ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಮಕ್ಕಳು ಮತ್ತು ಪ್ರಚಲಿತ ಸಾಹಿತ್ಯ’ ಪುಸ್ತಕ ಬಿಡುಗಡೆ

ಮಕ್ಕಳ ಸಾಹಿತ್ಯ ರಚನೆ: ಕ್ಷೀಣಿಸಿದ ಆಸಕ್ತಿ
Last Updated 2 ನವೆಂಬರ್ 2020, 8:47 IST
ಅಕ್ಷರ ಗಾತ್ರ

ಬೆಳಗಾವಿ: ‘ಇತ್ತೀಚಿನ ದಿನಗಳಲ್ಲಿ ಸಾಹಿತ್ಯದ ಪ್ರಕಾರಗಳಲ್ಲಿ ಮಕ್ಕಳ ಸಾಹಿತ್ಯಕ್ಕೆ ಹೆಚ್ಚು ಒತ್ತು ಕೊಡುತ್ತಿರುವುದು ಕಾಣುತ್ತಿಲ್ಲ’ ಎಂದು ಕನ್ನಡ ಸಾಹಿತ್ಯ ಪರಿಷತ್‌ ಜಿಲ್ಲಾ ಘಟಕದ ಅಧ್ಯಕ್ಷೆ ಮಂಗಲಾ ಮೆಟಗುಡ್ಡ ಹೇಳಿದರು.

ಇಲ್ಲಿನ ನೆಹರೂ ನಗರದ ಕನ್ನಡ ಭವನದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾ ಘಟಕದಿಂದ ಕನ್ನಡ ರಾಜ್ಯೋತ್ಸವ ಅಂಗವಾಗಿ ಆಯೋಜಿಸಿದ್ದ ಸ.ರಾ. ಸುಳಕೂಡೆ ವಿರಚಿತ ‘ಮಕ್ಕಳು ಮತ್ತು ಪ್ರಚಲಿತ ಸಾಹಿತ್ಯ’ ಪುಸ್ತಕ ಬಿಡುಗಡೆ ಮಾಡಿ ಅವರು ಮಾತನಾಡಿದರು.

‘ಮಕ್ಕಳ ರೀತಿ-ನೀತಿ, ಆಚಾರ-ವಿಚಾರಗಳು ಹೇಗಿರಬೇಕು. ಅವರನ್ನು ಹೇಗೆ ಬೆಳೆಸಬೇಕು. ಪಾಲಕರ ಜವಾಬ್ದಾರಿ ಏನು ಎನ್ನುವುದನ್ನು ಸುಳಕೊಡೆ ಅವರು ಕೃತಿಯಲ್ಲಿ ಚೆನ್ನಾಗಿ ಕಟ್ಟಿಕೊಟ್ಟಿದ್ದಾರೆ’ ಎಂದರು.

ಪುಸ್ತಕ ಪರಿಚಯಿಸಿದ ಸಿದ್ದರಾಮೇಶ್ವರ ಕಾಲೇಜಿನ ಪ್ರಾಚಾರ್ಯ ಎಸ್.ಆರ್. ಹಿರೇಮಠ, ‘ಮಕ್ಕಳ ಭವಿಷ್ಯಕ್ಕಾಗಿ ಅವರನ್ನು ಹೇಗೆ ಮನೋವೈಜ್ಞಾನಿಕವಾಗಿ ರೂಪಿಸಬೇಕು. ಮಾನವೀಯತೆ ಮತ್ತು ಮೌಲ್ಯಗಳನ್ನು ತುಂಬಿ, ಮಕ್ಕಳ ಅಪಸ್ವರಗಳನ್ನು ದೂರಗೊಳಿಸುವುದು ಹೇಗೆ? ಪಾಶ್ಚಾತ್ಯ ಸಂಸ್ಕೃತಿಗೆ ದಾಸರಾಗುವುದನ್ನು ತಡೆಯುವ ಮಾರ್ಗವೇನು ಎಂಬಿತ್ಯಾದಿ ವಿವರಣೆಗಳನ್ನು ಪುಸ್ತಕದಲ್ಲಿ ನೀಡಲಾಗಿದೆ’ ಎಂದರು.

‘ನಾವು ಸಮಾಜದ ಋಣ ತೀರಿಸಲು ಏನಾದರೂ ಮಾಡಬೇಕು. ಆ ನಿಟ್ಟಿನಲ್ಲಿ ಮಕ್ಕಳ ಪುಸ್ತಕ ರಚಿಸಿದ್ದೇನೆ’ ಎಂದು ಸುಳಕೊಡೆ ತಿಳಿಸಿದರು.

ಮಕ್ಕಳ ಸಾಹಿತಿ ಬೈಲಹೊಂಗಲದ ಅನ್ನಪೂರ್ಣಾ ಕನೋಜ, ‘ಬದಲಾದ ಕಾಲಘಟ್ಟದಲ್ಲಿ ಮೊಬೈಲ್ ಸಂಸ್ಕೃತಿಯ ಗೀಳಿನಿಂದ ಮಕ್ಕಳಲ್ಲಿ ಓದುವ ಹವ್ಯಾಸ ಹೋಗಿದೆ. ಅವರನ್ನು ಸುಧಾರಿಸಲು ಸಾಹಿತ್ಯ ಅವಶ್ಯವಾಗಿ ಬೇಕಾಗಿದೆ’ ಎಂದರು.

ಲೇಖಕ ಮೋಹನ ಪಾಟೀಲ ಮತ್ತು ಅಧ್ಯಕ್ಷತೆ ವಹಿಸಿದ್ದನಿವೃತ್ತ ಮುಖ್ಯಶಿಕ್ಷಕ ಅಶೋಕ ಉಳ್ಳೇಗಡ್ಡಿ ಮಾತನಾಡಿದರು.

ಜಿಲ್ಲಾಡಳಿತದಿಂದ ರಾಜ್ಯೋತ್ಸವ ಸನ್ಮಾನಕ್ಕೆ ಭಾಜನರಾದ ಕಸಾಪ ಜಿಲ್ಲಾ ಘಟಕದ ಕಾರ್ಯದರ್ಶಿ ಎಂ.ವೈ. ಮೆಣಸಿನಕಾಯಿ ಅವರನ್ನು ಸನ್ಮಾನಿಸಲಾಯಿತು. ಲೇಖಕಿಯರಾದ ಹೇಮಾ ಸೋನಳ್ಳಿ, ಪಾರ್ವತಿ ಪಾಟೀಲ, ಶಶಿಕಲಾ ಎಲಿಗಾರ, ಸಾಹಿತಿಗಳಾದ ಏಣಗಿ ಸೋನಾರ, ವೀರಭದ್ರ ಅಂಗಡಿ, ಶಿವಾನಂದ ತಲ್ಲೂರ, ಮಹಾಂತೇಶ ರೇಷ್ಮಿ ಇದ್ದರು.

ದೂರದರ್ಶನ ಕಲಾವಿದ ಶ್ರೀರಂಗ ಜೋಶಿ ನಾಡಗೀತೆ ಹಾಡಿದರು. ಲೇಖಕಿಯರ ಸಂಘದ ಅಧ್ಯಕ್ಷೆ ಜ್ಯೋತಿ ಬದಾಮಿ ನಿರೂಪಿಸಿದರು. ಸಾಹಿತಿ ವೀರಭದ್ರ ಅಂಗಡಿ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT