ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್ ನಿರ್ವಹಣೆಯಲ್ಲಿ ಸರ್ಕಾರ ವಿಫಲ: ಧ್ರುವನಾರಾಯಣ ಆರೋಪ

Last Updated 17 ಸೆಪ್ಟೆಂಬರ್ 2020, 12:13 IST
ಅಕ್ಷರ ಗಾತ್ರ

ಬೆಳಗಾವಿ: ‘ಕೋವಿಡ್–19 ಹರಡುವುದನ್ನು ನಿಯಂತ್ರಿಸುವಲ್ಲಿ ವಿಫಲವಾಗಿರುವ ರಾಜ್ಯ ಸರ್ಕಾರವು ಡ್ರಗ್ಸ್ ದಂಧೆ ಕಿಂಗ್‍ಪಿನ್‌ಗಳನ್ನು ಹುಡುಕುವಲ್ಲೂ ಸೋತಿದೆ’ ಎಂದು ಕೆಪಿಸಿಸಿ ಆರೋಗ್ಯ ಹಸ್ತ ಕಾರ್ಯಕ್ರಮ ಅಧ್ಯಕ್ಷ ಆರ್. ಧ್ರುವನಾರಾಯಣ ಆರೋಪಿಸಿದರು.

ಇಲ್ಲಿನ ಪಕ್ಷದ ಕಚೇರಿಯಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಈ ಸರ್ಕಾರ ಜನರಿಗೆ ಮಂಕುಬೂದಿ ಎರಚುತ್ತಿದೆ. ಮಾಡುವುದು ಅನಾಚಾರ; ಮನೆ ಮುಂದೆ ಬೃಂದಾವನ ಎನ್ನುವಂತೆ ವರ್ತಿಸುತ್ತಿದೆ’ ಎಂದು ಟೀಕಿಸಿದರು.

‘ಕೋವಿಡ್–19 ಸೋಂಕಿನಲ್ಲಿ ಮುಂದಿದ್ದ ಕೇರಳ ಹಾಗೂ ದೆಹಲಿ ಬಳಿಕ ಚೇತರಿಸಿಕೊಂಡಿವೆ. ಆದರೆ, ರಾಜ್ಯದಲ್ಲಿ ಸರ್ಕಾರದ ನಿರ್ಲಕ್ಷ್ಯದಿಂದಾಗಿ ಸೋಂಕು ಹರಡುತ್ತಲೇ ಇದೆ. ಕೇವಲ ಹೇಳಿಕೆಗಳಲ್ಲೇ ಕಾಲ ಕಳೆದದ್ದು ಇದಕ್ಕೆ ಕಾರಣ. ಸಚಿವರ ನಡುವೆ ಸಮನ್ವಯವಿಲ್ಲ. ಮುಖ್ಯಮಂತ್ರಿಗೆ ಇವರ ಮೇಲೆ ನಿಯಂತ್ರಣವಿಲ್ಲ. ಇದರಿಂದ ಜನರು ಸಂಕಷ್ಟಕ್ಕೆ ಒಳಗಾಗಿದ್ದಾರೆ’ ಎಂದು ವಾಗ್ದಾಳಿ ನಡೆಸಿದರು.

‘ಡ್ರಗ್ಸ್ ಪೂರೈಸುವ ಕಿಂಗ್‌ಪಿನ್‌ಗಳನ್ನು ಈವರೆಗೂ ಬಂಧಿಸಿಲ್ಲ. ದಂಧೆಯಲ್ಲಿ ರಾಜಕಾರಣಿಗಳ ಮಕ್ಕಳ ಹೆಸರು ಕೂಡ ಕೇಳಿ ಬರುತ್ತಿದ್ದು, ಸೂಕ್ತ ತನಿಖೆ ನಡೆಸಿ ಆರೋಪಿಗಳನ್ನು ಬಂಧಿಸಿ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕು’ ಎಂದು ಒತ್ತಾಯಿಸಿದರು.

‘ಮುಖ್ಯಮಂತ್ರಿ ಪುತ್ರ ಬಿ.ವೈ. ವಿಜಯೇಂದ್ರ ಸರ್ಕಾರದಲ್ಲಿ ಹಸ್ತಕ್ಷೇಪ ಮಾಡುತ್ತಿದ್ದಾರೆ. ಪರಿಣಾಮ ಆ ಪಕ್ಷದಲ್ಲಿ ಮುಸುಕಿನ ಗುದ್ದಾಟ ನಡೆಯುತ್ತಿದೆ. ಬಿಜೆಪಿಯ ಅನೇಕ ನಾಯಕರು ವಿಜಯೇಂದ್ರ ಕಾಲೆಳೆಯಲು ಮುಂದಾಗಿದ್ದಾರೆ’ ಎಂದು ದೂರಿದರು.

‘ಕಾಂಗ್ರೆಸ್‌ ಪಕ್ಷ ನೀಡಿದ ಕಾರ್ಯಕ್ರಮಗಳಿಂದಾಗಿ ಜನರಿಗೆ ಅನುಕೂಲವಾಗಿದೆ. ಚುನಾವಣೆಯಲ್ಲಿ ಸೋತಿದ್ದರಿಂದ ನಮಗೆ ತಾತ್ಕಾಲಿಕ ಹಿನ್ನಡೆ ಆಗಿರಬಹುದು. ಬಿಜೆಪಿ ದುರಾಡಳಿತದ ಜನರಿಗೆ ಕ್ರಮೇಣ ಗೊತ್ತಾಗುತ್ತಿದೆ’ ಎಂದು ಹೇಳಿದರು.

ಮುಖಂಡರಾದ ಅಜಯಕುಮಾರ್ ಸರನಾಯಕ, ಸದಾನಂದ ಡಂಗನವರ, ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ವಿನಯ ನಾವಲಗಟ್ಟಿ, ನಗರ ಘಟಕದ ಅಧ್ಯಕ್ಷ ರಾಜು ಸೇಠ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT