ಭಾನುವಾರ, 21 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಚಿಕ್ಕೋಡಿ: ₹18 ಲಕ್ಷಕ್ಕೆ ಎತ್ತು ಖರೀದಿ

Published 2 ಜುಲೈ 2024, 15:53 IST
Last Updated 2 ಜುಲೈ 2024, 15:53 IST
ಅಕ್ಷರ ಗಾತ್ರ

ಚಿಕ್ಕೋಡಿ: ವಿಜಯಪುರ ಜಿಲ್ಲೆಯ ಬಬಲೇಶ್ವರ ತಾಲ್ಲೂಕಿನ ಬಬಲಾದಿಯ ದ್ಯಾವನಗೌಡ ಪಾಟೀಲ ಅವರು ಸಾಕಿದ ಎತ್ತನ್ನು ರಾಯಬಾಗ ತಾಲ್ಲೂಕಿನ ಇಡ್ನಾಳ ಗ್ರಾಮದ ರೈತ ಸದಾಶಿವ ಢಾಂಗೆ ಅವರು ₹ 18 ಲಕ್ಷಕ್ಕೆ ಖರೀದಿಸಿದ್ದಾರೆ.

ಆರು ವರ್ಷ ವಯಸ್ಸಿನ ಈ ಎತ್ತಿನ ಮೂಲ ಹೆಸರು ‘ಹಿಂದೂಸ್ತಾನ್‌’. ಈಗ ರೈತ ಇಟ್ಟ ಹೆಸರು ‘ಟೈಗರ್‌’. ಶರ್ಯತ್ತಿನಲ್ಲಿ ಇದರ ಹೆಸರು ಚಿರತೆ.

ದ್ಯಾವನಗೌಡ ಅವರು ಇದನ್ನು ಮೂರು ವರ್ಷ ವಯಸ್ಸಿನ ಕರು ಇದ್ದಾಗ ₹1 ಲಕ್ಷಕ್ಕೆ ಖರೀದಿಸಿದ್ದರು. ಮೂರೇ ವರ್ಷಗಳಲ್ಲಿ ಅದು ₹17 ಲಕ್ಷ ಲಾಭ ಮಾಡಿಕೊಟ್ಟಿದೆ. ದಿನವೂ ಎರಡು ಹೊತ್ತು ಮೈ ತೊಳೆದು, ಹಾಲು, ಮೊಟ್ಟೆ, ಕಾರೀಖು, ಗೋಡಂಬಿ, ಜವಿಗೋಧಿ, ಗೋವಿನ ಜೋಳ, ಹಸಿರು ಮೇವು ಮುಂತಾದವು ತಿನ್ನಿಸಿ ಪೈಲ್ವಾನನಂತೆ ಬೆಳೆಸಿದ್ದಾರೆ.

ತೆರೆದ ಬಂಡಿ ಓಟದ ಸ್ಪರ್ಧೆಯಲ್ಲಿ ಈ ಎತ್ತು ದಾಖಲೆ ಬರೆದಿದೆ. ಮೂರು ವರ್ಷಗಳಲ್ಲಿ 25 ಮೈದಾನಗಳಲ್ಲಿ ಓಡಿ ಬಹುಮಾನ ಗಿಟ್ಟಿಸಿದೆ. ಈವರೆಗೆ 60 ಗ್ರಾಂ ಚಿನ್ನ, 4 ಬೈಕ್, ₹10 ಲಕ್ಷಕ್ಕೂ ಅಧಿಕ ನಗದು ಗೆದ್ದಿದೆ. ರಾಜ್ಯದ ಬೆಳಗಾವಿ, ಬಾಗಲಕೋಟೆ, ವಿಜಯಪುರ ಹಾಗೂ ಮಹಾರಾಷ್ಟ್ರದ ಜತ್, ಉಮರಾಣಿ, ಬಿಳ್ಳೂರ ಮುಂತಾದ ಕಡೆಗೆ ಮೈದಾನಗಳಲ್ಲಿ ‘ಟೈಗರ್‌’ ದಾಖಲೆ ಬರೆದಿದೆ.

ಜೂನ್‌ನಲ್ಲಿ ಮೂಡಲಗಿಯ ಶಿವಬೋಧರಂಗ ಜಾತ್ರೆಯಲ್ಲಿ ಸದಾಶಿವ ಢಾಂಗೆ ಅವರ ‘ಸಿದ್ಧ’ ಎಂಬ ಎತ್ತು ಹಾಗೂ ಇದೀಗ ಖರೀದಿಸಿದ ‘ಟೈಗರ್’ ಜೋಡೆತ್ತಿನ ಸ್ಪರ್ಧೆಯಲ್ಲಿ ಪ್ರಥಮ ಬಂದಿವೆ. ₹50 ಸಾವಿರ ನಗದು ಬಹುಮಾನ ಗೆದ್ದಿವೆ. ಬಾಗಲಕೋಟೆ ಜಿಲ್ಲೆಯ ಕೆಸರಕೊಪ್ಪದಲ್ಲಿ ಕೂಡ ₹50 ಸಾವಿರ ಗೆದ್ದಿವೆ.

‘ಟೈಗರ್‌ ಎತ್ತನ್ನು ₹18 ಲಕ್ಷಕ್ಕೆ ಖರೀದಿಸಿದ್ದೇನೆ. ‘ಸಿದ್ಧ’ ಎತ್ತಿಗೂ ಮಹಾರಾಷ್ಟ್ರದ ಪುಣೆ ಮೂಲದ ರೈತರೊಬ್ಬರು ₹21 ಲಕ್ಷ ಬೆಲೆ ಕಟ್ಟಿದ್ದರು. ಆದರೂ ನಾನು ಮಾರಲಿಲ್ಲ’ ಎಂದು ಇಟ್ನಾಳ ರೈತ ಸದಾಶಿವ ಢಾಂಗೆ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT