ಬುಧವಾರ, ಮೇ 25, 2022
30 °C
ಅವರಾದಿ ಮಠದ ಮುಂದಿನ ಓಣಿಯ ಜನತೆ ಅಳಲು

ಚನ್ನಮ್ಮನ ಕಿತ್ತೂರು: ಕೊರಕಲು ರಸ್ತೆ, ನೀರಿಗೂ ತೊಂದರೆ

ಪ್ರದೀಪ ಮೇಲಿನಮನಿ Updated:

ಅಕ್ಷರ ಗಾತ್ರ : | |

Prajavani

ಚನ್ನಮ್ಮನ ಕಿತ್ತೂರು (ಬೆಳಗಾವಿ ಜಿಲ್ಲೆ): ತೀರಾ ಇಳಿಜಾರಿನ ಹಾದಿ. ಮಧ್ಯೆ ಅಲ್ಲಲ್ಲಿ ಹುಲ್ಲು ಬೆಳೆದು ನಿಂತಿದೆ. ಮಕ್ಕಳು ಮಗುಚಿ ಬಿದ್ದರೆ ಜಾರುಗುಂಡಿ ಆಡಿದ ಅನುಭವಾಗುತ್ತದೆ. ಕುಡಿಯುವ ನೀರಿಗೂ ತಾಪತ್ರಯವಿದೆ.

ತಾಲ್ಲೂಕಿನ ಪಂಚಾಯ್ತಿ ಕೇಂದ್ರ ಸ್ಥಾನವಾಗಿರುವ ಅವರಾದಿ ಗ್ರಾಮದ ಜಮಳೂರು ಮಾರ್ಗದಲ್ಲಿ ಬರುವ ಕಾದ್ರೊಳ್ಳಿ ಮಠದ ಮುಂದಿನ ಬಡಾವಣೆಯ ಜನರ ಅಳಲಿದು.

‘ಇಲ್ಲಿ ಗುಂಪು ಮನೆಗಳಾಗಿ ಒಂದೂವರೆ ದಶಕ ಕಳೆದಿದೆ. ವಾಸಿಸುವ ಕುಟುಂಬಗಳಿಗೆ ಸಿಗಬೇಕಾದ ಮೂಲಸೌಲಭ್ಯಗಳು ಇನ್ನೂ ಮರೀಚಿಕೆಯಾಗಿವೆ. ಗ್ರಾಮದ ಅನೇಕ ರಸ್ತೆಗಳು ಸಿಮೆಂಟ್ ಕಾಂಕ್ರೀಟ್ ಸೌಲಭ್ಯ ಕಂಡಿದ್ದರೂ ಅದೇಕೋ ಈ ಓಣಿಯ ಜನರಿಗೆ ಸರಿಯಾದ ರಸ್ತೆಯೂ ಇಲ್ಲದಂತಾಗಿದೆ’ ಎಂದು ಮಹಿಳೆಯರು ದೂರುತ್ತಾರೆ.

‘ಮಹಿಳೆಯರು, ವೃದ್ಧರು, ಮಕ್ಕಳು ಓಡಾಡುವ ಈ ರಸ್ತೆಯನ್ನು ಸಮತಟ್ಟಾಗಿಯೂ ನಿರ್ಮಿಸಿಲ್ಲ. ರಸ್ತೆಯನ್ನು ಮಳೆ ನೀರು ಉದ್ದಕ್ಕೂ ಕೊರೆದಿದೆ. ನಾಲ್ಕಾರು ಬುಟ್ಟಿ ಮಣ್ಣು ಹರಡಿ ಪಾದಚಾರಿಗಳಿಗೆ ಓಡಾಡಲು ಅನುಕೂಲವನ್ನಾದರೂ ಕಲ್ಪಿಸಬೇಕು’ ಎಂದು ಅವರು ಆಗ್ರಹಿಸಿದರು.

‘40 ಕುಟುಂಬಗಳು ಇಲ್ಲಿಯ ಕಾಲೊನಿಯಲ್ಲಿ ವಾಸಿಸುತ್ತಾರೆ. ಎರಡು ನಲ್ಲಿಗಳ ಸಂಪರ್ಕ ಕಲ್ಪಿಸಿದ್ದಾರೆ. ಒಂದು ನಲ್ಲಿಗಂತೂ ನೀರು ಮೇಲೇರಿ ಬರುವುದಿಲ್ಲ. ಎಲ್ಲರ ದಾಹವನ್ನು ಒಂದೇ ನಲ್ಲಿ ತೀರಿಸಬೇಕಾಗಿದೆ. ವಿದ್ಯುತ್ ಕೈಕೊಟ್ಟರೆ ಅಥವಾ ಏನಾದರೂ ತಾಂತ್ರಿಕ ತೊಂದರೆಯಾದರೆ ನಲ್ಲಿಗೆ ನೀರಿನ ದರ್ಶನವಾಗಲು ಕನಿಷ್ಠ ಮೂರು ದಿನಗಳಾದರೂ ಬೇಕು’ ಎಂದು ಅವರು ಮಾಹಿತಿ ನೀಡಿದರು.

‘ಬೀದಿ ದೀಪಗಳೂ ಇಲ್ಲಿ ಕೆಲ ದಿನಗಳಿಂದ ಕೈಕೊಟ್ಟಿವೆ. ರಾತ್ರಿ ಹೊತ್ತು ಕತ್ತಲಲ್ಲೇ ಓಡಾಡಬೇಕಾದ ಪರಿಸ್ಥಿತಿ ಇದೆ. ಚುನಾವಣೆ ಸಂದರ್ಭದಲ್ಲಿ ಮತ ಕೇಳಲು ರಾಜಕಾರಣಿಗಳು ಬಂದಿದ್ದರು. ಅವರೂ ಇಲ್ಲಿನ ರಸ್ತೆ ಪರಿಸ್ಥಿತಿ ನೋಡಿ ಮರುಗಿದರು. ಅಭಿವೃದ್ಧಿ ಕೆಲಸ ಮಾಡಿಕೊಡುತ್ತೇವೆ ಎಂದು ಭರವಸೆ ನೀಡಿದ್ದರು. ಬಳಿಕ ಅವರೂ ಮರೆತಂತೆ ತೋರುತ್ತಿದೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

**

ಜನರೇನಂತಾರೆ?

ಕೊರಕಲು ಹಾಗೂ ಕಡಿದಾದ ರಸ್ತೆಯಲ್ಲಿ ನಡೆದಾಡುವುದಕ್ಕೆ ತೊಂದರೆಯಾಗಿದೆ. ನೀರಿನ ಬಿಂದಿಗೆ ತುಂಬಿಕೊಂಡು ಏರುದಾರಿಯಲ್ಲಿ ಸಾಗಬೇಕು. ಮೊದಲು ಈ ರಸ್ತೆ ಸುಧಾರಿಸಬೇಕಿದೆ.
-ಯಲ್ಲವ್ವ, ಶಾಂತವ್ವ, ನಿವಾಸಿಗಳು

**
ಅಧಿಕಾರಿ ಏನಂತಾರೆ?

ಮಠದ ಓಣಿಯ ರಸ್ತೆ ಸುಧಾರಣೆ ಹಾಗೂ ಹೊಸ ಜನತಾ ಕಾಲೊನಿಯ ರಸ್ತೆ ಅಭಿವೃದ್ಧಿ ಪಡಿಸಬೇಕಾಗಿದೆ. ಕೊರೊನಾದಿಂದಾಗಿ ಕಾಮಗಾರಿಗೆ ತಡೆಯುಂಟಾಗಿದೆ.
-ಜಗದೀಶ ಗೌಡರ, ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು