ಬೆಳಗಾವಿ: ‘ಜಿಲ್ಲೆಯಲ್ಲಿ ‘ಗೃಹಜ್ಯೋತಿ’ ಫಲಾನುಭವಿಗಳಿಗೆ ಪ್ರತಿ ತಿಂಗಳು ₹43 ಕೋಟಿ ಪಾವತಿಸಲಾಗುತ್ತಿದೆ. 10.65 ಲಕ್ಷ ಕುಟುಂಬ ಇದರ ಲಾಭ ಪಡೆಯಲಿದ್ದಾರೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ತಿಳಿಸಿದರು.
ಜಿಲ್ಲಾಡಳಿತ, ಇಂಧನ ಇಲಾಖೆ ಹಾಗೂ ಹೆಸ್ಕಾಂ ಆಶ್ರಯದಲ್ಲಿ ನಗರದಲ್ಲಿ ಶನಿವಾರ ಆಯೋಜಿಸಿದ್ದ ‘ಗೃಹಜ್ಯೋತಿ’ ಯೋಜನೆಗೆ ಚಾಲನೆ ನೀಡಿ ಮಾತನಾಡಿದ ಅವರು, ‘ಯೋಜನೆಗೆ ರಾಜ್ಯ ಸರ್ಕಾರ ಈ ತಿಂಗಳು ₹40 ಸಾವಿರ ಕೋಟಿ ವಿನಿಯೋಗಿಸಿದೆ. ಈವರೆಗೆ ಶೇ 80ರಷ್ಟು ಮಂದಿ ಮಾತ್ರ ನೋಂದಣಿ ಮಾಡಿದ್ದಾರೆ. ಎಲ್ಲರೂ ನೋಂದಣಿ ಮಾಡಿದ ಮೇಲೆ ತಿಂಗಳಿಗೆ ₹60 ಸಾವಿರ ಕೋಟಿ ಬೇಕಾಗುತ್ತದೆ. ಇದರಲ್ಲಿ ಜಿಲ್ಲೆಗೆ ವರ್ಷಕ್ಕೆ ₹516 ಕೋಟಿ ನೀಡಲಿದೆ. ಇಷ್ಟು ದೊಡ್ಡ ಮೊತ್ತದ ಹಣವನ್ನು ಜನರಿಗಾಗಿ ವಿನಿಯೋಗಿಸುತ್ತಿರುವುದು ದೇಶದಲ್ಲೇ ಮೊದಲ ಯತ್ನ’ ಎಂದರು.
‘ಕಾಂಗ್ರೆಸ್‌ನ ಗ್ಯಾರಂಟಿ ಯೋಜನೆಗಳ ಬಗ್ಗೆ ಹಲವರು ವಿರೋಧ ಮಾಡಿದರು. ಆದರೆ, ಬಡವರ ಪರವಾಗಿ ನಿಂತ ಸಿದ್ದರಾಮಯ್ಯ ಸರ್ಕಾರ ಕಠಿಣ ಪರಿಸ್ಥಿತಿಯಲ್ಲೂ ನುಡಿದಂತೆ ನಡೆದಿದೆ. ಸಾಮಾನ್ಯರ ಸಂಕಷ್ಟ ನೀಗಬೇಕು ಎಂಬ ಕಾರಣಕ್ಕೆ ಇಂಥ ಉಚಿತ ಯೋಜನೆ ಮಾಡಲಾಗಿದೆ. ಇಲ್ಲಿ ಉಳಿತಾಯ ಮಾಡುವ ಹಣವನ್ನು ಜನ ಸದುಪಯೋಗ ಮಾಡಿಕೊಳ್ಳಬೇಕು. ‘ಯಾವುದೋ ಅಂಗಡಿ’ಯಲ್ಲಿ ಕುಳಿತು ವ್ಯರ್ಥ ಮಾಡಬಾರದು’ ಎಂದು ಸಲಹೆ ನೀಡಿದರು.
‘ಗ್ಯಾರಂಟಿ ಯೋಜನೆಗಳ ಮೂಲಕ ಪ್ರತಿ ಕುಟುಂಬಕ್ಕೆ ತಿಂಗಳಿಗೆ ₹5,000 ಖರ್ಚು ಮಾಡುತ್ತಿದ್ದೇವೆ. ಇದು ಮಕ್ಕಳ ಶಿಕ್ಷಣ ಹಾಗೂ ಕುಟುಂಬ ನಿರ್ವಹಣೆಗೆ ಬಳಕೆಯಾಗಬೇಕು. ಅಂದಾಗ ಮಾತ್ರ ಸಾರ್ಥಕವಾಗಲಿದೆ’ ಎಂದರು.
‘ಗೃಹಜ್ಯೋತಿ ಯೋಜನೆಯ ಲಾಭ ಸಿಗಬೇಕೆಂದರೆ 200 ಯುನಿಟ್‌ವರೆಗೆ ಮಾತ್ರ ವಿದ್ಯುತ್ ಬಳಸಬೇಕು. ಅದಕ್ಕೂ ಹೆಚ್ಚು ಬಳಸಿದರೆ ಬಿಲ್ ಕಟ್ಟಬೇಕಾಗುತ್ತದೆ. ಈಗಾಗಲೇ ಜಿಲ್ಲೆಯ ಶೇ 80ರಷ್ಟು ಮಂದಿ ನೋಂದಣಿ ಮಾಡಿಕೊಂಡಿದ್ದಾರೆ. ಅವರಿಗೆಲ್ಲ ಜುಲೈ ತಿಂಗಳಿಗೆ ಶೂನ್ಯ ಬಿಲ್ ಬರಲಿದೆ’ ಎಂದೂ ಹೇಳಿದರು.
‘ಗ್ಯಾರಂಟಿ ಯೋಜನೆಗಳಿಂದ ಉಳಿತಾಯ ಆಗುವ ಹಣವನ್ನು ನಿಮ್ಮ ಮಕ್ಕಳ ಶಿಕ್ಷಣಕ್ಕೆ ಬಳಸಿ. ಅವರಿಗೆ ಬಸವಣ್ಣ, ಅಂಬೇಡ್ಕರ್ ಅವರ ಚಿಂತನೆಗಳನ್ನು ತಿಳಿಸಿ’ ಎಂದೂ ಕಿವಿಮಾತು ಹೇಳಿದರು.
ಮುಖ್ಯ ಅತಿಥಿಯಾಗಿ ಮಾತನಾಡಿದ ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ, ‘ಕಾಂಗ್ರೆಸ್ ಸರ್ಕಾರ ಜಾರಿಗೆ ತಂದ ಗ್ಯಾರಂಟಿ ಯೋಜನೆಗಳು ‘ಪಂಚವಾರ್ಷಿಕ ಯೋಜನೆ’ಯಷ್ಟೇ ಮಹತ್ವ ಪಡೆದಿವೆ. ಸರ್ಕಾರ ಕೇವಲ ಮೂರು ತಿಂಗಳಲ್ಲಿ ನುಡಿದಂತೆ ನಡೆದಿದೆ. ಮುಂದಿನ ಐದು ವರ್ಷಗಳವರೆಗೆ ಜನ ಇದರ ಲಾಭ ಪಡೆಯಲಿದ್ದಾರೆ’ ಎಂದರು.
ಅಧ್ಯಕ್ಷತೆ ವಹಿಸಿದ್ದ ಶಾಸಕ ಆಸಿಫ್ ಸೇಠ್ ಮಾತನಾಡಿ, ‘ಚುನಾವಣೆ ವೇಳೆ ಕಾಂಗ್ರೆಸ್ ಮುಖಂಡರು ಈ ಯೋಜನೆಯನ್ನು ಬೆಳಗಾವಿಯಲ್ಲೇ ಘೋಷಣೆ ಮಾಡಿದ್ದರು. ಈಗ ಭರವಸೆ ಈಡೇರಿಸಿದ್ದಾರೆ’ ಎಂದರು.
ಹೆಸ್ಕಾಂ ಮುಖ್ಯ ಎಂಜಿನಿಯರ್ ವಿ. ಪ್ರಕಾಶ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಾಸಕರಾದ ವಿಶ್ವಾಸ್ ವೈದ್ಯ, ಬಾಬಾಸಾಹೇಬ್ ಪಾಟೀಲ, ಹುಕ್ಕೇರಿ ವಿದ್ಯುತ್ ಸಹಕಾರ ಸಂಘದ ಅಧ್ಯಕ್ಷ ಪೃಥ್ವಿ ಕತ್ತಿ, ಜಿಲ್ಲಾಧಿಕಾರಿ ನಿತೇಶ್ ಪಾಟೀಲ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹರ್ಷಲ್ ಭೋಯರ್, ಪಾಲಿಕೆಯ ಆಯುಕ್ತ ಅಶೋಕ ದುಡಗುಂಟಿ, ಹೆಸ್ಕಾಂ ಪ್ರಧಾನ ವ್ಯವಸ್ಥಾಪಕ ಸಿದ್ದು ಹುಲ್ಲೋಳಿ ಹಾಗೂ ಪಾಲಿಕೆ ಸದಸ್ಯರು ವೇದಿಕೆ ಮೇಲಿದ್ದರು.
ಹೆಸ್ಕಾಂ ಅಧೀಕ್ಷಕ ಎಂಜಿನಿಯರ್ ಪ್ರವೀಣಕುಮಾರ್ ಸ್ವಾಗತಿಸಿದರು. ಸರ್ವಮಂಗಳ ಅರಳಿಮಟ್ಟಿ ಕಾರ್ಯಕ್ರಮ ನಿರೂಪಿಸಿದರು.
ಜುಲೈ ತಿಂಗಳಿಂದಲೇ ಬರಲಿದೆ ಶೂನ್ಯ ಬಿಲ್ ಫಲಾನುಭವಿಗಳಿಗೆ ಸಾಂಕೇತಿಕ ಬಿಲ್ ನೀಡಿದ ಸಚಿವ ಶೇ 80ರಷ್ಟು ಗ್ರಾಹಕರ ನೋಂದಣಿ ಪೂರ್ಣ
ಅಂಕಿ ಅಂಶ ಗೃಹಜ್ಯೋತಿ ಯೋಜನೆ 2.20 ಕೋಟಿ ರಾಜ್ಯದಲ್ಲಿ ನೋಂದಣಿ ಮಾಡಿಕೊಂಡವರು 10.65 ಲಕ್ಷ ಬೆಳಗಾವಿ ಜಿಲ್ಲೆಯ ಫಲಾನುಭವಿಗಳ ಸಂಖ್ಯೆ ₹516 ಕೋಟಿ ರಾಜ್ಯ ಸರ್ಕಾರ ಪ್ರತಿ ವರ್ಷ ಜಿಲ್ಲೆಗೆ ನೀಡುವ ಮೊತ್ತ ₹ 43 ಕೋಟಿ ಪ್ರತಿ ತಿಂಗಳು ಜಿಲ್ಲೆಯಲ್ಲಿ ರಿಯಾಯಿತಿ ಆಗುವ ಮೊತ್ತ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.