ಶುಕ್ರವಾರ, ಮೇ 27, 2022
28 °C

ಬೆಳಗಾವಿ: ಜಿಐಟಿಯ ಪ್ರೊ.ರವಿರಾಜಗೆ ಪುರಸ್ಕಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಳಗಾವಿ: ಇಲ್ಲಿನ ಕೆಎಲ್‌ಎಸ್‌ ಗೋಗಟೆ ತಾಂತ್ರಿಕ ಕಾಲೇಜಿನ  ಪ್ರಾಧ್ಯಾಪಕ ಪ್ರೊ.ರವಿರಾಜ ಎಂ. ಕುಲಕರ್ಣಿ ಅವರು ರಾಜ್ಯ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನದ ವಿಷನ್ ಗ್ರೂಪ್‌ನಿಂದ ನ್ಯಾನೊಸೈನ್ಸ್ ಮತ್ತು ನ್ಯಾನೊತಂತ್ರಜ್ಞಾನ ಕ್ಷೇತ್ರದಲ್ಲಿ ಸಂಶೋಧನಾ ಪ್ರಕಟಣೆಗಳಿಗಾಗಿ (ಎಆರ್‌ಪಿ) ಪ್ರಶಸ್ತಿ ಪಡೆದಿದ್ದಾರೆ.

ಈ ಪ್ರಶಸ್ತಿಯನ್ನು, ಪ್ರತಿಷ್ಠಿತ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ನಿಯತಕಾಲಿಕಗಳಲ್ಲಿ ಗುಣಮಟ್ಟದ ಸಂಶೋಧನಾ ಪ್ರಕಟಣೆಗಳನ್ನು ಪ್ರಕಟಿಸಿದ ವಿಜ್ಞಾನ, ಎಂಜಿನಿಯರಿಂಗ್ ಮತ್ತು ವೈದ್ಯಕೀಯ ಪ್ರಾಧ್ಯಾಪಕರನ್ನು ಪ್ರೋತ್ಸಾಹಿಸಲು ಮತ್ತು ಪುರಸ್ಕರಿಸಲು ನೀಡಲಾಗುತ್ತದೆ.

ಪ್ರಶಸ್ತಿಯು ಭಾರತ ರತ್ನ ಪ್ರೊ.ಸಿ.ಎನ್.ಆರ್. ರಾವ್ ಅವರು ಸಹಿ ಮಾಡಿದ ಅರ್ಹತೆಯ ಪ್ರಮಾಣಪತ್ರ ಮತ್ತು ₹ 25ಸಾವಿರ ಬಹುಮಾನ ಹೊಂದಿದೆ.

ರವಿರಾಜ ಪ್ರಸ್ತುತ ಜಿಐಟಿಯ ರಸಾಯನವಿಜ್ಞಾನ ವಿಭಾಗದ ಮುಖ್ಯಸ್ಥ, ನ್ಯಾನೊ ಕೇಂದ್ರ ಮತ್ತು ಬಿ.ಎಸ್ಸಿ (ಆನರ್ಸ್) ಕೋರ್ಸ್‌ ಸಂಯೋಜಕರಾಗಿದ್ದಾರೆ. ಬೋಧನೆ ಮತ್ತು ಸಂಶೋಧನೆಯಲ್ಲಿ 23 ವರ್ಷಗಳ ಅನುಭವ ಹೊಂದಿದ್ದಾರೆ. ನೀರಿನ ಸಂಸ್ಕರಣೆ, ಸೌರ ಕೋಶಗಳು, ಸಂವೇದಕ ಅಪ್ಲಿಕೇಶನ್‌ಗಳಿಗಾಗಿ ನ್ಯಾನೊ ಮೆಟೀರಿಯಲ್‌ಗಳ ಸಂಶ್ಲೇಷಣೆಯ ಕ್ಷೇತ್ರದಲ್ಲಿ ಸಂಶೋಧನೆ ನಡೆಸುತ್ತಿದ್ದಾರೆ. ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ನಿಯತಕಾಲಿಕಗಳಲ್ಲಿ 120 ವೈಜ್ಞಾನಿಕ ಪ್ರಬಂಧಗಳನ್ನು ಪ್ರಕಟಿಸಿದ್ದಾರೆ. ಸಮ್ಮೇಳನಗಳಲ್ಲಿ 40 ಪ್ರಬಂಧಗಳನ್ನು ಮಂಡಿಸಿದ್ದಾರೆ. ಸಂಶೋಧನಾ ಯೋಜನೆಗಳಿಗಾಗಿ ವಿಜಿಎಸ್‌ಟಿ, ಎಐಸಿಟಿಇ ಮತ್ತು ವಿಟಿಯುನಿಂದ ₹ 20 ಲಕ್ಷ ಆರ್ಥಿಕ ಬೆಂಬಲ ಪಡೆದಿದ್ದಾರೆ.

ಅವರನ್ನು ಪ್ರಾಂಶುಪಾಲ ಡಾ.ಜಯಂತ್ ಕೆ. ಕಿತ್ತೂರು, ಜಿಸಿ ಕೆಎಲ್‌ಎಸ್ ಜಿಐಟಿ ಅಧ್ಯಕ್ಷ ರಾಜೇಂದ್ರ ಬೆಳಗಾಂವಕರ, ಕೆಎಲ್‌ಎಸ್ ಅಧ್ಯಕ್ಷ ಪ್ರದೀಪ ಸಾವಕಾರ, ಕೆಎಲ್‌ಎಸ್ ಕಾರ್ಯದರ್ಶಿ ಎಸ್‌.ವಿ. ಗಣಾಚಾರಿ ಅಭಿನಂದಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.