ಶನಿವಾರ, ನವೆಂಬರ್ 26, 2022
23 °C
ಘಟಸ್ಥಾಪನೆ ಮೂಲಕ ಸಂಭ್ರಮಕ್ಕೆ ಚಾಲನೆ. ದೇಶದ ಮೂಲೆಮೂಲೆಯಿಂದಲೂ ಬಂದ ಭಕ್ತರು

ಸವದತ್ತಿ: ಯಲ್ಲಮ್ಮನ ಗುಡ್ಡ: ನವರಾತ್ರಿ ವೈಭವಕ್ಕೆ ಮುನ್ನಡಿ

ಬಸವರಾಜ ಶಿರಸಂಗಿ Updated:

ಅಕ್ಷರ ಗಾತ್ರ : | |

Prajavani

ಸವದತ್ತಿ: ನವ ದುರ್ಗೆಯ ಅವತಾರಿಣಿ ಯಲ್ಲಮ್ಮ ದೇವಿ ದೇವಸ್ಥಾನದಲ್ಲಿ ನವರಾತ್ರಿ ಉತ್ಸವ ಸಂಭ್ರಮ ಮನೆ ಮಾಡಿದೆ. ಮೊದಲ ದಿನವಾದ ಸೋಮವಾರದಿಂದಲೇ ಭಕ್ತರು ಸಾಗರೋಪಾದಿಯಲ್ಲಿ ಹರಿದುಬಂದರು. ಘಟಸ್ಥಾಪನೆಯ ಮೂಲಕ ನವವೈಭವಕ್ಕೆ ವಿಧ್ಯುಕ್ತ ಚಾಲನೆಯೂ ದೊರೆಯಿತು.

ದೇಶದ ವಿವಿಧ ಭಾಗಗಳಿಂದ ಲಕ್ಷಾಂತರ ಭಕ್ತರು ದೇವಿಯ ದರ್ಶನಕ್ಕೆ ಬರುತ್ತಿದ್ದಾರೆ. ಅವಮಾಸ್ಯೆ ನಂತರದ ಮೊದಲ ದಿನ ಸೋಮವಾರ ಸಂಜೆ 4.30 ರಿಂದ 6.30 ಒಳಗಾಗಿ ಅಮ್ಮನಿಗೆ ವಿಶೇಷ ಪೂಜೆ ಸಲ್ಲಿಸಿ ಮಹಾಮಂಗಳಾರತಿ ಮೂಲಕ ಘಟಸ್ಥಾಪನೆ ಜರುಗಿತು.

ದಸರಾ ನಿಮಿತ್ತ 9 ದಿನಗಳ ಕಾಲ ಶೈಲಪುತ್ರಿ, ಬ್ರಹ್ಮಚಾರಿಣಿ, ಚಂದ್ರಗ್ರಂಥಾ, ಕುಷ್ಮಂದಾ, ಸ್ಕಂಧಮಾತಾ, ಕಾತ್ಯಾಯಿಣಿ, ಕಾಲರಾತ್ರಿ, ಮಹಾಗೌರಿ, ಸಿದ್ಧಿಧಾತ್ರಿ ಈ ರೀತಿ 9 ಶಕ್ತಿ ದೇವತೆಗಳ ಅಲಂಕಾರದಲ್ಲಿ ರೂಪ ತಾಳಲಿದ್ದಾಳೆ ಅಮ್ಮ. ಮೊದಲ ದಿನದ ಘಟ ಸ್ಥಾಪನೆ ಮತ್ತು 5ನೇ ದಿನದಂದು ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ದರ್ಶನಾಶೀರ್ವಾದ ಪಡೆಯುತ್ತಾರೆ.

ಮಂಗಳವಾರ ಮತ್ತು ಶುಕ್ರವಾರ ವಾಡಿಕೆಗಿಂತ ಹೆಚ್ಚು ಜನ ಸೇರಿ ಭಕ್ತಿ ಪರಾಕಾಷ್ಟೆ ಮೆರೆಯುತ್ತಾರೆ. ಪುರಾಣದಲ್ಲಿ ಶಕ್ತಿ ದೇವತೆಯೆಂದು ಕರೆಸಿಕೊಳ್ಳುವ ಯಲ್ಲಮ್ಮ ದೇವಸ್ಥಾನದಲ್ಲಿ ಆಯುಧ ಪೂಜೆಯ ದಿನದಂದು ಆಯುಧಗಳೊಂದಿಗೆ ದೇವಿಯನ್ನು ವಿಶೇಷ ಅಲಂಕಾರದಲ್ಲಿರಿಸಿ ವಿಜೃಂಭಣೆಯಿಂದ ಪೂಜಿಸಲಾಗುತ್ತದೆ. 10ನೇ ದಿನ ಉಗರಗೋಳ ಗ್ರಾಮದ ಹದ್ದಿಗೆ ಇರುವ ಬನ್ನಿ ಮರಕ್ಕೆ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಬನ್ನಿ ಮುಡಿಯುವ ಧಾರ್ಮಿಕ ಕಾರ್ಯಗಳು ಜರಗುತ್ತವೆ. ಆದರೆ ಕಳೆದ ಎರಡ್ಮೂರು ವರ್ಷಗಳಿಂದ ಕೋವಿಡ್ ಕಾರಣಕ್ಕೆ ಈ ಎಲ್ಲ ಧಾರ್ಮಿಕ ಆಚರಣೆಗಳು ಭಕ್ತರಿಲ್ಲದೇ ಜರುಗಿವೆ. ಇದೀಗ ನಿರ್ಬಂಧಗಳ ಸಡಿಲಿಕೆಯಿಂದ ಸಂಭ್ರಮದ ವೈಭವಕ್ಕೆ ದೇವಸ್ಥಾನ ಸಾಕ್ಷಿಯಾಗಲಿದೆ.

ಏಳುಕೊಳ್ಳಗಳ ನಾಡಿನಲ್ಲಿ ನೆಲೆ ನಿಂತು ಭಕ್ತರನ್ನು ಹಾರೈಸುತ್ತಿದ್ದಾರೆ.

ಮೈಸೂರು ಅರಸರು ವಿಜಯ ದಶಮಿ ನಿಮಿತ್ತ ಅದ್ದೂರಿ ದಸರಾ ಆಚರಣೆಯಂತೆ ದೇಶದ ನಾನಾ ಕಡೆಗಳಲ್ಲಿ ಸ್ತ್ರೀ ದೇವತೆಗಳ ಆರಾಧನೆ ಜರಗುತ್ತದೆ. ಇದೇ ಸಂಪ್ರದಾಯ ದೇವಸ್ಥಾನದಲ್ಲಿದ್ದು 9 ದಿನಗಳ ಕಾಲ ವಿಶೇಷ ಪೂಜಾಧಿಕೈಂಕರ್ಯಗಳು ದೇವಿಯ ಮುಡಿಗೇರುತ್ತವೆ.

ಈಗಾಗಲೇ ಗುಡ್ಡದಲ್ಲಿ ಉತ್ಸವಕ್ಕೆ ಅಗತ್ಯವಿರುವ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಅಸಂಖ್ಯಾತ ಭಕ್ತರಿಗೆ ಮೂಲಸೌಕರ್ಯ ಒದಗಿಸುವ ಕಾರ್ಯ ನಡೆದಿದೆ. ಸವದತ್ತಿ ಪಟ್ಟಣದಿಂದ ಎರಡೂ ಮಾರ್ಗಗಳಲ್ಲಿ ಏಕಮುಖಿ ಸಂಚಾರ ನಡೆಸಲಾಗಿದೆ. ಆದರೂ ಪ್ರತಿ ಸಲದಂತೆ ಈ ಬಾರಿಯೂ ನೀರಿನ ಕೊರತೆ, ಸಂಚಾರ ದಟ್ಟಣೆ ಎದುರಾಗಬಹುದು. ಜೋಗುಳಬಾವಿ ಸತ್ಯಮ್ಮ ದೇವಸ್ಥಾನಕ್ಕೂ ಭಕ್ತರ ಸಂಖ್ಯೆ ಹೆಚ್ಚಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು