ಗುರುವಾರ , ಮಾರ್ಚ್ 4, 2021
29 °C
ಮಡಿವಾಳ ಮಾಚಿದೇವ ಜಯಂತಿ ಆಚರಣೆ

‘ವಚನಕಾರರ ಆದರ್ಶ ಅಳವಡಿಸಿಕೊಳ್ಳಿ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಳಗಾವಿ: ‘ಮಡಿವಾಳ ಮಾಚಿದೇವ ಅವರು 12ನೇ ಶತಮಾನದ ಆದ್ಯ ವಚನಕಾರ ಮತ್ತು ವಚನಗಳ ಸಂರಕ್ಷಕ. ಇಂತಹ ಮಹಾನ್ ವ್ಯಕ್ತಿಗಳ ತತ್ವಾದರ್ಶಗಳನ್ನು ಅಳವಡಿಸಿಕೊಳ್ಳಬೇಕು’ ಎಂದು ಸಾಹಿತಿ ಯ.ರು. ಪಾಟೀಲ ಹೇಳಿದರು.

ಇಲ್ಲಿನ ಕುಮಾರಗಂದರ್ವ ಕಲಾಮಂದಿರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯ್ತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಪಾಲಿಕೆ ಸಹಯೋಗದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಮಡಿವಾಳ ಮಾಚಿದೇವ ಜಯಂತಿ ಕಾರ್ಯಕ್ರಮದಲ್ಲಿ ಅವರು ಉಪನ್ಯಾಸ ನೀಡಿದರು.

‘ಅವರು ಮಡಿವಾಳ ಸಮಾಜಕ್ಕೆ ಸೀಮಿತವಾದವರಲ್ಲ. ಕ್ರಾಂತಿಕಾರಿ ಬಸವಣ್ಣನ ಅನುಯಾಯಿಯಾಗಿದ್ದವರು. ಮನುಷ್ಯನು ಪ್ರಾಣಿ– ಪಕ್ಷಿಗಳಿಂದಲೂ ಕಲಿಯುವುದು ಸಾಕಷ್ಟಿದೆ ಎಂದು ವಚನದಲ್ಲಿ ಹೇಳಿದ್ದಾರೆ. ಅವರ ಅಂಕಿತ ನಾಮ ಕಲಿದೇವರ ದೇವಾ ಎಂದಾಗಿತ್ತು. ಇಂತಹ ವಚನಕಾರ ನಮ್ಮಲ್ಲಿ ಜನಿಸಿದ್ದು ಹೆಮ್ಮೆಯ ಸಂಗತಿ’ ಎಂದರು.

‘ವಿಜಯ‍ಪುರ ಜಿಲ್ಲೆ ಹಿಪ್ಪರಗಿಯಲ್ಲಿ ಜನಿಸಿದ ಅವರು ಆಚಾರ-ವಿಚಾರಗಳನ್ನು ಪಾಲಿಸುವ ಜೊತೆಗೆ ಸಮಾಜದ ಅಂಕು-ಡೊಂಕುಗಳನ್ನು ವಚನಗಳ ಮೂಲಕ ತಿದ್ದಲು ಯತ್ನಿಸಿದರು. ನಿಷ್ಠುರ ವಚನಕಾರರಲ್ಲಿ ಒಬ್ಬರಾಗಿದ್ದರು. ಮನುಜ ಭಕ್ತಿಯೇ ನಿಜವಾದ ಭಕ್ತಿ ಎಂದು ತಿಳಿಸಿದರು. ಮನುಷ್ಯ ಬದುಕುವ ರೀತಿಯಿಂದ ಬೇರೆಯವರಿಗೆ ತೊಂದರೆ ಆಗಬಾರದೆಂಬ ಸೂಕ್ಷ್ಮ ಸಂದೇಶ ಸಾರಿದವರು’ ಎಂದು ಸ್ಮರಿಸಿದರು.

‘ವೃತ್ತಿಯಲ್ಲಿ, ಶರಣರ ಬಟ್ಟೆ ತೊಳೆಯವ ಕಾಯಕದಲ್ಲಿ ತೊಡಗಿಸಿಕೊಂಡು 353ಕ್ಕೂ ಹೆಚ್ಚು ವಚನಗಳನ್ನು ರಚಿಸಿದ ಶರಣ. ಕಲ್ಯಾಣದಲ್ಲಿ ಕ್ರಾಂತಿ ಉಂಟಾಗಿ ಇನ್ನೇನು ವಚನಗಳು ನಾಶ ಹೊಂದುತ್ತವೆ ಎಂಬ ಸಂದರ್ಭದಲ್ಲಿ ಚನ್ನಬಸವಣ್ಣನವರಿಗೆ ಬೆನ್ನಲುಬಾಗಿ ನಿಂತು ಇತರ ಎಲ್ಲ ಶರಣರ ವಚನಗಳ ಮೂಟೆಗಳನ್ನು ಉಳವಿಗೆ ಹೊತ್ತು ತಂದು, ಸಂರಕ್ಷಿಸುವ ಕಾರ್ಯ ಮಾಡಿದ ಶೂರ’ ಎಂದು ಶ್ಲಾಘಿಸಿದರು.

ತಹಶೀಲ್ದಾರ್‌ ಮಂಜುಳಾ ನಾಯಕ ಉದ್ಘಾಟಿಸಿದರು. ಜಿಲ್ಲಾ ಮಡಿವಾಳ ಸಂಘದ ಅಧ್ಯಕ್ಷ ಬಾಳಪ್ಪ ಮಡಿವಾಳರ ಅಧ್ಯಕ್ಷತೆ ವಹಿಸಿದ್ದರು. ಪಾಲಿಕೆ ಸದಸ್ಯೆ ಸರಳಾ ಹೇರೇಕರ, ಮುಖಂಡರಾದ ಗಣಪತ ಸರೇಕರ, ಮಹಾದೇವಿ ಮಠದ, ಕಿರಣ ಮಾಂಡೆಕರ, ಬಸವರಾಜ ಮಡಿವಾಳರ ಇದ್ದರು.

ಸ್ವರ ಸಾಧನಾ ಸಂಗೀತ ಸಂಸ್ಥೆ ಹೇಮಾ ದಾಮನಿಕರ ಮತ್ತು ತಂಡದವರು ವಚನ ಗಾಯನ ಪ್ರಸ್ತುತಪಡಿಸಿದರು. ರಾಜಕುಮಾರ ಮಡಿವಾಳರ ಸ್ವಾಗತಿಸಿದರು. ಸಹಶಿಕ್ಷಕ ಶ್ರೀಶೈಲ ಪಿ. ಕಂಕಣವಾಡಿ ನಿರೂಪಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.