ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪರಿಷತ್ ಚುನಾವಣೆಯಲ್ಲಿ ರಮೇಶ ಜಾರಕಿಹೊಳಿ ಇಬ್ಬರನ್ನೂ ಗೆಲ್ಲಿಸಲಾರರು: ಸತೀಶ ಲೇವಡಿ

Last Updated 3 ಡಿಸೆಂಬರ್ 2021, 12:20 IST
ಅಕ್ಷರ ಗಾತ್ರ

ಬೆಳಗಾವಿ: ‘ವಿಧಾನಪರಿಷತ್ ಚುನಾವಣೆಯಲ್ಲಿ ಶಾಸಕ ರಮೇಶ ಜಾರಕಿಹೊಳಿ ಅವರು ಪಕ್ಷೇತರ ಅಭ್ಯರ್ಥಿ ಲಖನ್ ಜಾರಕಿಹೊಳಿ ಅಥವಾ ಬಿಜೆಪಿಯ ಮಹಾಂತೇಶ ಕವಟಗಿಮಠ ಅವರನ್ನು ಗೆಲ್ಲಿಸಬೇಕು. ಇಬ್ಬರನ್ನೂ ಗೆಲ್ಲಿಸುವ ಶಕ್ತಿ ಅವರಲ್ಲಿಲ್ಲ’ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಲೇವಡಿ ಮಾಡಿದರು.

ಇಲ್ಲಿ ಪತ್ರಕರ್ತರೊಂದಿಗೆ ಶುಕ್ರವಾರ ಮತನಾಡಿದ ಅವರು, ‘ಬಿಜೆಪಿ ಬಳಿ ಇರುವ ಮತಗಳಲ್ಲಿ ಎರಡು ಸ್ಥಾನ ಗೆಲ್ಲಲು ಸಾಧ್ಯವಿಲ್ಲ. ಅವರ ಪಕ್ಷದಲ್ಲೇ ಗೊಂದಲವಿದೆ. ಹೀಗಿರುವಾಗ ರಮೇಶ ನಮಗೆ ಬುದ್ಧಿ ಹೇಳುವ ಅವಶ್ಯಕತೆ ಇಲ್ಲ. ಮೊದಲು ಅವರ ಪಕ್ಷದ ಬಗ್ಗೆ ವಿಚಾರ ಮಾಡಲಿ’ ಎಂದು ತಿರುಗೇಟು ನೀಡಿದರು.

‘ಲಖನ್ ಬಗ್ಗೆ ಬಹಳಷ್ಟು ಟೀಕೆ ಮಾಡಿದ್ದೇನೆ. ಅವರಿಗೂ ನಮ್ಮ ಪಕ್ಷಕ್ಕೂ ಯಾವುದೇ ಸಂಬಂಧವಿಲ್ಲ. ಇಲ್ಲಿ ಕಾಂಗ್ರೆಸ್ ಗೆಲ್ಲಬೇಕು. ಆಗ ನಮಗೂ ಗೌರವ ಸಿಗಲಿದೆ. ಲಖನ್ ಹಾಗೂ ಕವಟಗಿಮಠ ಇಬ್ಬರೂ ನಮ್ಮ ಎದುರಾಳಿಗಳೆ. ಅವರ ವಿರುದ್ಧವೇ ಚುನಾವಣೆ ಮಾಡುತ್ತಿದ್ದೇವೆ’ ಎಂದು ಪ್ರತಿಕ್ರಿಯಿಸಿದರು.

‘ಬಿಜೆಪಿ ಬ್ಯಾನರ್‌ನಲ್ಲೇ ರಮೇಶ ಕಾರ್ಯಕ್ರಮ ನಡೆಸುತ್ತಾರೆ. ಅದೇ ವೇದಿಕೆಯಲ್ಲಿ ಪಕ್ಷೇತರ ಅಭ್ಯರ್ಥಿಗೆ ಮತ ಚಲಾಯಿಸಿ ಎನ್ನುತ್ತಾರೆ. ಮೊದಲು ಇದನ್ನು ಸರಿಪಡಿಸಿಕೊಳ್ಳಲಿ’ ಎಂದು ತಿವಿದರು.

‘ಬೆಳಗಾವಿಯಲ್ಲಿ ಬಿಜೆಪಿ ಶಾಸಕರು ಹೆಚ್ಚಿರಬಹುದು. ಆದರೆ, ರಾಯಬಾಗ, ಕುಡಚಿ, ಅಥಣಿ, ನಿಪ್ಪಾಣಿ ತಾಲ್ಲೂಕಿನಲ್ಲಿ ಕಾಂಗ್ರೆಸ್ ಬೆಂಬಲಿತ ಗ್ರಾಮ ಪಂಚಾಯಿತಿ ಸದಸ್ಯರು ಅಧಿಕ ಸಂಖ್ಯೆಯಲ್ಲಿದ್ದಾರೆ. ಹಾಗಾಗಿ ಕಾಂಗ್ರೆಸ್ ಅಭ್ಯರ್ಥಿ ಗೆಲ್ಲುತ್ತಾರೆಂಬ ಸಂಪೂರ್ಣ ವಿಶ್ವಾಸವಿದೆ’ ಎಂದರು.

‘ಕೇಂದ್ರ ಸರ್ಕಾರ ಜನರ ಸುಲಿಗೆ ಮಾಡುತ್ತಿದೆ. ಪೆಟ್ರೋಲ್, ಡಿಸೇಲ್ ಬೆಲೆ ಇಳಿಸಿ ಇಂಟರ್ನೆಟ್ ದರ ಹೆಚ್ಚಳ ಮಾಡಿದೆ’ ಎಂದು ವಾಗ್ದಾಳಿ ನಡೆಸಿದರು.

‘ವಿವೇಕರಾವ್ ಪಾಟೀಲ ಮೇಲೆ ಅಷ್ಟೊಂದು ಪ್ರೀತಿ ಇದ್ದಿದ್ದರೆ ಅವರನ್ನೇ ಚುನಾವಣೆಗೆ ನಿಲ್ಲಿಸಬೇಕಿತ್ತು. ರಮೇಶ ಹಾಗೇಕೆ ಮಾಡಲಿಲ್ಲ?’ ಎಂದು ಕೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT