ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಬೆಳಗಾವಿ | ಕಾಹೇರ್‌ ಘಟಿಕೋತ್ಸವ ಮೇ 27ರಂದು: ಉಪರಾಷ್ಟ್ರಪತಿ ಧನ್‌ಕರ್ ಭಾಗಿ

Published 25 ಮೇ 2024, 11:21 IST
Last Updated 25 ಮೇ 2024, 11:21 IST
ಅಕ್ಷರ ಗಾತ್ರ

ಬೆಳಗಾವಿ: ‘ಇಲ್ಲಿನ ಕೆಎಲ್‌ಇ ಅಕಾಡೆಮಿ ಆಫ್‌ ಹೈಯರ್‌ ಎಜ್ಯುಕೇಷನ್‌ ಆ್ಯಂಡ್‌ ರಿಸರ್ಚ್‌ನ(ಕಾಹೇರ್‌) 14ನೇ ಘಟಿಕೋತ್ಸವ ಮೇ 27ರಂದು ಬೆಳಿಗ್ಗೆ 11.30‌ಕ್ಕೆ ನಡೆಯಲಿದೆ’ ಎಂದು ಕಾಹೇರ್‌ ಕುಲಪತಿಯೂ ಆಗಿರುವ ಕೆಎಲ್‌ಇ ಸಂಸ್ಥೆಯ ಕಾರ್ಯಾಧ್ಯಕ್ಷ ಪ್ರಭಾಕರ ಕೋರೆ ಹೇಳಿದರು.

ಇಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಉಪರಾಷ್ಟ್ರಪತಿ ಜಗದೀಪ್‌ ಧನಕರ್‌ ಆಗಮಿಸುವರು. ರಾಜ್ಯಪಾಲ ಥಾವರಚಂದ್‌ ಗೆಹ್ಲೋತ್‌ ಘಟಿಕೋತ್ಸವ ಭಾಷಣ ಮಾಡುವರು. ಪ್ರಭಾಕರ ಕೋರೆ ಅಧ್ಯಕ್ಷತೆ ವಹಿಸುವರು’ ಎಂದರು.

‘ಕಾಹೇರ್‌ ಇತಿಹಾಸದಲ್ಲಿ ಇದೇ ಮೊದಲ ಬಾರಿ ‘ಡಾಕ್ಟರ್‌ ಆಫ್‌ ಸೈನ್ಸ್‌’ ಗೌರವ ಡಾಕ್ಟರೇಟ್‌ ಅನ್ನು ಯುಎಸ್‌ಎದ ಫಿಲಾಡೆಲ್ಫಿಯಾದ ಥಾಮಸ್ ಜೆಫರ್ಸನ್ ವಿಶ್ವವಿದ್ಯಾಲಯದ ವೈಸ್‌ ಪ್ರೊವೋಸ್ಟ್ ಡಾ.ರಿಚರ್ಡ್ ಜಾಕೋಬ್ ಡರ್ಮನ್ ಅವರಿಗೆ ಪ್ರದಾನ ಮಾಡಲಾಗುವುದು. ಕಳೆದ 27 ವರ್ಷಗಳಿಂದ ಅವರು ಸಂಶೋಧನೆಯಲ್ಲಿ ತೊಡಗಿದ್ದಾರೆ. ಕಳೆದ ಏಳು ವರ್ಷಗಳಿಂದ ಕಾಹೇರ್‌ ಸಹಯೋಗದಲ್ಲಿ ಮಹಿಳೆಯರು ಮತ್ತು ಮಕ್ಕಳಲ್ಲಿ ಕಂಡುಬರುವ ರಕ್ತಹೀನತೆ ಬಗ್ಗೆ ಸಂಶೋಧನೆ ನಡೆಸಿದ್ದಾರೆ. ಈ ಸಂಬಂಧ ಜೂನ್ 1ರಂದು ಕೇಂದ್ರ ಸರ್ಕಾರಕ್ಕೆ ವರದಿ ಸಲ್ಲಿಸಲಿದ್ದಾರೆ’ ಎಂದು ತಿಳಿಸಿದರು.

‘ಈ ಸಲದ ಘಟಿಕೋತ್ಸವದಲ್ಲಿ 30 ಪಿಎಚ್‌.ಡಿ, 13 ಪೋಸ್ಟ್‌ ಡಾಕ್ಟರಲ್‌(ಡಿಎಂ/ಎಂ.ಸಿಎಚ್‌), 644 ಸ್ನಾತಕೋತ್ತರ ಪದವಿ, 1,023 ಪದವಿ, 9 ಸ್ನಾತಕೋತ್ತರ ಡಿಪ್ಲೊಮಾ, 4 ಡಿಪ್ಲೊಮಾ, 5 ಫೆಲೋಷಿಪ್‌, 11 ಸರ್ಟಿಫಿಕೇಟ್‌ ಕೋರ್ಸ್‌ ಸೇರಿದಂತೆ ಆರೋಗ್ಯ ವಿಜ್ಞಾನದ ವಿವಿಧ ವಿಭಾಗಗಳಲ್ಲಿ 1,739 ಪದವಿ ಪ್ರದಾನ ಮಾಡಲಾಗುವುದು. ಶೈಕ್ಷಣಿಕ ಸಾಧನೆ ಮೆರೆದ 45 ವಿದ್ಯಾರ್ಥಿಗಳಿಗೆ ಚಿನ್ನದ ಪದಕ ನೀಡಲಾಗುವುದು’ ಎಂದರು.

‘ಕಾಹೇರ್‌ ಡಿಜಿಟಲ್‌ ಆಧಾರಿತವಾದ ಕಾಗದ ರಹಿತ ಪರೀಕ್ಷೆಗಳನ್ನು ಸಂಘಟಿಸಿ, 24 ತಾಸಿನೊಳಗೆ ಫಲಿತಾಂಶ ಪ್ರಕಟಿಸುತ್ತಿದೆ. ವಿದ್ಯಾರ್ಥಿಗಳು ಇ-ಪ್ಯಾಡ್‌ಗಳಲ್ಲಿ ಪರೀಕ್ಷೆ ಬರೆಯುತ್ತಿದ್ದಾರೆ. ಇದರಲ್ಲಿ ವಿಡಿಯೊ ಪ್ರಶ್ನೆಗಳನ್ನು ಕೇಳಲು ಇ-ಪ್ಯಾಡ್‌ಗಳು ಅನುಕೂಲ ಮಾಡಿಕೊಡುತ್ತಿವೆ. ಶೇ 80ರಷ್ಟು ವಿದ್ಯಾರ್ಥಿಗಳು ಈ ಪರೀಕ್ಷಾ ವಿಧಾನದ ಬಗ್ಗೆ ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿದ್ದಾರೆ. ವಿಶ್ವವಿದ್ಯಾಲಯ ಅನುದಾನ ಆಯೋಗವೂ(ಯುಜಿಸಿ) ನಮ್ಮ ಪ್ರಯತ್ನ ಶ್ಲಾಘಿಸಿದ್ದು, ಅವರಿಗೆ ವರದಿ ನೀಡಿದ್ದೇವೆ. ಸದ್ಯ ನಮ್ಮಲ್ಲಿನ ಶೇ 80ರಷ್ಟು ಕೋರ್ಸ್‌ಗಳಿಗೆ ಇದೇ ಮಾದರಿಯಲ್ಲಿ ಪರೀಕ್ಷೆ ನಡೆಯುತ್ತಿದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT