ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ಷೇತ್ರಕ್ಕೆ ಹಣ ತರದವ ವೀರನೂ...! ಕುಮಠಳ್ಳಿ ವಿರುದ್ಧ ಲಕ್ಷ್ಮೀ ಹೇಳಿದ್ದೇನು?

Last Updated 24 ನವೆಂಬರ್ 2019, 7:49 IST
ಅಕ್ಷರ ಗಾತ್ರ

ಬೆಳಗಾವಿ: ‘ಮಳ್ಳ ಮಳ್ಳ ಮಂಚಕ್ಕೆಷ್ಟು ಕಾಲ ಎಂದರೆ, ಮೂರು ಇನ್ನೊಂದು ಎನ್ನುವ ಮಳ್ಳನಂತೆ ನಟಿಸಿ ಜನರಿಗೆ ದ್ರೋಹ ಮಾಡಿದ ಮಹೇಶ ಕುಮಠಳ್ಳಿ ಅವರಿಗೆ ಮತದಾರರು ಪಾಠ ಕಲಿಸಬೇಕು’ ಎಂದು ಕಾಂಗ್ರೆಸ್‌ ಶಾಸಕಿ ಲಕ್ಷ್ಮಿ ಹೆಬ್ಬಾಳಕರ ಕೋರಿದರು.

ಅಥಣಿ ವಿಧಾನಸಭಾ ಕ್ಷೇತ್ರದ ಕಕಮರಿ ಗ್ರಾಮದಲ್ಲಿ ಶನಿವಾರ ರಾತ್ರಿ ನಡೆದ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು.

‘ಮಹೇಶಗೆ 2013 ಹಾಗೂ 2018ರ ಚುನಾವಣೆಯಲ್ಲಿ ಪಕ್ಷದ ಟಿಕೆಟ್‌ ದೊರೆಯಲು ನಾನೂ ಸಹಾಯ ಮಾಡಿದ್ದೆ. ಏನೋ ಒಳ್ಳೆಯವರಿದ್ದಾರೆ, ಎಂಜಿನಿಯರ್‌ ಇದ್ದಾರೆ; ಅವರಿಂದ ಕ್ಷೇತ್ರ ಜನರಿಗೆ ಅನುಕೂಲವಾಗುತ್ತದೆ ಎಂದು ಭಾವಿಸಿ ನೆರವಾಗಿದ್ದೆ. ಆದರೆ, ಅವರು ಹೆತ್ತ ತಾಯಿಗೆ ದ್ರೋಹ ಮಾಡಿದ್ದಾರೆ. ಈ ಕಲಿಯುಗದಲ್ಲಿ ಹಾಲು ಕುಡಿದ ಮಕ್ಕಳೇ ಬದುಕುತ್ತಿಲ್ಲ; ಇನ್ನೂ ವಿಷ ಕುಡಿದಂತಹ ಈ ಮಕ್ಕಳು ಬದುಕುತ್ತಾರೆಯೇ? ನೀವೇ ವಿಚಾರ ಮಾಡಿ. ಜನ್ಮ ಕೊಟ್ಟ ತಾಯಿ ಒಬ್ಬಳಾದರೆ, ಜಗತ್ತನ್ನು ತೋರಿಸಿದಂತೆ ಇನ್ನೊಬ್ಬ ತಾಯಿಯೇ ಪಕ್ಷ. ಕುಮಠಳ್ಳಿ ಪಕ್ಷಕ್ಕೆ ದ್ರೋಹ ಮಾಡಿ ಹೋಗಿದ್ದಾರೆ’ ಎಂದು ಟೀಕಿಸಿದರು.

‘ಸಮ್ಮಿಶ್ರ ಸರ್ಕಾರದಲ್ಲಿ ಅನುದಾನ ಸಿಗಲಿಲ್ಲ ಎಂಬ ನೆಪ ಹೇಳಿ ರಾಜೀನಾಮೆ ಕೊಟ್ಟಿದ್ದಾರೆ. ಅವರೇನು ಬಾಯಿಗೆ ಕಡುಬು ಇಟ್ಟುಕೊಂಡಿದ್ರಾ, ಕೇಳೋಕೆ ಆಗುತ್ತಿರಲಿಲ್ಲವೇ, ಮಂತ್ರಿಗಳನ್ನು ಭೇಟಿಯಾಗಿ ಕೈ ಮುಗಿಯಲು ಆಗುವುದಿಲ್ಲವೇ? ಕೊಟ್ಟ ಕುದುರೆಯನ್ನು ಬಿಟ್ಟು ಇನ್ನೊಂದನ್ನು ಏರುತ್ತೇನೆ ಎನ್ನುವ ವೀರನೂ ಅಲ್ಲ, ಶೂರನೂ ಅಲ್ಲ. ಡ್ಯಾಶ್ ಡ್ಯಾಶೂ ಅಲ್ಲ. ಹೆಣ್ಣು ಮಗಳಾಗಿ ನಾನು ಕ್ಷೇತ್ರಕ್ಕೆ ₹ 1,800 ಕೋಟಿ ತಂದಿದ್ದೇನೆ ಎಂದರೆ, ನೀವು ಗಂಡಸರು, ಸ್ವಾಭಿಮಾನಿಗಳು ನೀವೇಕೆ ಕ್ಷೇತ್ರಕ್ಕೆ ಹಣ ತರಲಿಲ್ಲ?’ ಎಂದು ಕೇಳಿದರು.

‘ಇನ್ನೊಬ್ಬರು ದುಡಿದು ಊಟ ಮಾಡಿದ್ದಾರೆಂದು ಹೊಟ್ಟೆ ಉರಿದುಕೊಳ್ಳದೇ, ನಾವೂ ದುಡಿದು ಉಣ್ಣಬೇಕು. ಅದು ಗಂಡಸ್ತನ. ಅದನ್ನು ಬಿಟ್ಟು ಸೋಗು ಹಾಕಿಕೊಂಡಿದ್ದರೆ ಏನೂ ಆಗುವುದಿಲ್ಲ. ಅತಿ ವಿನಯ ಚೋರನ ಲಕ್ಷಣ’ ಎಂದು ಟೀಕಿಸಿದರು.

‘ಅಭ್ಯರ್ಥಿ ಗಜಾನನ ಮಂಗಸೂಳಿ ಅವರನ್ನು ಗೆಲ್ಲಿಸುವ ಮೂಲಕ ನನ್ನ ಮರ್ಯಾದೆ ಉಳಿಸಬೇಕು. ಬೆಳಗಾವಿ ಜಿಲ್ಲೆಯ ರಾಜಕಾರಣ ಬದಲಾಗಬೇಕು. ಅಭಿವೃದ್ಧಿಯಾಗಬೇಕು. ಕೈಗಾರಿಕೆಗಳು ಬರಬೇಕು. ಯುವಕರಿಗೆ ಕೆಲಸ ಸಿಗಬೇಕು. ಈ ನಿಟ್ಟಿನಲ್ಲಿ ಜಿಲ್ಲೆಯ ರಾಜಕಾರಣ ಬದಲಿಸುತ್ತೇನೆ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT