ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಹನಕ್ಕೆ ಬೆಂಕಿ ಹಚ್ಚುವೆ, ಕಲ್ಲು ಹೊಡೆವೆ: ಅಧಿಕಾರಿಗಳಿಗೆ ರೈತ ಮಹಿಳೆ ಎಚ್ಚರಿಕೆ

Last Updated 11 ನವೆಂಬರ್ 2021, 12:22 IST
ಅಕ್ಷರ ಗಾತ್ರ

ಬೆಳಗಾವಿ: ‘ನಮ್ಮ ಜಮೀನು ಕಿತ್ತುಕೊಂಡು ರಸ್ತೆ ಕಾಮಗಾರಿ ನಡೆಸಲು ಮುಂದಾದರೆ ಆ ವಾಹನಗಳಿಗೆ ಬೆಂಕಿ ಹಚ್ಚುತ್ತೇನೆ. ಬರುವವರಿಗೆ ಕಲ್ಲಿನಿಂದ ಹೊಡೆಯುತ್ತೇನೆ’ ಎಂದು ರೈತ ಮಹಿಳೆ ಸುಮಿತ್ರಾ ಅನಗೋಳಕರ ಎಚ್ಚರಿಕೆ ನೀಡಿದರು.

ತಾಲ್ಲೂಕಿನಲ್ಲಿ ಹಲಗಾ–ಮಚ್ಛೆ ಬೈಪಾಸ್ ರಸ್ತೆ ಕಾಮಗಾರಿಗೆ ಜಮೀನು ಸ್ವಾಧೀನಕ್ಕೆ ವಿರೋಧಿಸಿ ಗುರುವಾರ ತಮ್ಮ ಜಮೀನಿನಲ್ಲಿ ನಡೆಸಿದ ಪ್ರತಿಭಟನೆ ವೇಳೆ ಮಾಧ್ಯಮ ಪ್ರತಿನಿಧಿಗಳೊಂದಿಗೆ ಅವರು ಮಾತನಾಡಿದರು.

‘ಈ ಕಾಮಗಾರಿ ಕುರಿತಂತೆ ನ್ಯಾಯಾಲಯದಲ್ಲಿ ವ್ಯಾಜ್ಯವಿದೆ. ನಾವು ಸರ್ಕಾರದಿಂದ ಹಣ ಪಡೆದಿಲ್ಲ. ಆದರೂ ನಮ್ಮ ಜಮೀನು ಅತಿಕ್ರಮಣ ಮಾಡುತ್ತಿದ್ದಾರೆ. ನಾವು, ಮಕ್ಕಳು, ಮೊಮ್ಮಕ್ಕಳು ಈ ಜಮೀನು ಇರುವವರೆಗೆ ಗಂಜಿ ಕುಡಿದುಕೊಂಡು ಬದುಕುತ್ತೇವೆ. ನಮ್ಮ ಪೂರ್ವಜರು ಕೃಷಿ ಮಾಡಿಕೊಂಡು ಬಂದಿರುವ ಭೂಮಿ ಇದು. ಇದನ್ನು ಯಾರಿಗೂ ಕೊಡುವುದಿಲ್ಲ. ಹೋದ ವರ್ಷವೂ ಕಾಮಗಾರಿ ಆರಂಭಿಸುತ್ತೇವೆಂದು ಕಟಾವಿಗೆ ಬಂದಿದ್ದ ಕಬ್ಬಿನ ಬೆಳೆ ಹಾಳು ಮಾಡಿದ್ದರು. ಈ ಬಾರಿಯೂ ದಬ್ಬಾಳಿಕೆ ನಡೆಸುತ್ತಿದ್ದಾರೆ’ ಎಂದು ಆರೋಪಿಸಿದರು.

ದಿಢೀರನೆ ಅಪಾರ ಪೊಲೀಸ್ ಬಂದೋಬಸ್ತ್‌ ನಡುವೆ ಕಾಮಗಾರಿ ಆರಂಭಿಸಿದ್ದಕ್ಕೆ ಆ ಭಾಗದ ರೈತರು ಹಾಗೂ ರೈತ ಮುಖಂಡರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ಈ ನಡುವೆ, ಮರ ಏರಿ ಮೇಲಿಂದ ಬಿದ್ದು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಒಡ್ಡಿದ್ದ ಅಮಿತ್ ಅನಗೋಳಕರ್ ‌ಅವರನ್ನು ಪೊಲೀಸರು ಮನವೊಲಿಸಿದರು. ಕೆಳಗಿಳಿಯುತ್ತಿದ್ದಂತೆ ಅಜ್ಜಿ ಸುಮಿತ್ರಾ ಅವರನ್ನು ಬಿಗಿದಪ್ಪಿ ಕಣ್ಣೀರು ಹಾಕಿದ ಅಮಿತ್, ಪೊಲೀಸರ ಕಾಲಿಗೆ ಬಿದ್ದು ನಮ್ಮ ಜಮೀನು ಉಳಿಸಿಕೊಡುವಂತೆ ಗೋಳಿಟ್ಟರು.

ಬೆಳಗಾವಿ ತಾಲ್ಲೂಕಿನ ಮಚ್ಛೆ ಹೊರವಲಯದಲ್ಲಿ ಬೈಪಾಸ್ ರಸ್ತೆ ನಿರ್ಮಾಣ ಸ್ಥಳಕ್ಕೆ ಡಿಸಿಪಿ ವಿಕ್ರಂ ಅಮೆಟೆ ಭೇಟಿ ನೀಡಿ ಪರಿಶೀಲಿಸಿದರು
ಬೆಳಗಾವಿ ತಾಲ್ಲೂಕಿನ ಮಚ್ಛೆ ಹೊರವಲಯದಲ್ಲಿ ಬೈಪಾಸ್ ರಸ್ತೆ ನಿರ್ಮಾಣ ಸ್ಥಳಕ್ಕೆ ಡಿಸಿಪಿ ವಿಕ್ರಂ ಅಮೆಟೆ ಭೇಟಿ ನೀಡಿ ಪರಿಶೀಲಿಸಿದರು

ಈ ವೇಳೆ ಪತ್ರಕರ್ಯರೊಂದಿಗೆ ಮಾತನಾಡಿದ ಅಮಿತ್, ‘ನಮ್ಮದು ಮೂರು ಎಕರೆ ಜಮೀನಿದೆ. ಅದರಲ್ಲಿ ಒಂದೂವರೆ ಎಕರೆ ಭೂಸ್ವಾಧೀನ ಆಗಿದೆ. ನಾವು ಪರಿಹಾರ ಪಡೆದಿಲ್ಲ; ಜಮೀನು ನೀಡುವುದಿಲ್ಲ. ಕಟಾವಿಗೆ ಬಂದ ಕಬ್ಬಿಗೆ ಮತ್ತು ಭೂಮಿಗೆ ಪರಿಹಾರ ಕೊಡುತ್ತೇವೆ ಎಂದಿದ್ದಾರೆ. ಅದಕ್ಕೆ ನಮ್ಮ ಸಮ್ಮತಿ ಇಲ್ಲ’ ಎಂದು ತಿಳಿಸಿದರು.

‘ಇಲ್ಲಿ ಗುಂಟೆಗೆ ₹ 8 ಲಕ್ಷ ಇದೆ. ಆದರೆ, ಸರ್ಕಾರದವರು ₹ 1.50 ಲಕ್ಷ ಕೊಡುತ್ತಾರೆ. ಪರಿಹಾರವೂ ಬೇಡ, ಜಮೀನನ್ನೂ ಬಿಟ್ಟು ಕೊಡುವುದಿಲ್ಲ. ಮೊದಲು ಸಮೀಕ್ಷೆ ಮಾಡಿದ ಜಾಗವೇ ಬೇರೆ ಇತ್ತು. ಬಳಿಕ ಯೋಜನೆ ಬದಲಿಸಿದ್ದಾರೆ. ಮೊದಲಿನ ಯೋಜನೆಯಂತೆ ಜಮೀನು ಭೂಸ್ವಾಧೀನ ಆದ ರೈತರು ದುಡ್ಡು ಪಡೆದಿದ್ದಾರೆ. ಯೋಜನೆ ಬದಲಾದ ನಂತರ ಜಮೀನು ಕಳೆದುಕೊಂಡವರಿಗೆ ಹಣ ಬಂದಿಲ್ಲ. ಅಧಿಕಾರಿಗಳ ಬೇಜವಾಬ್ದಾರಿಯಿಂದ ಹೀಗಾಗಿದೆ. ರಾಜಕಾರಣಿಗಳ ಜಮೀನು ಉಳಿಸಿದ್ದಾರೆ’ ಎಂದು ಆರೋಪಿಸಿದರು.

‘ಕಾಮಗಾರಿ ಝೀರೊ ಪಾಯಿಂಟ್ (ಆರಂಭದ ಸ್ಥಳ) ಮೀನು ಮಾರ್ಕೆಟ್ ಬಳಿ ಇತ್ತು. ಈಗ ಹಲಗಾ ಬಳಿ ಝೀರೊ ಪಾಯಿಂಟ್ ಮಾಡಲಾಗಿದೆ. ಜಮೀನು ಕಳೆದುಕೊಳ್ಳುವ ಭಯವಿದೆ. ಹೀಗಾಗಿ ತಂದೆ ಅಧಿಕಾರಿಗಳ ಕ್ರಮವನ್ನು ವಿರೋಧಿಸುತ್ತಿದ್ದಾರೆ. ತಂದೆ ಅನಿಲ್ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಿರಂದ ತಮ್ಮ ಆಕಾಶ್ ಪೆಟ್ರೋಲ್‌ ಸುರಿದುಕೊಂಡು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾನೆ’ ಎಂದು ಆರೋಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT