ಗುರುವಾರ , ಜನವರಿ 23, 2020
27 °C

ಅತಿವೃಷ್ಟಿಯಿಂದ ಹಾಳಾದ ರಸ್ತೆ: ಶಾಲೆಯಿಂದ ದೂರ ಉಳಿದ ಮಕ್ಕಳು!

ಎಂ. ಮಹೇಶ Updated:

ಅಕ್ಷರ ಗಾತ್ರ : | |

Prajavani

ಬೆಳಗಾವಿ: ಖಾನಾಪುರ ತಾಲ್ಲೂಕಿನ ಮಾಸ್ಕೇನಹಟ್ಟಿ ಗ್ರಾಮದಲ್ಲಿ ಅತಿವೃಷ್ಟಿಯಿಂದ ಹಾಳಾದ ರಸ್ತೆ ದುರಸ್ತಿಯಾಗಿಲ್ಲ. ಕೊರಕಲುಗಳಿಂದಲೇ ಈ ರಸ್ತೆ ‘ಮುಳುಗಿ’ ಹೋಗಿದೆ. ಬಸ್‌ ಸಂಚಾರದ ವ್ಯವಸ್ಥೆಯೂ ಇಲ್ಲ. ಹೀಗಾಗಿ, ಹಲವು ಮಕ್ಕಳು ಪ್ರೌಢಶಾಲೆಯಿಂದ ದೂರ ಉಳಿದಿದ್ದಾರೆ.

– ಮಕ್ಕಳ ಹಕ್ಕುಗಳ ರಕ್ಷಣೆಯ ಹೋರಾಟದಲ್ಲಿ ಮುಂಚೂಣಿಯಲ್ಲಿರುವ ಬೆಂಗಳೂರಿನ ದಿ ಕನ್ಸರ್ನ್ಡ್ ಫಾರ್‌ ವರ್ಕಿಂಗ್‌ ಚಿಲ್ಡ್ರನ್‌ (ಸಿಡಬ್ಯುಸಿ) ಸಂಸ್ಥೆ ಪ್ರತಿನಿಧಿಗಳು, ಜಿಲ್ಲೆಯಲ್ಲಿ ಹಲವು ವರ್ಷಗಳಿಂದ ಕೂಲಿಕಾರ್ಮಿಕರು ಮತ್ತು ಸಮುದಾಯದವರ ಹಕ್ಕುಗಳಿಗಾಗಿ ಶ್ರಮಿಸುತ್ತಿರುವ ಜಾಗೃತ ಮಹಿಳಾ ಒಕ್ಕೂಟದ ಸದಸ್ಯರು ಹಾಗೂ ಗ್ರಾಮೀಣ ಕೂಲಿಕಾರ್ಮಿಕರ ಸಂಘಟನೆ ಕಾರ್ಯಕರ್ತರು ನಡೆಸಿದ ಸಮೀಕ್ಷೆಯಲ್ಲಿ ಈ ಪ್ರಮುಖ ಅಂಶವನ್ನು ಗುರುತಿಸಿದ್ದಾರೆ.

ಅತಿವೃಷ್ಟಿಯಿಂದಾಗಿ ಆಸ್ತಿ–ಪಾಸ್ತಿ ಮಾತ್ರವಲ್ಲದೇ, ಮಕ್ಕಳ ಶಿಕ್ಷಣದ ಮೇಲೆ ದುಷ್ಪರಿಣಾಮ ಆಗಿರುವುದು ಹಾಗೂ ಅವರ ಹಕ್ಕುಗಳ ಉಲ್ಲಂಘನೆ ಆಗುತ್ತಿರುವುದು ಕಂಡುಬಂದಿದೆ. 4 ತಿಂಗಳುಗಳು ಕಳೆದರೂ ರಸ್ತೆಗಳ ದುರಸ್ತಿಗೆ ಅಧಿಕಾರಿಗಳು ಆದ್ಯತೆ ನೀಡದಿರುವ ಪರಿಣಾಮವಿದು.

ಎಲ್ಲರೂ ನಿಲ್ಲಿಸಬಹುದು:

‘ಮಾಸ್ಕೇನಹಟ್ಟಿಯ ನಾಲ್ವರು ಹೆಣ್ಣು ಮಕ್ಕಳು ಹಾಗೂ ನಾಲ್ವರು ಬಾಲಕರು ಪ್ರೌಢಶಿಕ್ಷಣವನ್ನು ನಿಲ್ಲಿಸಿದ್ದಾರೆ. ಉಳಿದ 20 ಮಕ್ಕಳು ನಡೆದುಕೊಂಡೇ ಹೋಗುತ್ತಿದ್ದಾರೆ. ಅವರು ಶಾಲೆ ಮುಗಿಸಿಕೊಂಡು ಮನೆಗೆ ಬರುವುದಕ್ಕೆ ರಾತ್ರಿ 9 ಗಂಟೆಯಾಗುತ್ತಿದೆ. ಮುಂದೆ ಅವರೂ ಶಾಲಾ ಶಿಕ್ಷಣ ನಿಲ್ಲಿಸುವ ಸಾಧ್ಯತೆ ಇದೆ’ ಎಂದು ಸಿಡಬ್ಲ್ಯುಸಿ ಸಂಸ್ಥೆ ನಿರ್ದೇಶಕಿ ಕವಿತಾ ರತ್ನ ಆತಂಕ ವ್ಯಕ್ತಪಡಿಸಿದರು.

‘ಮಾಸ್ಕೇನಹಟ್ಟಿಯ ಗೋಮಾರಹಳ್ಳಕ್ಕೆ ಸೇತುವೆ ಇಲ್ಲದಿರುವುದರಿಂದ ಅನೇಕ ಕೃಷಿಕರು 15 ದಿನಗಳವರೆಗೆ ನೆರೆಯಲ್ಲಿ ಸಿಲುಕಿದ್ದರು. ಈ ದಾರಿಯಲ್ಲಿಯೇ ಜನರು ಅಗತ್ಯವಿರುವ ಹಾಲು, ದಿನಸಿ ಸಾಮಗ್ರಿ ಮೊದಲಾದವುಗಳನ್ನು ಕೊಳ್ಳಲು ಪಕ್ಕದ ಸೋನನಹಟ್ಟಿಗೆ ಹೋಗಬೇಕು. ಮತ್ತು ಈ ದಾರಿಯನ್ನೇ ಬಳಸಿ ಶಿಕ್ಷಕರು ಶಾಲೆಗೆ ಬರುತ್ತಾರೆ. ನೆರೆಯಿಂದಾಗಿ ಇವರೆಲ್ಲರೂ ತೀವ್ರವಾದ ಸಮಸ್ಯೆ ಅನುಭವಿಸಿದ್ದಾರೆ. ಅಲ್ಲಿ ಮತ್ತೊಮ್ಮೆ ಮಳೆ ಬಂದಲ್ಲಿ ಸಮಸ್ಯೆ ಬಿಗಡಾಯಿಸುವುದರಲ್ಲಿ ಸಂಶಯವಿಲ್ಲ’ ಎಂದು ತಿಳಿಸಿದರು.

ಕ್ರಮಕ್ಕೆ ಆಗ್ರಹ:

‘ಮಕ್ಕಳ ಗ್ರಾಮಸಭೆ ನಡೆಸಿಲ್ಲ. ನಡೆದಿರುವ ಕಡೆಗಳಲ್ಲಿ, ಗ್ರಾಮ ಪಂಚಾಯಿತಿಗಳಿಂದ ದೂರದಲ್ಲಿರುವ ಮಕ್ಕಳಿಗೆ ಭಾಗವಹಿಸಲು ಸಾಧ್ಯವಾಗಿಲ್ಲ ಎಂಬ ಮಾಹಿತಿ ಇದೆ. 14 ವರ್ಷ ಮೇಲ್ಪಟ್ಟ ಮಕ್ಕಳಿಗೆ ಯಾವುದೇ ವೃತ್ತಿ ತರಬೇತಿ ಹಾಗೂ ವೃತ್ತಿಯ ಅವಕಾಶಗಳಿಲ್ಲ. ಹೀಗಾಗಿ, ಅವರು ಖಾನಾಪುರ ಹಾಗೂ ಕೊಲ್ಹಾಪುರಕ್ಕೆ ವಲಸೆ ಹೋಗುತ್ತಿದ್ದಾರೆ. ಪ್ರೌಢಶಾಲೆಯಲ್ಲಿ ನೀಡುವ ಮಧ್ಯಾಹ್ನದ ಬಿಸಿಯೂಟ ಗುಣಮಟ್ಟದಿಂದ ಕೂಡಿರಲಿಲ್ಲ. ಆ ಭಾಗದ ಶಾಲೆಗಳ ಶೌಚಾಲಯಗಳು ಬಳಸುವುದಕ್ಕೆ ಆಗುವಂತಿಲ್ಲ. ನೀರಿನ ಅಭಾವವೂ ಇದೆ. ಬಾಲ್ಯವಿವಾಹ ನಡೆದ ಪ್ರಕರಣಗಳು ಕೂಡ ಸಮೀಕ್ಷೆ ವೇಳೆ ತಿಳಿದುಬಂದಿದೆ’ ಎಂದು ಮಾಹಿತಿ ನೀಡಿದರು.

‘ರಸ್ತೆಗಳ ನಿರ್ಮಾಣ ಹಾಗೂ ಬಸ್‌ ಸಂಚಾರಕ್ಕೆ ಕ್ರಮ ಕೈಗೊಳ್ಳಬೇಕು. ಮಾಸ್ಕೇನಹಟ್ಟಿ ಗೋಮಾರಹಳ್ಳಕ್ಕೆ ಶೀಘ್ರವೇ ಸೇತುವೆ ನಿರ್ಮಿಸಬೇಕು. ಮಕ್ಕಳ ಗ್ರಾಮಸಭೆ ನಡೆಸಬೇಕು. ದುಡಿಯುವವರು, ಅಂಗವಿಕಲರು, ಬಾಲ್ಯವಿವಾಹ ಅನುಭವಿಸಿರುವವರು ಸೇರಿದಂತೆ ಎಲ್ಲ ಮಕ್ಕಳ ಭಾಗವಹಿಸುವಿಕೆ ಖಚಿತಗೊಳಿಸಬೇಕು. ಅವರ ಹಕ್ಕುಗಳನ್ನು ಕಾಪಾಡಬೇಕು. ಶಾಲೆಗಳಲ್ಲಿ ಶೌಚಾಲಯಗಳನ್ನು ನಿರ್ಮಿಸಬೇಕು’ ಎಂದು ಒತ್ತಾಯಿಸಿದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು