ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮತದಾರರು ಹೊಣೆಗಾರಿಕೆ ನಿರ್ವಹಿಸಬೇಕು: ಚಂದ್ರಶೇಖರ ಎಂ. ಜೋಶಿ

ರಾಷ್ಟ್ರೀಯ ಮತದಾರರ ದಿನಾಚರಣೆಯಲ್ಲಿ ಆಶಯ
Last Updated 25 ಜನವರಿ 2022, 7:23 IST
ಅಕ್ಷರ ಗಾತ್ರ

ಬೆಳಗಾವಿ: ‘ಮತದಾರರು ಮತದಾನ ಪ್ರಕ್ರಿಯೆಯಲ್ಲಿ ಸಕ್ರಿಯವಾಗಿ ಭಾಗವಹಿಸುವ ಮೂಲಕ ಹೊಣೆಗಾರಿಕೆ ನಿರ್ವಹಿಸಬೇಕು’ ಎಂದು ಪ್ರಧಾನ ಜಿಲ್ಲಾ ಹಾಗೂ ಸೆಷನ್ಸ್ ನ್ಯಾಯಾಧೀಶ ಚಂದ್ರಶೇಖರ ಎಂ. ಜೋಶಿ ಆಶಯ ವ್ಯಕ್ತಪಡಿಸಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯ್ತಿ, ಮಹಾನಗರ ಪಾಲಿಕೆ ಹಾಗೂ ಸ್ವೀಪ್ ಸಮಿತಿಯಿಂದ ಮಂಗಳವಾರ ಆಯೋಜಿಸಿದ್ದ ರಾಷ್ಟ್ರೀಯ ಮತದಾರರ ದಿನಾಚರಣೆ ಕಾರ್ಯಕ್ರಮವನ್ನು ಆನ್‌ಲೈನ್‌ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.

‘ಎಲ್ಲರಿಗೂ ಮತದಾನದ ಹಕ್ಕು ಒದಗಿಸುವ ಮೂಲಕ ಪ್ರಜೆಗಳೇ ಪ್ರಭುಗಳು ಎನ್ನುವುದಕ್ಕೆ ಸಂವಿಧಾನದಲ್ಲಿ ಅವಕಾಶ ಕಲ್ಪಿಸಲಾಗಿದೆ’ ಎಂದರು.

‘ಇಡೀ ಜಗತ್ತಿಗೆ ಪ್ರಜಾಪ್ರಭುತ್ವ ಹಾಗೂ ರಾಜ ಧರ್ಮದ ಮಾರ್ಗದರ್ಶನ ನೀಡಿದ ಕೀರ್ತಿ ಭಾರತಕ್ಕೆ ಸಲ್ಲುತ್ತದೆ. ನಿಷ್ಪಕ್ಷಪಾತ ನ್ಯಾಯ ಒದಗಿಸುವುದು ಮತ್ತು ರಾಷ್ಟ್ರ ರಕ್ಷಣೆಯು ಸರ್ಕಾರದ ಜವಾಬ್ದಾರಿಯಾಗಿದೆ. ಜವಾಬ್ದಾರಿಯುತ ಸರ್ಕಾರ ಆಯ್ಕೆ ಮಾಡುವ ಅವಕಾಶವನ್ನು ಪ್ರಜೆಗಳಿಗೆ ಕಲ್ಪಿಸಲಾಗಿದೆ. ಇದನ್ನು ಪ್ರಜೆಗಳು ಅರಿಯಬೇಕು’ ಎಂದು ತಿಳಿಸಿದರು.

22 ಸಾವಿರ ಮಂದಿ ಸೇರ್ಪಡೆ: ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಚುನಾವಣಾಧಿಕಾರಿ ಎಂ.ಜಿ. ಹಿರೇಮಠ, ‘ಜಿಲ್ಲೆಯಲ್ಲಿ ಈ ಬಾರಿ 22ಸಾವಿರ ಹೊಸ ಮತದಾರರು ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆ ಮಾಡಿದ್ದಾರೆ. ಸಾಕಷ್ಟು ಸಮಯಾವಕಾಶ ಇರುವುದರಿಂದ ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರು ಇರುವುದನ್ನು ಎಲ್ಲರೂ ಮುಂಚಿತವಾಗಿಯೇ ಖಚಿತಪಡಿಸಿಕೊಳ್ಳಬೇಕು. ಮತದಾನ ದಿನ ಹೆಸರು ಇಲ್ಲದಿರುವ ಬಗ್ಗೆ ಗೊಂದಲ ಮಾಡಿಕೊಳ್ಳಬಾರದು’ ಎಂದು ಕೋರಿದರು.

ಮುಖ್ಯ ಅತಿಥಿಯಾಗಿದ್ದ ಜಿ.ಪಂ. ಸಿಇಒ ಎಚ್‌.ವಿ. ದರ್ಶನ್‌, ‘ಜಿಲ್ಲಾ ಸ್ವೀಪ್ ಸಮಿತಿಯಿಂದ ಮತದಾನ ಜಾಗೃತಿ, ಯುವ ಮತದಾರರು ಹಾಗೂ ಅಂಗವಿಕಲ ಮತದಾರರ ನೋಂದಣಿಗೆ ಆದ್ಯತೆ ನೀಡಲಾಗಿದೆ’ ಎಂದು ಹೇಳಿದರು.

ಸ್ವೀಪ್ ಚಟುವಟಿಕೆಗೆ ಬಹುಮಾನ: ‘ಮತದಾರರ ಜಾಗೃತಿಗೆ ಸಂಬಂಧಿಸಿದಂತೆ ಅತ್ಯುತ್ತಮ ಸ್ವೀಪ್ ಕಾರ್ಯನಿರ್ವಹಣೆ ಪ್ರಶಸ್ತಿಗೆ ಜಿಲ್ಲೆ ಆಯ್ಕೆಯಾಗಿದೆ’ ಎಂದು ತಿಳಿಸಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ಅಶೋಕ ದುಡಗುಂಟಿ, ‘ಬೆಂಗಳೂರು ನಗರ ಹೊರತುಪಡಿಸಿ ಅತಿ ಹೆಚ್ಚು ಮತದಾರರನ್ನು ಹೊಂದಿರುವ ಬೆಳಗಾವಿ ಜಿಲ್ಲೆಯಲ್ಲಿ 38,80,378 ಮತದಾರರಿದ್ದಾರೆ’ ಎಂದು ವಿವರಿಸಿದರು.

ಮತದಾರರ ಜಾಗೃತಿ ಕುರಿತು ಏರ್ಪಡಿಸಿದ್ದ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದ ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳಿಗೆ ದರ್ಶನ್ ಬಹುಮಾನ ವಿತರಿಸಿದರು.

ಮತದಾರರ ಪಟ್ಟಿ ಪರಿಷ್ಕರಣೆಗೆ ಸಂಬಂಧಿಸಿದಂತೆ ಅತ್ಯುತ್ತಮ ಕಾರ್ಯನಿರ್ವಹಿಸಿದ ಮತಗಟ್ಟೆ ಅಧಿಕಾರಿಗಳಿಗೆ ಹೆಚ್ಚುವರಿ ಜಿಲ್ಲಾಧಿಕಾರಿ ಬಹುಮಾನ ವಿತರಿಸಿದರು. ಹೊಸದಾಗಿ ಮತದಾರರ ಪಟ್ಟಿಗೆ ಸೇರ್ಪಡೆಯಾದ ಯುವ ಮತದಾರರಿಗೆ ಮತದಾರರ ಗುರುತಿನ ಚೀಟಿಗಳನ್ನು ವಿತರಿಸಲಾಯಿತು.

ಜಿಲ್ಲಾಧಿಕಾರಿ ಹಿರೇಮಠ ಪ್ರತಿಜ್ಞಾವಿಧಿ ಬೋಧಿಸಿದರು. ಪ್ರಾದೇಶಿಕ ಆಯುಕ್ತ ಆಮ್ಲಾನ್ ಆದಿತ್ಯ ಬಿಸ್ವಾಸ್, ಉತ್ತರ ವಲಯ ಐಜಿಪಿ ಎನ್.ಸತೀಶಕುಮಾರ್, ನಗರ ಪೊಲೀಸ್ ಆಯುಕ್ತ ಡಾ.ಎಂ.ಬಿ. ಬೋರಲಿಂಗಯ್ಯ, ಎಸ್ಪಿ ಲಕ್ಷ್ಮಣ ನಿಂಬರಗಿ, ಮಹಾನಗರ ಪಾಲಿಕೆ ಆಯುಕ್ತ ರುದ್ರೇಶ್ ಘಾಳಿ, ಜಿಲ್ಲಾ ಸ್ಬೀಪ್ ಸಮಿತಿಯ ಸದಸ್ಯ ಕಾರ್ಯದರ್ಶಿ ಪರಶುರಾಮ ದುಡಗುಂಟಿ, ಡಿಡಿಪಿಐ ಬಸವರಾಜ ನಾಲತವಾಡ, ವಾರ್ತಾ ಇಲಾಖೆಯ ಉಪ ನಿರ್ದೇಶಕ ಗುರುನಾಥ ಕಡಬೂರ ಪಾಲ್ಗೊಂಡಿದ್ದರು. ಸುನೀತಾ ದೇಸಾಯಿ ನಿರೂಪಿಸಿದರು.

ಮಹತ್ವದ್ದಾಗಿದೆ
ದೇಶ ನಿರ್ಮಾಣದಲ್ಲಿ ಮತದಾನದ ಪಾತ್ರ ಮಹತ್ವದ್ದಾಗಿದೆ. ಇದನ್ನು ಅರಿತು ಅರ್ಹರೆಲ್ಲರೂ ಕಡ್ಡಾಯವಾಗಿ ಮತದಾನ ಪ್ರಕ್ರಿಯೆಯಲ್ಲಿ ಭಾಗವಹಿಸಬೇಕು.
–ಎಂ.ಜಿ. ಹಿರೇಮಠ, ಜಿಲ್ಲಾ ಚುನಾವಣಾಧಿಕಾರಿ

*
ಅರಿವು ಮೂಡಿಸಲಾಗಿದೆ

ಮತದಾರರ ಸಾಕ್ಷರತಾ ಕ್ಲಬ್ ಸ್ಥಾಪಿಸುವ ಮೂಲಕ ಜಾಗೃತಿ, ಯುವ ಮತದಾರರ ನೋಂದಣಿ, ಪಟ್ಟಿ ಪರಿಷ್ಕರಣೆ ಕುರಿತು ಅರಿವು ಮೂಡಿಸಲಾಗಿದೆ.
–ಅಶೋಕ ದುಡಗುಂಟಿ, ಹೆಚ್ಚುವರಿ ಜಿಲ್ಲಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT