ಶನಿವಾರ, 13 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಬೆಳಗಾವಿ | ಜಲಾಶಯಗಳಲ್ಲಿ ಜೀವಕಳೆ; ಬೇಕು ಇನ್ನಷ್ಟು ಮಳೆ

ಹಿಡಕಲ್‌, ನವಿಲುತೀರ್ಥ ಜಲಾಶಯಗಳಲ್ಲಿ ನೀರಿನ ಸಂಗ್ರಹ ಹೆಚ್ಚಳ, ಕೃಷ್ಣೆಗೂ ಹರಿದುಬರುತ್ತಿದೆ ಅಪಾರ ಪ್ರಮಾಣದ ನೀರು
Published 8 ಜುಲೈ 2024, 4:40 IST
Last Updated 8 ಜುಲೈ 2024, 4:40 IST
ಅಕ್ಷರ ಗಾತ್ರ

ಬೆಳಗಾವಿ: ಜಿಲ್ಲೆಯಲ್ಲಿ ಈ ಬಾರಿ ಪೂರ್ವ ಮುಂಗಾರು ಉತ್ತಮವಾಗಿದೆ. ಜೂನ್‌ ಅಂತ್ಯದವರೆಗೆ ಮುಂಗಾರು 286.46 ಮಿ.ಮೀ ಮಳೆ ಬಿದ್ದಿದೆ. ಈ ಅವಧಿಯ ವಾಡಿಕೆ ಮಳೆ 236 ಮಿ.ಮೀ. ಅಂದರೆ; ವಾಡಿಕೆಗಿಂತ ಶೇ 21ರಷ್ಟು ಹೆಚ್ಚು ಮಳೆ ಸುರಿದಿದೆ. ಆದರೆ, ಈ ಮಳೆ ಇಡೀ ಜಿಲ್ಲೆಯಲ್ಲಿ ಏತಕಾನವಾಗಿಲ್ಲ. ಅರ್ಧ ಜಿಲ್ಲೆಯ ರೈತರು ಇನ್ನೂ ಮಳೆಗೆ ಕಾಯುವ ಸ್ಥಿತಿ ಇದೆ.

ಸವದತ್ತಿ, ಹುಕ್ಕೇರಿ, ಬೆಳಗಾವಿ, ಖಾನಾಪುರ, ಚನ್ನಮ್ಮನ ಕಿತ್ತೂರು ತಾಲ್ಲೂಕುಗಳಲ್ಲಿ ವಾಡಿಕೆಗಿಂತ ಅತಿ ಕಡಿಮೆ ಮಳೆಯಾಗಿದೆ. ಉಳಿದ ತಾಲ್ಲೂಕುಗಳು ಒಣಭೂಮಿ ಹೊಂದಿದ್ದರಿಂದ ಅಲ್ಲಿ ಕಡಿಮೆ ಮಳೆ ನಿರೀಕ್ಷೆ ಇತ್ತು. ಆದರೂ ವಾಡಿಕೆ ಮಳೆಗಿಂತ ಹೆಚ್ಚು ಬಿದ್ದಿದೆ. ಕಪ್ಪು ಮಣ್ಣು ಹಾಗೂ ಒಣಭೂಮಿ ಹೊಂದಿರುವ ಜಿಲ್ಲೆಯಲ್ಲಿ ಕೃಷಿ ಭೂಮಿಯ ಮಣ್ಣು ಸಾಕಷ್ಟು ಹಸಿ ಹಿಡಿದಿಲ್ಲ ಎನ್ನುತ್ತಾರೆ ಕೃಷಿ ವಿಜ್ಞಾನಿಗಳು.

ಮಹಾರಾಷ್ಟ್ರದ ಪಶ್ಚಿಮಘಟ್ಟ ಪ್ರದೇಶ ಹಾಗೂ ಜಿಲ್ಲೆಯ ಜಲಾನಯನ ಪ್ರದೇಶಗಳಲ್ಲಿ ಸುರಿಯುತ್ತಿರುವ ಉತ್ತಮ ಮಳೆಯಿಂದಾಗಿ ಮಲಪ್ರಭಾ, ಘಟಪ್ರಭಾ, ಕೃಷ್ಣಾ ನದಿಗಳಿಗೆ ಜೀವಕಳೆ ಬಂದಿದೆ. ಸದ್ಯಕ್ಕಿದು ಕುಡಿಯುವ ನೀರಿನ ಬವಣೆ ನೀಗಿಸಿದೆ.

ಸದ್ಯ ಬಿದ್ದ ಮಳೆಯು ಬೀಜಗಳು ಮೊಳಕೆಯೊಡೆಯಲು ಸಾಕಾಗುತ್ತದೆ. ಆದರೆ, ನೆಲ ಹೆಚ್ಚು ಹಸಿ ಹಿಡಿದರೆ ಮಾತ್ರ ಉತ್ತಮ ಇಳುವರಿ ನಿರೀಕ್ಷೆ ಮಾಡಲು ಸಾಧ್ಯ. ಹೀಗಾಗಿ ಗ್ರಾಮೀಣ ಪ್ರದೇಶದ ಜನ ಇನ್ನೂ ಆಕಾಶಕ್ಕೆ ಮುಖಮಾಡಿ ಆಸೆಯಿಂದ ಕುಳಿತಿದ್ದಾರೆ.

ಜಲಾಶಯಗಳಲ್ಲಿ ನೀರು: ಕಳೆದ ವರ್ಷ ವರುಣನ ಅವಕೃಪೆ ತೋರಿದ್ದರಿಂದ ಮಲಪ್ರಭಾ, ಘಟಪ್ರಭಾ ಮತ್ತು ಕೃಷ್ಣಾ ನದಿಗಳ ಒಡಲು ಬರಿದಾಗಿತ್ತು. ಹುಕ್ಕೇರಿ ತಾಲ್ಲೂಕಿನ ಹಿಡಕಲ್‌ ಜಲಾಶಯದಲ್ಲಿ ನೀರಿನ ಸಂಗ್ರಹ ಮಟ್ಟ ಕಡಿಮೆಯಾಗಿತ್ತು. ಸವದತ್ತಿ ತಾಲ್ಲೂಕಿನ ನವಿಲುತೀರ್ಥ ಜಲಾಶಯದ ಪರಿಸ್ಥಿತಿಯಂತೂ ಬಿಗಡಾಯಿಸಿತ್ತು.

51 ಟಿಎಂಸಿ ಅಡಿ ನೀರು ಗರಿಷ್ಠ ಸಂಗ್ರಹ ಸಾಮರ್ಥ್ಯದ ಹಿಡಕಲ್‌ ಡ್ಯಾಂನಲ್ಲಿ ಕಳೆದ ವರ್ಷ 48 ಟಿಎಂಸಿ ಅಡಿಯವರೆಗೆ ನೀರು ಸಂಗ್ರಹವಾಗಿತ್ತು. ಇನ್ನೂ 37.73 ಗರಿಷ್ಠ ಸಂಗ್ರಹ ಸಾಮರ್ಥ್ಯದ ನವಿಲುತೀರ್ಥ ಜಲಾಶಯ 2023ರಲ್ಲಿ ಅರ್ಧದಷ್ಟು ಭರ್ತಿಯಾಗಿರಲಿಲ್ಲ. ಹಾಗಾಗಿ ಜಲಾಶಯದ ಮಡಿಲಲ್ಲಿರುವ ಊರುಗಳಲ್ಲೇ ಜಲಸಂಕಟ ತಲೆದೋರಿತ್ತು. ಎಲ್ಲರೂ ಮಳೆಯ ದಿನಗಳನ್ನೇ ನಿರೀಕ್ಷಿಸುತ್ತಿದ್ದರು.

ಈ ಬಾರಿ ಮುಂಗಾರು ಮಳೆ ಕೈಹಿಡಿದಿದ್ದರಿಂದ ಎರಡೂ ಜಲಾಶಯಗಳಲ್ಲಿ ನೀರಿನ ಸಂಗ್ರಹ ಪ್ರಮಾಣ ಹೆಚ್ಚುತ್ತಿರುವುದು ಜನರಲ್ಲಿ ನಿರಾಳಭಾವ ಮೂಡಿಸಿದೆ. ಪ್ರಸಕ್ತ ವರ್ಷ ಮುಂಗಾರು ಹಂಗಾಮಿನಲ್ಲಿ (ಜೂನ್‌ 1ರಿಂದ ಜುಲೈ 5ರವರೆಗೆ) 93.4 ಮಿ.ಮೀ. ಮಳೆಯಾಗಬೇಕಿತ್ತು. ಈ ಪೈಕಿ 194.1 ಮಿ.ಮೀ.(ಶೇ 108ರಷ್ಟು ಮಳೆ) ಮಳೆಯಾಗಿದೆ.

13 ಟಿಎಂಸಿ ಅಡಿ ಸಂಗ್ರಹ: ಹಿಡಕಲ್‌ ಜಲಾಶಯದಲ್ಲಿ ಜುಲೈ 6ರಂದು 13.52 ನೀರು ಸಂಗ್ರಹವಿದೆ. ಕಳೆದ ವರ್ಷ ಈ ವೇಳೆಗೆ, 4.06 ಟಿಎಂಸಿ ಅಡಿ ನೀರು ಸಂಗ್ರಹವಿತ್ತು. ಅಂದಿನ ಪರಿಸ್ಥಿತಿ ಗಮನಿಸಿದರೆ, ಇಂದು ನೀರಿನ ಸಂಗ್ರಹ ಪ್ರಮಾಣ ಆಶಾದಾಯಕವಾಗಿದೆ.
2024ರ ಜೂನ್‌ 30ರಂದು ಹಿಡಕಲ್‌ನಲ್ಲಿ 10.08 ಟಿಎಂಸಿ ಅಡಿ ನೀರು ಸಂಗ್ರಹವಿತ್ತು. ಆರೇ ದಿನಗಳಲ್ಲಿ ಮೂರುವರೆ ಟಿಎಂಸಿ ಅಡಿ ನೀರು ಹರಿದುಬಂದಿದೆ.

1.79 ಟಿಎಂಸಿ ಅಡಿ ಹೆಚ್ಚಳ: 37.73 ಗರಿಷ್ಠ ಸಂಗ್ರಹ ಸಾಮರ್ಥ್ಯದ ನವಿಲುತೀರ್ಥ ಜಲಾಶಯದಲ್ಲಿ 2023ರ ಜುಲೈ 6ರಂದು 6.98 ಟಿಎಂಸಿ ಅಡಿ ನೀರು ಸಂಗ್ರಹವಿತ್ತು. 2024ರ ಜುಲೈ 6ರಂದು 8.77 ಟಿಎಂಸಿ ಅಡಿ ನೀರು ಸಂಗ್ರಹವಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ, ಈ ಬಾರಿ 1.79 ಟಿಎಂಸಿ ಅಡಿ ನೀರು ಹೆಚ್ಚಿದೆ.

ಉಕ್ಕಿ ಹರಿಯುತ್ತಿರುವ ಕೃಷ್ಣೆ: ಮಹಾರಾಷ್ಟ್ರದಲ್ಲಿ ವರುಣ ಅಬ್ಬರಿಸುತ್ತಿರುವುದರಿಂದ ಕೃಷ್ಣಾ ಮತ್ತು ಅದರ ಉಪನದಿಗಳು ಉಕ್ಕಿ ಹರಿಯುತ್ತಿವೆ. ಚಿಕ್ಕೋಡಿ ತಾಲ್ಲೂಕಿನ ಕಲ್ಲೋಳ ಬಳಿ ಕೃಷ್ಣಾನದಿಗೆ ಶನಿವಾರ 44,575 ಕ್ಯೂಸೆಕ್‌ ನೀರು ಹರಿದುಬರುತ್ತಿದೆ.

ನವಿಲುತೀರ್ಥ ಜಲಾಶಯದ ಮಾಹಿತಿ

  • ನಿರ್ಮಾಣವಾದ ವರ್ಷ;1973

  • ಅಚ್ಚುಕಟ್ಟು ಪ್ರದೇಶ;1.96 ಲಕ್ಷ ಹೆಕ್ಟೇರ್‌

  • ಕುಡಿಯುವ ನೀರಿಗಾಗಿ ಅವಲಂಬಿಸಿರುವುದು; ಹುಬ್ಬಳ್ಳಿ–ಧಾರವಾಡ ಮಹಾನಗರ ಬೆಳಗಾವಿ ಜಿಲ್ಲೆಯ ಬೈಲಹೊಂಗಲ ಸವದತ್ತಿ ರಾಮದುರ್ಗ ಬಾಗಲಕೋಟೆ ಜಿಲ್ಲೆಯ ಬಾದಾಮಿ ಚೊಳಚಗುಡ್ಡ ಗದಗ ಜಿಲ್ಲೆಯ ನರಗುಂದ ಮತ್ತಿತರ ಪಟ್ಟಣಗಳು.

ಹಿಡಕಲ್‌ ಜಲಾಶಯದ ಮಾಹಿತಿ

  • ನಿರ್ಮಾಣವಾದ ವರ್ಷ;1976–77

  • ಅಚ್ಚುಕಟ್ಟು ಪ್ರದೇಶ;3.08 ಲಕ್ಷ ಹೆಕ್ಟೇರ್‌

  • ಕುಡಿಯುವ ನೀರಿಗಾಗಿ ಅವಲಂಬಿಸಿರುವುದು;ಬೆಳಗಾವಿ ನಗರ ಜಿಲ್ಲೆಯ ಹುಕ್ಕೇರಿ ಸಂಕೇಶ್ವರ ಗೋಕಾಕ ಮೂಡಲಗಿ ರಾಯಬಾಗ ಚಿಕ್ಕೋಡಿ ಬಾಗಲಕೋಟೆ ನಗರ ಬಾಗಲಕೋಟೆ ಜಿಲ್ಲೆಯ ಮುಧೋಳ ಬಾಗಲಕೋಟೆ ಮತ್ತಿತರ ಪಟ್ಟಣಗಳು.

ಸರಿಯಾಗಿ ಬಳಸಲಿ:

‘ಪ್ರತಿವರ್ಷ ಹಿಡಕಲ್‌ ಮತ್ತು ನವಿಲುತೀರ್ಥ ಜಲಾಶಯಗಳಲ್ಲಿ ಸಂಗ್ರಹವಾಗುವ ನೀರನ್ನು ಸರಿಯಾಗಿ ಬಳಕೆ ಮಾಡುತ್ತಿಲ್ಲ. ಇದರಿಂದ ಬೇಸಿಗೆ ಆರಂಭದಲ್ಲೇ ಜಲಬವಣೆ ತಲೆದೋರುತ್ತದೆ. ಹಾಗಾಗಿ ಮಳೆಗಾಲದ ಅಂತ್ಯಕ್ಕೆ ಸಂಗ್ರಹವಾಗುವ ನೀರನ್ನು ಆಧರಿಸಿ ಸರಿಯಾಗಿ ಬಳಕೆಗೆ ಕ್ರಮ ವಹಿಸಬೇಕು’ ಎಂಬುದು ಜನರ ಒತ್ತಾಯ.

ಉತ್ತಮ ಮಳೆಯಾಗುತ್ತಿರುವ ಕಾರಣ ನವಿಲುತೀರ್ಥ ಜಲಾಶಯಕ್ಕೆ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿದುಬರುತ್ತಿದೆ. ಕುಡಿಯುವ ಉದ್ದೇಶಕ್ಕೆ ಮಾತ್ರ ನೀರು ಬಳಸಲಾಗುತ್ತಿದೆ
ವಿವೇಕ ಮುದಿಗೌಡರ, ಕಾರ್ಯನಿರ್ವಾಹಕ ಎಂಜಿನಿಯರ್‌, ನವಿಲುತೀರ್ಥ ಜಲಾಶಯ
ಸದ್ಯ ಬಿದ್ದ ಮಳೆ ಸಾಕಾಗುವುದಿಲ್ಲ. ನೆಲವು ನಿರೀಕ್ಷಿತ ಹಸಿ ಹಿಡಿದಿಲ್ಲ. ರೈತರಿಗೆ ಇನ್ನಷ್ಟು ಮಳೆಗಾಗಿ ಕಾಯುತ್ತಿದ್ದಾರೆ. ಜುಲೈ ಮೂರನೇ ವಾರದೊಳಗೆ ಮಳೆ ಬರುವ ಸಾಧ್ಯತೆ ಹೆಚ್ಚಿದೆ.
ಜಿ.ಬಿ.ವಿಶ್ವನಾಥ, ವಿಜ್ಞಾನಿ, ಬೇಸಾಯ ಶಾಸ್ತ್ರ ಕೃಷಿ ವಿಜ್ಞಾನ ಕೇಂದ್ರ ಬೆಳಗಾವಿ
ಚಿಕ್ಕೋಡಿ ತಾಲ್ಲೂಕಿನ ಮಾಂಜರಿ ಬಳಿ ಉಕ್ಕಿ ಹರಿಯುತ್ತಿರುವ ಕೃಷ್ಣಾ ನದಿ ಬಳಿ ಜನರು ಹೋಗದಂತೆ ತಡೆಯಲು ಪೊಲೀಸರನ್ನು ನಿಯೋಜಿಸಿರುವುದು–ಪ್ರಜಾವಾಣಿ ಚಿತ್ರ: ಚಂದ್ರಶೇಖರ ಚಿನಕೇಕರ
ಚಿಕ್ಕೋಡಿ ತಾಲ್ಲೂಕಿನ ಮಾಂಜರಿ ಬಳಿ ಉಕ್ಕಿ ಹರಿಯುತ್ತಿರುವ ಕೃಷ್ಣಾ ನದಿ ಬಳಿ ಜನರು ಹೋಗದಂತೆ ತಡೆಯಲು ಪೊಲೀಸರನ್ನು ನಿಯೋಜಿಸಿರುವುದು–ಪ್ರಜಾವಾಣಿ ಚಿತ್ರ: ಚಂದ್ರಶೇಖರ ಚಿನಕೇಕರ
ಬೈಲಹೊಂಗಲ ತಾಲ್ಲೂಕಿನ ನಯಾನಗರದ ಬಳಿ ಮಲಪ್ರಭಾ ನದಿ ಉಕ್ಕಿ ಹರಿಯುತ್ತಿರುವುದು
–ಪ್ರಜಾವಾಣಿ ಚಿತ್ರ:ರವಿಕುಮಾರ ಹುಲಕುಂದ
ಬೈಲಹೊಂಗಲ ತಾಲ್ಲೂಕಿನ ನಯಾನಗರದ ಬಳಿ ಮಲಪ್ರಭಾ ನದಿ ಉಕ್ಕಿ ಹರಿಯುತ್ತಿರುವುದು –ಪ್ರಜಾವಾಣಿ ಚಿತ್ರ:ರವಿಕುಮಾರ ಹುಲಕುಂದ
ಹುಕ್ಕೇರಿ ತಾಲ್ಲೂಕಿನ ಹತ್ತರಗಿ ಬಳಿ ಘಟಪ್ರಭಾ ನದಿಯಲ್ಲಿ ನೀರಿನ ಹರಿವು ಹೆಚ್ಚಿದೆ
–ಪ್ರಜಾವಾಣಿ ಚಿತ್ರ:ಭೀಮಪ್ಪ ಕೋತೇಕರ
ಹುಕ್ಕೇರಿ ತಾಲ್ಲೂಕಿನ ಹತ್ತರಗಿ ಬಳಿ ಘಟಪ್ರಭಾ ನದಿಯಲ್ಲಿ ನೀರಿನ ಹರಿವು ಹೆಚ್ಚಿದೆ –ಪ್ರಜಾವಾಣಿ ಚಿತ್ರ:ಭೀಮಪ್ಪ ಕೋತೇಕರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT