ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಡಿಮೆ ನೀರು, ಬಂಪರ್‌ ಬೆಳೆ

Last Updated 3 ಜೂನ್ 2019, 19:30 IST
ಅಕ್ಷರ ಗಾತ್ರ

ರಾಮದುರ್ಗ: ತಾಲ್ಲೂಕಿನ ದಾಡಿಬಾವಿ ಗ್ರಾಮದಲ್ಲಿ ಸುತ್ತಲೂ ಬರಡು ಭೂಮಿ. ಅಂತಹದರಲ್ಲಿ ಆ ಗ್ರಾಮದ ಪುಂಡಲೀಕ ದಾಮಪ್ಪ ಲಮಾಣಿ ಎಂಬ ರೈತ ಬೋರ್‌ವೆಲ್‌ನಿಂದ ಸಿಗುವ ಕೇವಲ ಮೂರಿಂಚು ನೀರನ್ನೇ ಬಳಸಿಕೊಂಡು ತನ್ನ ಹದಿನೈದು ಎಕರೆ ಜಮೀನನ್ನು ಬಂಗಾರದ ಭೂಮಿಯನ್ನಾಗಿ ಮಾಡಿ ಇತರರಿಗೂ ಮಾದರಿಯಾಗಿದ್ದಾರೆ.

ಮೂರಿಂಚು ನೀರನ್ನು 15 ಎಕರೆ ಜಮೀನಿಗೆ ಉಣಿಸುವುದೆಂದರೆ ಸುಲಭದ ಮಾತಲ್ಲ. ಆದರೆ, ಪುಂಡಲೀಕ ಈ ನೀರನ್ನು ಕೃಷಿ ಇಲಾಖೆ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಹನಿ ನೀರಾವರಿ ಮೂಲಕ ಮಿತವಾಗಿ ಉಪಯೋಗಿಸಿ ಹೆಚ್ಚಿನ ಲಾಭ ಕಾಣುತ್ತಿದ್ದಾರೆ. ಪಕ್ಕದ ಜಮೀನುಗಳ ರೈತರು ಮೂಗಿನ ಮೇಲೆ ಬೆರಳಿಟ್ಟುಕೊಳ್ಳುವಂತೆ ಬೇಸಾಯ ಮಾಡುತ್ತಿದ್ದಾರೆ.

ಬೇಸಿಗೆ ಆಗಿರುವುದರಿಂದ ಅವರು ಮಾಡಿರುವ ಈ ಉಪಾಯ ಬಹಳ ಸಹಕಾರಿಯಾಗಿದೆ. ಜೊತೆಗೆ ಬರಗಾಲದಲ್ಲೂ ಅವರ ಜಮೀನು ಹಸಿರಿನಿಂದ ಸೆಳೆಯುತ್ತಿದೆ. 4 ಏಕರೆಯಲ್ಲಿ ಶೇಂಗಾ, 4 ಏಕರೆಯಲ್ಲಿ ದಾಳಿಂಬೆ, 3 ಏಕರೆಯಲ್ಲಿ ನಿಂಬೆ ಗಿಡಗಳನ್ನು ಬೆಳೆದಿದ್ದಾರೆ. ಉಳಿದ ಜಮೀನಿನಲ್ಲಿ ಕಬ್ಬು ನಾಟಿ ಮಾಡಿದ್ದಾರೆ.

ಕೊಳವೆಬಾವಿಯಿಂದ ನೀರು ಹಾಯಿಸಿದರೆ ಎಲ್ಲ ಭೂಮಿಯನ್ನೂ ಹದ ಮಾಡಲು ಸಾಧ್ಯವಿಲ್ಲ ಎಂದು ಕೃಷಿ ಇಲಾಖೆಯವರ ಸಲಹೆ ಮೇರೆಗೆ ಹನಿ ನೀರಾವರಿ, ತುಂತುರು ನೀರಾವರಿ ವ್ಯವಸ್ಥೆ ಅಳವಡಿಸಿಕೊಂಡಿದ್ದಾರೆ. ಹಿಂದಿಗಿಂತಲೂ ಶೇ 25ರಷ್ಟು ಹೆಚ್ಚಿನ ಇಳುವರಿ ಪಡೆದು ಆರ್ಥಿಕವಾಗಿ ಅನುಕೂಲ ಕಾಣುತ್ತಿದ್ದಾರೆ. ಹೊಲದಲ್ಲಿನ ಕೆಲಸಕ್ಕೆ ಕೂಲಿಯವರನ್ನು ಅವರು ಅವಲಂಬಿಸಿಲ್ಲ. ಕುಟುಂಬದವರೆಲ್ಲರೂ ದುಡಿಯುತ್ತಾರೆ.

ಅವರ ಚಾತುರ್ಯ ಮನಗಂಡ ಸುತ್ತಮುತ್ತಲಿನ ಗ್ರಾಮಗಳವರು, ತಾಲ್ಲೂಕಿನವರು ಹಾಗೂ ಜಿಲ್ಲೆಯ ರೈತರು ಜಮೀನಿಗೆ ಭೇಟಿ ನೀಡಿ ಮಾಹಿತಿ ಪಡೆಯುತ್ತಿದ್ದಾರೆ. ಅವರು ಯಾವ ರೀತಿ ನೀರು ಬಳಸಿಕೊಂಡಿದ್ದಾರೆ ಎನ್ನುವುದನ್ನು ತಿಳಿದುಕೊಂಡು, ತಮ್ಮ ಜಮೀನುಗಳಲ್ಲೂ ಈ ವಿಧಾನ ಬಳಸಿಕೊಳ್ಳಲು ಮುಂದಾಗಿದ್ದಾರೆ.

‘ರಾಮದುರ್ಗ ತಾಲ್ಲೂಕಿನಲ್ಲಿಯೇ ಸರ್ಕಾರಿ ಸೌಲಭ್ಯಗಳನ್ನು ಸಮರ್ಪಕವಾಗಿ ಬಳಕೆ ಮಾಡಿಕೊಂಡಿರುವ ಪುಂಡಲೀಕ ಲಮಾಣಿ ವ್ಯವಸಾಯವನ್ನು ಅಚ್ಚುಕಟ್ಟಾಗಿ ಮಾಡಿ ಮಾದರಿಯಾಗಿದ್ದಾರೆ’ ಎಂದು ಕೃಷಿ ಅಧಿಕಾರಿ ರಮೇಶ ಅರಕೇರಿ ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT