ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳಗಾವಿ: ಜಿಲ್ಲೆಯಾದ್ಯಂತ ಮಾದರಿ ನೀತಿಸಂಹಿತೆ ಜಾರಿ

ರಾಜಕೀಯ ಪಕ್ಷಗಳ ಪ್ರತಿನಿಧಿಗಳ ಸಭೆ ನಡೆಸಿದ ಡಿ.ಸಿ
Last Updated 12 ಮೇ 2022, 13:30 IST
ಅಕ್ಷರ ಗಾತ್ರ

ಬೆಳಗಾವಿ: ‘ವಿಧಾನಪರಿಷತ್ತಿನ ವಾಯವ್ಯ ಪದವೀಧರ ಮತ್ತು ಶಿಕ್ಷಕರ ಮತಕ್ಷೇತ್ರಗಳ ಚುನಾವಣೆ ಘೋಷಣೆಯಾಗಿದ್ದು, ಗುರುವಾರದಿಂದಲೇ ಮಾದರಿ ನೀತಿಸಂಹಿತೆ ಜಾರಿಗೆ ಬಂದಿದೆ. ಎಲ್ಲ ರಾಜಕೀಯ ಪಕ್ಷಗಳೂ ಕಡ್ಡಾಯವಾಗಿ ಪಾಲಿಸಬೇಕು’ ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ತಿಳಿಸಿದರು.

ಇಲ್ಲಿ ಗುರುವಾರ ನಡೆದ ರಾಜಕೀಯ ಪಕ್ಷಗಳ ಪ್ರತಿನಿಧಿಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

‘ಸರ್ಕಾರದ ಹೊಸ ಯೋಜನೆ, ಕಾರ್ಯಕ್ರಮಗಳನ್ನು ಘೋಷಿಸುವಂತಿಲ್ಲ. ಪ್ರಚಾರ ಕೂಡ ಕೋವಿಡ್ ಮಾರ್ಗಸೂಚಿ ಪ್ರಕಾರ ನಡೆಸಬೇಕಾಗುತ್ತದೆ. ಈ ಬಗ್ಗೆ ಚುನಾವಣಾ ಆಯೋಗ ಮಾರ್ಗಸೂಚಿ ಪ್ರಕಟಿಸಲಿದೆ. ಚುನಾವಣಾ ಪ್ರಚಾರ ಸಭೆ, ವಾಹನ ಬಳಕೆ ಸೇರಿದಂತೆ ಅಗತ್ಯ ಅನುಮತಿಯನ್ನು ಕಡ್ಡಾಯವಾಗಿ ಪಡೆದುಕೊಳ್ಳಬೇಕು. ಧಾರ್ಮಿಕ ಕೇಂದ್ರಗಳಲ್ಲಿ ಯಾವುದೇ ರೀತಿಯ ಪ್ರಚಾರ ಸಭೆಗಳನ್ನು ನಡೆಸುವಂತಿಲ್ಲ. ವಿಧಾನಸಭೆ, ಲೋಕಸಭೆ ಚುನಾವಣೆ ರೀತಿಯಲ್ಲಿ ಮಾದರಿ ನೀತಿಸಂಹಿತೆ ಇರಲಿದೆ’ ಎಂದು ವಿವರಿಸಿದರು.

‘ನಾಮಪತ್ರ ಸಲ್ಲಿಕೆಗೆ ಕೊನೆಯ ದಿನಾಂಕಕ್ಕಿಂತ 10 ದಿನಗಳ ಮುಂಚೆಯವರೆಗೆ ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆಗೆ ಅರ್ಜಿಗಳನ್ನು ಸ್ವೀಕರಿಸಲಾಗುತ್ತದೆ. ನಿಗದಿತ ದಿನಾಂಕದ ಬಳಿಕ ಸಲ್ಲಿಕೆಯಾಗುವ ಅರ್ಜಿಗಳನ್ನು ಈ ಚುನಾವಣಾ ಮತದಾರರ ಪಟ್ಟಿಯಲ್ಲಿ ಸೇರ್ಪಡೆಗೆ ಪರಿಗಣಿಸುವುದಿಲ್ಲ’ ಎಂದು ಸ್ಪಷ್ಟಪಡಿಸಿದರು.

ವೇಳಾಪಟ್ಟಿ:‘ಜೂನ್ 13ರಂದು ಮತದಾನ, ಜೂನ್ 15ರಂದು ಮತ ಎಣಿಕೆ ನಡೆಯಲಿದೆ. ಮೇ 19ರಂದು ಅಧಿಸೂಚನೆ ಪ್ರಕಟಿಸಲಾಗುವುದು. ನಾಮಪತ್ರ ಸಲ್ಲಿಕೆಗೆ ಮೇ 26 ಕಡೆಯ ದಿನವಾಗಿದೆ. ನಾಮಪತ್ರಗಳ ಪರಿಶೀಲನೆಯನ್ನು ಮೇ 27ರಂದು ನಡೆಸಲಾಗುವುದು. ನಾಮಪತ್ರ ಹಿಂಪಡೆಯಲು ಮೇ 30 ಕೊನೆಯ ದಿನವಾಗಿದೆ. ಒಟ್ಟಾರೆ ಚುನಾವಣಾ ಪ್ರಕ್ರಿಯೆಯು ಜೂನ್ 17ರಂದು ಮುಕ್ತಾಯವಾಗಲಿದೆ’ ಎಂದು ಮಾಹಿತಿ ನೀಡಿದರು.

ಕರಡು ಪಟ್ಟಿ ಪ್ರಕಟ:‘ಈಗಾಗಲೇ ಜಿಲ್ಲೆಯ ಮತಗಟ್ಟೆಗಳ ಕರಡು ಪಟ್ಟಿ ಪ್ರಕಟಿಸಲಾಗಿರುತ್ತದೆ. ನಾಲ್ಕು ಉಪ ಮತಗಟ್ಟೆಗಳು ಸೇರಿದಂತೆ ಒಟ್ಟು 82 ಮತಗಟ್ಟೆಗಳನ್ನು ಗುರುತಿಸಲಾಗಿದೆ. ಜಿಲ್ಲೆಯಲ್ಲಿ ಮೇ 9ರವರೆಗೆ ಪದವೀಧರರ ಕ್ಷೇತ್ರದಲ್ಲಿ ಒಟ್ಟು 43,798 ಮತದಾರರು ಹಾಗೂ ಶಿಕ್ಷಕರ ಕ್ಷೇತ್ರದಲ್ಲಿ 13,572 ಮತದಾರರಿದ್ದಾರೆ’ ಎಂದು ತಿಳಿಸಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ಅಶೋಕ ದುಡಗುಂಟಿ, ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳಾದ ಅಭಯ್ ಅವಲಕ್ಕಿ, ರಾಜು ಕೋಪರಿ, ವಿ.ಬಿ. ರೇವಡಿ, ಕೆ.ಜಿ. ಪಾಟೀಲ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT