ಬೆಳಗಾವಿ: ಕಾಂಗ್ರೆಸ್‌ನಿಂದ ನಗರದಲ್ಲಿ ಸೋಮವಾರ ಆಯೋಜಿಸಿದ್ದ ಯುವ ಕ್ರಾಂತಿ ಸಮಾವೇಶಕ್ಕೆ ಜನಸಾಗರವೇ ಹರಿದುಬಂತು. ಜಿಲ್ಲೆ ಮಾತ್ರವಲ್ಲದೇ, ಉತ್ತರ ಕರ್ನಾಟಕದ ಮೂಲೆಮೂಲೆಗಳಿಂದ ಯುವಜನರು ಅಪಾರ ಸಂಖ್ಯೆಯಲ್ಲಿ ಬಂದು ಸೇರಿದರು. ಇಲ್ಲಿನ ಸಿಪಿ.ಇಡಿ ಮೈದಾನದಲ್ಲಿ ಹಾಕಿದ ವಿಶಾಲ ಶಾಮಿಯಾನದಲ್ಲಿ ಜಾಗ ಸಾಲದ್ದಕ್ಕೆ ಜನ ಮರದ ನೆರಳಿಗೆ ಕುಳಿತಿದರು. ಜನಸ್ತೋಮ ಉದ್ದೇಶಿಸಿ ಮಾತನಾಡಿದ ರಾಹುಲ್ ಗಾಂಧಿ ಹುಮ್ಮಸ್ಸು ತುಂಬಿದರು.
ಬೆಳಿಗ್ಗೆ 11.30ಕ್ಕೆ ಕಾರ್ಯಕ್ರಮ ನಿಗದಿಯಾಗಿದ್ದರೂ ನಾಯಕ ರಾಹುಲ್ ಗಾಂಧಿ ಅವರು ಮಧ್ಯಾಹ್ನ 2ರ ಸುಮಾರಿಗೆ ವೇದಿಕೆಗೆ ಬಂದರು. ಅಲ್ಲಿಯವರೆಗೂ ದೂರದೂರದಿಂದ ಜನ ಹರಿದುಬರುತ್ತಲೇ ಇದ್ದರು. ಬಹುಪಾಲು ವಾಹನಗಳನ್ನು ನಗರದ ಹೊರಗೇ ಪಾರ್ಕಿಂಗ್ ಮಾಡಿದ್ದರಿಂದ ಜನ ನಡೆದುಕೊಂಡು ಬಂದು ವೇದಿಕೆ ಸೇರಿದರು.
ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ, ಡಿ.ಕೆ.ಶಿವಕುಮಾರ, ಸಿದ್ದರಾಮಯ್ಯ, ಸತೀಶ ಜಾರಕಿಹೊಳಿ ಅವರ ಪೋಸ್ಟರ್, ಬ್ಯಾನರ್, ಬೃಹತ್ ಕಟೌಟುಗಳು ಎಲ್ಲೆಂದರಲ್ಲಿ ರಾರಾಜಿಸಿದವು. ರಾಹುಲ್ ಅವರು ವೇದಿಕೆಗೆ ಬರುತ್ತಿದ್ದಂತೆಯೇ ಯುವಜನರು ಹೋಯ್... ಎಂದು ಕೂಗು ಹಾಕಿದರು. ರಾಹುಲ್, ರಾಹುಲ್, ಜೋಡೋಜೋಡೋ– ಭಾರತ್ ಜೋಡೋ ಘೋಷಣೆ ಮೊಳಗಿಸಿದರು.
ಇನ್ನೊಂದೆಡೆ, ಪೆಂಡಾಲಿನ ಹೊರಗೆ ಕೂಡ ಕುಳಿತುಕೊಳ್ಳಲು ಮಹಿಳೆಯರಿಗೆ ಕುರ್ಚಿಗಳೇ ಸಾಲಲಿಲ್ಲ. ನಿರೀಕ್ಷೆಗಿಂತ ಹೆಚ್ಚು ಜನ ಸೇರಿದ್ದರಿಂದ ಆಸನಗಳಿಗೆ ಪರದಾಡಬೇಕಾಯಿತು. ಹಲವರು ರಸ್ತೆಯಲ್ಲಿ, ಮರದ ಕೆಳಗೆ ನಿಂತುಕೊಂಡೇ ಭಾಷಣ ಆಲಿಸಿದರು.
ಮಿಂಚಿದ ಸಿದ್ದರಾಮಯ್ಯ: ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ವೇದಿಕೆಗೆ ಬರುತ್ತಿದ್ದಂತೆಯೇ ಯುವಜನರು ಸಿಳ್ಳೆ, ಚಪ್ಪಾಳೆ, ಕೂಗಾಟದ ಮೂಲಕ ಅಭಿನಂದಿಸಿದರು. ಸಿದ್ದರಾಮಯ್ಯ ಅವರು ಭಾಷಣಕ್ಕೆ ಬಂದು ನಿಂತಾಗಲೂ ಯುವಜನರ ಉತ್ಸಾಹ ನಿಲ್ಲಲೇ ಇಲ್ಲ.
ಕೆಪಿಸಿಸಿ ಕಾರ್ಯಾಧ್ಯಕ್ಷ, ಶಾಸಕ ಸತೀಶ ಜಾರಕಿಹೊಳಿ ಗಣ್ಯರನ್ನು ಸ್ವಾಗತಿಸಿದರು. ಶಾಸಕರಾದ ಲಕ್ಷ್ಮೀ ಹೆಬ್ಬಾಳಕರ, ಡಾ.ಅಂಜಲಿ ನಿಂಬಾಳಕರ, ಮಹಾಂತೇಶ ಕೌಜಲಗಿ, ಗಣೇಶ ಹುಕ್ಕೇರಿ, ವಿಧಾನ ಪರಿಷತ್ ಸದಸ್ಯರಾದ ಪ್ರಕಾಶ ಹುಕ್ಕೇರಿ, ಚನ್ನರಾಜ ಹಟ್ಟಿಹೊಳಿ ಅವರು ಜಿಲ್ಲೆಯ ಜನರ ಪರವಾಗಿ ರಾಹುಲ್ ಗಾಂಧಿ ಹಾಗೂ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಬಸವಣ್ಣ, ಶಿವಾಜಿ ಅವರ ಬೆಳ್ಳಿ ಮೂರ್ತಿಗಳನ್ನು ನೀಡಿ ಸನ್ಮಾನಿಸಿದರು.
ಎಐಸಿಸಿ ಪ್ರಧಾನ ಕಾರ್ಯದರ್ಶಿಗಳಾದ ರಣದೀಪ್ ಸಿಂಗ್ ಸುರ್ಜೇವಾಲಾ, ವೇಣುಗೋಪಾಲ, ಎಐಸಿಸಿ ಯುವ ಘಟಕದ ಅಧ್ಯಕ್ಷ ಶ್ರೀನಿವಾಸ, ರಾಜ್ಯ ಘಟಕದ ಅಧ್ಯಕ್ಷ ಮೊಹಮ್ಮದ್ ನಲಪಾಡ್, ಮಾತನಾಡಿದರು. ಮುಖಂಡರಾದ ಈಶ್ವರ ಖಂಡ್ರೆ, ಬಿ.ಕೆ. ಹರಿಪ್ರಸಾದ್, ಎಂ.ಬಿ. ಪಾಟೀಲ, ಕೆ.ಎಚ್.ಮುನಿಯಪ್ಪ, ಎಚ್.ಕೆ. ಪಾಟೀಲ, ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ವಿನಯ ನಾವಲಗಟ್ಟಿ, ಆಶಿಫ್ ಶೇಟ್, ಸಲೀಂ ಆಹ್ಮದ್, ಫಿರೋಜ್ ಸೇಟ್ ಸೇರಿದಂತೆ ಹಲವು ನಾಯಕರು ವೇದಿಕೆ ಮೇಲಿದ್ದರು.
*
‘ಭಾವನಾತ್ಮಕ ಮೋಡಿ ನಡೆಯುವುದಿಲ್ಲ’
‘ಪ್ರಧಾನಿ ಮೋದಿ ಪದೇಪದೇ ಪಾಕಿಸ್ತಾನ, ಚೀನಾ ಹೆಸರು ಹೇಳಿಕೊಂಡು ಯುವಜನರನ್ನು ಮೋಡಿ ಮಾಡುತ್ತಾರೆ. ಈ ರೀತಿಯ ಭಾವನಾತ್ಮಕ ಮೋಡಿ ಈ ಬಾರಿ ನಡೆಯುವುದಿಲ್ಲ. ಯುವಜನರಿಗೆ ಸತ್ಯ ಗೊತ್ತಾಗಿದೆ’ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಟೀಕಿಸಿದರು.
‘ಪ್ರವಾಹದಿಂದ, ಕೊರೊನಾದಿಂದ ರಾಜ್ಯದ ಹಲವು ಜನ ಸತ್ತರು. ಆಗ ಕಣ್ಣೆತ್ತಿ ನೋಡದ ಮೋದಿ, ಮತದಾನಕ್ಕಾಗಿ ವಾರಕ್ಕೊಮ್ಮೆ ಬರುತ್ತಿದ್ದಾರೆ. ಮುಖ್ಯಮಂತ್ರಿ ಆದಿಯಾಗಿ ಇಡೀ ಸರ್ಕಾರ ಭ್ರಷ್ಟಾಚಾರದಲ್ಲಿ ಮುಳುಗಿದೆ. ಇವರನ್ನು ರಕ್ಷಣೆ ಮಾಡಲು ಸ್ವತಃ ಮೋದಿಯೇ ಬರುತ್ತಿದ್ದಾರೆ’ ಎಂದೂ ದೂರಿದರು.
*
‘ಯುವಜನರಿಗಾಗಿ ಪ್ರತ್ಯೇಕ ಪ್ರಣಾಳಿಕೆ’
‘ಬಿಜೆಪಿಯ ಭ್ರಷ್ಟಾಚಾರ, ನಿರುದ್ಯೋಗ, ಬೆಲೆ ಏರಿಕೆಯ ಕಾರಣ ಯುವಜನರು ಬೇಸತ್ತಿದ್ದಾರೆ. ಈ ಸರ್ಕಾರ ಕಿತ್ತೊಗೆಯಲು ಕಾಂಗ್ರೆಸ್ ಸನ್ನದ್ಧವಾಗಿದೆ. ಮುಂದಿನ ದಿನಗಳಲ್ಲಿ ಯುವಕರಿಗಾಗಿಯೇ ಪ್ರತ್ಯೇಕ ಪ್ರಣಾಳಿಕೆ ಸಿದ್ಧ ಮಾಡಲಾಗುತ್ತಿದೆ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ ಹೇಳಿದರು.
‘ದೇಶದ ಯುವಜನರು ರಾಜೀವ್ ಗಾಂಧಿ ಅವರನ್ನು ಮರೆಯುವಂತಿಲ್ಲ. 21 ವರ್ಷಕ್ಕೆ ಇದ್ದ ಮತದಾನದ ಹಕ್ಕನ್ನು ಅವರು 18 ವರ್ಷಕ್ಕೆ ಇಳಿಸಿದರು. ಯುವ ಸಮುದಾಯದ ಕೈಯಲ್ಲಿ ದೇಶದ ನಾಯಕರನ್ನು ಆಯ್ಕೆ ಮಾಡುವ ಹಕ್ಕು ಕೊಟ್ಟರು’ ಎಂದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.