ಬೆಳಗಾವಿ: ನಗರದ ಜಲಮೂಲಗಳನ್ನು ರಕ್ಷಣೆ ಮಾಡುವಲ್ಲಿ ಈ ವರ್ಷವೂ ಮಹಾನಗರ ಪಾಲಿಕೆ ಹಿಂದೆ ಬಿದ್ದಿದೆ. ನಗರದಲ್ಲಿ ಎಲ್ಲೆಂದರಲ್ಲಿ ಪಿಒಪಿ ಮೂರ್ತಿಗಳನ್ನು ಪ್ರತಿಷ್ಠಾಪಿಸಲಾಗಿದೆ. ಈಗಾಗಲೇ ಐದು ದಿನಗಳ ಗಣಪತಿಗಳನ್ನು ವಿಸರ್ಜನೆಯೂ ಮಾಡಲಾಗಿದೆ. ಈ ಬಾರಿಯೂ ನದಿ, ಹಳ್ಳ, ಬಾವಿ, ಕೆರೆಗಳಲ್ಲಿಯೇ ವಿಸರ್ಜನೆ ಮಾಡಿದ್ದು ಬಹುಪಾಲು ಕಡೆ ಕಂಡುಬಂದಿದೆ.
‘ಪರಿಸರ ಸ್ನೇಹಿಯಾಗಿ ಗಣೇಶೋತ್ಸವ ಆಚರಿಸಿ. ಪರಿಸರ ಸ್ನೇಹಿ ಮೂರ್ತಿಗಳನ್ನು ನಿರ್ದಿಷ್ಟವಾದ ಹೊಂಡಗಳಲ್ಲೇ ವಿಸರ್ಜಿಸಿ. ಒಂದುವೇಳೆ ಪ್ಲಾಸ್ಟರ್ ಆಫ್ ಪ್ಯಾರಿಸ್ (ಪಿಒಪಿ)ನಿಂದ ತಯಾರಿಸಿದ್ದ ಮೂರ್ತಿಗಳಿದ್ದರೆ, ಸಂಚಾರ ವಾಹನಗಳ ಟ್ಯಾಂಕ್‌ನಲ್ಲಿ ವಿಸರ್ಜಿಸಿ’ ಎಂದು ಮಹಾನಗರ ಪಾಲಿಕೆ, ರಾಜ್ಯ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳು ಜಾಗೃತಿ ಮೂಡಿಸುತ್ತಲೇ ಇದ್ದಾರೆ. ಆದರೆ, ಫಲಿತಾಂಶ ಮಾತ್ರ ಅಷ್ಟಕ್ಕಷ್ಟೇ.
‘ಗಣೇಶೋತ್ಸವಕ್ಕೆ ಮಂಗಳವಾರ ತೆರೆಬೀಳಲಿದೆ. ತಮ್ಮ ಮನೆಗಳಲ್ಲಿ ಗಣಪ ಮೂರ್ತಿಗಳನ್ನು ಪ್ರತಿಷ್ಠಾಪಿಸಿ ಪೂಜಿಸಿದ ಹಲವರು, ಉತ್ಸವದ 11ನೇ ದಿನದಂದು ವಿಸರ್ಜಿಸಲಿದ್ದಾರೆ. ಅಂದಾದರೂ ಪರಿಸರ ಸ್ನೇಹಿ ಹೆಜ್ಜೆ ಇರಿಸಬೇಕು’ ಎನ್ನುವ ಜನಾಗ್ರಹ ವ್ಯಕ್ತವಾಗಿದೆ.
ಇತರೆ ಜಲಮೂಲಗಳತ್ತ ಪಾಲಿಕೆ ನಿರ್ಲಕ್ಷ್ಯ:
ನಗರದಲ್ಲಿ 370ಕ್ಕೂ ಅಧಿಕ ಸಾರ್ವಜನಿಕ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪಿಸಲಾಗಿದೆ. ಶಹಾಪುರದ ಕಪಿಲೇಶ್ವರ ದೇವಸ್ಥಾನದ ಹೊಸ ಹೊಂಡ, ಹಳೆಯ ಹೊಂಡ, ಇಂದ್ರಪ್ರಸ್ಥ ನಗರದ ಜಕ್ಕೇರಿ ಹೊಂಡ, ಕೋಟೆ ಕೆರೆ, ಕಣಬರ್ಗಿ ಕೆರೆ, ಅನಗೋಳದ ಲಾಲ್ ತಾಲಾಬ್, ಮಜಗಾವಿ ಕೆರೆ, ವಡಗಾವಿಯ ನಾಜರ್‌ಕ್ಯಾಂಪ್‌ನಲ್ಲಿ ಸೇರಿ 8 ಕಡೆ ಅವುಗಳ ವಿಸರ್ಜನೆಗೆ ವ್ಯವಸ್ಥೆ ಮಾಡಲಾಗಿದೆ.
ಆ ಹೊಂಡಗಳಿಗೆ ಸುಣ್ಣ–ಬಣ್ಣ ಬಳಿದು, ಮಹಾನಗರ ಪಾಲಿಕೆ ಅಲಂಕರಿಸಿದೆ. ವಿಸರ್ಜನೆ ಪ್ರಕ್ರಿಯೆ ವ್ಯವಸ್ಥಿತವಾಗಿ ಕೈಗೊಳ್ಳಲು ಎಲ್ಲ ತಯಾರಿ ಮಾಡಿಕೊಂಡಿದೆ. ಆದರೆ, ಜನರು ಮನೆಗಳಲ್ಲಿ ಪ್ರತಿಷ್ಠಾಪಿಸಿದ ಗಣಪನ ಮೂರ್ತಿಗಳನ್ನು ಎಸೆಯುತ್ತಿರುವ ಇತರೆ ಜಲಮೂಲಗಳತ್ತ ಅದು ನಿರ್ಲಕ್ಷ್ಯ ವಹಿಸಿರುವುದು ಕಂಡುಬರುತ್ತಿದೆ.
ಅನಗೋಳದ ನಾಥಪೈ ನಗರದ ಡಬ್ಬು ತಾಲಾಬ್ ಪಕ್ಕದ ಹೊಂಡದಲ್ಲೇ ಸಣ್ಣ ಮೂರ್ತಿಗಳ ವಿಸರ್ಜನೆಗೆ ಅವಕಾಶ ಕಲ್ಪಿಸಲಾಗಿದೆ. ಆದರೆ, ಮೈದುಂಬಿಕೊಂಡಿರುವ ಕೆರೆಯಲ್ಲೇ ಮೂರ್ತಿಗಳನ್ನು ಎಸೆದಿದ್ದಾರೆ. ಹೂವು, ಹಣ್ಣು, ಕಾಯಿ, ಕರ್ಪೂರ ಮತ್ತಿತರ ಪೂಜಾ ಸಾಮಗ್ರಿಗಳು ಮತ್ತು ಪ್ಲಾಸ್ಟಿಕ್ ಎಸೆದಿದ್ದಾರೆ. ಕಣಬರ್ಗಿ ಕೆರೆಯ ಸ್ಥಿತಿಯೂ ಇದಕ್ಕಿಂತ ಭಿನ್ನವಿಲ್ಲ.
ಗಣೇಶನ ಹಬ್ಬದ ಆಚರಣೆ ಪರಿಸರ ಸ್ನೇಹಿಯಾಗಿರಬೇಕು. ಕುಡಿಯುವ ಉದ್ದೇಶಕ್ಕೆ ಬಳಸುವ ಜಲಮೂಲಗಳಲ್ಲಿ ಮೂರ್ತಿ ಎಸೆದು ನೀರು ಕಲುಷಿತಗೊಳಿಸಬಾರದು
-ಶೋಭಾ ಪೋಳ, ಜಿಲ್ಲಾ ಪರಿಸರ ಅಧಿಕಾರಿ ರಾಜ್ಯ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ
ಮನೆಗಳಲ್ಲಿ ಪ್ರತಿಷ್ಠಾಪಿಸಿದ ಮೂರ್ತಿಗಳನ್ನು 11ನೇ ದಿನ ವಿಸರ್ಜಿಸುವವರು ಪರಿಸರಕ್ಕೆ ಹಾನಿಯಾಗದಂತೆ ಹೆಜ್ಜೆ ಇರಿಸಿ ಸಹಕರಿಸಬೇಕು
-ಹನುಮಂತ ಕಲಾದಗಿ ಪರಿಸರ ಎಂಜಿನಿಯರ್ ಮಹಾನಗರ ಪಾಲಿಕೆ
ಮಲೀನವಾಗದಿರಲಿ
ಪರಿಸರ ಸೆ.17ರಂದು ಸಂಜೆ ಆರಂಭಗೊಳ್ಳುವ ಸಾರ್ವಜನಿಕ ಗಣೇಶ ವಿಸರ್ಜನಾ ಮೆರವಣಿಗೆ ಮಾರನೇ ದಿನ ಮಧ್ಯಾಹ್ನದವರೆಗೂ ನಡೆಯುತ್ತದೆ. ಮೆರವಣಿಗೆ ವೀಕ್ಷಣೆಗೆ ಅಪಾರ ಜನ ಸೇರಲಿದ್ದಾರೆ. ಬಂದವರು ಎಲ್ಲೆಂದರಲ್ಲಿ ಪ್ಲಾಸ್ಟಿಕ್ ಎಸೆಯಬಾರದು. ಪರಿಸರ ಮಾಲಿನ್ಯಕ್ಕೆ ಕಾರಣವಾಗುವ ಪಟಾಕಿ ಸಿಡಿಮದ್ದುಗಳನ್ನು ಮಿತಿಮೀರಿ ಬಳಸಬಾರದು. ಸಾರ್ವಜನಿಕ ಗಣೇಶೋತ್ಸವ ಮಂಡಳಿಯವರೂ ಮೆರವಣಿಗೆಯಲ್ಲಿ ಪರಿಸರಕ್ಕೆ ಪೂರಕವಾಗುವ ನಿಟ್ಟಿನಲ್ಲಿ ಕೆಲವು ಕ್ರಮ ವಹಿಸಬೇಕು ಎಂದು ಅಧಿಕಾರಿಗಳು ಕೋರಿದ್ದಾರೆ.
ಅರಿವಿಗೆ ಕಿವಿಗೊಡದ ಜನ
‘ಮನೆಗಳಲ್ಲಿ ಪ್ರತಿಷ್ಠಾಪಿಸಿದ ಮೂರ್ತಿಗಳ ವಿಸರ್ಜನೆಗೆ ಅನುಕೂಲವಾಗಲೆಂದು ಪಾಲಿಕೆಯಿಂದ 11 ರಾಜ್ಯ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ 10 ಬೆಳಗಾವಿ ನಗರಾಭಿವೃದ್ಧಿ ಪ್ರಾಧಿಕಾರದಿಂದ 5 ಸೇರಿದಂತೆ 26 ಸಂಚಾರಿ ವಾಹನಗಳನ್ನು ಬಿಟ್ಟಿದ್ದೆವು. ಗಣೇಶೋತ್ಸವದ 5 7ನೇ ದಿನಗಳಂದು ನಗರವಿಡೀ ಅವು ಸುತ್ತಾಡಿದವು. ಪ್ರತಿ ವಾಹನದ ಟ್ಯಾಂಕಿನಲ್ಲಿ 100ಕ್ಕೂ ಅಧಿಕ ಜನ ಮೂರ್ತಿ ವಿಸರ್ಜಿಸಿದ್ದಾರೆ. ಆದರೆ ನಿರೀಕ್ಷಿತ ಸ್ಪಂದನೆ ಸಿಗಲಿಲ್ಲ. ಪಿಒಪಿ ಮೂರ್ತಿಗಳನ್ನು ಕೆರೆಯೊಡಲಿನ ಬದಲಿಗೆ ಈ ಟ್ಯಾಂಕಿನಲ್ಲೇ ವಿಸರ್ಜಿಸಿ ಎಂಬ ಮನವಿಗೆ ಜನ ಕಿವಿಗೊಡಲಿಲ್ಲ’ ಎಂದು ಅಧಿಕಾರಿಯೊಬ್ಬರು ಅಸಹಾಯಕತೆ ವ್ಯಕ್ತಪಡಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.