ಬುಧವಾರ, ಜನವರಿ 19, 2022
18 °C
ಲಿಂ.ಶಿವಬಸವ ಸ್ವಾಮೀಜಿ ಪ್ರತಿಮೆ, ಶಿಲಾಮಂಟಪ ಅನಾವರಣ

ರಾಜ್ಯದಲ್ಲಿ ಸಾಕ್ಷರತೆ ಹೆಚ್ಚಳಕ್ಕೆ ಮಠಗಳ ಕೊಡುಗೆ ಅಪಾರ: ಶಿವಾಚಾರ್ಯ ಸ್ವಾಮೀಜಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಳಗಾವಿ: ‘ರಾಜ್ಯದಲ್ಲಿ ಸಾಕ್ಷರತೆ ಪ್ರಮಾಣ ಹೆಚ್ಚಾಗಿದ್ದೆ ಲಿಂಗಾಯತ ಮಠಗಳು ಹಾಗೂ ಅವುಗಳ ಶಿಕ್ಷಣ ಸಂಸ್ಥೆಗಳಿಂದಾಗಿ. ನಾಡಿನ ಬೆಳವಣಿಗೆಗೆ ಮಠ–ಪೀಠಗಳ ಕೊಡುಗೆ ಬಹಳಷ್ಟಿದೆ’ ಎಂದು ಸಿರಿಗೆರೆಯ ತರಳಬಾಳು ಮಹಾಸಂಸ್ಥಾನ ಮಠದ ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ಇಲ್ಲಿನ ಶಿವಬಸವ ನಗರದಲ್ಲಿರುವ ನಾಗನೂರು ರುದ್ರಾಕ್ಷಿ ಮಠದ ಬಳಿ ಪ್ರತಿಷ್ಠಾಪಿಸಿರುವ ಲಿಂ.ಶಿವಬಸವ ಸ್ವಾಮೀಜಿ ಪ್ರತಿಮೆ ಹಾಗೂ ಶಿಲಾಮಂಟಪವನ್ನು ಬುಧವಾರ ಅನಾವರಣಗೊಳಿಸಿ, ಬಳಿಕ ಆರ್‌.ಎನ್. ಶೆಟ್ಟಿ ಪಾಲಿಟೆಕ್ನಿಕ್ ಆವರಣದಲ್ಲಿ ನಡೆದ ‘ಸೇವಾ ರತ್ನ’ ಪ್ರಶಸ್ತಿ ಪ್ರದಾನ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

‘ದೇಶದಲ್ಲಿ ವಿಭಿನ್ನ ಭಾಷೆ–ಪ್ರಾಂತ್ಯಗಳಿವೆ. ಆದರೆ, ಭಕ್ತಿಗೆ ಗಡಿ ಎನ್ನುವುದಿಲ್ಲ’ ಎಂದರು.

ಹೆಚ್ಚಿನ ಜ್ಞಾನ ಬೇಕು: ‘ವಿದ್ಯಾರ್ಥಿಗಳಲ್ಲಿ ಕುತೂಹಲ ಹಾಗೂ‌ ಕಿಲಾಡಿತನ ಇರುತ್ತದೆ. ಅವರನ್ನು ನಿರ್ವಹಣೆ ಮಾಡಲು ಬೋಧಕರು ಜ್ಞಾನ ವೃದ್ಧಿಸಿಕೊಳ್ಳಬೇಕು’ ಎಂದು ಸಲಹೆ ನೀಡಿದರು.

‘ಪ್ರಸ್ತುತ ಕೌಟುಂಬಿಕ ಸಂಬಂಧಗಳು ಬಹಳ ಶಿಥಿಲಗೊಂಡಿವೆ. ಮಕ್ಕಳು ಪೋಷಕರನ್ನು ಕೂಡ ವ್ಯವಹಾರಿಕವಾಗಿಯೆ ನೋಡುತ್ತಿದ್ದಾರೆ. ಹಿರಿಯರನ್ನು ಗೌರವಿಸುವುದು‌ ನಮ್ಮ ಕರ್ತವ್ಯ. ತಾಯಿ-ತಂದೆಗೆ ಮೊದಲ ಆದ್ಯತೆ ಕೊಡಬೇಕು’ ಎಂದು ತಿಳಿಸಿದರು.

ಸಾನ್ನಿಧ್ಯ ವಹಿಸಿದ್ದ ಗದಗ ತೋಂಟದಾರ್ಯ ಮಠದ ತೋಂಟದ ಸಿದ್ಧರಾಮ ಸ್ವಾಮೀಜಿ ಮಾತನಾಡಿ, ‘ಉತ್ತರ ಕರ್ನಾಟಕಕ್ಕೆ ಲಿಂ. ಶಿವಬಸವ ಸ್ವಾಮೀಜಿ ಕೊಡುಗೆ ಬಹಳ ಅಮೂಲ್ಯವಾದುದು. ಅಜ್ಞಾನ, ದಾರಿದ್ರ್ಯ ಹಾಗೂ ಬಡತನ ದೂರಾಗಬೇಕಾದರೆ ಶಿಕ್ಷಣ ಮತ್ತು ಸಂಘಟನೆ ಬಹಳ ಮುಖ್ಯ ಎನ್ನುವುದನ್ನು ಅರಿತು ಹಲವು ಶಿಕ್ಷಣ ಸಂಸ್ಥೆಗಳನ್ನು ಹಿರಿಯರು ಹುಟ್ಟು ಹಾಕಿದರು. ಅದಕ್ಕೆ ಪೂರಕವಾಗಿ ಇಲ್ಲಿ ಪ್ರಸಾದನಿಲಯಗಳನ್ನು ಶ್ರೀಗಳು ಆರಂಭಿಸಿ, ಗ್ರಾಮೀಣ ವಿದ್ಯಾರ್ಥಿಗಳಿಗೆ ಆಶ್ರಯ ಕಲ್ಪಿಸಿದರು’ ಎಂದು ಸ್ಮರಿಸಿದರು.

‘ಇಲ್ಲಿನ ಪ್ರಸಾದ ನಿಲಯದಲ್ಲಿದ್ದುಕೊಂಡು ಓದಿದವರು ಸಮಾಜದಲ್ಲಿ ಬಹಳ ಮುಂದೆ ಬಂದಿದ್ದಾರೆ. ಶರಣರ ಪ್ರಸಾದ ಹಾಗೂ ದಾಸೋಹ ತತ್ವವನ್ನು ಮನೆ ಮನೆಗೆ ತಲುಪಿಸಿ ಶಿವಬಸವ ಶ್ರೀ, ಸ್ವಾಮೀಜಿಗಳಿಗೆ ಆದರ್ಶವನ್ನು ಹಾಕಿಕೊಟ್ಟರು’ ಎಂದು ತಿಳಿಸಿದರು.

ಸಮಾಜ ಒಡೆಯಬಾರದು: ಮುಖ್ಯಮಂತ್ರಿ ಆಪ್ತ ಕಾರ್ಯದರ್ಶಿ ಗಿರೀಶ ಹೊಸೂರ ಮಾತನಾಡಿ, ‘ಮಠಗಳು ಸಮಾಜಗಳನ್ನು ಒಗ್ಗೂಡಿಸುತ್ತಿದ್ದವು. ಪ್ರಜಾಪ್ರಭುತ್ವ ವ್ಯವಸ್ಥೆಯಿಂದಾಗಿ ಜನರು ಸಮಾಜದಿಂದ ಬೇರ್ಪಡುತ್ತಾ ಹೋದರು. ಮೀಸಲಾತಿ ಮೊದಲಾದ ಸ್ವಾರ್ಥದ ಕಾರಣದಿಂದಾಗಿ ಬೇರೆಯಾಗಿ ಗುರುತಿಸಿಕೊಳ್ಳಲು ಶುರು ಮಾಡಿದರು. ಸಮಾಜ ಒಡೆಯುವ ಕೆಲಸ ದೇಶದ ಬೆಳವಣಿಗೆಗೆ ಒಳ್ಳೆಯದಲ್ಲ’ ಎಂದು ಅಭಿಪ್ರಾಯಪಟ್ಟರು.

‘ಶಿವಬಸವ ಚಿತ್ರ ಸಂಪುಟ’ ಬಿಡುಗಡೆ ಮಾಡಲಾಯಿತು. ಸಿದ್ಧರಾಮೇಶ್ವರ ಪಿಯು (ವಿಜ್ಞಾನ) ಕಾಲೇಜಿನ ಕಟ್ಟಡ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಲಾಯಿತು.

ಹಾಲಕೆರೆಯ ಅನ್ನದಾನೀಶ್ವರ ಮಠದ ಮುಪ್ಪಿನ ಬಸವಲಿಂಗ ಸ್ವಾಮೀಜಿ ನೇತೃತ್ವ ವಹಿಸಿದ್ದರು. 

ಮಠದ ಪೀಠಾಧಿಪತಿ ಡಾ.ಅಲ್ಲಮಪ್ರಭು ಸ್ವಾಮೀಜಿ ನೇತೃತ್ವ ವಹಿಸಿದ್ದರು.

ಡಾ.ಎಫ್‌.ವಿ. ಮಾನ್ವಿ ಸ್ವಾಗತಿಸಿದರು. ಪ್ರೊ.ಸಿ.ಜಿ ಮಠಪತಿ ಮತ್ತು ಮಹಾಂತ ದೇವರು ನಿರೂಪಿಸಿದರು.

ಸಂಜೆ ಬಸವನಕುಡಚಿಯ ಚನ್ನಮ್ಮ ಹಿರೇಮಠ ವೃದ್ಧಾಶ್ರಮ ಆವರಣದಲ್ಲಿ ಲಿಂ.ಶಿವಬಸವ ಸ್ವಾಮೀಜಿ ಪುತ್ಥಳಿ ಅನಾವರಣಗೊಳಿಸಲಾಯಿತು.

ಪ್ರಶಸ್ತಿ ಪ್ರದಾನ, ಸನ್ಮಾನ
ಧಾರವಾಡದ ಡಾ.ಗುರುಲಿಂಗ ಕಾಪಸೆ, ವಿಜಯಪುರದ ಎನ್.ಕೆ. ಕುಂಬಾರ, ಧಾರವಾಡದ ಸಿ.ಆರ್. ಯರವಿನ ತೆಲಿಮಠ, ಗದಗದ ಚನ್ನಯ್ಯ ಹಿರೇಮಠ ಹಾಗೂ ಬೆಳಗಾವಿಯ ಅಶೋಕ ಚಂದರಗಿ ಅವರಿಗೆ ‘ಸೇವಾ ರತ್ನ ಪ್ರಶಸ್ತಿ’ ಪ್ರದಾನ ಮಾಡಲಾಯತು. ಪ್ರತಿಮೆ ಹಾಗೂ ಶಿಲಾಮಂಟಪ ನಿರ್ಮಾಣಕ್ಕೆ ನೆರವಾದ ಮೀರಜ್‌ನ ವಿಜಯ್ ಗುಜ್ಜರ್, ಶಿರಸಿಯ ಆರ್.ಎಂ. ಹೆಗ್ಡೆ ಮತ್ತು ಬೆಳಗಾವಿಯ ಮಹೇಶ ಹೆಬ್ಬಾಳೆ ಅವರನ್ನು ಸನ್ಮಾನಿಸಲಾಯಿತು. ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಆದಿಚುಂಚನಗಿರಿ ಮಠದ ಆಡಳಿತಾಧಿಕಾರಿ ಜೆ.ಎನ್. ರಾಮಕೃಷ್ಣೇಗೌಡ ಅವರನ್ನು ಸತ್ಕರಿಸಲಾಯಿತು.

ಸಿದ್ಧರಾಮೇಶ್ವರ ಶಿಕ್ಷಣ ಸಂಸ್ಥೆಯ ಜಾಲತಾಣಕ್ಕೆ ಚಾಲನೆ ನೀಡಲಾಯಿತು.

ನಾಮಕರಣ ಮಾಡಬೇಕು
ಬೆಳಗಾವಿಯ ರೈಲು ನಿಲ್ದಾಣಕ್ಕೆ ಶಿವಬಸವ ಸ್ವಾಮೀಜಿ ಹೆಸರು ನಾಮಕರಣ ಮಾಡುವಂತೆ ರಾಜ್ಯ ಸರ್ಕಾರವು ಕೇಂದ್ರಕ್ಕೆ ಶಿಫಾರಸು ಮಾಡಬೇಕು. ಈ ಬಗ್ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಗಮನಸೆಳೆಯಲಾಗಿದೆ.
–ಅಶೋಕ ಚಂದರಗಿ, ಅಧ್ಯಕ್ಷ, ಜಿಲ್ಲಾ ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿ

*
ಒಗ್ಗೂಡಿಸಬೇಕು
ಎಲ್ಲ ಸಮಾಜಗಳನ್ನೂ ಒಗ್ಗೂಡಿಸುಸ ಕೆಲಸ ಆಗಬೇಕು. ಜಾತಿ, ಮತ ಮರೆದು ಎಲ್ಲರೂ ಒಂದೇ ಎಂಬ ಭಾವನೆಯಿಂದ ಸಾಗಿದರೆ ದೇಶದ ಅಭಿವೃದ್ಧಿ ಸಾಧ್ಯವಾಗುತ್ತದೆ.
–ಗಿರೀಶ ಹೊಸೂರ, ಮುಖ್ಯಮಂತ್ರಿ ಆಪ್ತ ಕಾರ್ಯದರ್ಶಿ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು