ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಲಿಕವಾಡ ಗ್ರಾಮದ ಯುವಕ ರಾಹುಲ್ ಸೇವೆ: ಊರಿಗೆ ಕ್ರೀಡಾಂಗಣದ ಕೊಡುಗೆ!

Last Updated 6 ಮಾರ್ಚ್ 2021, 19:30 IST
ಅಕ್ಷರ ಗಾತ್ರ

ಚಿಕ್ಕೋಡಿ: ಐಟಿ ಕಂಪನಿಯೊಂದರಲ್ಲಿ ಕೆಲಸ ಮಾಡುವ ಆ ಯುವಕನಿಗೆ ಸ್ವಗ್ರಾಮದಲ್ಲಿ ಏನಾದರೂ ಸಮಾಜಮುಖಿ ಸೇವೆ ಸಲ್ಲಿಸುವ ತುಡಿತ. ಕೆಲಸಕ್ಕೆ ವಿದಾಯ ಹೇಳಿ, ತಮ್ಮ ಮಾಲೀಕತ್ವದ ಸುಮಾರು ಒಂದು ಎಕರೆ ಭೂಮಿಯಲ್ಲಿ ಶ್ರಮದಾನದ ಮೂಲಕ ಸುಸಜ್ಜಿತ ಕ್ರೀಡಾಂಗಣ ನಿರ್ಮಿಸಿ ತನ್ನೂರಿನ ಮಕ್ಕಳು, ಯುವಕರಿಗೆ ಕ್ರೀಡಾ ಅಭ್ಯಾಸ ಮಾಡಲು ಅನುಕೂಲ ಕಲ್ಪಿಸಿಕೊಟ್ಟಿದ್ದಾರೆ.

ಅವರು, ಚಿಕ್ಕೋಡಿ ತಾಲ್ಲೂಕಿನ ಮಲಿಕವಾಡ ಗ್ರಾಮದ ರಾಹುಲ್ (ಆನಂದ) ವಿಲಾಸರಾವ್ ದೇಶಪಾಂಡೆ.

ಬೆಂಗಳೂರಿನ ಕೆಲಸ ಮಾಡುತ್ತಿದ್ದ ಅವರು ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್‌) ಅನುಯಾಯಿಯೂ ಹೌದು. 2009ರಲ್ಲಿ ರೈತರ ಆತ್ಮಹತ್ಯೆ ಪ್ರಕರಣಗಳು ಹೆಚ್ಚಾದಾಗ, ಗ್ರಾಮಕ್ಕೆ ತೆರಳಿ ಕೃಷಿ ಮತ್ತು ಕೃಷಿಕನ ಸಮಸ್ಯೆಗಳನ್ನು ಅರಿತುಕೊಳ್ಳಬೇಕು. ಗ್ರಾಮದಲ್ಲಿಯೇ ರಚನಾತ್ಮಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು. ಯುವಕರಲ್ಲಿ ದೇಶಾಭಿಮಾನ ಮೂಡಿಸಬೇಕು ಎಂಬ ಉದ್ದೇಶದಿಂದ ನೌಕರಿಯನ್ನು ತೊರೆದು ಸ್ವಗ್ರಾಮಕ್ಕೆ ಮರಳಿದರು.

ತಮ್ಮ ಹೊಲದಲ್ಲಿ ಸಾವಯವ ಕೃಷಿ ಪದ್ಧತಿಯನ್ನು ಅಳವಡಿಸಿಕೊಳ್ಳುವ ಮೂಲಕ ಇತರ ರೈತರಲ್ಲೂ ಜಾಗೃತಿ ಮೂಡಿಸಿದರು. ಮಲಿಕವಾಡ ಗ್ರಾಮಕ್ಕೆ ‘ಸೈನಿಕ ಮಲಿಕವಾಡ’ ಎಂಬ ಹೆಮ್ಮೆಯೂ ಇದೆ. ಗ್ರಾಮದಲ್ಲಿ ಸರಾಸರಿ ಮನೆಗೆ ಒಬ್ಬಿಬ್ಬರು ಮಾಜಿ ಸೈನಿಕರು, ಸೇವಾ ನಿರತರು ಅಥವಾ ಸೈನ್ಯ ಭರ್ತಿ ಹೊಂದಲು ತಾಲೀಮು ನಡೆಸುವ ಯುವಕರು ಸಿಕ್ಕೇ ಸಿಗುತ್ತಾರೆ. ಆದರೆ, ಗ್ರಾಮದಲ್ಲಿ ಸುಸಜ್ಜಿತ ಕ್ರೀಡಾಂಗಣದ ಕೊರತೆ ಇರುವುದನ್ನು ಮನಗಂಡು ಮೈದಾನ ನಿರ್ಮಿಸಲು ಮುಂದಾದರು.

ಗ್ರಾಮದಲ್ಲಿ ಹೊಂದಿಕೊಂಡಿರುವ ಅಪಾರ ಬೆಲೆ ಬಾಳುವ ಒಂದು ಎಕರೆ ಭೂಮಿಯಲ್ಲಿಯೇ ಕ್ರೀಡಾಂಗಣ ನಿರ್ಮಿಸಲು ಅಣಿಯಾದರು. ಆ ಸೇವಾ ಕೈಂಕರ್ಯಕ್ಕೆ ತಂದೆ ವಿಲಾಸರಾವ್ ದೇಶಪಾಂಡೆ ಅವರೂ ಪ್ರೋತ್ಸಾಹ ನೀಡಿದರು. ರಾಹುಲ್ ಅವರೇ ಶ್ರಮದಾನದ ಮೂಲಕ ಭೂಮಿಯನ್ನು ಸಮತಟ್ಟಾಗಿಸಿದರು. ಪ್ರವೇಶದ್ವಾರ, ಕಾಂಪೌಂಡ್ ಕೂಡ ಕಟ್ಟಿದ್ದಾರೆ. ಕಬಡ್ಡಿ, ವಾಲಿಬಾಲ್, ರನ್ನಿಂಗ್ ಟ್ರ್ಯಾಕ್, ಕೊಕ್ಕೊ, ಕುಸ್ತಿ ಮೊದಲಾದ ಕ್ರೀಡೆಗಳ ಅಂಕಣಗಳನ್ನೂ ರಚಿಸಿದರು. ಕ್ರೀಡಾಂಗಣಕ್ಕೆ ‘ಹುತಾತ್ಮ ಭಗತ್‍ಸಿಂಗ್ ಕ್ರೀಡಾಂಗಣ’ ಎಂದು ಹೆಸರು ನಾಮಕರಣ ಮಾಡಿ ಲೋಕಾರ್ಪಣೆ ಮಾಡಿದ್ದಾರೆ. ಈ ಮೈದಾನದಲ್ಲಿ ಯುವಕರು, ಮಕ್ಕಳು ಕ್ರೀಡೆ, ವ್ಯಾಯಾಮದಲ್ಲಿ ತೊಡಗಿರುವುದನ್ನು ಕಂಡು ಧನ್ಯತಾಭಾವ ಹೊಂದುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT