತ್ತೂರಿನ ಚನ್ನಮ್ಮನ ವೃತ್ತದಲ್ಲಿ ಅದ್ದೂರಿಯಾಗಿ ಬರಮಾಡಿಕೊಳ್ಳಲಾಗುವುದು. 11 ಗಂಟೆಗೆ ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ, ಕನ್ನಡ ಮತ್ತು ಸಂಸ್ಕೃತಿ ಸಚಿವ ವಿ.ಸುನೀಲಕುಮಾರ್‌ ಜಾನಪದ ಕಲಾವಾಹಿನಿ ಮೆರವಣಿಗೆ ಉದ್ಘಾಟಿಸುವರು. ಆನೆ ಮೇಲೆ ವೀರಜ್ಯೋತಿ ಇರಿಸಿ ಮೆರವಣಿಗೆ ಮಾಡಲಾಗುವುದು’ ಎಂದರು.

‘ಎಪಿಎಂಸಿ ಪ್ರಾಂಗಣದಲ್ಲಿ 11 ಗಂಟೆಗೆ ಸಚಿವ ಮುರುಗೇಶ ನಿರಾಣಿ ವಸ್ತುಪ್ರದರ್ಶನ ಉದ್ಘಾಟಿಸುವರು. ಸಚಿವ ಮುನಿರತ್ನ 11.30ಕ್ಕೆ ಫಲ–ಪುಷ್ಪ ಪ್ರದರ್ಶನ ಉದ್ಘಾಟಿಸುವರು. ತುಂಬುಗೆರೆಯಲ್ಲಿ ಮಧ್ಯಾಹ್ನ 12ಕ್ಕೆ ಕ್ರೀಡೆ ಮತ್ತು ದೋಣಿ ವಿಹಾರಕ್ಕೆ ಸಚಿವ ಆನಂದ ಸಿಂಗ್‌ ಚಾಲನೆ ನೀಡುವರು’

‘ಸಂಜೆ 7ಕ್ಕೆ ಕಿತ್ತೂರು ರಾಣಿ ಚನ್ನಮ್ಮನ ವೇದಿಕೆಯಲ್ಲಿ ಉದ್ಘಾಟನಾ ಸಮಾರಂಭ ನಡೆಯಲಿದೆ. ರಾಜಗುರು ಸಂಸ್ಥಾನ ಕಲ್ಮಠದ ಮಡಿವಾಳ ರಾಜಯೋಗೀಂದ್ರ ಸ್ವಾಮೀಜಿ, ನಿಚ್ಚಣಕಿಯ ಗುರು ಮಡಿವಾಳೇಶ್ವರ ಮಠದ ಪಂಚಾಕ್ಷರಿ ಸ್ವಾಮೀಜಿ ಸಾನ್ನಿಧ್ಯ ವಹಿಸು
ವರು. ವಿವಿಧ ಖಾತೆಗಳ ಸಚಿವರು, ಸಂಸದರು, ಶಾಸಕರು ಉಪಸ್ಥಿತರಿರುವರು’ ಎಂದು ಮಾಹಿತಿ ನೀಡಿದರು.

‘ಅ.24ರಂದು ಎಪಿಎಂಸಿ ಪ್ರಾಂಗಣದಲ್ಲಿ ಶ್ವಾನಗಳ ಪ್ರದರ್ಶನ, 24, 25ರಂದು ರಾಷ್ಟ್ರೀಯ ಹೆದ್ದಾರಿ ಪಕ್ಕದ ಕೆಇಬಿ ಮೈದಾನದಲ್ಲಿ ಪಾಯಿಂಟ್‌ ಆಧಾರದಲ್ಲಿ ಕುಸ್ತಿ ಪಂದ್ಯಾವಳಿ ನಡೆಯಲಿದೆ. 24ರಂದು ಮ್ಯಾರಾಥಾನ್‌, ಮುಕ್ತ ವಾಲಿಬಾಲ್‌, ಕಬಡ್ಡಿ, 25ರಂದು ಸೈಕ್ಲಿಂಗ್‌ ನಡೆಯಲಿದೆ’ ಎಂದು ಹೇಳಿದರು.

ಜಿಲ್ಲಾಧಿಕಾರಿ ನಿತೇಶ್‌ ಪಾಟೀಲ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಚ್‌.ವಿ.ದರ್ಶನ್‌, ಹೆಚ್ಚುವರಿ ಜಿಲ್ಲಾಧಿಕಾರಿ ಅಶೋಕ ದುಡಗುಂಟಿ ಇತರರಿದ್ದರು.

l ಧ್ವಜಾರೋಹಣ: ಜಿಲ್ಲಾಧಿಕಾರಿ ನಿತೇಶ್‌ ಪಾಟೀಲ. ಬೆಳಿಗ್ಗೆ 9.

l ವೀರಜ್ಯೋತಿ ಮೆರವಣಿಗೆ: ಸಚಿವರಾದ ಸುನೀಲ್‌ಕುಮಾರ್. ನೇತೃತ್ವ– ಗೋವಿಂದ ಕಾರಜೋಳ. ಬೆಳಿಗ್ಗೆ 10.30

l ವಸ್ತು ‍ಪ್ರದರ್ಶನ ಉದ್ಘಾಟನೆ: ಸಚಿವ ಮುರುಗೇಶ ನಿರಾಣಿ. ಬೆಳಿಗ್ಗೆ 11

l ಫಲಪುಷ್ಪ ಪ್ರದರ್ಶನ ಉದ್ಘಾಟನೆ: ಸಚಿವ ಮುನಿರತ್ನ. ಬೆಳಿಗ್ಗೆ 11

l ಕ್ರೀಡೆ ಮತ್ತು ದೋಣಿ ವಿಹಾರ ಉದ್ಘಾಟನೆ: ಸಚಿವ ಆನಂದ ಸಿಂಗ್. ಮಧ್ಯಾಹ್ನ 12

l ಉದ್ಘಾಟನೆ ಹಾಗೂ ಕಿತ್ತೂರು ಸಂಸ್ಥಾನದ ವಂಶಸ್ಥರ ಸನ್ಮಾನ: ಉದ್ಘಾಟನೆ– ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ. ಸಾನ್ನಿಧ್ಯ ಮಡಿವಾಳ ರಾಜಯೋಗೀಂದ್ರ ಸ್ವಾಮೀಜಿ ಹಾಗೂ ಪಂಚಾಕ್ಷರಿ ಸ್ವಾಮೀಜಿ. ಮುಖ್ಯ ಅತಿಥಿಗಳು– ಸಚಿವರಾದ ಗೋವಿಂದ ಕಾರಜೋಳ, ಶಶಿಕಲಾ ಜೊಲ್ಲೆ, ಆರ್.ಅಶೋಕ, ಸಿ.ಸಿ.ಪಾಟೀಲ, ಆನಂದ ಸಿಂಗ್, ಮುರುಗೇಶ ನಿರಾಣಿ, ಅರೆಬೈಲ್‌ ಶಿವರಾಮ ಹೆಬ್ಬಾರ, ಬಿ.ಸಿ.ಪಾಟೀಲ, ಭೈರತಿ ಬಸವರಾಜ, ಡಾ.ಕೆ.ಸುಧಾಕರ, ಬಿ.ಸಿ. ನಾಗೇಶ, ವಿ.ಸುನೀಲಕುಮಾರ, ಹಾಲಪ್ಪ ಆಚಾರ್, ಶಂಕರ ಪಾಟೀಲ ಮುನೇನಕೊಪ್ಪ, ಮುನಿರತ್ನ ಹಾಗೂ ಜಿಲ್ಲೆಯ ಎಲ್ಲ ಜನಪ್ರತಿನಿಧಿಗಳು. ಅಧ್ಯಕ್ಷತೆ– ಶಾಸಕ ಮಹಾಂತೇಶ ದೊಡ್ಡಗೌಡರ. ಸ್ಥಳ– ರಾಣಿ ಚನ್ನಮ್ಮ ವೇದಿಕೆ, ಕಿತ್ತೂರು. ಸಂಜೆ 7.

l ಗಂಗಾವತಿ ಪ್ರಾಣೇಶ ಹಾಗೂ ತಂಡದಿಂದ ಹಾಸ್ಯ: ಸಂಜೆ 7.30

l ಆಳ್ವಾಸ್‌ ಸಾಂಸ್ಕೃತಿಕ ವೈಭವ: ರಾತ್ರಿ 9ರಿಂದ.

l ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ವಿಚಾರಗೋಷ್ಠಿಗಳು: ರಾಜಾ ಮಲ್ಲಸರ್ಜ ಹಾಗೂ ಸಂಗೊಳ್ಳಿ ರಾಯಣ್ಣ ವೇದಿಕೆಗಳು.

ಬೆಳಗಾವಿ, ಕಾಕತಿಯಲ್ಲಿ ನೇರಪ್ರಸಾರ

ಮೂರು ದಿನಗಳವರೆಗೆ ಬೆಳಗಾವಿ ಚನ್ನಮ್ಮ ವೃತ್ತದಲ್ಲಿ ಹಾಗೂ ಕಾಕತಿಯಲ್ಲಿ ಎಲ್ಇಡಿ ಸ್ಕ್ರೀನ್ ಮೂಲಕ ಉತ್ಸವ ವೀಕ್ಷಣೆಗೆ ವ್ಯವಸ್ಥೆ ಮಾಡಲಾಗಿದೆ.

ಬಂದೋಬಸ್ತ್, ಪಾರ್ಕಿಂಗ್‌: ಉತ್ಸವದಲ್ಲಿ ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದಂತೆ ಮುನ್ನೆಚ್ಚರಿಕೆ ವಹಿಸಲಾಗಿದೆ. ಅಪರಾದ ಹಿನ್ನೆಲೆ ಉಳ್ಳವರ ಬಗ್ಗೆ ನಿಗಾ ವಹಿಸಲಾಗಿದೆ. 22 ಕಡೆ ಪಾರ್ಕಿಂಗ್ ವ್ಯವಸ್ಥೆ, 590 ಕಡೆ ಸಿಸಿಟಿವಿ ಕ್ಯಾಮೆರಾ ಅಳವಡಿಸಲಾಗಿದೆ. ಕೆಎಸ್ಆರ್‌ಪಿ, ಡಿ.ಆರ್, ಗೃಹ ರಕ್ಷಕ, ಸಿವಿಲ್ ಪೊಲೀಸ್ ಸೇರಿ ಒಟ್ಟು 500 ಸಿಬ್ಬಂದಿ ನಿಯೋಜಿಸಲಾಗಿದೆ.

ಮೂರು ವೇದಿಕೆಗಳ ನಿರ್ಮಾಣ

‘ಈ ಹಿಂದೆ ಕಿತ್ತೂರು ಕೋಟೆ ಆವರಣದಲ್ಲಿ ಒಂದೇ ವೇದಿಕೆಯಲ್ಲಿ ಕಾರ್ಯಕ್ರಮ ನಡೆಯುತ್ತಿದ್ದವು. ಈ ಬಾರಿ ಮೂರು ಸಮನಾಂತರ ವೇದಿಕೆ ನಿರ್ಮಿಸಲಾಗಿದೆ. ರಾಣಿ ಚನ್ನಮ್ಮನ ವೇದಿಕೆಯಲ್ಲಿ ಎರಡನೇ ದಿನ ಮಹಿಳೆಯರಿಗಾಗಿ ವಿಶೇಷ ಕಾರ್ಯಕ್ರಮ ನಡೆಯಲಿವೆ. ಮೂರು ವೇದಿಕೆಗಳಲ್ಲಿ ನಿತ್ಯ ಸಂಜೆ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿವೆ’ ಎಂದು ಶಾಸಕ ಮಹಾಂತೇಶ ದೊಡ್ಡಗೌಡರ ರು.

‘ಈ ಉತ್ಸವಕ್ಕೆ ರಾಜ್ಯದ ವಿವಿಧೆಡೆಯಿಂದ ಬರುವ ಜನರಿಗೆ ಅನುಕೂಲವಾಗಲೆಂದು ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಬೆಳಗಾವಿ ಮತ್ತು ಧಾರವಾಡದಿಂದ ಮೂರು ದಿನಗಳವರೆಗೆ ವಿಶೇಷ ಬಸ್‌ ಸೌಕರ್ಯ ಮಾಡಲಾಗಿದೆ’ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT