ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಣಿ ಚನ್ನಮ್ಮ ಮೃಗಾಲಯದ ಪ್ರವೇಶ ಶುಲ್ಕ: ಐದು ಪಟ್ಟು ಹೆಚ್ಚಳಕ್ಕೆ ಪ್ರಸ್ತಾವ

Last Updated 5 ಮಾರ್ಚ್ 2021, 19:30 IST
ಅಕ್ಷರ ಗಾತ್ರ

ಬೆಳಗಾವಿ: ತಾಲ್ಲೂಕಿನ ಭೂತರಾಮನಹಟ್ಟಿಯಲ್ಲಿರುವ ರಾಣಿ ಚನ್ನಮ್ಮ ಕಿರು ಮೃಗಾಲಯಕ್ಕೆ ಮೂರು ಸಿಂಹಗಳನ್ನು ತಂದು, ಪ್ರವಾಸಿಗರನ್ನು ಆಕರ್ಷಿಸಲು ಕ್ರಮ ವಹಿಸುತ್ತಿದ್ದಂತೆಯೇ ಪ್ರವೇಶ ಶುಲ್ಕವನ್ನು ದುಪ್ಪಟ್ಟು ಮಾಡಲು ಅಧಿಕಾರಿಗಳು ಪ್ರಸ್ತಾವ ಸಲ್ಲಿಸಿದ್ದಾರೆ.

ವಾರದಲ್ಲಿ ಮಂಗಳವಾರ ರಜೆ ಹೊರತುಪಡಿಸಿದರೆ ಉಳಿದಂತೆ ಈ ಮೃಗಾಲಯ ಸಾರ್ವಜನಿಕರ ವೀಕ್ಷಣೆಗೆ ಮುಕ್ತವಾಗಿರುತ್ತದೆ. ಪ್ರಸ್ತುತ ಮಕ್ಕಳಿಗೆ ₹ 10 ಹಾಗೂ ವಯಸ್ಕರಿಗೆ ₹ 20 ಪ್ರವೇಶ ಶುಲ್ಕ ಪಡೆಯಲಾಗುತ್ತಿದೆ. ಅದನ್ನು ಒಮ್ಮೆಲೆ ಐದು ಪಟ್ಟು ಅಂದರೆ ₹ 50ಕ್ಕೆ ಮತ್ತು ₹100ಕ್ಕೆ ಹೆಚ್ಚಿಸಲು ಪ್ರಸ್ತಾವ ಸಲ್ಲಿಸಲಾಗಿದೆ. ಇದಕ್ಕೆ ಸರ್ಕಾರದಿಂದ ಅನುಮತಿ ದೊರೆತಲ್ಲಿ, ಝೂಗೆ ಭೇಟಿ ನೀಡುವ ಪ್ರವಾಸಿಗರು ಅಥವಾ ಸಂದರ್ಶಕರು ಹೆಚ್ಚಿನ ಶುಲ್ಕವನ್ನು ತೆರಬೇಕಾಗುತ್ತದೆ.

1989ರ ಅ.2ರಂದು ಸ್ಥಾಪನೆಯಾದ ಈ ಮೃಗಾಲಯ ನಗರದಿಂದ 12 ಕಿ.ಮೀ. ದೂರದಲ್ಲಿದೆ. ಪುಣೆ–ಬೆಂಗಳೂರು ರಾಷ್ಟ್ರೀಯ ಹೆದ್ದಾರಿ–4ರಲ್ಲಿ ಇರುವುದು ವಿಶೇಷ. ಪ್ರಸ್ತುತ ಕೃಷ್ಣ ಮೃಗಗಳು, ಕೊಂಡು ಕುರಿಗಳು, ಮೊಸಳೆಗಳು, ಆಮೆ ಹಾಗೂ 6 ರೀತಿಯ ಪಕ್ಷಿಗಳಿವೆ. ಅವುಗಳ ಮಾಹಿತಿಯನ್ನು ನೀಡಲಾಗುತ್ತಿದೆ. ಇದಲ್ಲದೆ, ವಿವಿಧ ಬಗೆಯ ಪಕ್ಷಿಗಳ ಆವಾಸ ಸ್ಥಾನವೂ ಆಗಿದೆ. ಇದನ್ನು ವೀಕ್ಷಿಸಲು ಶಾಲಾ–ಕಾಲೇಜುಗಳ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಾರೆ. ವಾರಾಂತ್ಯದಲ್ಲಿ ಕುಟುಂಬ ಸಮೇತ ಬಂದು, ಮಕ್ಕಳೊಂದಿಗೆ ಆಡುತ್ತಾ ಕಾಲ ಕಳೆಯುವವರು ಕಾಣಸಿಗುತ್ತಾರೆ.

ಅನಿವಾರ್ಯವಾಗಿದೆ: ‘ಇಲ್ಲಿಗೆ ಇತ್ತೀಚೆಗೆ ಮೂರು ಸಿಂಹಗಳನ್ನು ತರಿಸಲಾಗಿದೆ. ಮುಂದೆ, ಚಿರತೆ, ಹುಲಿ, ಕರಡಿಗಳನ್ನು ತರಿಸಲಾಗುವುದು. ಶೀಘ್ರವೇ ಆರಂಭಗೊಳ್ಳಲಿರುವ ಹುಲಿ ಸಫಾರಿಗೆ (ಮೃಗಾಲಯದೊಳಗೆ ನಿಗದಿತ ಮಾರ್ಗದಲ್ಲಿ ವಾಹನಗಳಲ್ಲಿ ಹೋಗಿ ವೀಕ್ಷಣೆ) ಬೇಕಾದ ಕಾಂಪೌಂಡ್, ರಸ್ತೆ ಮೊದಲಾದವುಗಳನ್ನು ಮಾಡಲಾಗಿದೆ. ಹಲವು ಅಭಿವೃದ್ಧಿ ಕಾಮಗಾರಿಗಳು ನಡೆದಿವೆ; ಪ್ರಗತಿಯಲ್ಲಿವೆ. ಕೋವಿಡ್–19 ಲಾಕ್‌ಡೌನ್‌ ಕಾರಣದಿಂದ ಪ್ರವಾಸಿಗರ ಸಂಖ್ಯೆಯಲ್ಲಿ ಗಣನೀಯವಾಗಿ ಕಡಿಮೆ ಆಗಿರುವುದರಿಂದ ಮೃಗಾಲಯದ ಆದಾಯವೂ ಕಡಿಮೆಯಾಗಿದೆ. ಸಿಂಹಗಳನ್ನು ತರಿಸಿರುವುದರಿಂದ ಅವುಗಳ ಪಾಲನೆ–ಪೋಷಣೆಗೆ ಹೆಚ್ಚಿನ ವೆಚ್ಚ ಆಗುತ್ತದೆ. ಹೀಗಾಗಿ, ಪ್ರವೇಶ ಶುಲ್ಕ ಹೆಚ್ಚಿಳ ಅನಿವಾರ್ಯವಾಗಿದೆ. ಬಹಳ ವರ್ಷಗಳಿಂದ ಹೆಚ್ಚಿಸಿರಲಿಲ್ಲ. ಈಗಿನ ಪ್ರಸ್ತಾವಕ್ಕೆ ಅನುಮೋದನೆ ಸಿಕ್ಕ ಕೂಡಲೇ ಪರಿಷ್ಕೃತ ಶುಲ್ಕ ಅನ್ವಯ ಆಗಲಿದೆ’ ಎಂದು ಬೆಳಗಾವಿ ವೃತ್ತದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಬಸವರಾಜ ಪಾಟೀಲ ‘ಪ್ರಜಾವಾಣಿ’ಗೆ ತಿಳಿಸಿದರು.

‘ಸಿಂಹಗಳನ್ನು ಬನ್ನೇರಘಟ್ಟ ಜೈವಿಕ ಉದ್ಯಾನದಿಂದ ತರಿಸಲಾಗಿದ್ದು, ಅವುಗಳ ಮೇಲೆ ನಿಗಾ ವಹಿಸಲಾಗಿದೆ. ಇಲ್ಲಿನ ವಾತಾವರಣಕ್ಕೆ ಹೊಂದಿಕೊಳ್ಳುತ್ತಿವೆ. ಎರಡು ತಿಂಗಳ ನಂತರ ಸಾರ್ವಜನಿಕರ ವೀಕ್ಷಣೆಗೆ ಮುಕ್ತಗೊಳಿಸಲಾಗುವುದು. ಅವುಗಳ ರಕ್ಷಣೆ ಹಾಗೂ ಅವುಗಳನ್ನು ಪ್ರವಾಸಿಗರು ಸುರಕ್ಷಿತವಾಗಿ ವೀಕ್ಷಿಸಲು ಬೇಕಾಗುವ ವ್ಯವಸ್ಥಯನ್ನು ಮಾಡಿಕೊಳ್ಳಲಾಗಿದೆ. ಮೃಗಾಲಯದ ಪ್ರಾಧಿಕಾರದ ಮಾರ್ಗಸೂಚಿಗಳ ಪ್ರಕಾರ ತಂತಿ ಬೇಲಿ, ಗೋಡೆಗಳನ್ನು ಕಟ್ಟಲಾಗಿದೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT