ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳಗಾವಿ: ಹಿಂದಿ ಹೇರಿಕೆ ವಿರುದ್ಧ ಆಕ್ರೋಶ

ಗಡಿ ನಾಡಲ್ಲಿ ಕನ್ನಡ ಸಂಘಟನೆಗಳಿಂದ ಪ್ರತಿಭಟನೆ
Last Updated 14 ಸೆಪ್ಟೆಂಬರ್ 2021, 13:08 IST
ಅಕ್ಷರ ಗಾತ್ರ

ಬೆಳಗಾವಿ: ಹಿಂದಿ ಹೇರಿಕೆ ಮಾಡುತ್ತಿರುವ ಕೇಂದ್ರ ಸರ್ಕಾರದ ಧೋರಣೆ ಮತ್ತು ಹಿಂದಿ ದಿವಸ ಮೊದಲಾದ ಆಚರಣೆಗಳನ್ನು ವಿರೋಧಿಸಿ ಕನ್ನಡ ಸಂಘಟನೆಗಳ ಮುಖಂಡರು ಹಾಗೂ ಕಾರ್ಯಕರ್ತರು ನಗರದಲ್ಲಿ ಮಂಗಳವಾರ ‍ಪ್ರತಿಭಟನೆ ನಡೆಸಿದರು.

ಕೇಂದ್ರವು ತನ್ನ ನೀತಿ ಬದಲಾಯಿಸಿಕೊಳ್ಳದಿದ್ದಲ್ಲಿ, ಹೋರಾಟ ತೀವ್ರಗೊಳಿಸುವ ಎಚ್ಚರಿಕೆಯನ್ನೂ ಅವರು ನೀಡಿದರು.

ಬ್ಯಾಂಕ್ ಶಾಖೆ ಎದುರು:ಕರವೇ ಜಿಲ್ಲಾ ಘಟಕದವರು ಅಧ್ಯಕ್ಷ ದೀಪಕ ಗುಡಗನಟ್ಟಿ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಕಚೇರಿ ಸಮೀಪದ ಎಸ್‌ಬಿಐ ಶಾಖೆ ಎದುರು ಕಪ್ಪು ಪಟ್ಟಿ ಕಟ್ಟಿಕೊಂಡು ಪ್ರತಿಭಟನೆ ನಡೆಸಿದರು. ಹಿಂದಿ ಹೇರಿಕೆ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

‘ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ಕನ್ನಡ ಅನುಷ್ಠಾನಕ್ಕೆ ಆದ್ಯತೆ ನೀಡಬೇಕು. ಕೇಂದ್ರದ ನೀತಿಯನ್ನು ಶಾಸಕರು ಹಾಗೂ ಸಂಸದರು ಖಂಡಿಸಬೇಕು. ಇಲ್ಲವಾದರೆ ಮುಂದಿನ ದಿನಗಳಲ್ಲಿ ಆ ಜನಪ್ರತಿನಿಧಿಗಳ ಮನೆಯ ಬಳಿಯೇ ಧರಣಿ ನಡೆಸಲಾಗುವುದು’ ಎಂದು ದೀಪಕ ಎಚ್ಚರಿಕೆ ನೀಡಿದರು.

‘ಕನ್ನಡಿಗರ ತೆರಿಗೆ ಹಣದಲ್ಲಿ ಹಿಂದಿ ಭಾಷೆಯ ವೈಭವೀಕರಣ ಸಲ್ಲದು. ಹಿಂದಿಯು ರಾಷ್ಟ್ರೀಯ ಭಾಷೆ ಅಲ್ಲ. ಕರುನಾಡಿನಲ್ಲಿ ಕನ್ನಡವೇ ಸಾರ್ವಭೌಮ. ಅದಕ್ಕೆ ಆದ್ಯತೆ ಕೊಡಬೇಕು. ಹಿಂದಿ ಹೇರಿಕೆಯನ್ನು ಕೂಡಲೇ ನಿಲ್ಲಿಸಬೇಕು. ಬ್ಯಾಂಕ್‌ಗಳಲ್ಲಿನ ಸಿಬ್ಬಂದಿಯು ಕನ್ನಡದಲ್ಲಿ ವ್ಯವಹರಿಸಬೇಕು. ಕರ್ನಾಟಕದವರನ್ನೇ ನೇಮಿಸಬೇಕು. ಕನ್ನಡ ಬಾರದವರನ್ನು ಅವರವರ ರಾಜ್ಯಗಳಿಗೆ ವರ್ಗಾಯಿಸಬೇಕು’ ಎಂದು ಒತ್ತಾಯಿಸಿದರು.

‘ಬ್ಯಾಂಕ್‌ನ ನಾಮಫಲಕ ಹಾಗೂ ಸೂಚನಾ ಫಲಕಗಳಲ್ಲಿ ಶೇ 60ರಷ್ಟು ಪ್ರಮಾಣದಲ್ಲಿ ಕನ್ನಡವನ್ನು ಬಳಸಬೇಕು. ಬ್ಯಾಂಕ್‌ನಲ್ಲಿ ದೊರೆಯುವ ಎಲ್ಲ ರೀತಿಯ ಅರ್ಜಿಗಳೂ ಕನ್ನಡದಲ್ಲಿ ಇರುವಂತೆ ನೋಡಿಕೊಳ್ಳಬೇಕು. ಹಿಂದಿ ದಿವಸ, ಹಿಂದಿ ಸಪ್ತಾಹ ಹಾಗೂ ಹಿಂದಿ ಪಕ್ವಾಡ ಮೊದಲಾದ ಒಕ್ಕೂಟ ವಿರೋಧಿ ಆಚರಣೆಗಳನ್ನು ನಿಲ್ಲಿಸಬೇಕು’ ಎಂದು ಆಗ್ರಹಿಸಿದರು.

ರಾಜ್ಯ ಸಂಚಾಲಕ ಮಹಾದೇವ ತಳವಾರ, ಜಿಲ್ಲಾ ಘಟಕದ ಉಪಾಧ್ಯಕ್ಷ ಸುರೇಶ ಗವನ್ನವರ ಇದ್ದರು.

ಕರುನಾಡ ಸೇವಕರು:‘ಸೆ.14ನ್ನು ರಾಷ್ಟ್ರೀಯ ಹಿಂದಿ ದಿನವಾಗಿ ಆಚರಿಸಲು ನಿರ್ಧರಿಸಿರುವ ಕೇಂದ್ರ ಸರ್ಕಾರದ ನೀತಿ ಖಂಡನೀಯ’ ಎಂದು ಆರೋಪಿಸಿ ಕರುನಾಡ ಸೇವಕರು ಸಂಘಟನೆಯ ಜಿಲ್ಲಾ ಘಟಕದ ಕಾರ್ಯಕರ್ತರು ರಾಣಿ ಚನ್ನಮ್ಮ ವೃತ್ತದಲ್ಲಿ ಪ್ರತಿಭಟಿಸಿದರು. ಮೆರವಣಿಗೆಯಲ್ಲಿ ತೆರಳಿ ಜಿಲ್ಲಾಧಿಕಾರಿ ಕಚೇರಿಗೆ ಮನವಿ ಸಲ್ಲಿಸಿದರು. ಎಲ್‌ಐಸಿ ಕಚೇರಿ ಎದುರಿನಲ್ಲೂ ಘೋಷಣೆ ಕೂಗಿದರು.

‘ಸಂವಿಧಾನದಲ್ಲಿ ಹಿಂದಿ ರಾಷ್ಟ್ರಭಾಷೆ ಎನ್ನುವುದರ ಉಲ್ಲೇಖವಿಲ್ಲ. ಒಟ್ಟು 22 ಭಾಷೆಗಳು ಸಂವಿಧಾನದಲ್ಲಿವೆ. ಒಕ್ಕೂಟ ವ್ಯವಸ್ಥೆಯಲ್ಲಿ ಆಯಾ ರಾಜ್ಯಗಳ ಭಾಷೆಗಳೇ ಅಲ್ಲಿ ಪ್ರಮುಖವಾಗುತ್ತವೆ. ಆದ್ದರಿಂದ ಹಿಂದಿ ಭಾಷೆ ಹೇರಿಕೆಯನ್ನು ಕೇಂದ್ರ ಸರ್ಕಾರ ಕೂಡಲೇ ಹಿಂಪಡೆಯಬೇಕು’ ಎಂದು ಜಿಲ್ಲಾ ಘಟಕದ ಅಧ್ಯಕ್ಷ ಶಿವು ಒತ್ತಾಯಿಸಿದರು.

ಯಲ್ಲನಗೌಡ ಪಾಟೀಲ, ಕೃಷ್ಣ, ಅಡಿವೆಪ್ಪ, ಶಿವಾನಂದ ಇದ್ದರು.

ಕರವೇ (ಶಿವರಾಮೇಗೌಡ ಬಣ) ಕಾರ್ಯಕರ್ತರು ಕೂಡ ಪ್ರತಿಭಟನೆ ನಡೆಸಿದರು. ಜಿಲ್ಲಾಧಿಕಾರಿ ಕಚೇರಿಗೆ ಮನವಿ ಸಲ್ಲಿಸಿದರು. ಹಿಂದಿ ಹೇರಿಕೆ ನೀತಿ ಕೈಬಿಡಬೇಕು ಎಂದು ಒತ್ತಾಯಿಸಿದರು.

ಜಿಲ್ಲಾ ಘಟಕದ ಅಧ್ಯಕ್ಷ ವಾಜೀದ್ ಹಿರೇಕೋಡಿ ನೇತೃತ್ವ ವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT