ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಈಗಿರುವುದು ಕಂಪನಿ ಸರ್ಕಾರ, ಅದರ ಬಾದ್‌ಷಾ ಮೋದಿ: ರಾಕೇಶ್ ಟಿಕಾಯತ್

ಸುವರ್ಣ ವಿಧಾನಸೌಧಕ್ಕೆ ಮುತ್ತಿಗೆ ಹಾಕಲು ರೈತರಿಗೆ ಕರೆ
Last Updated 31 ಮಾರ್ಚ್ 2021, 13:20 IST
ಅಕ್ಷರ ಗಾತ್ರ

ಬೆಳಗಾವಿ: ‘ನಾವು ದೆಹಲಿ ಗಡಿಗಳಲ್ಲಿ ಟ್ರ್ಯಾಕ್ಟರ್‌ಗಳನ್ನು ಆಯುಧ ಮಾಡಿಕೊಂಡು ಹೋರಾಡುತ್ತಿದ್ದೇವೆ. ಈ ಭಾಗದ ರೈತರು ಬೆಂಗಳೂರಿಗೆ ಹೋಗಬೇಕಿಲ್ಲ. ಬೆಳಗಾವಿಯಲ್ಲಿರುವ ಸುವರ್ಣ ವಿಧಾನಸೌಧಕ್ಕೆ ಮುತ್ತಿಗೆ ಹಾಕಬೇಕು. ಇದಕ್ಕಾಗಿ ಪೊಲೀಸರಿಂದ ಅನುಮತಿಯನ್ನೇನೂ ಕೇಳಬಾರದು’ ಎಂದು ಸಂಯುಕ್ತ ಕಿಸಾನ್ ಮೋರ್ಚಾ ನಾಯಕ ರಾಕೇಶ್ ಟಿಕಾಯತ್ ಕರೆ ನೀಡಿದರು.

ಅಖಿಲ‌ ಭಾರತ ಸಂಯುಕ್ತ ಕಿಸಾನ್ ಮೋರ್ಚಾದಿಂದ ಕರಾಳ ಕೃಷಿ ಕಾನೂನುಗಳ ವಿರುದ್ಧ ಹಾಗೂ ಎಂಎಸ್‌ಪಿ (ಕನಿಷ್ಠ ಬೆಂಬಲ ಬೆಲೆ) ಶಾಸನಬದ್ಧಗೊಳಿಸಲು ಆಗ್ರಹಿಸಿ ನಗರದ ಸಿಪಿಇಡಿ ಕಾಲೇಜು ಮೈದಾನದಲ್ಲಿ ಬುಧವಾರ ಆಯೋಜಿಸಿದ್ದ ‘ರೈತ ಮಹಾಪಂಚಾಯತ್’ ಉದ್ದೇಶಿಸಿ ಅವರು ಮಾತನಾಡಿದರು.

‘ಕೃಷಿಗೆ ಸಂಬಂಧಿಸಿದ ಮೂರು ತಿದ್ದುಪಡಿ ಕಾಯ್ದೆಗಳನ್ನು ವಾಪಸ್ ಪಡೆಯಲೇಬೇಕು. ಇದಕ್ಕಾಗಿ ನಾವು ಅನುಮತಿ ಪಡೆದು ಹೋರಾಡಿಲ್ಲ. ಪೊಲೀಸರು ಅಶ್ರುವಾಯು ಪ್ರಯೋಗಿಸುವಂತೆ ನಮ್ಮ ಹೋರಾಟ ಇರಬೇಕು. ಒಂದು ಊರು, ಒಂದು ಟ್ರ್ಯಾಕ್ಟರ್, 15 ಹಾಗೂ 10 ದಿನ ಫಾರ್ಮುಲಾ ಅನುಸರಿಸಿ. ಸರದಿಯಲ್ಲಿ ಚಳವಳಿ ನಡೆಸಿ. ಯಾವುದಕ್ಕೂ ಹೆದರಬೇಕಿಲ್ಲ. ಪೊಲೀಸರು ಬ್ಯಾರಿಕೇಡ್ ಹಾಕಿದರೆ, ನೀವು ಟ್ರ್ಯಾಕ್ಟರ್‌ಗಳನ್ನು ಅಡ್ಡ ನಿಲ್ಲಿಸಿರಿ’ ಎಂದು ತಿಳಿಸಿದರು.

ಮುರಿಯಿರಿ:‘ಪೊಲೀಸರ ಬ್ಯಾರಿಕೇಡ್‍ಗಳನ್ನು ಮುರಿದು ಮುನ್ನುಗ್ಗಬೇಕು. ಯಾವಾಗ ರೈತರ ಚಳವಳಿ ತೀವ್ರವಾಗುತ್ತದೆಯೋ ಆಗ ಸರ್ಕಾರಗಳು ಎಚ್ಚೆತ್ತುಕೊಳ್ಳುತ್ತವೆ. 2021– ರೈತ ಹೋರಾಟದ ವರ್ಷ. ಇದಕ್ಕೆ ನೀವೂ ಕೈಜೋಡಿಸಬೇಕು’ ಎಂದು ಹೇಳಿದರು.

ನಾಯಕ ಯುದ್ಧವೀರ್‌ ಸಿಂಗ್‌ ಮಾತನಾಡಿ, ‘ಅದಾನಿ, ಅಂಬಾನಿ ಈ ದೇಶ ಕಬ್ಜಾ ಮಾಡಿಕೊಳ್ಳುತ್ತಿದ್ದಾರೆ. ದೇಶದಲ್ಲಿರುವುದು ಬಿಜೆಪಿ ಸರ್ಕಾರವಲ್ಲ. ಅದನ್ನು ಆ ಪಕ್ಷದ ಕಾರ್ಯಕರ್ತರು ಅರಿಯಬೇಕು. ಈಗಿರುವುದು ನರೇಂದ್ರ ಮೋದಿ ಸರ್ಕಾರ. ಚುನಾವಣೆಯಲ್ಲಿ ಹೇಳಿರಲಿಲ್ಲವೇ, ಈ ಬಾರಿ ಮೋದಿ ಸರ್ಕಾರ ಎಂದು? ಅವರು ಅದಾನಿ ಹಾಗೂ ಅಂಬಾನಿಗಾಗಿ ದಲಾಲರಾಗಿ ಕೆಲಸ ಮಾಡುತ್ತಿದ್ದಾರೆ. ಎಲ್ಲವನ್ನೂ ಖಾಸಗೀಕರಣ ಮಾಡುವ ಷಡ್ಯಂತ್ರ ನಡೆಸಿದ್ದಾರೆ’ ಎಂದು ಟೀಕಿಸಿದರು.

ಹಾರಾಡಿದ ಹಸಿರು ಬಾವುಟಗಳು

ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ವರಿಷ್ಠ ಕೆ.ಟಿ. ಗಂಗಾಧರ, ನಾಯಕರಾದ ಬಾಬಾಗೌಡ ಪಾಟೀಲ, ಚುಕ್ಕಿ ನಂಜುಂಡಸ್ವಾಮಿ, ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕುರುಬೂರು ಶಾಂತಕುಮಾರ್‌ ಮಾತನಾಡಿದರು.

ಇದಕ್ಕೂ ಮುನ್ನ, ರಾಣಿ ಚನ್ನಮ್ಮ ವೃತ್ತದಿಂದ ಮೆರವಣಿಗೆ ನಡೆಯಿತು. ಮಹಿಳೆಯರು ಕುಂಭಗಳನ್ನು ಹೊತ್ತು ಪಾಲ್ಗೊಂಡಿದ್ದರು. ದೆಹಲಿಯಿಂದ ಬಂದಿದ್ದ ನಾಯಕರನ್ನು ಎತ್ತಿನ ಬಂಡಿಯಲ್ಲಿ ಮೆರವಣಿಗೆಯಲ್ಲಿ ಕರೆತರಲಾಯಿತು. ನೂರಾರು ರೈತರು ಪಾಲ್ಗೊಂಡು ಸರ್ಕಾರದ ವಿರುದ್ಧ ‘ಹಸಿರು ಕಹಳೆ’ ಮೊಳಗಿಸಿದರು. ಹಸಿರು ಬಾವುಟಗಳು ರಾರಾಜಿಸಿದವು.

ರಣ ಬಿಸಿಲಿನಲ್ಲೇ ಸಮಾವೇಶ ನಡೆಯಿತು. ಪೆಂಡಾಲ್ ಹಾಕಲು ಅನುಮತಿ ಕೊಡದ ಸರ್ಕಾರದ ವಿರುದ್ಧ ನಾಯಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ‘ಸರ್ಕಾರವನ್ನು ಬಿಸಿಲಿಗೆ ನಿಲ್ಲಿಸುವವರೆಗೂ ವಿಶ್ರಮಿಸಬಾರದು’ ಎಂದು ಗಂಗಾಧರ ಕರೆ ನೀಡಿದರು.

‘ದೇಶದಲ್ಲಿರುವುದು ಕಂಪನಿಗಳ ಸರ್ಕಾರ’

‘ಕೇಂದ್ರ ಸರ್ಕಾರವು ಕಾಯ್ದೆಗಳಿಗೆ ತಿದ್ದುಪಡಿ ತರುವ ಮುನ್ನವೇ ಗೋದಾಮಗಳು ನಿರ್ಮಾಣವಾಗಿವೆ. ಕಂಪನಿಗಳಿಗೆ ಅನುಕೂಲ ಕಲ್ಪಿಸಲು ಮಾಡಿದ ತಿದ್ದುಪಡಿ ಇದೆನ್ನುವುದು ಇದರಿಂದ ಗೊತ್ತಾಗುತ್ತದೆ. ದೇಶದಲ್ಲಿರುವ ಯಾವುದೇ ಪಕ್ಷದ ಸರ್ಕಾರವಲ್ಲ. ಇದು ಕಂಪನಿಗಳ ಸರ್ಕಾರ. ಇದರ ಬಾದ್‌ಷಾ ನರೇಂದ್ರ ಮೋದಿ. ಲೂಟಿಕೋರರ ಸರ್ಕಾರ ಇದಾಗಿದೆ’ ಎಂದು ಟಿಕಾಯತ್‌ ವಾಗ್ಬಾಣ ಪ್ರಯೋಗಿಸಿದರು.

‘ಈ ಕಂಪನಿ ಸರ್ಕಾರವನ್ನು ಓಡಿಸಬೇಕು. ಇದಕ್ಕಾಗಿ ಎರಡೂವರೆ ಗಂಟೆಯಲ್ಲಿ ಐದು ಲಕ್ಷ ರೈತರು ದೆಹಲಿಗೆ ನುಗ್ಗಲು ತಯಾರಿಯಲ್ಲಿದ್ದಾರೆ. ಹೋರಾಟ ಮಾಡದಿದ್ದರೆ ಭೂಮಿ ಕಳೆದುಕೊಳ್ಳಬೇಕಾಗುತ್ತದೆ. ಕಂಪನಿಗಳು ಬಂದು ಲೂಟಿ ಹೊಡೆಯುತ್ತವೆ. ಅದಕ್ಕೆ ಅವಕಾಶ ಕೊಡಬಾರದು. ಹೋರಾಟ ಮುಂದುವರಿಸಬೇಕು’ ಎಂದು ತಿಳಿಸಿದರು.

***

ರೈತರು ಹಾಗೂ ಕಾರ್ಮಿಕರಿಗೆ ಯಾವುದೇ ಮಂದಿರದ ಅಗತ್ಯವಿಲ್ಲ. ಅವರ ಮನಸ್ಸಿನಲ್ಲೇ ಮಂದಿರ ಇರುತ್ತದೆ.

– ಯುದ್ಧವೀರ್‌ ಸಿಂಗ್‌, ರೈತ ನಾಯಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT