ಮಂಗಳವಾರ, 18 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳಗಾವಿ | ಭರವಸೆ ಮೂಡಿದ ಪೂರ್ವ ಮುಂಗಾರು: ಬಿತ್ತನೆ ಬೀಜ ವಿತರಣೆ ಶುರು

Published 27 ಮೇ 2024, 5:24 IST
Last Updated 27 ಮೇ 2024, 5:24 IST
ಅಕ್ಷರ ಗಾತ್ರ

ಬೆಳಗಾವಿ: ಕಳೆದ ವರ್ಷ ಮುಂಗಾರು ಮಳೆ ಕೈಕೊಟ್ಟ ಪರಿಣಾಮ ಆತಂಕಗೊಂಡಿದ್ದ ಜಿಲ್ಲೆಯ ರೈತರು, ಈ ಬಾರಿ ಮುಂಗಾರು ಪೂರ್ವ ಮಳೆ ಕೈಹಿಡಿದಿದ್ದರಿಂದ ಸಂತಸಗೊಂಡಿದ್ದಾರೆ. ಕಳೆದೊಂದು ವಾರದಿಂದೀಚೆಗೆ ಆಗಾಗ ಸುರಿಯುತ್ತಿರುವ ಮಳೆ, ಬಿತ್ತನೆ ಪೂರ್ವ ಚಟುವಟಿಕೆಗೆ ವೇಗ ನೀಡಿದೆ.

ಬಿತ್ತನೆಗಾಗಿ ಭೂಮಿ ಹದಗೊಳಿಸುತ್ತಿರುವ ರೈತರಿಗೆ ಸಮರ್ಪಕವಾಗಿ ಬಿತ್ತನೆ ಬೀಜ ಮತ್ತು ರಸಗೊಬ್ಬರ ವಿತರಣೆಗೆ ಕೃಷಿ ಇಲಾಖೆ ಸಿದ್ಧತೆ ಮಾಡಿಕೊಂಡಿದೆ. ರಾಮದುರ್ಗ, ಖಾನಾಪುರ, ಮೂಡಲಗಿ ತಾಲ್ಲೂಕುಗಳಲ್ಲಿ ಈಗಾಗಲೇ ಬಿತ್ತನೆ ಬೀಜಗಳ ವಿತರಣೆ ಆರಂಭವಾಗಿದೆ. ಆದರೆ, ಬಿತ್ತನೆ ಬೀಜಗಳ ದರ ಹೆಚ್ಚಿರುವುದು ಕೃಷಿಕರಿಗೆ ಸಂಕಷ್ಟ ತಂದೊಡ್ಡಿದೆ.

ಕಳೆದ ವರ್ಷದ ಮುಂಗಾರು ಹಂಗಾಮಿನಲ್ಲಿ ಗುರಿ ಹೊಂದಿದ್ದ 7.11 ಲಕ್ಷ ಹೆಕ್ಟೇರ್‌ ಪೈಕಿ, 6.73 ಲಕ್ಷ ಹೆಕ್ಟೇರ್‌ನಲ್ಲಿ ಬಿತ್ತನೆಯಾಗಿತ್ತು. ಈ ಬಾರಿ 7.40 ಲಕ್ಷ ಹೆಕ್ಟೇರ್‌ನಲ್ಲಿ ಬಿತ್ತನೆ ಗುರಿ ಇದೆ.

41 ಸಾವಿರ ಕ್ವಿಂಟಲ್‌ ಬಿತ್ತನೆ ಬೀಜಕ್ಕೆ ಬೇಡಿಕೆ: ‘ಜಿಲ್ಲೆಯಲ್ಲಿ ಭತ್ತ, ತೊಗರಿ, ಹೆಸರು, ಉದ್ದು, ಮೆಕ್ಕೆಜೋಳ, ಸೋಯಾಬೀನ್‌ ಸೇರಿದಂತೆ ವಿವಿಧ ಬೆಳೆಗಳ 41,061 ಕ್ವಿಂಟಲ್‌ ಬಿತ್ತನೆ ಬೀಜಗಳಿಗೆ ಬೇಡಿಕೆಯಿದೆ. ಈ ಪೈಕಿ ಮೇ 25ರವರೆಗೆ 23,470 ಕ್ವಿಂಟಲ್‌ ಪೂರೈಕೆಯಾಗಿದೆ. 35 ರೈತ ಸಂಪರ್ಕ ಕೇಂದ್ರ ಮತ್ತು 150 ಉಪಕೇಂದ್ರಗಳ ಮೂಲಕ ವಿತರಿಸುತ್ತಿದ್ದೇವೆ’ಎಂದು ಕೃಷಿ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

‘ಈವರೆಗೆ ಪೂರೈಕೆಯಾಗಿದ್ದ ವಿವಿಧ ಕಂಪನಿಗಳ 2,02,949 ಟನ್‌ ರಸಗೊಬ್ಬರದ ಪೈಕಿ 38,782 ಟನ್‌ ಮಾರಾಟವಾಗಿದೆ. 1,64,166 ಟನ್‌ ರಸಗೊಬ್ಬರ ದಾಸ್ತಾನಿದೆ. ರೈತರಿಗೆ ಸಾಕಾಗುವಷ್ಟು ಬೀಜ, ಗೊಬ್ಬರ ಲಭ್ಯವಿದೆ’ ಎಂದರು.

ಹತ್ತು ವಿತರಣೆ ಕೇಂದ್ರ

ಚನ್ನಮ್ಮನ ಕಿತ್ತೂರು: ತಾಲ್ಲೂಕಿನ ರೈತರಿಗೆ ಸಕಾಲಕ್ಕೆ ಗುಣಮಟ್ಟದ ಬಿತ್ತನೆ ಬೀಜ ಒದಗಿಸಲು ಮುಂಜಾಗ್ರತಾ ಕ್ರಮ ತೆಗೆದುಕೊಳ್ಳಲಾಗಿದೆ.

‘10 ಪ್ರಾಥಮಿಕ ಕೃಷಿಪತ್ತಿನ ಸಂಘ(ಪಿಕೆಪಿಎಸ್‌)ಗಳಲ್ಲಿ ತೆರೆದ ಕೇಂದ್ರಗಳಲ್ಲಿ ಸೋಯಾಬೀನ್ ಬೀಜ, ಕಿತ್ತೂರು, ಕಲಭಾವಿ, ತುರಮರಿ, ಹುಣಶೀಕಟ್ಟಿಯಲ್ಲಿ ಗೋವಿನಜೋಳದ ಬೀಜ ವಿತರಣೆಗೆ ವ್ಯವಸ್ಥೆ ಮಾಡಲಾಗಿದೆ. ಅಭಿಲಾಷಾ, ಇಂಟಾನ್, ಜಯಾ ಮತ್ತಿತರ ಭತ್ತದ ತಳಿಗಳ ಬಿತ್ತನೆ ಬೀಜಗಳನ್ನು ಕಿತ್ತೂರಿನ ರೈತ ಸಂಪರ್ಕ ಕೇಂದ್ರದಲ್ಲೇ ವಿತರಿಸಲಾಗುತ್ತಿದೆ’ ಎಂದು ರೈತ ಸಂಪರ್ಕ ಕೇಂದ್ರದ ಅಧಿಕಾರಿ ಮಂಜುನಾಥ ಕೆಂಚರಾಹುತ ಮಾಹಿತಿ ನೀಡಿದರು.

‘ರಸಗೊಬ್ಬರದ ಕೊರತೆ ಆಗದಂತೆಯೂ ಎಚ್ಚರ ವಹಿಸಲಾಗಿದೆ. ಗೊಬ್ಬರಕ್ಕೆ ನಿಗದಿಗಿಂತ ಹೆಚ್ಚು ಹಣ ತೆಗೆದುಕೊಳ್ಳಬಾರದು ಎಂದು ಸೂಚಿಸಲಾಗಿದೆ’ ಎಂದರು.

200ಕ್ಕೂ ಅಧಿಕ ರೈತರಿಂದ ಖರೀದಿ

ಮೂಡಲಗಿ: ತಾಲ್ಲೂಕಿನಲ್ಲಿ ಮುಂಗಾರು ಪೂರ್ವ ಮಳೆಯಿಂದ ಹರ್ಷಗೊಂಡ ರೈತರು ಬಿತ್ತನೆ ಚಟುವಟಿಕೆ ಕೈಗೊಳ್ಳುತ್ತಿದ್ದಾರೆ. ಕೆಲವು ರೈತರು ಭೂಮಿ ಒಣಗುವುದನ್ನು ಕಾಯುತ್ತಿದ್ದಾರೆ.  

‘ಅರಭಾವಿ ರೈತ ಸಂಪರ್ಕ ಕೇಂದ್ರದಲ್ಲಿ 200 ಕ್ವಿಂಟಲ್ ಸೋಯಾಬೀನ್‌, 20 ಕ್ವಿಂಟಲ್‌ ಹೆಸರು, 10 ಕ್ವಿಂಟಲ್‌ ಗೋವಿನಜೋಳದ ಬೀಜಗಳ ದಾಸ್ತಾನಿದ್ದು, ವಿತರಣೆ ಆರಂಭಿಸಿದ್ದೇವೆ. ಈಗಾಗಲೇ 200ಕ್ಕೂ ಅಧಿಕ ರೈತರು ಬೀಜ ಖರೀದಿಸಿದ್ದಾರೆ’ ಎಂದು ಕೇಂದ್ರದ ಅಧಿಕಾರಿ ಪಿ.ಎಚ್. ಹುಲಗಬಾಳ ತಿಳಿಸಿದರು.

‘ಕೃತಿಕಾ ಮಳೆ ಭರಪೂರ ಆಗಿದ್ದಕ್ಕೆ ಭಾಳ ಖುಷಿಯಾಗೇತ್ರಿ. ಈಗ ಹತ್ತ ಎಕರೆದಾಗ ಸೋಯಾಬೀನ್‌ ಬಿತ್ತಾತ್ತೇನ್ರಿ’ ಎಂದು ಹೊಸಟ್ಟಿಯ ರೈತ ರಮೇಶ ನಾಯ್ಕ ಸಂತಸ ಹಂಚಿಕೊಂಡರು.

ಗೋಕಾಕ, ಕೌಜಲಗಿ ವ್ಯಾಪ್ತಿಯಲ್ಲಿ ರೈತರಿಗೆ ಸಮರ್ಪಕವಾಗಿ ರಸಗೊಬ್ಬರ ಮತ್ತು ಬಿತ್ತನೆ ಬೀಜಗಳ ಪೂರೈಕೆಗೆ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಗೋಕಾಕ ತಾಲ್ಲೂಕಿನಲ್ಲಿ 12,845 ಟನ್ ರಸಗೊಬ್ಬರ, 700 ಕ್ವಿಂಟಲ್ ಬಿತ್ತನೆ ಬೀಜಗಳ ದಾಸ್ತಾನು ಇದೆ. ಹುಕ್ಕೇರಿ ತಾಲ್ಲೂಕಿನಲ್ಲಿ 7,020 ಟನ್ ರಸಗೊಬ್ಬರ ಲಭ್ಯವಿದೆ. ಹುಕ್ಕೇರಿ, ಯಮಕನಮರಡಿ ಮತ್ತು ಸಂಕೇಶ್ವರದ ರೈತ ಸಂಪರ್ಕ ಕೇಂದ್ರಗಳಲ್ಲಿ ಬಿತ್ತನೆ ಬೀಜ ಪೂರೈಕೆಗೆ ಕ್ರಮ ವಹಿಸಲಾಗಿದೆ. 

ರೈತರ ಮೊಗದಲ್ಲಿ ಮಂದಹಾಸ

ಚಿಕ್ಕೋಡಿ: ತಾಲ್ಲೂಕಿನಲ್ಲಿ ರೈತರಿಗೆ ಸಕಾಲಕ್ಕೆ ಬಿತ್ತನೆ ಬೀಜ ಹಾಗೂ ರಸಗೊಬ್ಬರ ವಿತರಿಸಲು, ದಾಸ್ತಾನು ಮಾಡಿಕೊಳ್ಳಲಾಗಿದೆ. ತಾಲ್ಲೂಕಿನಲ್ಲಿ ಸೋಯಾಬೀನ್‌ ಹೆಚ್ಚಾಗಿ (350 ಕ್ವಿಂಟಲ್) ಬಿತ್ತನೆ ಮಾಡಲಾಗುತ್ತಿದೆ. 2,317 ಟನ್ ರಸಗೊಬ್ಬರ ಸಂಗ್ರಹವಿದೆ.

90 ಕ್ವಿಂಟಲ್‌ ಬೀಜ ಮಾರಾಟ

ರಾಮದುರ್ಗ: ತಾಲ್ಲೂಕಿನ ಮುದಕವಿ, ಮುದೇನೂರ, ಬಟಕುರ್ಕಿ, ಕಟಕೋಳ, ಸುನ್ನಾಳ, ಕೆ. ಚಂದರಗಿ, ಸಾಲಹಳ್ಳಿ, ಸಾಲಾಪುರ, ಹೊಸಕೋಟಿ, ಹುಲಕುಂದ, ಸುರೇಬಾನ ಗ್ರಾಮಗಳಲ್ಲಿ ಬಿತ್ತನೆ ಬೀಜ ಮಾರಾಟ ಕೇಂದ್ರ ಸ್ಥಾಪಿಸಲಾಗಿದೆ.

‘ಕೆ.ಚಂದರಗಿ ರೈತ ಸಂಪರ್ಕ ಕೇಂದ್ರದಲ್ಲಿ ಈಗಾಗಲೇ ವಿತರಣೆ ಆರಂಭವಾಗಿದೆ. ಇಲ್ಲಿ ಲಭ್ಯವಿದ್ದ 170 ಕ್ವಿಂಟಲ್‌ ಹೆಸರು ಬೀಜಗಳ ಪೈಕಿ 90 ಕ್ವಿಂಟಲ್ ಬೀಜ ಮಾರಾಟವಾಗಿವೆ’ ಎಂದು ಕೃಷಿ ಅಧಿಕಾರಿ ಅಶೋಕ ವಾಲಿಕಾರ ತಿಳಿಸಿದರು.

ಪೂರಕ ಮಾಹಿತಿ: ಚನ್ನಪ್ಪ ಮಾದರ, ಪ್ರದೀಪ ಮೇಲಿನಮನಿ, ಬಾಲಶೇಖರ ಬಂದಿ, ರಾಮೇಶ್ವರ ಕಲ್ಯಾಣಶೆಟ್ಟಿ, ಬಸವರಾಜ ಶಿರಸಂಗಿ, ಎನ್‌.ಪಿ.ಕೊಣ್ಣೂರ, ರವಿಕುಮಾರ ಹುಲಕುಂದ, ಪ್ರಸನ್ನ ಕುಲಕರ್ಣಿ, ಚಂದ್ರಶೇಖರ ಚಿನಕೇಕರ

ರಾಮದುರ್ಗ ತಾಲ್ಲೂಕಿನ ಕೆ.ಚಂದರಗಿಯ ರೈತ ಸಂಪರ್ಕ ಕೇಂದ್ರದಲ್ಲಿ ಬಿತ್ತನೆ ಬೀಜ ಖರೀದಿಗೆ ಬಂದಿದ್ದ ಜನರು
ರಾಮದುರ್ಗ ತಾಲ್ಲೂಕಿನ ಕೆ.ಚಂದರಗಿಯ ರೈತ ಸಂಪರ್ಕ ಕೇಂದ್ರದಲ್ಲಿ ಬಿತ್ತನೆ ಬೀಜ ಖರೀದಿಗೆ ಬಂದಿದ್ದ ಜನರು
ಮೂಡಲಗಿ ತಾಲ್ಲೂಕಿನ ಹೊಸಟ್ಟಿಯಲ್ಲಿ ರೈತರು ಸೋಯಾಬೀನ್‌ ಬಿತ್ತನೆ ಮಾಡಿದರು
ಮೂಡಲಗಿ ತಾಲ್ಲೂಕಿನ ಹೊಸಟ್ಟಿಯಲ್ಲಿ ರೈತರು ಸೋಯಾಬೀನ್‌ ಬಿತ್ತನೆ ಮಾಡಿದರು
ಬೆಳಗಾವಿ ತಾಲ್ಲೂಕಿನ ತಾರಿಹಾಳ ಬಳಿ ರೈತ ಮಹಿಳೆಯರು ಭೂಮಿ ಸ್ವಚ್ಛಗೊಳಿಸಿದರು
ಬೆಳಗಾವಿ ತಾಲ್ಲೂಕಿನ ತಾರಿಹಾಳ ಬಳಿ ರೈತ ಮಹಿಳೆಯರು ಭೂಮಿ ಸ್ವಚ್ಛಗೊಳಿಸಿದರು
ಹುಕ್ಕೇರಿ ತಾಲ್ಲೂಕಿನ ಕಣಗಲಾ ಪಿಕೆಪಿಎಸ್‌ನಲ್ಲಿ ರಸಗೊಬ್ಬರ ಮೂಟೆಗಳನ್ನು ದಾಸ್ತಾನು ಮಾಡಲಾಯಿತು
ಹುಕ್ಕೇರಿ ತಾಲ್ಲೂಕಿನ ಕಣಗಲಾ ಪಿಕೆಪಿಎಸ್‌ನಲ್ಲಿ ರಸಗೊಬ್ಬರ ಮೂಟೆಗಳನ್ನು ದಾಸ್ತಾನು ಮಾಡಲಾಯಿತು
ಮುಂಗಾರು ಹಂಗಾಮಿನ ಬಿತ್ತನೆಗಾಗಿ ಜಿಲ್ಲೆಯಲ್ಲಿ ರೈತರಿಗೆ ಅಗತ್ಯವಿರುವಷ್ಟು ಬಿತ್ತನೆ ಬೀಜ ರಸಗೊಬ್ಬರ ಲಭ್ಯವಿದೆ. ಬೇಡಿಕೆಯಂತೆ ಹಂತ–ಹಂತವಾಗಿ ಇನ್ನಷ್ಟು ಬೀಜ ಗೊಬ್ಬರ ತರಿಸಿಕೊಡಲಾಗುವುದು
ಶಿವನಗೌಡ ಪಾಟೀಲ ಜಂಟಿನಿರ್ದೇಶಕ ಕೃಷಿ ಇಲಾಖೆ ಬೆಳಗಾವಿ
ಖಾನಾಪುರ ತಾಲ್ಲೂಕಿನಲ್ಲಿ ಭತ್ತ ಪ್ರಮುಖ ಬೆಳೆ. ಇಲ್ಲಿನ ರೈತರು ಭತ್ತದೊಂದಿಗೆ ಗೆಣಸು ಆಲೂಗಡ್ಡೆ ರಾಗಿ ಶೇಂಗಾ ಮತ್ತಿತರ ಬೆಳೆ ಬೆಳೆಯುತ್ತಾರೆ. ಆದರೆ ಸರ್ಕಾರ ಸಬ್ಸಿಡಿ ದರದಲ್ಲಿ ಭತ್ತದ ಬೀಜ ಮಾತ್ರ ವಿತರಿಸುತ್ತದೆ. ಉಳಿದ ಬೆಳೆಗಳ ಬೀಜಗಳನ್ನೂ ಸಬ್ಸಿಡಿ ದರದಲ್ಲೇ ವಿತರಿಸಬೇಕು
ಗುರುಲಿಂಗಯ್ಯ ಪೂಜೇರ ರೈತ ಮಂಗೇನಕೊಪ್ಪ
ಸವದತ್ತಿ ತಾಲ್ಲೂಕಿನಲ್ಲಿ ಬೇಡಿಕೆಯಷ್ಟು ಡಿಎಪಿ ರಸಗೊಬ್ಬರ ಸಿಗುತ್ತಿಲ್ಲ. ಅದನ್ನು ಖರೀದಿಸಿದರೆ ಮತ್ತೊಂದು ಕಂಪನಿ ಗೊಬ್ಬರ ಖರೀದಿಸಲೇಬೇಕು ಎಂದು ವಿತರಕರು ಹೇಳುತ್ತಿದ್ದಾರೆ. ನಿಗದಿತ ದರಕ್ಕಿಂತ ಹೆಚ್ಚಿನ ಶುಲ್ಕ ಪಡೆದು ರೈತರಿಗೆ ಅನ್ಯಾಯ ಮಾಡುತ್ತಿದ್ದಾರೆ. ಈ ಸಂಬಂಧ ದೂರು ಕೊಟ್ಟರೂ ಅಧಿಕಾರಿಗಳು ಕ್ರಮ ಜರುಗಿಸುತ್ತಿಲ್ಲ
ಸುರೇಶ ಸಂಪಗಾವಿ ರೈತ ಸವದತ್ತಿ ಡಿಎಪಿ
ರಸಗೊಬ್ಬರದೊಂದಿಗೆ ಮತ್ತೊಂದು ಗೊಬ್ಬರ ಖರೀದಿಸಬೇಕೆಂದು ನಿಯಮವಿಲ್ಲ. ರೈತರು ತಮಗೆ ಬೇಕಿರುವ ಗೊಬ್ಬರವನ್ನಷ್ಟೇ ಖರೀದಿಸಬಹುದು. ಯಾವುದಾದರೂ ವಿತರಕರು ನಿಗದಿತ ದರಕ್ಕಿಂತ ಹೆಚ್ಚಿನ ಹಣ ಪಡೆದರೆ ಪರವಾನಗಿ ರದ್ದುಪಡಿಸಲಾಗುವುದು. ಕಳೆದ ವರ್ಷ ನಿಯಮ ಉಲ್ಲಂಘಿಸಿದ 40 ವಿತರಕರಿಗೆ ನೋಟಿಸ್ ನೀಡಲಾಗಿದೆ
ಎಂ.ಐ.ಅತ್ತಾರ್‌ ಕೃಷಿ ಅಧಿಕಾರಿ ಸವದತ್ತಿ
ಚಿಕ್ಕೋಡಿ ತಾಲ್ಲೂಕಿನ ಬಹುತೇಕ ಕಡೆ ಉತ್ತಮ ಮಳೆಯಾಗಿದೆ. ಬಿತ್ತನೆಗೆ ಹೊಲ ಸಿದ್ಧಗೊಳಿಸಿದ್ದೇವೆ. ಈ ಸಲ ರೈತರಿಗೆ ಸರಿಯಾದ ಸಮಯಕ್ಕೆ ಬಿತ್ತನೆ ಬೀಜ ರಸಗೊಬ್ಬರ ಸಿಗುವ ನಿರೀಕ್ಷೆ ಇದೆ ತುಕಾರಾಮ ಕೋಳಿ ರೈತ ಕಲ್ಲೋಳಿ ಅನ್ನ ನೀಡುವ ರೈತರಿಗೆ ಸಿಗಬೇಕಾದ ಸೌಕರ್ಯಗಳು ಕಡತಕ್ಕೆ ಮತ್ತು ಮಾತಿಗೆ ಸೀಮಿತವಾಗಬಾರದು. ಮುಂಗಾರು ಹಂಗಾಮು ಆರಂಭಕ್ಕೂ ಮುನ್ನವೇ ಎಲ್ಲ ರೈತರಿಗೂ ಬಿತ್ತನೆ ಬೀಜ ರಸಗೊಬ್ಬರ ಒದಗಿಸಬೇಕು
ಮಹಾಂತೇಶ ಕಮತ  ಅಧ್ಯಕ್ಷ ರಾಜ್ಯ ರೈತ ಸಂಘ ಹಾಗೂ ರೈತ ಕೂಲಿ ಕಾರ್ಮಿಕರ ಹಿತರಕ್ಷಣಾ ಸಂಘ
ಬೈಲಹೊಂಗಲ ಬರದಿಂದ ತತ್ತರಿಸಿದ ನಮಗೆ ಬಿತ್ತನೆ ಬೀಜಗಳ ದರ ಹೆಚ್ಚಿರುವುದು ಸಂಕಷ್ಟ ತಂದಿದೆ. ರೈತರಿಗೆ ಗುಣಮಟ್ಟದ ಬೀಜ ಗೊಬ್ಬರವನ್ನು ರಿಯಾಯ್ತಿ ದರದಲ್ಲಿ ವಿತರಿಸಲು ಕ್ರಮ ವಹಿಸಬೇಕು
ಶ್ರೀಶೈಲ ಹಂಪಿಹೊಳಿ ರೈತ ಬೈಲಹೊಂಗಲ

ಮೇಲಧಿಕಾರಿಗೆ ಪತ್ರ

ಖಾನಾಪುರ: ತಾಲ್ಲೂಕಿನಲ್ಲಿ 60 ಸಾವಿರ ಹೆಕ್ಟೇರ್‌ನಲ್ಲಿ ಭತ್ತ ಬೆಳೆಯಲಾಗುತ್ತದೆ. ಈ ಬಾರಿ ಮುಂಗಾರು ಹಂಗಾಮಿನಲ್ಲಿ ರೈತರಿಗೆ ವಿತರಿಸಲು 900 ಕ್ವಿಂಟಲ್‌ ಭತ್ತದ ಬೀಜಗಳ ಅಗತ್ಯವಿದೆ. ಆದರೆ ಸರ್ಕಾರದಿಂದ ಈವರೆಗೆ 204 ಕ್ವಿಂಟಲ್ ಬೀಜ ಸರಬರಾಜು ಮಾಡಲಾಗಿದೆ. ಬಾಕಿ ಉಳಿದ ಬೀಜಗಳನ್ನು ತ್ವರಿತವಾಗಿ ಸರಬರಾಜು ಮಾಡುವಂತೆ ತಾಲ್ಲೂಕು ಸಹಾಯಕ ಕೃಷಿ ನಿರ್ದೇಶಕರು ಮೇಲಧಿಕಾರಿಗೆ ಪತ್ರ ಬರೆದಿದ್ದಾರೆ. ಬೀಡಿ ಗುಂಜಿ ಜಾಂಬೋಟಿ ಮತ್ತು ಖಾನಾಪುರ ರೈತ ಸಂಪರ್ಕ ಕೇಂದ್ರಗಳಲ್ಲಿ ಬೀಜಗಳ ವಿತರಣೆಯಾಗುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT