ಸೋಮವಾರ, ಮೇ 17, 2021
26 °C
ಎನ್‌ಡಬ್ಲ್ಯುಕೆಆರ್‌ಟಿಸಿ ಬೆಳಗಾವಿ, ಚಿಕ್ಕೋಡಿ ವಿಭಾಗಕ್ಕೆ ಅಪಾರ ನಷ್ಟ

ಲಾಕ್‌ಡೌನ್‌ ಗಾಯಕ್ಕೆ ಮುಷ್ಕರದ ಬರೆ

ಎಂ. ಮಹೇಶ Updated:

ಅಕ್ಷರ ಗಾತ್ರ : | |

Prajavani

ಬೆಳಗಾವಿ: ಕೋವಿಡ್–19 ಲಾಕ್‌ಡೌನ್‌ನಿಂದಾಗಿ ಅಪಾರ ನಷ್ಟ ಅನುಭವಿಸಿದ್ದ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮ (ಎನ್‌ಡಬ್ಲ್ಯುಕೆಆರ್‌ಟಿಸಿ) ಬೆಳಗಾವಿ ಮತ್ತು ಚಿಕ್ಕೋಡಿ ವಿಭಾಗಗಳು ಈಗ ಸಾರಿಗೆ ನೌಕರರ ಮುಷ್ಕರದಿಂದಾಗಿ ಆರ್ಥಿಕವಾಗಿ ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿವೆ.

ಬೆಳಗಾವಿ ವಿಭಾಗದಲ್ಲಿ 7 ಹಾಗೂ ಚಿಕ್ಕೋಡಿಯಲ್ಲಿ 6 ಡಿಪೊಗಳಿವೆ. ಬೆಳಗಾವಿಯಿಂದ ನಿತ್ಯ ಸರಾಸರಿ 651 ಹಾಗೂ ಚಿಕ್ಕೋಡಿ ಭಾಗದಿಂದ 600 ರೂಟ್‌ಗಳಲ್ಲಿ ಬಸ್‌ಗಳ ಕಾರ್ಯಾಚರಣೆ ನಡೆಯುತ್ತದೆ. ಜಿಲ್ಲೆಯಾದ್ಯಂತ, ಇತರ ಜಿಲ್ಲೆಗಳಿಗೆ, ನೆರೆಯ ಮಹಾರಾಷ್ಟ್ರ, ಗೋವಾ ಮೊದಲಾದ ರಾಜ್ಯಗಳಿಗೂ ಇಲ್ಲಿಂದ ಬಸ್‌ಗಳು ಸಂಚರಿಸುತ್ತಿದ್ದವು. ಇದರಿಂದ ನಿತ್ಯವೂ ಸರಾಸರಿ ಇಂತಿಷ್ಟು ಆದಾಯವನ್ನು ಈ ವಿಭಾಗಗಳು ಕಾಣುತ್ತಿದ್ದವು. ಆದರೆ, 6ನೇ ವೇತನ ಆಯೋಗದ ಶಿಫಾರಸು ಜಾರಿಗೆ ಪಟ್ಟು ಹಿಡಿದು ಸಾರಿಗೆ ಸಂಸ್ಥೆಯ ನೌಕರರು 12 ದಿನಗಳಿಂದ ಮುಷ್ಕರ ನಡೆಸುತ್ತಿರುವುದರಿಂದ ಹಾಗೂ ಬಹುತೇಕರು ಕೆಲಸದಿಂದ ದೂರ ಉಳಿದಿರುವುದರಿಂದಾಗಿ ಅಪಾರ ನಷ್ಟ ಉಂಟಾಗುತ್ತಿದೆ.

ತೊಂದರೆ

ಲಾಕ್‌ಡೌನ್‌ ಸಂದರ್ಭದಲ್ಲಿ ಆದ ನಷ್ಟದಿಂದ ಸುಧಾರಿಸಿಕೊಳ್ಳುತ್ತಿರುವಾಗಲೇ ಬಿದ್ದಿರುವ ಮತ್ತೊಂದು ಹೊಡೆತದಿಂದಾಗಿ ವಿಭಾಗಗಳ ಆರ್ಥಿಕ ಪರಿಸ್ಥಿತಿ ಚಿಂತಾಜನಕವಾಗಿದೆ. ಸರ್ಕಾರ ಕೊಡುತ್ತಿಲ್ಲ; ನೌಕರರು ಬಿಡುತ್ತಿಲ್ಲ. ಇದರಿಂದಾಗಿ ಸಾರಿಗೆ ಸಚಿವ ಲಕ್ಷ್ಮಣ ಸವದಿ ತವರಲ್ಲೇ ಸಾರಿಗೆ ವ್ಯವಸ್ಥೆ ಸರಿದಾರಿಗೆ ಬರುತ್ತಿಲ್ಲ. ಪರಿಣಾಮ, ಪ್ರಯಾಣಿಕರು ಕೂಡ  ಪರದಾಡುವಂತಾಗಿದೆ. ಕೋವಿಡ್ 2ನೇ ಅಲೆಯ ಭೀತಿಯ ನಡುವೆಯೂ, ಲಭ್ಯವಿರುವ ಕೆಲವೇ ವಾಹನಗಳಲ್ಲಿ ಅಂತರವನ್ನೂ ಮರೆತು ಪ್ರಯಾಣಿಸಬೇಕಾದ ಅನಿವಾರ್ಯತೆ ಜನರದಾಗಿದೆ.

‘ಸಾರಿಗೆ ನೌಕರರ ಮುಷ್ಕರದಿಂದ ನಿಗಮದ ಮೇಲೆ ಬಹಳ ವ್ಯತಿರಿಕ್ತ ಪರಿಣಾಮ ಉಂಟಾಗಿದೆ. ಕೋವಿಡ್ ಲಾಕ್‌ಡೌನ್ ಸಂದರ್ಭದಲ್ಲಿ ನಿಗಮಕ್ಕೆ ₹ 350 ಕೋಟಿ ನಷ್ಟ ಉಂಟಾಗಿತ್ತು. ಇನ್ನೇನು ಚೇತರಿಕೆ ಕಾಣಿಸುತ್ತಿದೆ ಎಂದುಕೊಳ್ಳುತ್ತಿರುವಾಗಲೇ, ನೌಕರರು ಮುಷ್ಕರದ ಹಾದಿ ತುಳಿದಿದ್ದಾರೆ. ಎಲ್ಲ ಬಸ್‌ಗಳು ಕಾರ್ಯಾಚರಣೆ ನಡೆಸಿದರೆ ನಿತ್ಯ ಸರಾಸರಿ ₹ 65ರಿಂದ ₹ 70 ಲಕ್ಷ ಆದಾಯ ಬರುತ್ತಿತ್ತು. ಹಬ್ಬ, ಮದುವೆ ಮೊದಲಾದ ಸೀಸನ್‌ಗಳಲ್ಲಿ ಇನ್ನೂ ಹೆಚ್ಚಿರುತ್ತಿತ್ತು. ಮುಷ್ಕರದಿಂದಾಗಿ 12 ದಿನಗಳಿಂದ ಬೆಳಗಾವಿ ವಿಭಾಗವೊಂದರಲ್ಲೇ ₹ 8.56 ಕೋಟಿ ನಷ್ಟವಾಗಿದೆ’ ಎಂದು ವಿಭಾಗೀಯ ನಿಯಂತ್ರಣಾಧಿಕಾರಿ ಎಂ.ಆರ್. ಮುಂಜಿ ‘ಪ್ರಜಾವಾಣಿ’ಗೆ ತಿಳಿಸಿದರು.

ಕೆಲಸವನ್ನೂ ಕಳೆದುಕೊಂಡರು

‘ಕೆಲಸಕ್ಕೆ ಹಾಜರಾಗುವ ನೌಕರರ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದೆ. ಸೋಮವಾರ 200 ಮಂದಿ ಬಂದಿದ್ದಾರೆ. 80 ಬಸ್‌ಗಳು ಕಾರ್ಯಾಚರಣೆ ನಡೆಸಿವೆ. ಇದು ಸಾಲುವುದಿಲ್ಲ. ಎಚ್ಚರಿಕೆ ನೀಡಿದಾಗ್ಯೂ ಕರ್ತವ್ಯಕ್ಕೆ ಬಾರದಿರುವುದರಿಂದ ತರಬೇತಿ ನಿರತ ಚಾಲಕ, ನಿರ್ವಾಹಕರನ್ನು ಅನಿವಾರ್ಯವಾಗಿ ಕೆಲಸದಿಂದ ತೆಗೆಯಲಾಗಿದೆ. ನೌಕರರು ಪರಿಸ್ಥಿತಿ ಅರ್ಥ ಮಾಡಿಕೊಂಡು ಕೆಲಸಕ್ಕೆ ಹಾಜರಾಗಬೇಕು’ ಎಂದು ಕೋರುತ್ತಾರೆ ಅವರು.

ಲಾಕ್‌ಡೌನ್‌ ಜೊತೆಗೆ, ನೆರೆಯ ಮಹಾರಾಷ್ಟ್ರದಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚುತ್ತಿರುವುದು ಚಿಕ್ಕೋಡಿ ವಿಭಾಗಕ್ಕೆ ಹೆಚ್ಚಿನ ಹೊಡೆತ ನೀಡಿತ್ತು. ಇದೀಗ, ಸಾರಿಗೆ ನೌಕರರ ಮುಷ್ಕರ ಗಾಯದ ಮೇಲೆ ಉಪ್ಪು ಸವರಿದಂತಾಗಿದೆ.

ಅಲ್ಲಿ ನಿತ್ಯ 600 ಬಸ್‌ಗಳ ಕಾರ್ಯಾಚರಣೆ ಇರುತ್ತಿತ್ತು. ಪ್ರಸ್ತುತ ಸರಾಸರಿ 130ರಿಂದ 150 ಬಸ್‌ಗಳಷ್ಟೇ ಸಂಚರಿಸುತ್ತಿವೆ. ಮುಷ್ಕರದಿಂದಾಗಿ ಸೋಮವಾರದವರೆಗೆ ₹ 6.50 ಕೋಟಿ ನಷ್ಟ ಉಂಟಾಗಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು