ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳಗಾವಿ: ಕ್ಷಮಿಸಿ, ಎಟಿಎಂಗಳಿಂದ ‘ಸೇವೆ’ ದೊರೆಯುತ್ತಿಲ್ಲ!

Last Updated 21 ಮಾರ್ಚ್ 2021, 19:30 IST
ಅಕ್ಷರ ಗಾತ್ರ

ಬೆಳಗಾವಿ: ನಗರವೂ ಸೇರಿದಂತೆ ಜಿಲ್ಲೆಯಾದ್ಯಂತ ಬಹುತೇಕ ಎಟಿಎಂಗಳಿಂದ ಗ್ರಾಹಕರಿಗೆ ಸಮರ್ಪಕವಾಗಿ ಸೇವೆ ದೊರೆಯುತ್ತಿಲ್ಲ. ವಾರದಲ್ಲಿ ಅನೇಕ ದಿನಗಳು ಅವು ನಿಷ್ಕ್ರಿಯ ಸ್ಥಿತಿಯಲ್ಲಿರುವುದೇ ಇದಕ್ಕೆ ಕಾರಣವಾಗಿದೆ.

ಹಣ ಪಡೆಯುವುದಕ್ಕೆ ಕೇಂದ್ರಗಳಿಂದ ಕೇಂದ್ರಗಳಿಗೆ ಅಲೆಯಬೇಕಾದ, ತೊಂದರೆ ಅನುಭವಿಸಬೇಕಾದ ಮತ್ತು ಬೇರೆ ಬ್ಯಾಂಕ್‌ ಎಟಿಎಂ ಬಳಸಿ ಶುಲ್ಕ ಪಾವತಿಸಿ ನಷ್ಟ ಮಾಡಿಕೊಳ್ಳಬೇಕಾದ ಅನಿವಾರ್ಯತೆ ಜನರಿಗೆ ಬಂದೊದಗಿದೆ.

ಜಿಲ್ಲೆಯಲ್ಲಿರುವ ಸರಾಸರಿ ಶೇ 50ರಷ್ಟು ಎಟಿಎಂಗಳು ಒಂದಿಲ್ಲೊಂದು ತೊಂದರೆಯಿಂದ ಮುಚ್ಚಿರುತ್ತವೆ ಅಥವಾ ಬಳಕೆಗೆ ಬಾರದಂತಹ ಸ್ಥಿತಿಯಲ್ಲಿರುತ್ತವೆ. ಜನಸಂದಣಿಯ ಪ್ರದೇಶಗಳಲ್ಲಿನ ಹಾಗೂ ಶಾಖೆಗಳ ಮಗ್ಗುಲಲ್ಲೇ ಇರುವ ಕೇಂದ್ರಗಳಲ್ಲಿನ ಯಂತ್ರಗಳೂ ಕಾರ್ಯನಿರ್ವಹಿಸದಿರುವುದು ಸಂಬಂಧಿಸಿದ ಬ್ಯಾಂಕ್‌ಗಳು ನಿರ್ವಹಣೆಯಲ್ಲಿ ವಹಿಸಿರುವ ನಿರ್ಲಕ್ಷ್ಯಕ್ಕೆ ಕನ್ನಡಿ ಹಿಡಿಯುತ್ತಿವೆ ಎನ್ನುವ ಅಸಮಾಧಾನ ಜನರದು.

ಅದರಲ್ಲೂ ಸಾಲು ಸಾಲು ರಜೆಗಳ ಸಂದರ್ಭದಲ್ಲಿ ಗ್ರಾಹಕರು ಹಣಕ್ಕಾಗಿ ಪರದಾಡುವುದು ತಪ್ಪಿಲ್ಲ. ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಕ್ರಮ ಕೈಗೊಳ್ಳುವಲ್ಲಿ ಅಧಿಕಾರಿಗಳು ವಿಫಲವಾಗಿದ್ದಾರೆ. ಬಹುಪಾಲು ಕೇಂದ್ರಗಳಲ್ಲಿ ಭದ್ರತೆಗೆ ಲಕ್ಷ್ಯವನ್ನೇ ಕೊಟ್ಟಿಲ್ಲದಿರುವುದು ಸಾಮಾನ್ಯವಾಗಿದೆ!

ಭದ್ರತೆಗಿಲ್ಲ ಲಕ್ಷ್ಯ

ಆಧುನಿಕ ‘ಸ್ಕಿಮ್ಮರ್‌ ಉಪಕರಣ’ ಹಾಗೂ ಮೈಕ್ರೊ ಕ್ಯಾಮೆರಾ ಬಳಸಿ ಎಟಿಎಂ ಕಾರ್ಡ್‌ಗಳ ದತ್ತಾಂಶ (ಡೇಟಾ) ಕದ್ದು ಬ್ಯಾಂಕ್‌ ಖಾತೆಗೆ ಕನ್ನ ಹಾಕುವ ‘ಗ್ಯಾಂಗ್‌’ ರಾಜ್ಯದಲ್ಲಿ ಸಕ್ರಿಯವಾಗಿದ್ದು, ವಿವಿಧ ಜಿಲ್ಲೆಗಳಲ್ಲಿ ಗ್ರಾಹಕರು ವಂಚನೆಗೆ ಒಳಗಾಗಿದ್ದಾರೆ ಎನ್ನುವುದು ಬೆಳಕಿಗೆ ಬಂದಿದೆ. ಆದರೂ, ಜನರಲ್ಲಿ ಉಂಟಾಗಿರುವ ‘ಹೊಸ ಆತಂಕ’ ನಿವಾರಣೆಗೆ ಕ್ರಮ ಕೈಗೊಳ್ಳಬೇಕಾದವರು ಎಚ್ಚೆತ್ತುಕೊಂಡಿಲ್ಲ. ನಗರದಲ್ಲೂ ಬಹುತೇಕ ಎಟಿಎಂ ಕೇಂದ್ರಗಳ ಬಳಿ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಿಲ್ಲ. ಇದು, ಆತಂಕ ಹೆಚ್ಚಳಕ್ಕೆ ಕಾರಣವಾಗಿದೆ.

ಹೆಚ್ಚಿನ ಕೇಂದ್ರಗಳು ನಗರ ಹಾಗೂ ಪಟ್ಟಣ ಪ್ರದೇಶಗಳಲ್ಲೇ ಇವೆ. ಈ ಪೈಕಿ ಬಹುತೇಕ ಕೇಂದ್ರಗಳಲ್ಲಿ ಭದ್ರತೆಯ ವ್ಯವಸ್ಥೆ ಇಲ್ಲ. ಅಲ್ಲದೇ, ಎಷ್ಟು ಕೇಂದ್ರಗಳಲ್ಲಿ ನಿಯಮಿತವಾಗಿ ಭದ್ರತಾ ಸಿಬ್ಬಂದಿ ನಿಯೋಜಿಸಲಾಗಿದೆ ಎನ್ನುವ ನಿಖರ ಮಾಹಿತಿಯೂ ಮಾರ್ಗದರ್ಶಿ ಬ್ಯಾಂಕ್ ಬಳಿ ಇಲ್ಲ. 3 ರಾಜ್ಯಗಳಿಗೆ (ಕರ್ನಾಟಕ, ಮಹಾರಾಷ್ಟ್ರ ಹಾಗೂ ಗೋವಾ) ಸಂಪರ್ಕ ಕಲ್ಪಿಸುವ ಬೆಳಗಾವಿ ನಗರದಲ್ಲಿ ಹೊರ ರಾಜ್ಯದವರ ಓಡಾಟ ಇರುತ್ತದೆ. ‘ಕಳ್ಳರ ಗ್ಯಾಂಗ್‌’ ಯಾವ ರೂಪದಲ್ಲಿ ಬರುತ್ತಾರೆಯೋ ಹೇಳಲಾಗದು.

‘ಕಳವು ಮಾಡಲು ತಂತ್ರಜ್ಞಾನ ಬಳಸಿಕೊಳ್ಳುವವರು’ ಎಟಿಎಂ ಕೇಂದ್ರಗಳ ಬಳಿ ಇರುವ ಭದ್ರತಾ ಲೋಪವನ್ನು ‘ದುರ್ಬಳಕೆ ಮಾಡಿಕೊಂಡು’ ಜನರ ಖಾತೆಗಳಲ್ಲಿನ ಹಣ ಲಪಟಾಯಿಸಿದರೆ ಯಾರು ಹೊಣೆ ಎನ್ನುವ ಪ್ರಶ್ನೆ ಜನರದಾಗಿದೆ.

ಕಡಿಮೆ ಇದ್ದರೂ ಪ್ರಯೋಜನವಿಲ್ಲ!
ಸವದತ್ತಿ: ಪಟ್ಟಣ ಹಾಗೂ ಮುನವಳ್ಳಿಯಲ್ಲಿ ಮಾತ್ರ ಎಟಿಎಂ ಕೇಂದ್ರಗಳಿವೆ. ಕೆಲವಷ್ಟೇ ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿವೆ. ಹೆಚ್ಚು ಜನಸಂಖ್ಯೆ ಹೊಂದಿರುವ ಉಗರಗೋಳ ಗ್ರಾಮದಲ್ಲಿ ಎಟಿಎಂ ಬೇಕು ಎನ್ನುವ ಆಗ್ರಹವಿದೆ.

ಮೂಡಲಗಿಯಲ್ಲಿ ಭದ್ರತೆ ಕೊರತೆ
ಮೂಡಲಗಿ
: ತಾಲ್ಲೂಕಿನಲ್ಲಿ ವಿವಿಧ ಬ್ಯಾಂಕ್‌ಗಳ ಎಟಿಎಂ ಕೇಂದ್ರಗಳಿವೆ. ಹಣ ಇಲ್ಲದಿರುವುದು, ಸರ್ವರ್‌ ಸಮಸ್ಯೆ ಹೀಗೆ ಒಂದಿಲ್ಲೊಂದು ಸಮಸ್ಯೆಯಿಂದ ಗ್ರಾಹಕರಿಂದ ದೂರುಗಳು ಹೆಚ್ಚಿವೆ. ಇಲ್ಲಿರುವ ಐದು ಎಟಿಎಂಗಳಲ್ಲಿ ಸದ್ಯ ಭದ್ರತೆ ಕೊರತೆ ಇದೆ. ಒಮ್ಮೆಗೆ ಹಲವು ಗ್ರಾಹಕರು ನುಗ್ಗುವುದರಿಂದ ಕೆಲ ಗ್ರಾಹಕರಿಗೆ ಇರುಸುಮುರುಸು ಆಗುತ್ತದೆ. ಭದ್ರತಾ ಸಿಬ್ಬಂದಿ ನಿಯೋಜಿಸಬೇಕು ಎಂಬ ಬೇಡಿಕೆ ಇದೆ. ಹಣ ತುಂಬುವ ಕಾರ್ಯವನ್ನು ತ್ವರಿತವಾಗಿ ಕೈಗೊಳ್ಳಬೇಕು ಎನ್ನುವುದು ಜನರ ಒತ್ತಾಯವಾಗಿದೆ.

‘ಎಸ್‌ಬಿಐನಿಂದ ಸದ್ಯ ಎರಡು ಎಟಿಎಂಗಳು ಇವೆ. ಒಂದರಲ್ಲಿ ಖಾಲಿಯಾಗಿದ್ದರೆ, ಇನ್ನೊಂದರಲ್ಲಿ ಜನರಿಗೆ ಹಣ ಲಭ್ಯವಾಗುತ್ತದೆ’ ಎಂದು ಎಸ್‌ಬಿಐ ಶಾಖಾ ಪ್ರಬಂಧಕಿ ಪ್ರತಿಭಾ ಶೆಟ್ಟಿ ತಿಳಿಸಿದರು.

ನಿಷ್ಪ್ರಯೋಜಕವೇ ಹೆಚ್ಚು
ಬೈಲಹೊಂಗಲ: ಪಟ್ಟಣದಲ್ಲಿರುವ ಬಹುತೇಕ ಎಟಿಎಂ ಕೇಂದ್ರಗಳು ನಿಷ್ಪ್ರಯೋಜಕವಾಗಿವೆ. ಇದರಿಂದ ಗ್ರಾಹಕರುಬೇಸತ್ತು ಹೋಗಿದ್ದಾರೆ. ಕೇಂದ್ರ ಬಸ್ ನಿಲ್ದಾಣ ಬಳಿಯ ಎಸ್.ಬಿ.ಐ. ಶಾಖೆಯ ಎಟಿಎಂ ಯಂತ್ರ ಹೊರತುಪಡಿಸಿ ಉಳಿದವು ವಾರದಲ್ಲಿ ಮೂರ್ನಾಲ್ಕು ಬಾರಿ ಬಂದ್ ಆಗಿಯೇ ಇರುತ್ತವೆ. ತೆರೆದಿದ್ದರೆ ಹಣ ಇರುವುದಿಲ್ಲ. ಈ ಸಮಸ್ಯೆ ಬಗೆಹರಿಸಬೇಕು ಎನ್ನುವುದು ಜನರ ಒತ್ತಾಯವಾಗಿದೆ.

ಔಟ್‌ ಆಫ್‌ ಆರ್ಡರ್‌
ಹುಕ್ಕೇರಿ:
ಹಣ ಇಲ್ಲ ಎಂಬ ನೋಟಿಸ್‌ ಬೋರ್ಡ್‌ ಇಲ್ಲಿ ಸರ್ವೇ ಸಾಮಾನ್ಯವಾಗಿದೆ. ಬಬಲಾದಿ ಗಲ್ಲಿಯ ಎಟಿಎಂ ಯಾವಾಗಲೂ ಮುಚ್ಚಿರುತ್ತದೆ. ಬೆಳಗಾವಿ ರಸ್ತೆಯಲ್ಲಿರುವ ಕೇಂದ್ರದಲ್ಲಿ ಹಣದ ಕೊರತೆ ಇರುತ್ತದೆ. ಪಟ್ಟಣದ ಕೋರ್ಟ್ ವೃತ್ತದ ಬಳಿ ಇದ್ದ ಎಟಿಎಂ ಅನ್ನು ತೆಗೆಯಲಾಗಿದೆ. ಬಹುತೇಕ ಕಚೇರಿಗಳು ಈ ಪ್ರದೇಶದಲ್ಲಿ ಇರುವುದರಿಂದ ಹಣ ಪಡೆಯಲು ಜನರಿಗೆ ಬಹಳ ತೊಂದರೆ ಆಗುತ್ತಿದೆ.

ಸಮರ್ಪಕ ನಿರ್ವಹಣೆ ಇಲ್ಲ
ರಾಮದುರ್ಗ:
ಪಟ್ಟಣದಲ್ಲಿ 9 ಮತ್ತು ಗ್ರಾಮೀಣ ಪ್ರದೇಶದಲ್ಲಿ 8 ಎಟಿಎಂ ಕೇಂದ್ರಗಳಿದ್ದರೂ ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿಲ್ಲ. ಭದ್ರತೆ ಇಲ್ಲದೆ ಅನಾಥ ಸ್ಥಿತಿಯಲ್ಲಿವೆ. ಕೆಲವನ್ನು ಸಂಜೆಯ ವೇಳೆಗಾಗಲೇ ಮುಚ್ಚಲಾಗಿರುತ್ತದೆ. ಅವುಗಳನ್ನೇ ನಂಬಿರುವ ಗ್ರಾಹಕರು ಹಣ ಡ್ರಾ ಮಾಡಿಕೊಳ್ಳಲು ಅಲೆದಾಡುವುದು ಸಾಮಾನ್ಯವಾಗಿದೆ.

ಕಾರ್ಯನಿರ್ವಹಣೆಯ ಅವಧಿ ಕಡಿಮೆ!
ಚನ್ನಮ್ಮನ ಕಿತ್ತೂರು:
ಪಟ್ಟಣದ ವಿವಿಧ ರಾಷ್ಟ್ರೀಕೃತ ಬ್ಯಾಂಕುಗಳ ಎಟಿಎಂ ಕೇಂದ್ರಗಳು ಗ್ರಾಹಕರಿಗೆ ಹೆಚ್ಚು ಜನಸ್ನೇಹಿ ಆಗಿಲ್ಲ. ಕಾರ್ಯನಿರ್ವಹಣೆಗಿಂತ ಅವು ಬಂದ್ ಆಗಿರುವ ಅವಧಿಯೇ ಹೆಚ್ಚು ಎನ್ನುವಂತಾಗಿದೆ ಎಂಬ ದೂರುಗಳು ಗ್ರಾಹಕರದಾಗಿವೆ. ಎಟಿಎಂ ಕಾರ್ಡ್ ನಂಬಿ ಹಳ್ಳಿಗಳಿಂದ ಬರುವವರು ಶಪಿಸುತ್ತಾ ಹೋಗುವ ಸ್ಥಿತಿ ಇದೆ. ಟ್ರ್ಯಾಕ್ಟರ್‌ಗೆ ಡೀಸೆಲ್, ವಾಹನಕ್ಕೆ ಪೆಟ್ರೋಲ್ ಹಾಕಿಸಲು ಎಟಿಎಂ ನಂಬಿಕೊಂಡು ಗ್ರಾಹಕರು ಕಿತ್ತೂರಿಗೆ ಬರುತ್ತಾರೆ. ಸಂಜೆ 6ರ ಕೇಂದ್ರಗಳಲ್ಲಿ ಹಣ ಸಿಗುತ್ತಿಲ್ಲ. ಎಸ್‌ಬಿಐ ಎಟಿಎಂ ಬಳಿ ಮಾತ್ರ ಭದ್ರತಾ ಸಿಬ್ಬಂದಿ ನಿಯೋಜನೆ ಇದೆ.

ಎಟಿಎಂಗಳಿಂದ ಹಣ ದುರ್ಲಭ
ಖಾನಾಪುರ:
ಬ್ಯಾಂಕ್ ಕೆಲಸದ ಅವಧಿ ಮುಗಿದ ಬಳಿಕ ಎಟಿಎಂಗಳಲ್ಲಿ ಹಣ ಸಿಗುವುದು ದುರ್ಲಭ ಎಂಬ ದೂರು ತಾಲ್ಲೂಕಿನಲ್ಲಿ ಸಾಮಾನ್ಯವಾಗಿದೆ. ರಜಾ ದಿನಗಳಲ್ಲಂತೂ ನೋ ಸರ್ವರ್ ಅಥವಾ ನೋ ಕ್ಯಾಶ್ ಫಲಕಗಳು ಕೇಂದ್ರಗಳಲ್ಲಿ ಕಾಣಸಿಗುತ್ತವೆ. ಎಟಿಎಂಗಳು ಸಮರ್ಪಕವಾಗಿ ಕಾರ್ಯನಿರ್ವಹಿಸುವಂತೆ ಮಾಡಬೇಕು ಎನ್ನುವುದು ಜನರ ಆಗ್ರಹವಾಗಿದೆ.

ಉಪವಿಭಾಗ ಕೇಂದ್ರದಲ್ಲೂ ತೊಂದರೆ
ಚಿಕ್ಕೋಡಿ:
ಉಪವಿಭಾಗದ ಕೇಂದ್ರ ಸ್ಥಾನವಾಗಿರುವ ಪಟ್ಟಣದಲ್ಲಿ ಹಲವು ಬ್ಯಾಂಕ್‌ಗಳು ಎಟಿಎಂಗಳ ಸೇವೆ ಆರಂಭಿಸಿವೆ. ಆದರೆ, ಹಲವು ಕೇಂದ್ರಗಳು ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ ಎಂಬ ಆರೋಪಗಳಿವೆ. ಬ್ಯಾಂಕ್ ಶಾಖೆಗಳ ಕಟ್ಟಡಗಳಲ್ಲಿಯೇ ಇರುವಲ್ಲಿ ಭದ್ರತಾ ಸಿಬ್ಬಂದಿ ನಿಯೋಜಿಸಲಾಗಿದೆ. ಕೆಲವು ಶಾಖೆಗಳು ಇತರ ಸ್ಥಳಗಳಲ್ಲಿ ಸ್ಥಾಪಿಸಿದ್ದು, ಸಿಸಿ ಟಿವಿ ಕ್ಯಾಮೆರಾ ಮಾತ್ರ ಅಳವಡಿಸಲಾಗಿದೆ.

‘ಚಿಕ್ಕೋಡಿ ಪಟ್ಟಣದ ಅನೇಕ ಎಟಿಎಂಗಳು ಹೆಸರಿಗೆ ಎನ್ನುವಂತಾಗಿವೆ. ಅವುಗಳಿಂದ ಜನರಿಗೆ ಅನುಕೂಲ ಆಗುತ್ತಿಲ್ಲ. ಶುಲ್ಕ ಪಡೆದರೂ ಸರಿಯಾಗಿ ಸೇವೆ ಸಿಗುತ್ತಿಲ್ಲ’ ಎಂದು ನಾಗರಿಕ ಚಂದ್ರಕಾಂತ ಹುಕ್ಕೇರಿ ತಿಳಿಸಿದರು.

‘ಜಿಲ್ಲೆಯಲ್ಲಿ ಕೆನರಾ ಬ್ಯಾಂಕ್‌ ಎಟಿಎಂಗಳಲ್ಲಿ ಹಣದ ಕೊರತೆ ಇಲ್ಲದಂತೆ ನೋಡಿಕೊಳ್ಳಲಾಗುತ್ತಿದೆ. ತಾಂತ್ರಿಕ ತೊಂದರೆ ಇದ್ದಾಗ ಪರಿಹರಿಸಲು ಸಮಯ ಬೇಕಾಗುತ್ತದೆ. ಕೆಲವು ಬ್ಯಾಂಕ್‌ಗಳ ಸರ್ವಿಸ್‌ನವರು ಹುಬ್ಬಳ್ಳಿಯಿಂದ ಬರುತ್ತಾರೆ. ಹೀಗಾಗಿ, ತಡವಾಗಬಹುದು. ಭದ್ರತಾ ಸಿಬ್ಬಂದಿ ಇಲ್ಲದಿರುವ ವಿಷಯವನ್ನು ಬ್ಯಾಂಕರ್‌ಗಳ ಸಭೆಯಲ್ಲಿ ಪ್ರಸ್ತಾಪಿಸಿ ಕ್ರಮಕ್ಕೆ ತಿಳಿಸಲಾಗುವುದು’ ಎಂದು ಜಿಲ್ಲಾ ಮಾರ್ಗದರ್ಶಿ ಬ್ಯಾಂಕ್‌ ವ್ಯವಸ್ಥಾಪಕ ವಿ. ರಾಹುಲ್ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

*
ಹುಕ್ಕೇರಿಯಲ್ಲಿ ಹೆಚ್ಚಿನ ಸರ್ಕಾರಿ ಕಚೇರಿಗಳು, ಶಾಲಾ–ಕಾಲೇಜುಗಳು, ಹೋಟೆಲ್‌ಗಳು ಸಂಕೇಶ್ವರ– ಗೋಕಾಕ ರಸ್ತೆಯ ಅಕ್ಕಪಕ್ಕದಲ್ಲಿ ಇರುವುದರಿಂದ ಅಲ್ಲಿ ಜನರ ಅನುಕೂಲಕ್ಕಾಗಿ ಎಟಿಎಂ ಸ್ಥಾಪಿಸಬೇಕು. ಹಣ ದೊರೆಯುವಂತೆ ನೋಡಿಕೊಳ್ಳಬೇಕು.
-ಎಸ್.ಎಸ್. ಕಣಗಲಿ, ನಿವೃತ್ತ ಪ್ರಾಧ್ಯಾಪಕ, ಹುಕ್ಕೇರಿ

*

ಗ್ರಾಹಕರಿಂದ ಶುಲ್ಕ ಪಡೆಯುವ ಬ್ಯಾಂಕ್‌ಗಳು ಎಟಿಎಂಗಳಲ್ಲಿ ಸಮರ್ಪಕವಾದ ಸೇವೆ ಒದಗಿಸಬೇಕು. ಜೊತೆಗೆ ಪ್ರತಿ ಕೇಂದ್ರದಲ್ಲೂ ಭದ್ರತೆ ಒದಗಿಸಲು ಕ್ರಮ ವಹಿಸಬೇಕು.
-ಚಂದ್ರಕಾಂತ ಹುಕ್ಕೇರಿ, ಚಿಕ್ಕೋಡಿ

*

ರಾತ್ರಿ ಸಮಯದಲ್ಲಿ ಅಪರಾಧ ಸಂಖ್ಯೆ ಗಣನೀಯವಾಗಿ ಏರಿಕೆ ಕಾಣುತ್ತಿರುವುದರಿಂದ ಎಟಿಎಂ ಕೇಂದ್ರಗಳನ್ನು ರಾತ್ರಿ 10ರ ನಂತರ ಮುಚ್ಚುವುದು ಅನಿವಾರ್ಯವಾಗಿದೆ.
-ಯಲ್ಲಾಲಿಂಗ ಗೂಳಪ್ಪಗೋಳ, ರಿಯಲ್‌ ಟೈಮ್ ಎಟಿಎಂ ಕೇಂದ್ರದ ನಿರ್ವಾಹಕ, ಅರಭಾವಿ

*

ಪೇಟಿಎಂ, ಫೋನ್‌ ಪೇ ಮೊದಲಾದವುಗಳನ್ನು ಬಳಸುತ್ತಿರುವುದರಿಂದ ಎಟಿಎಂ ಕೇಂದ್ರಗಳ ಮಹತ್ವ ಮತ್ತು ಅಗತ್ಯ ಹಿಂದಿನಂತೆ ಈಗ ಉಳಿದಿಲ್ಲ. ಹೀಗಾಗಿ, ಅವಲಂಬನೆ ಕಡಿಮೆಯಾಗುತ್ತಿದೆ.
-ಸುಖದೇವಸಿಂಗ್ ರಜಪೂತ, ಗೋಕಾಕ

*

(ಪ್ರಜಾವಾಣಿ ತಂಡ: ಬಸವರಾಜ ಶಿರಸಂಗಿ, ಬಾಲಶೇಖರ ಬಂದಿ, ಎನ್.ಪಿ. ಕೊಣ್ಣೂರ, ಪ್ರದೀಪ ಮೇಲಿನಮನಿ, ಸುಧಾಕರ ತಳವಾರ, ರವಿ ಎಂ.ಹುಲಕುಂದ, ಚನ್ನಪ್ಪ ಮಾದರ, ರಾಮೇಶ್ವರ ಕಲ್ಯಾಣಶೆಟ್ಟಿ, ಪ್ರಸನ್ನ ಕುಲಕರ್ಣಿ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT