ಶನಿವಾರ, ಜೂನ್ 25, 2022
25 °C

ಸುಳ್ಳು ಹೇಳಿದ್ದರಿಂದಲೇ ಕಾಂಗ್ರೆಸ್ ಖಾಲಿಯಾಗಿದೆ: ಕಾರಜೋಳ ವಾಗ್ದಾಳಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಳಗಾವಿ: ‘ನಮ್ಮಲ್ಲಿ ಬಣ ರಾಜಕೀಯ ಇಲ್ಲ. ಜಿಲ್ಲೆಯ ಎಲ್ಲ ನಾಯಕರೂ ಒಗ್ಗಟ್ಟಿನಿಂದ ಕೆಲಸ ಮಾಡಲಿದ್ದು, ವಿಧಾನಪರಿಷತ್‌ ವಾಯವ್ಯ ಪದವೀಧರ ಹಾಗೂ ಶಿಕ್ಷಕರ ಕ್ಷೇತ್ರದ ಚುನಾವಣೆಯಲ್ಲಿ ಬಿಜೆಪಿ ಗೆಲುವು ನಿಶ್ಚಿತ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ವಿಶ್ವಾಸ ವ್ಯಕ್ತಪಡಿಸಿದರು.

ಇಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಎಲ್ಲ ಪಕ್ಷಗಳ ನಾಯಕರಲ್ಲಿ ವಿಷಯಾಧಾರಿತ ಭಿನ್ನಾಭಿಪ್ರಾಯ ಸಹಜ. ಹಾಗೆಂದು ಬಣ ರಾಜಕೀಯ ಎನ್ನಲಾಗದು. ಬಿಜೆಪಿಯು ಎಲ್ಲ ಚುನಾವಣೆಗಳಂತೆಯೇ ಈ ಚುನಾವಣೆಯನ್ನೂ ಗಂಭೀರವಾಗಿ ಪರಿಗಣಿಸಿದೆ’ ಎಂದರು.

‘ವಿಧಾನಪರಿಷತ್‌ ಸದಸ್ಯ ಹಣಮಂತ ‌ನಿರಾಣಿ 6 ವರ್ಷಗಳಿಂದ ಉತ್ತಮ ಕೆಲಸ ಮಾಡಿದ್ದಾರೆ. ಅರುಣ ಶಹಾಪುರ ಅವರೂ ಶಿಕ್ಷಕರ ಸಮಸ್ಯೆಗೆ ಸ್ಪಂದಿಸಿದ್ದಾರೆ. ಬಿಜೆಪಿ ಸರ್ಕಾರದ ಸಾಧನೆಗಳನ್ನು ಮುಂದಿಟ್ಟುಕೊಂಡು ಮತ ಕೇಳುತ್ತೇವೆ’ ಎಂದು ಹೇಳಿದರು.

'ನಾನು ಮುಖ್ಯಮಂತ್ರಿಯಾದರೆ ಸಾಲ ಮನ್ನಾ ಮಾಡುತ್ತೇನೆ. ಜನರಿಗೆ ಉಚಿತವಾಗಿ 10 ಕೆ.ಜಿ. ಅಕ್ಕಿ ನೀಡುತ್ತೇನೆ’ ಎಂಬ ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ನೀಡಿದ ಹೇಳಿಕೆಗೆ ಪ್ರತಿಕ್ರಿಯಿಸಿದ ಕಾರಜೋಳ, ‘ಕಾಂಗ್ರೆಸ್ ಇದೇ ಮೋಸಗಾರಿಕೆ ಮಾಡಿಕೊಂಡು ದೇಶದಲ್ಲಿ ಆಡಳಿತ ನಡೆಸಿದೆ. ಆದರೆ, 2023ರ ವಿಧಾನಸಭೆ ಚುನಾವಣೆಯಲ್ಲೂ ಬಿಜೆಪಿಯೇ ಅಧಿಕಾರಕ್ಕೆ ಬರುತ್ತದೆ. ಜನರಿಗೆ ಬೇಕಾಗಿರುವುದು ಅಕ್ಕಿಯಲ್ಲ. ಸ್ವಾಭಿಮಾನದ ಬದುಕು’ ಎಂದು ತಿರುಗೇಟು ನೀಡಿದರು.

ಬಿಜೆಪಿಯಲ್ಲಿ ಭ್ರಷ್ಟಾಚಾರ ಹೆಚ್ಚಿದೆ ಎಂಬ ಸಿದ್ದರಾಮಯ್ಯ ಹೇಳಿಕೆಗೆ, ‘ಅವರ ತುಳಸಿ ಪತ್ರಿಯನ್ನು ತಲೆ ಮೇಲೆ ಹೊತ್ತುಕೊಂಡು ಅಧಿಕಾರ ನಡೆಸಿದ್ದಾರೆ. ಸುಳ್ಳು ಹೇಳುತ್ತಲೇ ಕಾಂಗ್ರೆಸ್ ಖಾಲಿಯಾಗಲಿದೆ’ ಎಂದು ವಾಗ್ದಾಳಿ ನಡೆಸಿದರು.

‘ರಾಜ್ಯದಲ್ಲಿ ಸುರಿಯುತ್ತಿರುವ ಮಳೆಯಿಂದ ತೊಂದರೆ ಜೊತಗೆ ಅನುಕೂಲವೂ ಆಗಿದೆ. ಮಳೆಯಿಂದ ಆಗಿರುವ ತೊಂದರೆ ನಿವಾರಣೆಗೆ ಸರ್ಕಾರ ಸಾಕಷ್ಟು ಪ್ರಯತ್ನ ಮಾಡುತ್ತಿದೆ. ಹೆಚ್ಚು ಮಳೆಯಾಗಿದ್ದರಿಂದ ಬೆಳಗಾವಿ ಜಿಲ್ಲೆಯಲ್ಲಿ ಶೇ 10ರಷ್ಟು ಜನರಿಗೆ ತೊಂದರೆಯಾಗಿದೆ. ನದಿ ತೀರದಲ್ಲಿ ಎಚ್ಚರ ವಹಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಮಳೆಯಿಂದ ಅನುಕೂಲವೂ ಆಗಿದೆ’ ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು