ಸೋಮವಾರ, ಜನವರಿ 24, 2022
21 °C

ವಿಧಾನಪರಿಷತ್ ಚುನಾವಣೆಯಲ್ಲಿ 2ನೇ ಮತ ಯಾರಿಗೆಂದು ಚರ್ಚೆಯಾಗಿಲ್ಲ: ಲಕ್ಷ್ಮಣ ಸವದಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಳಗಾವಿ: ‘ಲಖನ್ ಜಾರಕಿಹೊಳಿ ಗೋಕಾಕ ಉಪಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದರು. ಅವರು ಬಿಜೆಪಿ ಸದಸ್ಯತ್ವ ಪಡೆದಿಲ್ಲ. ಹೀಗಾಗಿ, ಅವರು ಬಂಡಾಯ ಅಭ್ಯರ್ಥಿಯಲ್ಲ’ ಎಂದು ವಿಧಾನಪರಿಷತ್ ಸದಸ್ಯ ಲಕ್ಷ್ಮಣ ಸವದಿ ಪ್ರತಿಕ್ರಿಯಿಸಿದರು.

ಇಲ್ಲಿ ಪತ್ರಕರ್ತರೊಂದಿಗೆ ಮಂಗಳವಾರ ಮಾತನಾಡಿದ ಅವರು, ‘ವಿಧಾನಪರಿಷತ್‌‌ ಚುನಾವಣೆ ಹಿನ್ನೆಲೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಶಾಸಕರು,‌ ಸಂಸದರ ಜೊತೆ ಪ್ರತ್ಯೇಕ ಸಭೆ ನಡೆಸಿ ಗೆಲ್ಲಿಸುವ ಬಗ್ಗೆ ಸೂಚನೆ ಕೊಟ್ಟಿದ್ದಾರೆ’ ಎಂದರು.

‘ಮುಂಬರುವ ವಿಧಾನಮಂಡಲ ಅಧಿವೇಶನದ ಹಿನ್ನೆಲೆ ಜಿಲ್ಲೆಯ ಸಮಸ್ಯೆಗಳ ಬಗ್ಗೆಯೂ ಚರ್ಚಿಸಿದ್ದಾರೆ. ಉತ್ತರ ಕರ್ನಾಟಕದ ಶಾಸಕರು ಕಡ್ಡಾಯವಾಗಿ ಹಾಜರಿರಬೇಕು. ನೀರಾವರಿ ಯೋಜನೆ ಹಾಗೂ ಬೆಳೆ ಹಾನಿ ಬಗ್ಗೆ ಚರ್ಚಿಸಬೇಕು ಎಂದೂ ತಿಳಿಸಿದ್ದಾರೆ’ ಎಂದು ಮಾಹಿತಿ ನೀಡಿದರು.

‘ಬೆಳಗಾವಿಯಲ್ಲಿ ಮೇಲ್ಮನೆ ಚುನಾವಣೆಯಲ್ಲಿ ನಮ್ಮ ಅಭ್ಯರ್ಥಿಗೆ ಮೊದಲ ಪ್ರಾಶಸ್ತ್ಯದ ಮತ ಕೊಡಿಸಬೇಕೆಂದು ಚರ್ಚೆಯಾಗಿದೆ. 2ನೇ ಮತ‌ ಯಾರಿಗೆ‌ ಹಾಕಬೇಕು ಎಂಬ ಚರ್ಚೆ ಆಗಿಲ್ಲ’ ಎಂದು ಸ್ಪಷ್ಟಪಡಿಸಿದರು.

‘ಲಕ್ಷ್ಮಣ ಸವದಿ ನನ್ನ ವಿರೋಧಿ ಎಂದು ರಮೇಶ ಜಾರಕಿಹೊಳಿ ಎಲ್ಲಿಯೂ ಹೇಳಿಲ್ಲ’ ಎಂದು ಪ್ರತಿಕ್ರಿಯಿಸಿದರು. ‘ಪಕ್ಷದ ಅಭ್ಯರ್ಥಿ ಗೆಲ್ಲಿಸುವುದು ಅವರ‌‌‌ ಹೊಣೆ’ ಎಂದರು.

‘ಬಿಜೆಪಿಯಲ್ಲಿ ಒಂದೇ ಮನೆ, ಒಂದೇ ಬಾಗಿಲು ಇದೆ. ಆದರೆ, ಕಾಂಗ್ರೆಸ್ ಮನೆಯೊಂದು ಮೂರು ಬಾಗಲಿನಂತಿದೆ. ಮಲ್ಲಿಕಾರ್ಜುನ ಖರ್ಗೆ, ‌ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್‌ ಹೀಗೆ... 3 ಬಾಗಿಲುಗಳು ಆ ಪಕ್ಷದಲ್ಲಿವೆ’ ಎಂದು ಟೀಕಿಸಿದರು.

‘ಒಂದು ಸ್ಥಾನಕ್ಕಾಗಿ ನಾನು ಸ್ಪರ್ಧಿಸಿದ್ದೇನೆ. ಗೆಲ್ಲುವ ವಿಶ್ವಾಸವಿದೆ. ಜಿಲ್ಲೆಯ ಎಲ್ಲ ನಾಯಕರು ಹಾಗೂ ಪಕ್ಷ ಜೊತೆಗಿದೆ’ ಎಂದು ಬಿಜೆಪಿ ಅಭ್ಯರ್ಥಿ ಮಹಾಂತೇಶ ಕವಟಗಿಮಠ ಪ್ರತಿಕ್ರಿಯಿಸಿದರು.

‘ಪ್ರಚಾರದ ಓಡಾಡ, ಒತ್ತಡದಿಂದ ಆಯಾಸವಾಗಿದೆಯಷ್ಟೆ. ಏನೂ ಬೇಸರವಿಲ್ಲ. ನಾನು ಸಂತೋಷದಿಂದ ಇದ್ದೇನೆ. ಸಂಘಟಿತವಾಗಿ ಚುನಾವಣೆ ಎದುರಿಸಬೇಕು ಎಂದು ಮುಖಂಡರ ಸಭೆಯಲ್ಲಿ ತೀರ್ಮಾನವಾಗಿದೆ’ ಎಂದು ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು