ಬೆಳಗಾವಿಯ ಈ ಸರ್ಕಾರಿ ಶಾಲೆಗೆ ಬಸ್ ‘ರೂಪ’

ಸೋಮವಾರ, ಜೂಲೈ 22, 2019
26 °C
ಆಕರ್ಷಿಸುತ್ತಿರುವ ಮಲ್ಲಯ್ಯನಗರ ಸರ್ಕಾರಿ ಶಾಲಾ ಕಟ್ಟಡ

ಬೆಳಗಾವಿಯ ಈ ಸರ್ಕಾರಿ ಶಾಲೆಗೆ ಬಸ್ ‘ರೂಪ’

Published:
Updated:
Prajavani

ಬೆಳಗಾವಿ: ಜಿಲ್ಲೆಯ ಜಿಲ್ಲೆ ಗೋಕಾಕ ತಾಲ್ಲೂಕಿನ ಮಲ್ಲಯ್ಯನಗರದಲ್ಲಿರುವ ‘ನಮ್ಮೂರ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ’ಯ ಕಟ್ಟಡದ ಮೇಲೆ ರಾಜ್ಯ ರಸ್ತೆ ಸಾರಿಗೆ ಬಸ್‌ ಚಿತ್ರ ಬರೆಸುವ ಮೂಲಕ ಮಕ್ಕಳನ್ನು ಆಕರ್ಷಿಸುವ ಪ‍್ರಯತ್ನ ನಡೆದಿದೆ.

1ರಿಂದ 5ನೇ ತರಗತಿವರೆಗೆ ಇಲ್ಲಿ 21 ಮಕ್ಕಳು ಕಲಿಯುತ್ತಿದ್ದಾರೆ. ಶಾಲೆಗೆ ಹೊಸ ರೂಪ ನೀಡುವ ಮೂಲಕ ಮಕ್ಕಳ ದಾಖಲಾತಿ ಹೆಚ್ಚಳಕ್ಕೆ ಪ್ರಯತ್ನಿಸಲಾಗಿದೆ. 2008–09ನೇ ಸಾಲಿನ ಸರ್ವ ಶಿಕ್ಷಣ ಅಭಿಯಾನದಲ್ಲಿ ನಿರ್ಮಾಣವಾದ ಈ ಕಟ್ಟಡ ಈಗ ಹೊಸರೂಪದೊಂದಿಗೆ ಕಂಗೊಳಿಸುತ್ತಿದೆ. ಕ್ಯಾಂಪಸ್ ಪ್ರವೇಶಿಸುತ್ತಿದ್ದಂತೆಯೇ, ಇದೇನಿದು ಶಾಲೆಯೊಳಗೆ ಬಸ್‌ ನುಗ್ಗಿದೆಯಲ್ಲಾ ಎನಿಸದಿರದು! ಬಾಗಿಲುಗಳ ಮೇಲೆ ಕಾರ್ಯಾಲಯ ನಿಲ್ದಾಣ, ಅಡುಗೆ ಕೋಣೆ ನಿಲ್ದಾಣ, ತರಗತಿಗಳ ನಿಲ್ದಾಣ ಎಂದು ಬರೆಸಲಾಗಿದೆ. ಒಂದೆಡೆ ಶಾಲೆಗೆ ಭೂಮಿ ನೀಡಿದ ದಾನಿಗಳನ್ನು ಸ್ಮರಿಸಲಾಗಿದೆ. ಶಾಲೆಯ ಈಗಿನ ಚಿತ್ರ ಫೇಸ್‌ಬುಕ್, ಟ್ವಿಟರ್‌ ಮೊದಲಾದ ಸಾಮಾಜಿಕ ಮಾಧ್ಯಮದಲ್ಲೂ ಸದ್ದು ಮಾಡಿದ್ದು, ಮೆಚ್ಚುಗೆಗೆ ಪಾತ್ರವಾಗಿದೆ.

ಮಕ್ಕಳನ್ನು ಆಕರ್ಷಿಸಲು:

‘ಖಾಸಗಿ ಶಾಲೆಗಳಿಗೆ ಪೈಪೋಟಿ ನೀಡುವುದು, ಮಕ್ಕಳನ್ನು ಶಾಲೆಯತ್ತ ಆಕರ್ಷಿಸುವುದು ಹಾಗೂ ನಲಿಯುತ್ತಾ ಕಲಿಯುವಂತಹ ವಾತಾವರಣ ಉತ್ತಮಪಡಿಸುವುದಕ್ಕಾಗಿ ಈ ರೀತಿಯ ವಿನ್ಯಾಸ ಮಾಡಿಸಿದ್ದೇವೆ. ಬಿಇಒ ಜಿ.ಬಿ. ಬಳಿಗಾರ ಮಾರ್ಗದರ್ಶನದಲ್ಲಿ ಶಾಲೆಗಳ ಸುಧಾರಣೆಗೆ ಕ್ರಮ ವಹಿಸಿದ್ದೇವೆ’ ಎಂದು ಕೊಳವಿ ಸಿಆರ್‌ಪಿ ಬಿ.ಜಿ. ಕಲ್ಲೋಳಿ ‘ಪ್ರಜಾವಾಣಿ’ಗೆ ತಿಳಿಸಿದರು.

‘ನಮ್ಮ ವಲಯ ವ್ಯಾಪ್ತಿಯಲ್ಲಿರುವ ಹನುಮಾಪುರದ ರೇಣುಕಾನಗರ ಕಿ.ಪ್ರಾ. ಶಾಲೆಗೆ ಬಸ್‌, ಹೂಲಿಕಟ್ಟಿ ತೋಟದ ಕಿ.ಪ್ರಾ. ಶಾಲೆಗೆ ರೈಲಿನಂತೆ ಬಣ್ಣ ಹಚ್ಚಿಸಿದ್ದೇವೆ. ಆವರಣದಲ್ಲಿರುವ ಅಂಗನವಾಡಿ ಕೇಂದ್ರದ ಗೋಡೆಯನ್ನು ಮಕ್ಕಳಿಗೆ ಇಷ್ಟವಾಗುವ ಕಾರ್ಟೂನ್ ಪಾತ್ರಗಳಾದ ಮಿಕ್ಕಿ–ಮೌಸ್, ಚೋಟಾ ಭೀಮ್ ಮೊದಲಾದ ಚಿತ್ರಗಳನ್ನು ಬಿಡಿಸಲಾಗಿದೆ. ಹನುಮಾಪುರ ಹಿ.ಪ್ರಾಥಮಿಕ ಶಾಲೆಗೆ ಹೊಸದಾಗಿ ಬಣ್ಣ ಹಚ್ಚಿಸಿದ್ದೇವೆ. ಅಂಗನವಾಡಿ ಕೇಂದ್ರವನ್ನು ಚಿತ್ರಗಳಿಂದ ಅಲಂಕರಿಸಿದ್ದೇವೆ. ಕೊಳವಿ, ಹೂಲಿಕಟ್ಟಿ, ಹನುಮಾಪುರ ಹಾಗೂ ಹೂಲಿಕಟ್ಟಿ ತೋಟದ ಹಿರಿಯ ಪ್ರಾಥಮಿಕ ಶಾಲೆಗಳಿಗೆ ವಾಟರ್‌ ಫ್ಯೂರಿಫೈಯರ್‌ ಕೊಡಿಸಿದ್ದೇವೆ. ನೀರಿನ ವ್ಯವಸ್ಥೆಯೂ ಇದೆ. ಶಾಲಾ ಅನುದಾನ, ಶಿಕ್ಷಕರ ಸಹಕಾರ ಹಾಗೂ ದಾನಿಗಳ ನೆರವಿನಿಂದ ಈ ಸುಧಾರಣಾ ಕ್ರಮಗಳನ್ನು ಕೈಗೊಂಡಿದ್ದೇವೆ’ ಎಂದು ಮಾಹಿತಿ ನೀಡಿದರು.

ಕ್ರೀಡಾ ಸಾಮಗ್ರಿ:

‘ಅರಣ್ಯ ಇಲಾಖೆ ಸಹಕಾರದಿಂದ ಕೊಳವಿ ಸಿಆರ್‌ಪಿ ವಲಯದ ಶಾಲೆಗಳಲ್ಲಿ ಒಟ್ಟು 800 ಸಸಿಗಳನ್ನು ನೆಡಿಸಿದ್ದೇವೆ. ಯೂತ್ ಫಾರ್ ಸೇವಾ ಸಂಘಟನೆ ಮತ್ತು ಟೆಕ್ಸಾಸ್ ಇನ್‌ಸ್ಟ್ರುಮೆಂಟ್ ಸಹಕಾರದಲ್ಲಿ 1ರಿಂದ 5ನೇ ತರಗತಿಯ ಎಲ್ಲ ಮಕ್ಕಳಿಗೂ ಶಾಲಾ ಬ್ಯಾಗ್, ಕ್ರೀಡಾ ಸಾಮಗ್ರಿಗಳನ್ನು ಕಲ್ಪಿಸಿದ್ದೇವೆ. ಶಿಕ್ಷಕ ವೈ.ಜಿ. ಹೊಸೂರ್, ಟೆಕ್ಸಾಸ್ ಇನ್‌ಸ್ಟ್ರುಮೆಂಟ್ ಕಂಪನಿಯ ಬಸವರಾಜ್–ಕಾವ್ಯಾ ದಂಪತಿಯು ಸರ್ಕಾರಿ ಶಾಲೆ ಉಳಿವಿಗೆ ಕೊಡುಗೆ ನೀಡಿದ್ದಾರೆ. ಪ್ರಸಕ್ತ ಸಾಲಿನಲ್ಲಿ ಮತ್ತಷ್ಟು ಶಾಲೆಗಳಿಗೆ ಸೌಲಭ್ಯ ಒದಗಿಸಲು ಯೋಜಿಸಲಾಗಿದೆ. ಸರ್ಕಾರಿ ಶಾಲೆಗಳಿಗೆ ಮಕ್ಕಳ ದಾಖಲಾತಿ ಹೆಚ್ಚಿಸುವುದು ಮುಖ್ಯ ಗುರಿಯಾಗಿದೆ’ ಎನ್ನುತ್ತಾರೆ ಅವರು.

ಬರಹ ಇಷ್ಟವಾಯಿತೆ?

 • 12

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !