ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಡ್ಡ ಪರಿಣಾಮದ ವರದಿಯಾಗಿಲ್ಲ: ಡಿಎಚ್‌ಒ ಮಾಹಿತಿ

ಜಿಲ್ಲೆಯಲ್ಲಿ ಕೋವಿಡ್ ಲಸಿಕೆ ಅಭಿಯಾನಕ್ಕೆ ಚಾಲನೆ
Last Updated 16 ಜನವರಿ 2021, 14:28 IST
ಅಕ್ಷರ ಗಾತ್ರ

ಬೆಳಗಾವಿ: ಬಹುನಿರೀಕ್ಷಿತ ಕೋವಿಡ್ ಲಸಿಕೆ ಅಭಿಯಾನಕ್ಕೆ ಜಿಲ್ಲೆಯಲ್ಲಿ ಶನಿವಾರ ಚಾಲನೆ ನೀಡಲಾಯಿತು.

ನಗರದ ಜಿಲ್ಲಾಸ್ಪತ್ರೆ, ಕೆ.ಎಲ್.ಇ. ಆಸ್ಪತ್ರೆ, ವಂಟಮೂರಿ ನಗರ ಪ್ರಾಥಮಿಕ ಆರೋಗ್ಯ ಕೇಂದ್ರ ಸೇರಿದಂತೆ 13 ಕಡೆಗಳಲ್ಲಿ ಸರ್ಕಾರದ ಮಾರ್ಗಸೂಚಿ ಪ್ರಕಾರ ಈಗಾಗಲೇ ಗುರುತಿಸಲಾದ ಆಯ್ದ ಆರೋಗ್ಯ ಕಾರ್ಯಕರ್ತರಿಗೆ (ಕೊರೊನಾ ಸೇನಾನಿಗಳು) ಲಸಿಕೆ ನೀಡಲಾಯಿತು. ನಿಯೋಜಿತ ಸಿಬ್ಬಂದಿಯು ಲಸಿಕೆ ನೀಡಿ, ಅವರನ್ನು ಅರ್ಧ ಗಂಟೆವರೆಗೆ ನಿಗಾದಲ್ಲಿರಿಸಿ ಆರೋಗ್ಯ ಸ್ಥಿತಿಯನ್ನು ಪರಿಶೀಲಿಸಿದರು. ಪ್ರಕ್ರಿಯೆಯನ್ನು ಕೇಂದ್ರ ಸರ್ಕಾರ ನೀಡಿರುವ ತಂತ್ರಾಂಶದಲ್ಲಿ ದಾಖಲಿಸಿದರು.

ಜಿಲ್ಲಾಸ್ಪತ್ರೆಯಲ್ಲಿ ಶಾಸಕರಾದ ಅಭಯ ಪಾಟೀಲ ಹಾಗೂ ಅನಿಲ ಬೆನಕೆ ಸಮ್ಮುಖದಲ್ಲಿ ಬಿಮ್ಸ್ ಸಿಬ್ಬಂದಿ ರಮೇಶ್ ಕುಂಬಾರ ಅವರಿಗೆ ‘ಕೋವಿಶೀಲ್ಡ್’ ಲಸಿಕೆ ಕೊಟ್ಟರು. ಅವರೊಂದಿಗೆ ಲಸಿಕೆ ಪಡೆದ ಎಲ್ಲರನ್ನೂ ವೀಕ್ಷಣಾ ಕೊಠಡಿಯಲ್ಲಿರಿಸಿ ಆರೋಗ್ಯ ಸ್ಥಿತಿಗತಿಯ ಮೇಲೆ ನಿಗಾ ವಹಿಸಲಾಯಿತು.

‘ಜಿಲ್ಲೆಯಲ್ಲೇ ಮೊದಲ ಬಾರಿಗೆ ನಾನು ಲಸಿಕೆ ತೆಗೆದುಕೊಂಡಿದ್ದಕ್ಕೆ ಖುಷಿಯಾಗಿದೆ. ಕೊರೊನಾ ವಿರುದ್ಧವೇ ಹೋರಾಡಿದ್ದೇವೆ. ಹೀಗಿರುವಾಗ ಲಸಿಕೆ ಪಡೆದುಕೊಳ್ಳಲು ಆತಂಕ ಏನೂ ಆಗಲಿಲ್ಲ.ಲಸಿಕೆಯ ಉಪಯೋಗವನ್ನು ಜನರು ಪಡೆದುಕೊಳ್ಳಬೇಕು. ತ್ವರಿತವಾಗಿ ದೊರೆಯುವಂತೆ ಮಾಡಿದ್ದಕ್ಕೆ ಸರ್ಕಾರಕ್ಕೆ ಧನ್ಯವಾದ ಸಲ್ಲಿಸುತ್ತೇನೆ’ ಎಂದು ರಮೇಶ್ ಕುಂಬಾರ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

ಡಿಎಚ್ಒ ಡಾ.ಎಸ್.ವಿ. ಮುನ್ಯಾಳ, ಬಿಮ್ಸ್ ವೈದ್ಯಕೀಯ ನಿರ್ದೇಶಕ ಡಾ.ವಿನಯ್ ದಾಸ್ತಿಕೊಪ್ಪ, ಆಡಳಿತಾಧಿಕಾರಿ ಎಸ್.ಎಸ್. ಬಳ್ಳಾರಿ ಮೊದಲಾದವರು ಭಾಗವಹಿಸಿದ್ದರು.

ಚಪ್ಪಾಳೆ ಮೂಲಕ ಹರ್ಷ:ಅಥಣಿಯ ತಾಲ್ಲೂಕು ಆಸ್ಪತ್ರೆಯಲ್ಲಿ ಕೋವಿಡ್-19 ವಿರುದ್ಧದ ಲಸಿಕೆ ಕಾರ್ಯಕ್ರಮವನ್ನು ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಪರಿಶೀಲಿಸಿದರು. ಸಿಬ್ಬಂದಿಗೆ ಲಸಿಕೆ ಹಾಕುವ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಚಪ್ಪಾಳೆ ಮೂಲಕ ಸಂತಸ ವ್ಯಕ್ತಪಡಿಸಿದರು. ಈ ಮೂಲಕ ಸಿಬ್ಬಂದಿಯನ್ನು ಹುರಿದುಂಬಿಸಿದರು.

‘ಕೋವಿಡ್ ಲಸಿಕೆ ನೀಡಿಕೆಗೆ ಸಂಬಂಧಿಸಿದಂತೆ ಆರೋಗ್ಯ ಇಲಾಖೆಯು ನೀಡಿರುವ ಸಲಹೆ-ಸೂಚನೆಗಳನ್ನು ಮತ್ತು ಮಾರ್ಗದರ್ಶಿ ಸೂತ್ರಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು’ ಎಂದು ಆರೋಗ್ಯ ಇಲಾಖೆ ಸಿಬ್ಬಂದಿಗೆ ಸೂಚಿಸಿದರು.

ಜಿಲ್ಲಾ ಪಂಚಾಯ್ತಿ ಸಿಇಒ ದರ್ಶನ್ ಎಚ್.ವಿ., ಆರೋಗ್ಯ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

ಬಿಮ್ಸ್, ಕೆ.ಎಲ್.ಇ. ಆಸ್ಪತ್ರೆ ಆಸ್ಪತ್ರೆ, ವಂಟಮೂರಿನ ನಗರ ಪ್ರಾಥಮಿಕ ಆರೋಗ್ಯ ಕೇಂದ್ರ, ಅಥಣಿ, ಬೈಲಹೊಂಗಲ, ಚಿಕ್ಕೋಡಿ, ಗೋಕಾಕ, ಹುಕ್ಕೇರಿ, ಖಾನಾಪುರ, ರಾಯಬಾಗ, ರಾಮದುರ್ಗ, ಸವದತ್ತಿ, ಗೋಕಾಕ ತಾಲ್ಲೂಕಿನ ಕೊಣ್ಣೂರ ಸರ್ಕಾರಿ ಆಸ್ಪತ್ರೆಯ ಕೇಂದ್ರಗಳಲ್ಲಿ ಅಭಿಯಾನ ನಡೆಯಿತು.

‘ಪ್ರತಿ ಕೇಂದ್ರದಲ್ಲೂ ವೈದ್ಯರು, ವೈದ್ಯಕೀಯ ಸಿಬ್ಬಂದಿ, ನರ್ಸ್, ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರು ಸೇರಿದಂತೆ ನಿಗದಿತ ದಿನಗಳಲ್ಲಿ ನೂರು‌ ಜನರಿಗೆ ಲಸಿಕೆ ನೀಡಲಾಗುತ್ತದೆ’ ಎಂದು ಜಿಲ್ಲಾ ಲಸಿಕಾ ಅಧಿಕಾರಿ ಡಾ.ಐ.ಪಿ. ಗಡಾದ ಮಾಹಿತಿ ನೀಡಿದರು.

‘ಕೊರೊನಾಕ್ಕೆ ಹೆದರಬೇಕಿಲ್ಲ’

ಅಥಣಿ: ‘ಇನ್ಮುಂದೆ ಕೊರೊನಾಕ್ಕೆ ಹೆದರುವ ಅವಶ್ಯಕತೆ ಇಲ್ಲ’ ಎಂದು ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಹೇಳಿದರು.

ಇಲ್ಲಿ ಶನಿವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ‘ಪ್ರಧಾನಿ ನರೇಂದ್ರ ಮೋದಿ ಅವರ ಸತತ ಮೇಲ್ವಿಚಾರಣೆಯಿಂದಾಗಿ ಲಸಿಕೆ ದೊರೆತಿದೆ. ಲಸಿಕೆ ಸಿದ್ಧಪಡಿಸಿದ ವಿಜ್ಞಾನಿಗಳಿಗೆ ಅಭಿನಂದನೆ ಸಲ್ಲಿಸುತ್ತೇನೆ. ಅದರಲ್ಲೂ ಸ್ವದೇಶಿ ಲಸಿಕೆ ಜಗತ್ತಿನಲ್ಲೇ ಕ್ರಾಂತಿ ಮಾಡಲಿದೆ’ ಎಂದರು.

‘ಡಿ’ ದರ್ಜೆ ನೌಕರರಿಗೆ ಆದ್ಯತೆ: ಜಿಲ್ಲಾಧಿಕಾರಿ

ಅಥಣಿ: ‘ಮೊದಲ ಹಂತದಲ್ಲಿ ಕೊರೊನಾ ಸೇನಾನಿಗಳಿಗೆ ಅದರಲ್ಲೂ ‘ಡಿ’ ದರ್ಜೆ ನೌಕರರಿಗೆ ಕೋವಿಡ್ ಲಸಿಕೆ ಕೊಡಲಾಗುತ್ತಿದೆ’ ಎಂದು ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ತಿಳಿಸಿದರು.

ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಲಸಿಕಾ ಕೇಂದ್ರ ಉದ್ಘಾಟಿಸಿ ಮಾತನಾಡಿದರು.

ತಾಲ್ಲೂಕು ವೈದ್ಯಾಧಿಕಾರಿ ಬಸವರಾಜ ಕಾಗೆ, ‘ಲಸಿಕೆ ಪಡೆಯಲು ಸಿಬ್ಬಂದಿ ಹಿಂದೇಟು ಹಾಕುತ್ತಿಲ್ಲ’ ಎಂದರು.

ಲಸಿಕೆ ಪಡೆದ ಮಂಜುನಾಥ ನೂಲಿ, ‘ಮೊದಲಿಗೆ ಲಸಿಕೆ ಹಾಕಿಸಿಕೊಂಡಿಕ್ಕೆ ಖುಷಿಯಾಗಿದೆ. ಯಾವುದೇ ಭಯವಿಲ್ಲದೆ ತೆಗೆದುಕೊಂಡೆ. ಸಾಮಾನ್ಯವಾಗಿ ತೆಗೆದುಕೊಳ್ಳುವ ಚುಚ್ಚುಮದ್ದಿನ ರೀತಿಯಲ್ಲಿ ಇರುವುದರಿಂದ ಆತಂಕಪಡುವ ಅಗತ್ಯವಿಲ್ಲ’ ಎಂದು ಪ್ರತಿಕ್ರಿಯಿಸಿದರು.

ಅಂಗನವಾಡಿ ಮೇಲ್ವಿಚಾರಕಿ ಸವಿತಾ ಶಾಸ್ತ್ರಿಮಠ, ‘ಆರೋಗ್ಯ ಇಲಾಖೆಯಿಂದ ಸಂದೇಶ ಬಂದಿತ್ತು. ಲಸಿಕೆ ಪಡೆದಿದ್ದೇನೆ. ಯಾವುದೇ ಅಡ್ಡ ಪರಿಣಾಮ ಆಗಿಲ್ಲ’ ಎಂದರು.

ಸಿಎಂಒ ಡಾ.ಸಿ.ಎಸ್. ಪಾಟೀಲ, ಡಾ.ಸಂಜೀವಕುಮಾರ ಗುಂಜಿಗಾಂವಿ, ಡಾ.ವಿಜಯ, ಪ್ರಕಾಶ ನರಟ್ಟಿ, ಅಡಿವಯ್ಯ ಹಿರೇಮಠ, ಪ್ರಶಾಂತ ಮಗದುಮ್, ನವೀನ್ ಕಾತ್ರಾಳ, ಡಿವೈಎಸ್ಪಿ ಎಸ್.ವಿ. ಗಿರೀಶ್,ಸಿಪಿಐ ಶಂಕರಗೌಡ ಇದ್ದರು.

***

ಲಸಿಕೆ ನೀಡುವ ಅಭಿಯಾನ ಮೊದಲ ದಿನ ಸಂಪೂರ್ಣವಾಗಿ ಯಶಸ್ವಿಯಾಗಿದೆ. ಎಲ್ಲ ಪ್ರಕ್ರಿಯೆಯೂ ಸುಗಮವಾಗಿ ನಡೆದಿದೆ. ಯಾರಿಗೂ ಅಡ್ಡ ಪರಿಣಾಮ ಆದ ಬಗ್ಗೆ ವರದಿಯಾಗಿಲ್ಲ

- ಡಾ.ಎಸ್.ವಿ. ಮುನ್ಯಾಳ,ಡಿಎಚ್‌ಒ, ಬೆಳಗಾವಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT