ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಸಂಘಟಿತ ಕಾರ್ಮಿಕರ ನೋಂದಣಿ

ಜಿಲ್ಲಾ ಮಟ್ಟದ ಸಮಿತಿ ಸಭೆಯಲ್ಲಿ ಜಿಲ್ಲಾಧಿಕಾರಿ ಹಿರೇಮಠ ಮಾಹಿತಿ
Last Updated 5 ಅಕ್ಟೋಬರ್ 2021, 12:26 IST
ಅಕ್ಷರ ಗಾತ್ರ

ಬೆಳಗಾವಿ: ‘ಜಿಲ್ಲೆಯಲ್ಲಿ ಅಸಂಘಟಿತ ಕಾರ್ಮಿಕರ ನೋಂದಣಿಗೆ ಕ್ರಮ ವಹಿಸಲಾಗಿದೆ’ ಎಂದು ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ತಿಳಿಸಿದರು.

ಅಸಂಘಟಿತ ಕಾರ್ಮಿಕರ ಸಮಗ್ರ ರಾಷ್ಟ್ರೀಯ ಡೇಟಾಬೇಸ್ (ದತ್ತಾಂಶ) ಜಾರಿ ಕುರಿತು ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ನಡೆದ ಜಿಲ್ಲಾ ಮಟ್ಟದ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

‘ಕೇಂದ್ರ ಸರ್ಕಾರ ಅಭಿವೃದ್ಧಿಪಡಿಸಿರುವ ಅಸಂಘಟಿತ ಕಾರ್ಮಿಕರ ಸಮಗ್ರ ರಾಷ್ಟ್ರೀಯ ಡೇಟಾಬೇಸ್ ವ್ಯವಸ್ಥೆಯಿಂದ ಯೋಜನೆಗಳ ಲಾಭ ಕಾರ್ಮಿಕರಿಗೆ ತಲುಪಲು ಅನುಕೂಲವಾಗಲಿದೆ. ಮಧ್ಯವರ್ತಿಗಳ ಹಾವಳಿ ಇಲ್ಲದೆ ನೇರವಾಗಿ ಫಲಾನುಭವಿಗಳ ಬ್ಯಾಂಕ್ ಖಾತೆಗೆ ಹಣ ವರ್ಗಾವಣೆ‌ ಆಗಲಿದೆ’ ಎಂದು ತಿಳಿಸಿದರು.

ಅನುಕೂಲವಾಗಲಿದೆ:

‘ಕೋವಿಡ್-19 ಸಂದರ್ಭದಲ್ಲಿ, ಕೇಂದ್ರ ಸರ್ಕಾರದ ಜನಧನ ಯೋಜನೆಯ ಮೂಲಕ ಆರ್ಥಿಕ ಸಂಕಷ್ಟದಲ್ಲಿದ್ದ ಜನರಿಗೆ ನೇರವಾಗಿ ಬ್ಯಾಂಕ್ ಖಾತೆಯ ಮೂಲಕ ಧನಸಹಾಯ ಮಾಡಲು ಡಾಟಾಬೇಸ್‌ನಲ್ಲಿ ನಮೂದಿಸಿದ್ದ ಮಾಹಿತಿಯ ಆಧಾರದ ಮೇಲೆ ಕ್ರಮ ವಹಿಸಲಾಯಿತು. ಅಂತೆಯೇ, ಹೂವು-ಹಣ್ಣು, ತರಕಾರಿ ಬೆಳೆದ ರೈತರಿಗೆ ₹ 5ಸಾವಿರ ಪರಿಹಾರ ನೀಡಲಾಯಿತು. ಡೇಟಾಬೇಸ್ ಸಹಾಯದಿಂದ ವಿವಿಧ ಯೋಜನೆಗಳನ್ನು ಜಾರಿಗೆ ತರಲು ಅಂಕಿ-ಅಂಶಗಳ ಮಾಹಿತಿ ಸಿಗುತ್ತದೆ. ಇದರಿಂದ ಯೋಜನೆಗಳ ಅನುಷ್ಠಾನಕ್ಕೆ ಅನುಕೂಲವಾಗಲಿದೆ’ ಎಂದರು.

‘ಅಸಂಘಟಿತ ಕಾರ್ಮಿಕ ಮಾಹಿತಿ ಸಂಗ್ರಹಣೆಗೆ ಸಮಗ್ರ ರಾಷ್ಟ್ರೀಯ ಡೇಟಾಬೇಸ್ ಸಹಾಯಕವಾಗಲಿದೆ. ಈ ವ್ಯವಸ್ಥೆಯು ಮುಖ್ಯವಾಗಿ ವಲಸೆ ಕಾರ್ಮಿಕರ ಅಂಕಿ-ಅಂಶಗಳನ್ನು ಸಂಗ್ರಹಿಸಿಲು ನೆರವಾಗಿದೆ. ಮಾಹಿತಿಯು ಒಂದೆಡೆ ಸಂಗ್ರಹ ಆಗುವುದರಿಂದ ಅವರಿಗೆ ಸಾರಿಗೆ, ಊಟದ ವ್ಯವಸ್ಥೆ ಹಾಗೂ ಇನ್ನಿತರ ಅನುಕೂಲಗಳನ್ನು ಒದಗಿಸಲು ಸಹಾಯಕವಾಗಲಿದೆ’ ಎಂದು ತಿಳಿಸಿದರು.

ನೋಂದಣಿಗೆ ಶುಲ್ಕ ಪಡೆಯುವಂತಿಲ್ಲ:

‘ಇ-ಶ್ರಮ್’ ಪೋರ್ಟಲ್ ಕುರಿತು ಜಿಲ್ಲೆಯಾದ್ಯಂತ ಸಾರ್ವಜನಿಕ ಸಭೆಗಳು, ಸೆಮಿನಾರ್‌ಗಳನ್ನು ಮತ್ತು ಶಾಲೆ–ಕಾಲೇಜುಗಳಲ್ಲಿ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು. ದಿನಪತ್ರಿಕೆಗಳಲ್ಲಿ ಯೋಜನೆಯ ಕುರಿತು ಪ್ರಚಾರ ನೀಡಿ, ಜಾಗೃತಿ ಮೂಡಿಸಬೇಕು’ ಎಂದು ತಿಳಿಸಿದರು.

‘ನೋಂದಣಿಗೆ ಯಾವುದೇ ಶುಲ್ಕ ಪಾವತಿಸುವ ಅಗತ್ಯವಿಲ್ಲ. ಕೇಂದ್ರ ಸರ್ಕಾರವೇ ಸಿ.ಎಸ್.ಸಿ. ಕೇಂದ್ರಗಳಿಗೆ ಪ್ರತಿ ನೋಂದಣಿಗೆ ₹ 20 ಪಾವತಿಸುತ್ತದೆ. ಒಂದು ವೇಳೆ, ಸಿ.ಎಸ್.ಸಿ. ಕೇಂದ್ರಗಳು ಶುಲ್ಕ ಪಡೆದರೆ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು’ ಎಂದು ಎಚ್ಚರಿಕೆ ನೀಡಿದರು.

ಮಹಾನಗರ ಪಾಲಿಕೆ ಆಯುಕ್ತ ರುದ್ರೇಶ್ ಘಾಳಿ, ಕಾರ್ಮಿಕ ಇಲಾಖೆ ಅಧಿಕಾರಿ ತರನ್ನುಂ ಬೆಂಗಾಲಿ, ಸಹಾಯಕ ಕಾರ್ಮಿಕ ಆಯುಕ್ತ ಅನ್ಸಾರಿ ಉಪಸ್ಥಿತರಿದ್ದರು.

‘35ಸಾವಿರ ಮಂದಿ ನೋಂದಣಿ’

ಉಪ ಕಾರ್ಮಿಕ ಆಯುಕ್ತ ವೆಂಕಟೇಶ ಶಿಂದಿಹಟ್ಟಿ ಮಾತನಾಡಿ, ‘ಕಟ್ಟಡ ನಿರ್ಮಾಣ ಮತ್ತು ಇತರ ನಿರ್ಮಾಣ ಕಾರ್ಮಿಕರು, ಕೃಷಿ ಕಾರ್ಮಿಕರು, ವಲಸೆ ಕಾರ್ಮಿಕರು ಹಾಗೂ ಇನ್ನಿತರ ವರ್ಗದ ಕಾರ್ಮಿಕರು ಈ ಯೋಜನೆಯ ಫಲಾನುಭವಿಗಳಾಗಿರುತ್ತಾರೆ. ನೋಂದಾಯಿತ ಕಾರ್ಮಿಕರ ಆಕಸ್ಮಿಕ ಸಾವು ಹಾಗೂ ಪೂರ್ಣ ಅಂಗವೈಕಲ್ಯಕ್ಕೆ ₹ 2 ಲಕ್ಷ ಪರಿಹಾರ ಹಾಗೂ ಭಾಗಶಃ ಅಂಗವೈಕಲ್ಯಕ್ಕೆ ₹1 ಲಕ್ಷ ಪರಿಹಾರ ನೀಡಲಾಗುವುದು’ ಎಂದು ತಿಳಿಸಿದರು.

‘ಇ-ಶ್ರಮ್ ಪೋರ್ಟಲ್‌ನಲ್ಲಿ 1.89 ಕೋಟಿ ಕಾರ್ಮಿಕರ ನೋಂದಣಿಯ ಗುರಿಯನ್ನು ರಾಜ್ಯಕ್ಕೆ ನೀಡಲಾಗಿದೆ. ಜಿಲ್ಲೆಯಲ್ಲಿ ಇದುವರೆಗೆ 35ಸಾವಿರ ಅಸಂಘಟಿತ ಕಾರ್ಮಿಕರು ನೋಂದಣಿ ಮಾಡಿಕೊಂಡಿದ್ದಾರೆ. ಡಿಸೆಂಬರ್ 31ರ ಒಳಗೆ ಎಲ್ಲ ಕಾರ್ಮಿಕರ ನೋಂದಣಿಯ ಗುರಿ ತಲುಪಲಾಗುವುದು’ ಎಂದು ಮಾಹಿತಿ ನೀಡಿದರು.

ಅನುಷ್ಠಾನಕ್ಕೆ ಕ್ರಮ ವಹಿಸಿ

ಯೋಜನೆ ಅನುಷ್ಠಾನಕ್ಕಾಗಿ ಎಲ್ಲ ಇಲಾಖೆಗಳು ನೋಡಲ್ ‌ಅಧಿಕಾರಿ ನೇಮಿಸಬೇಕು. ಸಂಘಟನೆಗಳು, ಪದಾಧಿಕಾರಿಗಳು ಹಾಗೂ ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳು ಮುತುವರ್ಜಿಯಿಂದ ಕಾರ್ಯನಿರ್ವಹಿಸಬೇಕು.

–ಎಂ.ಜಿ. ಹಿರೇಮಠ, ಜಿಲ್ಲಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT