ಕೊಯ್ನಾ ಜಲಾಶಯದಿಂದ ಕೃಷ್ಣೆಗೆ ನೀರು: ತಹಶೀಲ್ದಾರ್‌ ಕಚೇರಿಗೆ ಮುತ್ತಿಗೆ

ಸೋಮವಾರ, ಮೇ 27, 2019
24 °C
2 ದಿನಗಳ ಗಡುವು; ಹೋರಾಟ ತೀವ್ರಗೊಳಿಸುವ ಎಚ್ಚರಿಕೆ

ಕೊಯ್ನಾ ಜಲಾಶಯದಿಂದ ಕೃಷ್ಣೆಗೆ ನೀರು: ತಹಶೀಲ್ದಾರ್‌ ಕಚೇರಿಗೆ ಮುತ್ತಿಗೆ

Published:
Updated:
Prajavani

ಅಥಣಿ: ಮಹಾರಾಷ್ಟ್ರದ ಕೊಯ್ನಾ ಜಲಾಶಯದಿಂದ ಕೃಷ್ಣಾ ನದಿಗೆ ನೀರು ಬಿಡುಗಡೆ ಮಾಡಿಸುವಂತೆ ಆಗ್ರಹಿಸಿ ರೈತರು ಹಾಗೂ ಸ್ಥಳೀಯರು ಸೋಮವಾರ ತಹಶೀಲ್ದಾರ್‌ ಕಚೇರಿಗೆ ಮುತ್ತಿಗೆ ಹಾಕಿ ಧರಣಿ ನಡೆಸಿದರು.

‘ತಾಲ್ಲೂಕಿನ ಉತ್ತರ ಭಾಗದ ಹಳ್ಳಿಗಳಲ್ಲಿ ಕುಡಿಯುವ ನೀರಿಗಾಗಿ ಹಾಹಾಕಾರ ಉಂಟಾಗಿದೆ. ತಾಲ್ಲೂಕು ಆಡಳಿತ ನೀಡಿದ ಭರವಸೆ ಪ್ರಕಾರ, ಟ್ಯಾಂಕರ್‌ ನೀರು ಪೂರೈಕೆಯೂ ಸರಿಯಾಗಿ ನಡೆಯುತ್ತಿಲ್ಲ. ಬರ ನಿರ್ವಹಣೆಯಲ್ಲಿ ಆಡಳಿತ ವಿಫಲವಾಗಿದೆ’ ಎಂದು ರೈತ ಸಂಘ ತಾಲ್ಲೂಕು ಘಟಕದ ಅಧ್ಯಕ್ಷ ರಾಜು ಜಂಬಗಿ ದೂರಿದರು.

‘ಉತ್ತರ ಭಾಗದ ಹಳ್ಳಿಗಳ ರೈತರು ಕುಟುಂಬ ಸಮೇತ ಮಹಾರಾಷ್ಟ್ರಕ್ಕೆ ಗುಳೆ ಹೋಗುತ್ತಿದ್ದಾರೆ. ನೀರಿಗೆ ತತ್ವಾರದ ಪರಿಸ್ಥಿತಿ ಹೀಗೆಯೇ ಮುಂದುವರಿದರೆ 15 ದಿನಗಳಲ್ಲಿ ಎಲ್ಲರೂ ಗುಳೇ ಹೋಗಬೇಕಾಗುತ್ತದೆ’ ಎಂದು ಆರೋಪಿಸಿದರು.

‘ಮಹಾರಾಷ್ಟ್ರದಿಂದ ನೀರು ಬಿಡಿಸುವುದಾಗಿ ಲೋಕಸಭೆ ಚುನಾವಣೆಯಲ್ಲಿ ಭರವಸೆ ನೀಡಿದ್ದ ಬಿಜೆಪಿ ಹಾಗೂ ಕಾಂಗ್ರೆಸ್ ಮುಖಂಡರು ಈಗ ನಾಪತ್ತೆಯಾಗಿದ್ದಾರೆ. ಇನ್ನೆರಡು ದಿನಗಳಲ್ಲಿ ನೀರು ಬಿಡಿಸಬೇಕು. ಇಲ್ಲವಾದಲ್ಲಿ ಹಿಂಸಾತ್ಮಕ ಪ್ರತಿಭಟನೆಗೆ ಮುಂದಾಗಬೇಕಾಗುತ್ತದೆ. ಜಾನುವಾರುಗಳ ಸಮೇತ ಕುಟುಂಬದೊಂದಿಗೆ ಬಂದು ಪೊಲೀಸ್‌ ಠಾಣೆಯಲ್ಲಿ ಕೂರುತ್ತೇವೆ’ ಎಂದು ಎಚ್ಚರಿಕೆ ನೀಡಿದರು.

ಅಥಣಿ ಜಿಲ್ಲಾ ಹೋರಾಟ ಸಮಿತಿ ಅಧ್ಯಕ್ಷ ಪ್ರಶಾಂತ ತೋಡಕರ ಮಾತನಾಡಿ, ‘ಪ್ರತಿ ವರ್ಷ ಬೇಸಿಗೆ ಸಂದರ್ಭದಲ್ಲಿ ಹೋರಾಟ ಮಾಡಿ ನೀರು ಪಡೆದುಕೊಳ್ಳವಂತಾಗಿದೆ. ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಸರ್ಕಾರ ಮುಂದಾಗಬೇಕು’ ಎಂದು ಒತ್ತಾಯಿಸಿದರು.

ರೈತ ಮುಖಂಡ ರಾವಸಾಬ ಹಳ್ಳೂರ ಮಾತನಾಡಿ, ‘ನೀರಿಲ್ಲದೇ ಒಣಗುತ್ತಿರುವ ಕಬ್ಬನ್ನು ರೈತರು ಉತ್ತು ನಾಶಪಡಿಸುತ್ತಿದ್ದಾರೆ’ ಎಂದು ತಿಳಿಸಿದರು.

‘ಕಳೆದ ಸರ್ಕಾರದ ಅವಧಿಯಲ್ಲಿ ಮಹಾರಾಷ್ಟ್ರದಿಂದ ನೀರು ಬಿಡುಗಡೆ ಮಾಡಿಸಿಕೊಂಡಿದ್ದೆವು. ಆದರೆ, ಸರ್ಕಾರ ಆಲಮಟ್ಟಿ ಜಲಾಶಯದಿಂದ ಆ  ರಾಜ್ಯಕ್ಕೆ ನೀರು ಬಿಡಲಿಲ್ಲ. ಹೀಗಾಗಿ, ಈ ಬಾರಿ ಮಹಾರಾಷ್ಟ್ರ ನೀರಿಗೆ ನೀರು ನೀಡಬೇಕು ಎನ್ನುವ ಒಪ್ಪಂದಕ್ಕೆ ಪಟ್ಟು ಹಿಡಿದಿದೆ. ಕೃಷ್ಣಾ ನದಿ ಪಾತ್ರದ ಎಲ್ಲ ಶಾಸಕರೂ ರಾಜೀನಾಮೆ ಕೊಟ್ಟರೆ ನೀರು ತಾನಾಗಿಯೇ ಬರುತ್ತದೆ’ ಎಂದರು.

ತಹಶೀಲ್ದಾರ್‌ ಎಂ.ಎನ್. ಬಳಿಗಾರ ಅವರಿಗೆ ಮನವಿ ಸಲ್ಲಿಸಿದರು.

ಸ್ಥಳಕ್ಕೆ ಬಂದ ಶಾಸಕ ಮಹೇಶ ಕುಮಠಳ್ಳಿ, ‘ಕೃಷ್ಣಾ ನದಿಗೆ ಅಥಣಿ ತಾಲ್ಲೂಕಿನಲ್ಲಿ ಸೇತುವೆ ಕಟ್ಟಲು ಸರ್ಕಾರದಲ್ಲಿ ಚರ್ಚಿಸಿದ್ದೇನೆ. ಆಗ, ತಾಲ್ಲೂಕಿಗೆ ಬೇಕಾದಷ್ಟು ನೀರು ಹಿಡಿದಿಟ್ಟುಕೊಳ್ಳಬಹುದಾಗಿದೆ’ ಎಂದು ತಿಳಿಸಿದರು.

ಇದಕ್ಕೂ ಮುನ್ನ, ತಹಶೀಲ್ದಾರ್‌ ಕಚೇರಿಗೆ ಬೀಗ ಹಾಕಲು ಮುಂದಾದ ಪ್ರತಿಭಟನಾಕಾರರನ್ನು ಪೊಲೀಸರು ತಡೆದರು. ಆಗ ವಾಗ್ವಾದ ನಡೆಯಿತು. ನಂತರ ಕಚೇರಿಯ ಬಾಗಿಲಲ್ಲಿ ಎರಡು ಗಂಟೆವರೆಗೆ ಧರಣಿ ನಡೆಸಿದರು.

ಕಿಸಾನ್‌ ಸಂಘ, ರೈತ ಸಂಘ ಹಾಗೂ ಅಥಣಿ ಜಿಲ್ಲಾ ಹೋರಾಟ ಸಮಿತಿ ಮುಖಂಡರಾದ ಅಮರಾನಾಥ ಬಗಲಿ, ವಿವೇಕ ಮೋರೆ, ಸಿದ್ದಾರೂಢ ಮಠಪತಿ, ವೀರಪ್ಪ ತಂಗಡಿ, ಶ್ರೀಶೈಲ ಜನಗೌಡ, ಮಹಾಂತೇಶ ಬಾಡಗಿ, ಕಲ್ಲೇಶ ಮಲ್ಲಿ, ಅಶೋಕ ದಾನಗೌಡರ ಭಾಗವಹಿಸಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !