ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕರ್ನಾಟಕಕ್ಕೆ ಹರಿದುಬರುತ್ತಿದ್ದ ನೀರು ತಡೆದ ಮಹಾರಾಷ್ಟ್ರ

Published 27 ಮೇ 2024, 1:13 IST
Last Updated 27 ಮೇ 2024, 1:13 IST
ಅಕ್ಷರ ಗಾತ್ರ

ಚಿಕ್ಕೋಡಿ(ಬೆಳಗಾವಿ ಜಿಲ್ಲೆ): ಮಹಾರಾಷ್ಟ್ರದಲ್ಲಿ ಮೂರ್ನಾಲ್ಕು ದಿನಗಳಿಂದ ಸುರಿದ ಮಳೆಯಿಂದಾಗಿ ತುಂಬುವ ಹಂತಕ್ಕೆ ತಲುಪಿದ ರಾಜಾಪುರ ಬ್ಯಾರೇಜ್‌ನಿಂದ ಕರ್ನಾಟಕಕ್ಕೆ ನೈಸರ್ಗಿಕವಾಗಿ ಹರಿದುಬರುತ್ತಿದ್ದ ನೀರನ್ನು ಮಹಾರಾಷ್ಟ್ರ ಸರ್ಕಾರ ತಡೆಹಿಡಿದಿರುವುದಕ್ಕೆ ಗಡಿಯಲ್ಲಿ ಆಕ್ರೋಶ ವ್ಯಕ್ತವಾಗಿದೆ.

ರಾಜಾಪುರ ಬ್ಯಾರೇಜ್‌ ತುಂಬಿದ್ದರಿಂದ 2,500 ಕ್ಯೂಸೆಕ್‌ ಹೆಚ್ಚುವರಿ ನೀರು ಕಳೆದೆರಡು ದಿನಗಳಿಂದ ಕೃಷ್ಣಾ ನದಿಗೆ ಹರಿದುಬರುತ್ತಿತ್ತು. ಆದರೆ, ಭಾನುವಾರ ಈ ಬ್ಯಾರೇಜ್‌ಗೆ ಗೇಟ್ ಅಳವಡಿಸಿಕೊಳ್ಳುವ ಮೂಲಕ ರಾಜ್ಯಕ್ಕೆ ಹರಿದುಬರುತ್ತಿದ್ದ ನೀರನ್ನು ಮಹಾರಾಷ್ಟ್ರ ಸರ್ಕಾರ ತಡೆದಿದೆ. ಆದರೆ, ಕರ್ನಾಟಕಕ್ಕೆ ಬರುತ್ತಿದ್ದ ಏಕೆ ತಡೆಹಿಡಿಯಲಾಗಿದೆ ಎಂದು ಅಲ್ಲಿನ ಸರ್ಕಾರ ಸ್ಪಷ್ಟಪಡಿಸಿಲ್ಲ.

ನೀರಾವರಿ ಇಲಾಖೆ, ಪೊಲೀಸ್ ಇಲಾಖೆಯ ತಲಾ ಇಬ್ಬರು ಸಿಬ್ಬಂದಿಯನ್ನು ಅಲ್ಲಿ ನಿಯೋಜಿಸಿದ ಮಹಾರಾಷ್ಟ್ರ ಸರ್ಕಾರ, ಕರ್ನಾಟಕಕ್ಕೆ ನೀರು ಹೋಗದಂತೆ ನಿಗಾ ವಹಿಸಿದೆ.

ಕುಡಿಯುವ ನೀರಿನ ಹಾಹಾಕಾರದಿಂದ ತತ್ತರಿಸಿದ್ದ ಕೃಷ್ಣಾ ನದಿಪಾತ್ರದ ಜನರಿಗೆ ಮಹಾರಾಷ್ಟ್ರದ ನೀರಿನಿಂದ ಅನುಕೂಲವಾಗಿತ್ತು. ಈಗ ನೀರು ಬಾರದಂತೆ ತಡೆದ ಕಾರಣ, ಕೃಷ್ಣಾ ನದಿಯಲ್ಲಿ ನೀರು ಕಡಿಮೆಯಾಗುವ ಸಾಧ್ಯತೆ ಇದೆ. ನೀರಿಗಾಗಿ ಗಡಿಭಾಗದ ಜನ ಪರಿತಪಿಸುವಂತಾಗಿದೆ.

ಜಲತಂಟೆ ಮುಂದುವರಿಸಿದೆ: ‘ಮಹಾರಾಷ್ಟ್ರದ ರಾಜಾಪುರ ಬ್ಯಾರೇಜ್‌ನಿಂದ ಕರ್ನಾಟಕಕ್ಕೆ ಹರಿದು ಬರುತ್ತಿದ್ದ ಹೆಚ್ಚುವರಿ ನೀರಿಗೆ ತಡೆಯೊಡ್ಡಿದ ಮಹಾರಾಷ್ಟ್ರ ಸರ್ಕಾರಕ್ಕೆ ರಾಜ್ಯ ಸರ್ಕಾರ ಎಚ್ಚರಿಕೆ ನೀಡಬೇಕು’ ಎಂದು ಜಿಲ್ಲಾ ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿ ಅಧ್ಯಕ್ಷ ಅಶೋಕ ಚಂದರಗಿ ಒತ್ತಾಯಿಸಿದ್ದಾರೆ.
‘ರಾಜಾಪುರ ಬ್ಯಾರೇಜ್‌ನ ಎಲ್ಲ ಗೇಟ್‌ಗಳನ್ನು ಮಹಾರಾಷ್ಟ್ರ ಸರ್ಕಾರ ಮುಚ್ಚಿದೆ. ಬ್ಯಾರೇಜ್‌ ತುಂಬಿದ ನಂತರ ಮಳೆಗಾಲದಲ್ಲಿ ಏಕಕಾಲಕ್ಕೆ ಹೆಚ್ಚಿನ ನೀರು ಬಿಟ್ಟು, ರಾಜ್ಯದಲ್ಲಿ ಪ್ರವಾಹ ಪರಿಸ್ಥಿತಿ ತಲೆದೋರಿದರೆ ಅದಕ್ಕೆ ಮಹಾರಾಷ್ಟ್ರವೇ ನೇರಹೊಣೆ. ಈ ವಿಷಯವನ್ನು ಮಹಾರಾಷ್ಟ್ರ ಸರ್ಕಾರದ ಗಮನಕ್ಕೆ ತರಬೇಕು’ ಎಂದು ಆಗ್ರಹಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT