ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳಗಾವಿ: ಹೂವು ಬೆಳೆ ಸಮೀಕ್ಷೆಗೆ ತಯಾರಿ, ಗರಿಷ್ಠ ಹೆಕ್ಟೇರ್‌ಗೆ ₹25 ಸಾವಿರ

Last Updated 13 ಮೇ 2020, 19:30 IST
ಅಕ್ಷರ ಗಾತ್ರ

ಬೆಳಗಾವಿ: ಕೋವಿಡ್–19 ಲಾಕ್‌ಡೌನ್‌ ಪರಿಣಾಮವಾಗಿ ತೊಂದರೆಗೆ ಸಿಲುಕಿರುವ ಪುಷ್ಪ ಕೃಷಿಕರಿಗೆ ಸರ್ಕಾರವು ಪರಿಹಾರ ನೀಡುವುದಾಗಿ ಘೋಷಿಸಿರುವ ಹಿನ್ನೆಲೆಯಲ್ಲಿ, ಜಿಲ್ಲೆಯಲ್ಲಿ ಫಲಾನುಭವಿಗಳ ಸಮೀಕ್ಷೆಗೆ ಸಿದ್ಧತೆ ನಡೆದಿದೆ.

ಒಂದು ಹೆಕ್ಟೇರ್‌ಗಷ್ಟೇ ಒಂದು ಬಾರಿಯಷ್ಟೇ ಪರಿಹಾರ ದೊರೆಯಲಿದೆ. ಸಂಷಕ್ಟಕ್ಕೆ ಒಳಗಾಗಿದ್ದ ಹೂ ಬೆಳೆಗಾರರಿಗೆ ಇದು ಕೊಂಚ ಮಟ್ಟಿಗಿನ ಸಹಾಯ ಒದಗಿಸಲಿದೆ ಎಂದು ನಿರೀಕ್ಷಿಸಲಾಗಿದೆ. ಈಗಾಗಲೇ ಹೂ ಬೆಳೆದು ಮಾರಲಾಗದೆ ನಷ್ಟ ಅನುಭವಿಸಿದವರಿಗೆ ಮಾತ್ರ ಯೋಜನೆಯಡಿ ಲಾಭ ದೊರೆಯಲಿದೆ.

ಸಮೀಕ್ಷೆಗಾಗಿ ತೋಟಗಾರಿಕೆ ಇಲಾಖೆ, ಕಂದಾಯ ಇಲಾಖೆ ಹಾಗೂ ಗ್ರಾಮ ಪಂಚಾಯಿತಿ ಪ್ರತಿನಿಧಿಗಳನ್ನು ಒಳಗೊಂಡ ತಂಡ ರಚಿಸಲು ನಿರ್ಧರಿಸಲಾಗಿದೆ. ತಂಡದವರು ಪ್ರತಿ ಬೆಳೆಗಾರರ ಜಮೀನಿಗೆ ಭೇಟಿ ನೀಡಿ ನಷ್ಟದ ಅಂದಾಜಿನ ಸಮೀಕ್ಷೆ ನಡೆಸಿ ಮಾಹಿತಿ ಸಂಗ್ರಹಿಸಲಿದ್ದಾರೆ. ಮಾರ್ಚ್‌ 25ರಿಂದ ಈವರೆಗೂ ಕೊಯ್ಲು ಮಾಡಲಾಗದೆ ಜಮೀನಲ್ಲೇ ಉಳಿದ ಹೂವಿಗೆ ಪರಿಹಾರ ನೀಡಲಾಗುವುದು ಎಂದು ಇಲಾಖೆ ತಿಳಿಸಿದೆ.

ಬಹಳ ಪ್ರಮಾಣದಲ್ಲಿಲ್ಲ:ಜಿಲ್ಲೆಯಲ್ಲಿ ಕೆಲವೇ ಪ್ರಗತಿಪರ ಕೃಷಿಕರು ಅಥವಾ ಸಾಂಪ್ರದಾಯಿಕ ಬೆಳೆಯಿಂದ ಬದಲಾವಣೆ ಬಯಸಿದ್ದವರು ಮಾತ್ರವೇ ಪುಷ್ಪ ಕೃಷಿ ಮಾಡುವುದು ಕಂಡುಬಂದಿದೆ. ಎಲ್ಲ ತಾಲ್ಲೂಕುಗಳಲ್ಲೂ ಈ ಕೃಷಿ ವ್ಯಾಪಿಸಿಲ್ಲ. ಸವದತ್ತಿ, ರಾಮದುರ್ಗ, ಚಿಕ್ಕೋಡಿ, ನಿಪ್ಪಾಣಿ ಹಾಗೂ ಬೆಳಗಾವಿ ತಾಲ್ಲೂಕಿನ ಕೆಲವು ಕಡೆಗಳಲ್ಲಿ ಮಾತ್ರವೇ ಹೂ ಬೆಳೆಯುವುದು ಕಂಡುಬರುತ್ತದೆ. ಚೆಂಡು ಹೂವು, ಸೇವಂತಿಗೆ, ಗುಲಾಬಿ, ಪಾಲಿಹೌಸ್‌ನಲ್ಲಿ ಜರ್ಬೆರಾ ಬೆಳೆಯುತ್ತಾರೆ. ಎಕರೆಗಟ್ಟಲೆ ಈ ಬೇಸಾಯ ಹೆಚ್ಚಿನ ಪ್ರಮಾಣದಲ್ಲಿಲ್ಲ. ಗುಂಟೆಗಳ ಲೆಕ್ಕದಲ್ಲಷ್ಟೇ ಬೆಳೆದಿದ್ದಾರೆ. ರೈತರು ಎಷ್ಟು ಪ್ರಮಾಣದಲ್ಲಿ ಬೆಳೆದು ನಷ್ಟ ಅನುಭವಿಸಿದರೋ ಅದಕ್ಕಷ್ಟೇ (ಗರಿಷ್ಠ ಹೆಕ್ಟೇರ್‌ಗೆ ₹ 25ಸಾವಿರ) ಪರಿಹಾರಕ್ಕೆ ಅರ್ಹರಾಗಿದ್ದಾರೆ ಎಂದು ತೋಟಗಾರಿಕೆ ಇಲಾಖೆ ತಿಳಿಸಿದೆ.

ಲಾಕ್‌ಡೌನ್‌ನಿಂದಾಗಿ ದೇವಸ್ಥಾನ ಸೇರಿದಂತೆ ಹಲವು ಧಾರ್ಮಿಕ ಕೇಂದ್ರಗಳು ಮುಚ್ಚಿವೆ. ಸಭೆ, ಸಮಾರಂಭಗಳು ನಡೆಯುತ್ತಿಲ್ಲ. ಹೂವುಗಳು ಹೆಚ್ಚಿನ ಪ್ರಮಾಣದಲ್ಲಿ ಬೇಕಾಗುವ ಜಾತ್ರೆ, ರಥೋತ್ಸವ ಮತ್ತಿತರ ಧಾರ್ಮಿಕ ಕಾರ್ಯಕ್ರಮಗಳಿಗೆ ನಿರ್ಬಂಧ ವಿಧಿಸಲಾಗಿದೆ. ಹೀಗಾಗಿ, ಹೂವಿಗೆ ಬೇಡಿಕೆ ಕುಸಿದಿದೆ. ಅಲಂಕಾರಕ್ಕೆ ಬಳಸುವ ಹೂವುಗಳನ್ನು ನೆರೆ ರಾಜ್ಯದ ಮಾರುಕಟ್ಟೆಗಳಿಗೆ ಸಾಗಿಸುವುದಕ್ಕೂ ಸಾಧ್ಯವಾಗಲಿಲ್ಲ. ಇದರಿಂದಾಗಿ ಹೂವುಗಳು ತೋಟದಲ್ಲೇ ಹಾಳಾಗಿದ್ದವು. ಇದರಿಂದ ಬೆಳೆಗಾರರಿಗೆ ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿತ್ತು.

ಸರ್ಕಾರಕ್ಕೆ ವರದಿ

‘ಜಿಲ್ಲೆಯಲ್ಲಿ ಪ್ರಾಥಮಿಕ ಮಾಹಿತಿ ಪ್ರಕಾರ 282 ಹೆಕ್ಟೇರ್ ಪ್ರದೇಶದಲ್ಲಷ್ಟೇ ಪುಷ್ಪ ಕೃಷಿ ಇದೆ. ಕೆಲವೊಂದು ಕಡೆಗಳಲ್ಲಿ ಹೂ ಜಮೀನಿನಲ್ಲೇ ಇದೆ. ಕೆಲವು ಕಡೆಯಲ್ಲಿ ಕೀಳಲಾಗಿದೆ. ಸಮೀಕ್ಷೆ ನಡೆಸಿ ವರದಿ ಸಲ್ಲಿಸುವಂತೆ ಸರ್ಕಾರದಿಂದ ಆದೇಶವಿದೆ. ಹಿರಿಯ ಅಧಿಕಾರಿಗಳು ವಿಡಿಯೊ ಕಾನ್ಫರೆನ್ಸ್‌ ನಡೆಸಿ ಸೂಚನೆ ನೀಡಿದ್ದಾರೆ. ಅದರಂತೆ ಮಾಹಿತಿ ಸಂಗ್ರಹಿಸಿ ವರದಿ ಸಲ್ಲಿಸಲಾಗುವುದು. ಸರ್ಕಾರದ ನಿರ್ಧಾರದಿಂದ ಹೂವು ಬೆಳೆಗಾರರಿಗೆ ಆರ್ಥಿಕ ನೆರವು ದೊರೆಯಲಿದೆ’ ಎಂದು ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ ರವೀಂದ್ರ ಹಕಾಟಿ ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT