ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳಗಾವಿ: ಜಿಲ್ಲೆಯಲ್ಲಿ ಕಳೆಗಟ್ಟಿದ ಈದ್‌ ಸಂಭ್ರಮ, ವೈಭವದ ಮೆರವಣಿಗೆ

Last Updated 9 ಅಕ್ಟೋಬರ್ 2022, 8:50 IST
ಅಕ್ಷರ ಗಾತ್ರ

ಬೆಳಗಾವಿ: ನಗರವೂ ಸೇರಿ ಜಿಲ್ಲೆಯಾದ್ಯಂತ ಭಾನುವಾರ ಈದ್‌–ಮಿಲಾದ್‌ ಸಂಭ್ರಮ ಮನೆ ಮಾಡಿತು. ಶನಿವಾರ ರಾತ್ರಿಯಿಂದಲೇ ಝಗಮಗಿಸುವ ವಿದ್ದುದ್ದೀಪಾಲಂಕಾರ, ಮೆಕ್ಕಾ– ಮದೀನಾ ಸೇರಿದಂತೆ ವಿಶ್ವಪ್ರಸಿದ್ಧ ಪ್ರಾರ್ಥನಾ ಸ್ಥಳಗಳ ಮಾದರಿಗಳ ಪ್ರದರ್ಶನ ಆರಂಭಿಸಲಾಯಿತು.

ನಗರದಲ್ಲಿ ಭಾನುವಾರ ಬೆಳಿಗ್ಗೆ ಈದ್‌ ಅಂಗವಾಗಿ ತಂಜೀಮ್‌ ಸಮಿತಿ ಆಯೋಜಿಸಿದ್ದ ಮೆರವಣಿಗೆ ಸಂಭ್ರಮ ಇಮ್ಮಡಿಗೊಳಿಸಿತು. ಇಲ್ಲಿನ ಹಳೇ ಪಿ.ಬಿ. ರಸ್ತೆಯ ಕರ್ನಾಟಕ ಚೌಕ್‌ನಲ್ಲಿ ಗಣ್ಯರು ಮೆರವಣಿಗೆಗೆ ಚಾಲನೆ ನೀಡಿದರು. ಅಲ್ಲಿಂದ ಕೇಂದ್ರ ಬಸ್‌ ನಿಲ್ದಾಣ, ಸಂಗೊಳ್ಳಿ ರಾಯಣ್ಣ ವೃತ್ತ, ರಾಣಿ ಚನ್ನಮ್ಮ ವೃತ್ತ, ಕಾಲೇಜು ರಸ್ತೆ, ಧರ್ಮವೀರ ಸಂಭಾಜಿ ವೃತ್ತ ಮಾರ್ಗವಾಗಿ ಸಂಚರಿಸಿ ಕ್ಯಾಂಪ್‌ನ ಹಜರತ್‌ ಸೈಯದ್‌ ಅಸದ್‌ಖಾನ್‌ ದರ್ಗಾ ಆವರಣದಲ್ಲಿ ಮುಕ್ತಾಯಗೊಂಡಿತು.

ಇದರಲ್ಲಿ ಭಾಗವಹಿಸಿದ್ದ ರೂಪಕಗಳು ಕಣ್ಮನ ಸೆಳೆದವು. ಸಾಂಪ್ರದಾಯಿಕ ವೇಷಭೂಷಣದಲ್ಲಿ ಮಕ್ಕಳು ನಲಿದರು. ರಾಜ್ಯದ ವಿವಿಧೆಡೆಯಿಂದ ಬಂದಿದ್ದ ಅಪಾರ ಸಂಖ್ಯೆಯ ಯುವಜನರು ಹೆಜ್ಜೆ ಹಾಕಿದರು. ಸರ್ವಭಾಷಿಕರು, ಸರ್ವಧರ್ಮೀಯರು ಭಾಗವಹಿಸಿ ಭಾವೈಕ್ಯ ಮೆರೆದರು.

ಮೆರವಣಿಗೆ ಮಾರ್ಗದುದ್ದಕ್ಕೂ ಇಸ್ಲಾಂ ಧರ್ಮದ ಬಾವುಟಗಳು ರಾರಾಜಿಸಿದವು. ಕವ್ವಾಲಿಗಳು ಅನುರಣಿಸಿದವು. ವಿವಿಧ ಸಂಘಟನೆಗಳ ಕಾರ್ಯಕರ್ತರು ಜನರಿಗೆ ಸಿಹಿ ಪದಾರ್ಥ, ಶರಬತ್‌ ಮತ್ತು ನೀರು ವಿತರಿಸಿ, ಹಬ್ಬದ ಮೆರಗು ಹೆಚ್ಚಿಸಿದರು. ಯುವಕರು ಡಿ.ಜೆ ಸದ್ದಿಗೆ ಹೆಜ್ಜೆ ಹಾಕಿ ಸಂಭ್ರಮಿಸಿದರು.

ಧರ್ಮಗುರು ಮುಫ್ತಿ ಮಂಜೂರ್ ಆಲಂ ಹಬ್ಬದ ಮಹತ್ವ ತಿಳಿಸಿದರು. ಹಜರತ್ ಸಯ್ಯದ್‌ ಕಾಶೀಮ್ ಅಶ್ರಫ್, ಕಾಂಗ್ರೆಸ್‌ ಮುಖಂಡರಾದ ಫಿರೋಜ್‌ ಸೇಠ್‌, ರಾಜು ಸೇಠ್‌, ನಗರ ಪೊಲೀಸ್‌ ಆಯುಕ್ತ ಡಾ.ಎಂ.ಬಿ.ಬೋರಲಿಂಗಯ್ಯ, ಡಿಸಿಪಿ ರವೀಂದ್ರ ಗದಾಡಿ, ಎಸಿಪಿ ಎನ್‌.ವಿ.ಭರಮನಿ, ರಂಜೀತ್ ಚವ್ಹಾಣಪಾಟೀಲ, ವಿಕಾಸ ಕಲಘಟಗಿ, ರಮೇಶ ಕಳಸಣ್ಣವರ, ಬಾಬುಲಾಲ್ ರಾಜಪುರೋಹಿತ, ಮುಸ್ತಾಕ್ ಶೇಖ್, ಅಲ್ತಾಫ್ ಕಾಗಜಿ, ರಿಯಾಜ್ ಶೇಖ್, ಅನೀಸ್ ಮುಲ್ಲಾ ಇದ್ದರು.

ಈದ್‌ ಆಚರಣೆ: ಇಲ್ಲಿನ ಪೊಲೀಸ್‌ ಕೇಂದ್ರಸ್ಥಾನದ ದರ್ಗಾದಲ್ಲಿ ಭಾನುವಾರ ಈದ್‌–ಮಿಲಾದ್‌ ಆಚರಿಸಲಾಯಿತು. ಖಾರಿ ಜಾಕೀರ್‌ಹುಸೇನ್‌ ಆರೀಫ್‌ಖಾನ್‌, ವಾಸೀಮ್‌ ನಬ್ಬುವಾಲೆ, ವಾಸೀಮ್‌ ಪಟೇಲ್‌, ಇಮ್ರಾನ್‌ ಹಬೀಬ್‌, ಸಾದಿಕ್‌ ದೇಸಾಯಿ, ಮಹಮ್ಮದ್‌ಸಲೀಂ ಕಲಾರಕೊಪ್ಪ, ಕೈಸರ್‌ ಇನಾಮದಾರ್‌, ಮೈನುದ್ದೀನ್‌ ಪಟೇಲ್‌ ಇದ್ದರು.

ಇಸ್ಲಾಂ ಧರ್ಮದ ಉಳಿವಿಗಾಗಿ ಶ್ರಮಿಸಿದ ಪ್ರವಾದಿ ಮಹಮ್ಮದ್‌ ಪೈಗಂಬರ್‌ ಅವರನ್ನು ನಿರಂತರ ಸ್ಮರಿಸಲಾಯಿತು. ಶನಿವಾರ ತಡರಾತ್ರಿಯವರೆಗೆ ಮಸೀದಿಗಳಲ್ಲಿ ಮುಸ್ಲಿಮರು ವಿಶೇಷ ಪ್ರಾರ್ಥನೆ ಸಲ್ಲಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT