ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಬೆಳಗಾವಿ | ವರುಣನ ಅಬ್ಬರ: ಆರಂಭದಲ್ಲೇ ಅವಾಂತರ

ಮುಖ್ಯರಸ್ತೆಗಳಲ್ಲಿ ಸಂಗ್ರಹವಾಗುತ್ತಿರುವ ಮಳೆ ನೀರು, ವಾಹನ ಸಂಚಾರಕ್ಕೆ ಸಂಚಕಾರ
Published 10 ಜೂನ್ 2024, 5:07 IST
Last Updated 10 ಜೂನ್ 2024, 5:07 IST
ಅಕ್ಷರ ಗಾತ್ರ

ಬೆಳಗಾವಿ: ಮುಂಗಾರು ಚುರುಕುಗೊಂಡಿದೆ. ಕುಡಿಯುವ ನೀರಿನ ಸಮಸ್ಯೆಯಿಂದ ಕಂಗೆಟ್ಟಿದ್ದ ಜನರು ತುಸು ನಿರಾಳವಾಗಿದ್ದಾರೆ. ಆದರೆ, ಮಳೆ ಸೃಷ್ಟಿಸಿದ ಅವಾಂತರಗಳು ನಗರದಲ್ಲಿ ಜನರನ್ನು ಮತ್ತೆ ಸಂಕಷ್ಟಕ್ಕೆ ತಳ್ಳುತ್ತಿವೆ. ಒಂದು ಸಮಸ್ಯೆ ನೀಗಿತು ಎನ್ನುಷ್ಟರಲ್ಲಿ ಮತ್ತೊಂದು ಧುತ್ತೆಂದು ಎದುರಾಗಿದೆ.

ಒಂದು ತಾಸು ಧಾರಾಕಾರ ಮಳೆಯಾದರೆ ಸಾಕು; ವಿವಿಧ ಬಡಾವಣೆಗಳ ಮುಖ್ಯರಸ್ತೆಗಳಲ್ಲಿ ಅಪಾರ ಪ್ರಮಾಣದಲ್ಲಿ ನೀರು ಸಂಗ್ರಹವಾಗುತ್ತಿದೆ. ಚರಂಡಿಗಳು ತುಂಬಿ ಕೊಳಚೆ ನೀರು ರಸ್ತೆ ಮೇಲೆಯೇ ಹರಿಯುತ್ತಿದೆ. ಮರಗಳು ನೆಲಕ್ಕುರುಳುವುದು, ವಿದ್ಯುತ್‌ ಪರಿಕರಗಳಿಗೆ ಹಾನಿಯಾಗುವುದು, ತಗ್ಗು ಪ್ರದೇಶದಲ್ಲಿನ ಮನೆಗಳಿಗೆ ನೀರು ನುಗ್ಗುವುದು ಸಾಮಾನ್ಯವಾಗಿದೆ.

ಇಲ್ಲಿನ ಹಳೆಯ ಪಿ.ಬಿ.ರಸ್ತೆ ಬಳಿ ಚರಂಡಿಗಳಲ್ಲಿನ ಹೂಳೆಲ್ಲ ರಸ್ತೆ ಮೇಲೆ ಬಂದು ನಿಲ್ಲುತ್ತಿದೆ. ಶನಿವಾರ ಮಧ್ಯಾಹ್ನ ಸುರಿದ ಧಾರಾಕಾರ ಮಳೆಯಿಂದಾಗಿ ಹಳೆಯ ಪಿ.ಬಿ. ರಸ್ತೆಯ ಮೇಲ್ಸೇತುವೆಯಿಂದ ಕರ್ನಾಟಕ ಚೌಕ್‌ಗೆ ಸಂಪರ್ಕ ಕಲ್ಪಿಸುವ ರಸ್ತೆ ಕೆರೆ ಸ್ವರೂಪ ಪಡೆದುಕೊಂಡಿತ್ತು.

‘ಹಳೇ ಪಿ.ಬಿ. ರಸ್ತೆಯಲ್ಲಿ ಆಟೊಮೊಬೈಲ್‌ ಮಳಿಗೆಗಳು ಹೆಚ್ಚಿವೆ. ಬಿರುಸಿನಿಂದ ಮಳೆಯಾದರೆ ಚರಂಡಿ ಉಕ್ಕಿ ಹರಿದು, ಕಲುಷಿತ ನೀರು ಅಂಗಡಿಗಳಿಗೆ ನುಗ್ಗುತ್ತಿದೆ. ಪ್ರತಿ ಮಳೆಗಾಲದಲ್ಲಿ ವ್ಯಾಪಾರಿಗಳು ತೊಂದರೆ ಅನುಭವಿಸುತ್ತಿದ್ದರೂ, ಮಹಾನಗರ ಪಾಲಿಕೆ ಅಧಿಕಾರಿಗಳು ಕಿವಿಗೊಡುತ್ತಿಲ್ಲ’ ಎಂದು ಬೆಳಗಾವಿ ಆಟೊಮೊಬೈಲ್‌ ಮರ್ಚಂಟ್ಸ್‌ ಅಸೋಸಿಯೇಷನ್‌ ಅಧ್ಯಕ್ಷ ಶರದ ಪಾಟೀಲ ದೂರಿದರು.

‘ಬಸವೇಶ್ವರ ವೃತ್ತ ಬಳಿ ಪಾಲಿಕೆಗೆ ಸೇರಿದ ಕಾಂಪ್ಲೆಕ್ಸ್‌ನ ನೆಲಮಹಡಿಯ ಮಳಿಗೆಗಳಿಗೂ ನೀರು ನುಗ್ಗುತ್ತಿದೆ. ಈ ವರ್ಷ ಮಳೆಗಾಲದಲ್ಲಿ ಐದನೇ ಬಾರಿ ಮಳಿಗೆಯೊಳಗೆ ನೀರು ಬಂದಿದೆ. ಇದೇ ಕಟ್ಟಡದ ಮೊದಲ ಮಹಡಿಯಲ್ಲಿ ಪಾಲಿಕೆ ಕಚೇರಿಯಿದ್ದು, ಅಧಿಕಾರಿಗಳು ಮತ್ತು ಚುನಾಯಿತ ಪ್ರತಿನಿಧಿಗಳು ಭೇಟಿ ನೀಡುತ್ತಾರೆ. ಆದರೆ, ಸಮಸ್ಯೆ ಕಂಡು ಕಾಣದಂತಿದ್ದಾರೆ’ ಎಂದು ಆರೋಪಿಸಿದರು.

ಅವೈಜ್ಞಾನಿಕ ಕಾಮಗಾರಿಗಳೂ ಕಾರಣ:

‘ಈ ಹಿಂದೆ ನಗರದ ರಸ್ತೆಬದಿಯ ಮಣ್ಣಿನಲ್ಲಿ ಮಳೆನೀರು ಇಂಗುತ್ತಿತ್ತು. ಈಗ ಬಹುತೇಕ ಕಡೆ ರಸ್ತೆಬದಿ ನಿರ್ಮಾಣವಾದ ಪಾದಚಾರಿ ಮಾರ್ಗದಲ್ಲಿ ಪೇವರ್ಸ್‌ ಅಳವಡಿಸಲಾಗಿದೆ. ಚರಂಡಿಗಳೆಲ್ಲ ಮುಚ್ಚಿದ ಸ್ಥಿತಿಯಲ್ಲಿವೆ. ಕೆಲವು ಚರಂಡಿಗಳಂತೂ ನೆಲಮಟ್ಟಕ್ಕಿಂತ ಎತ್ತರದಲ್ಲಿವೆ. ಹಾಗಾಗಿ ಮಳೆನೀರು ಇಂಗಲು ಮತ್ತು ಚರಂಡಿ ಸೇರಲು ವ್ಯವಸ್ಥೆ ಇಲ್ಲದಂತಾಗಿದೆ. ಹಾಗಾಗಿ ರಸ್ತೆ ಮೇಲೆ ನೀರು ಹರಿಯುತ್ತಿದೆ. ಮಳೆನೀರು ಸರಾಗವಾಗಿ ಹರಿದು ಹೋಗದಿರಲು ಅವೈಜ್ಞಾನಿಕ ಕಾಮಗಾರಿಗಳೂ ಕಾರಣ’ ಎಂದು ಅಧಿಕಾರಿಯೊಬ್ಬರು ಹೇಳಿದರು.

ಮಳೆ ನಿರ್ವಹಣೆಗೆ ಸಿದ್ಧತೆ:

ಮುಂಗಾರು ಪೂರ್ವದಲ್ಲಿ ಸುರಿದ ಹಾಗೂ ಜೂನ್‌ ಆರಂಭದಲ್ಲಿ ಸುರಿದ ಮಳೆ ಸೃಷ್ಟಿಸಿದ ಅವಾಂತರಗಳಿಂದ ಎಚ್ಚೆತ್ತುಕೊಂಡಿರುವ ಮಹಾನಗರ ಪಾಲಿಕೆ, ಮಳೆಗಾಲ ನಿರ್ವಹಣೆಗೆ ಸಿದ್ಧತೆ ಮಾಡಿಕೊಳ್ಳುತ್ತಿದೆ.

‘ಈ ವರ್ಷ ಆರಂಭದಲ್ಲಿ ಸುರಿದ ಮಳೆಯಿಂದ ಒಂದಿಷ್ಟು ಅವಾಂತರ ಸೃಷ್ಟಿಯಾಗಿದ್ದು ನಿಜ. ಆದರೆ, ಈಗ ಜಕ್ಕೇರಿ ನಾಲೆ, ನಾಗಝರಿ ನಾಲೆ, ಲೆಂಢಿ ನಾಲೆ, ಯಳ್ಳೂರ ರಸ್ತೆಯ ನಾಲೆ, ಧಾಮಣೆ ರಸ್ತೆಯ ನಾಲೆ, ಶಾಸ್ತ್ರಿ ನಗರ ನಾಲೆ, ಅಶೋಕ ನಗರ ನಾಲೆ ಸೇರಿದಂತೆ ಪಾಲಿಕೆ ವ್ಯಾಪ್ತಿಯ ಎಲ್ಲ ನಾಲೆಗಳನ್ನೂ ಸ್ವಚ್ಛಗೊಳಿಸಿದ್ದೇವೆ. ಚರಂಡಿಗಳನ್ನು ಸಮರ್ಪಕವಾಗಿ ನಿರ್ವಹಣೆ ಮಾಡಿ, ಮಳೆನೀರು ಸರಾಗವಾಗಿ ಹರಿದುಹೋಗಲು ವ್ಯವಸ್ಥೆ ಮಾಡುತ್ತಿದ್ದೇವೆ’ ಎಂದು ಪಾಲಿಕೆ ಆಯುಕ್ತ ಪಿ.ಎನ್‌.ಲೋಕೇಶ ‘ಪ್ರಜಾವಾಣಿ’ಗೆ ತಿಳಿಸಿದರು.

‘ಈಗಷ್ಟೇ ಮಳೆ ಆರಂಭವಾಗಿದೆ. ಮಳೆ ಬಿರುಸುಗೊಂಡ ನಂತರ ಮನೆಗೆ ನೀರು ನುಗ್ಗಿ ಜನರಿಗೆ ತೊಂದರೆಯಾದರೆ,  ತ್ವರಿತವಾಗಿ ಆಶ್ರಯಕ್ಕಾಗಿ 15 ಕಾಳಜಿ ಕೇಂದ್ರ ತೆರೆಯಲು ಜಾಗ ಗುರುತಿಸಿದ್ದೇವೆ’ ಎಂದರು.

ಬೆಳಗಾವಿಯ ಅಶೋಕ ನಗರದ ನಾಲೆಯಲ್ಲಿ ಮಳೆ ನೀರು ಸರಾಗವಾಗಿ ಹರಿಯುತ್ತಿರುವುದು 
ಬೆಳಗಾವಿಯ ಅಶೋಕ ನಗರದ ನಾಲೆಯಲ್ಲಿ ಮಳೆ ನೀರು ಸರಾಗವಾಗಿ ಹರಿಯುತ್ತಿರುವುದು 
ಮಳೆಯಿಂದ ಬೆಳಗಾವಿಯಲ್ಲಿ ಹಾನಿಗೀಡಾಗಿದ್ದ ವಿದ್ಯುತ್‌ ಕಂಬವನ್ನು ಹೆಸ್ಕಾಂ ಸಿಬ್ಬಂದಿ ದುರಸ್ತಿ ಮಾಡುತ್ತಿರುವುದು
ಮಳೆಯಿಂದ ಬೆಳಗಾವಿಯಲ್ಲಿ ಹಾನಿಗೀಡಾಗಿದ್ದ ವಿದ್ಯುತ್‌ ಕಂಬವನ್ನು ಹೆಸ್ಕಾಂ ಸಿಬ್ಬಂದಿ ದುರಸ್ತಿ ಮಾಡುತ್ತಿರುವುದು
ಮಳೆಗಾಲದಲ್ಲಿ ಯಾರಿಗೆ ತೊಂದರೆಯಾದರೂ ತ್ವರಿತವಾಗಿ ಸ್ಪಂದಿಸಲು ನಾಲ್ಕು ತುರ್ತು ಸ್ಪಂದನಾ ತಂಡಗಳನ್ನು ನಿಯೋಜಿಸಿದ್ದೇವೆ
–ಪಿ.ಎನ್‌.ಲೋಕೇಶ ಆಯುಕ್ತ ಮಹಾನಗರ ಪಾಲಿಕೆ
ಮಳೆಗಾಲದಲ್ಲಿ ವಿದ್ಯುತ್‌ ಅವಘಡ ಸಂಭವಿಸಿದರೆ 24x7 ಮಾದರಿಯಲ್ಲಿ ಕಾರ್ಯಾಚರಣೆ ಕೈಗೊಳ್ಳುತ್ತಿದ್ದೇವೆ. ಇದಕ್ಕಾಗಿ ವಾಹನ ಸಿಬ್ಬಂದಿ ಕಾಯ್ದಿರಿಸಿದ್ದೇವೆ
–ಅಶ್ವಿನ್‌ ಶಿಂಧೆ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌ ಹೆಸ್ಕಾಂ ಬೆಳಗಾವಿ ನಗರ ಉಪವಿಭಾಗ
ಪ್ರತಿಬಾರಿ ಮಳೆಗಾಲದಲ್ಲಿ ದೊಡ್ಡ ಅನಾಹುತವಾದ ಮೇಲೆ ಅಧಿಕಾರಿಗಳು ಎಚ್ಚೆತ್ತುಕೊಳ್ಳುತ್ತಾರೆ. ಇದರ ಬದಲಿಗೆ ಮೊದಲೇ ಮುನ್ನೆಚ್ಚರಿಕೆ ವಹಿಸಬೇಕು
–ವೀರೇಂದ್ರ ಗೊಬರಿ ವಾಹನ ಸವಾರ

25 ವಿದ್ಯುತ್‌ ಪರಿವರ್ತಕಗಳಿಗೆ ಹಾನಿ

‘ಈ ಬಾರಿ ಮಳೆಗಾಲದಲ್ಲಿ ಬೆಳಗಾವಿ ನಗರದಲ್ಲಿ ಮೂರು ವಿದ್ಯುತ್‌ ಕಂಬ 20 ಇನ್ಸುಲೇಟರ್‌ಗಳು ಮತ್ತು 25 ವಿದ್ಯುತ್‌ ಪರಿವರ್ತಕಗಳಿಗೆ ಹಾನಿಯಾಗಿದೆ. ಯಾವುದೇ ಸ್ಥಳದಲ್ಲಿ ವಿದ್ಯುತ್‌ ನಿಲುಗಡೆಯಾದರೂ ತ್ವರಿತವಾಗಿ ಕಾರ್ಯಾಚರಣೆ ನಡೆಸಿ ವಿದ್ಯುತ್‌ ಸಂಪರ್ಕ ಕಲ್ಪಿಸುತ್ತಿದ್ದೇವೆ’ ಎಂದು ಹೆಸ್ಕಾಂ ಅಧಿಕಾರಿಗಳು ಹೇಳುತ್ತಾರೆ. ‘ಬೆಳಗಾವಿಯಲ್ಲಿ ಮಹಾನಗರ ಪಾಲಿಕೆಯವರು ಬೀದಿದೀಪಗಳ ನಿರ್ವಹಣೆ ಮಾಡುತ್ತಾರೆ. ಹಲವು ಮುಖ್ಯ ರಸ್ತೆಗಳಲ್ಲಿನ ವಿದ್ಯುತ್‌ ಸ್ವಿಚ್‌ಬೋರ್ಡ್‌ ತೆರೆದ ಸ್ಥಿತಿಯಲ್ಲಿದ್ದು ಅಪಾಯಕ್ಕೆ ಆಹ್ವಾನ ನೀಡುತ್ತಿವೆ. ಮಳೆನೀರಿನಲ್ಲಿ ವಿದ್ಯುತ್‌ ಪ್ರವಹಿಸಿ ಅವಘಡ ಸಂಭವಿಸಿದರೆ ಯಾರು ಹೊಣೆ? ತಕ್ಷಣವೇ ಇದನ್ನು ಸರಿಪಡಿಸಿ ಜನರ ಸುರಕ್ಷತೆ ನಿಟ್ಟಿನಲ್ಲಿ ಸೂಕ್ತ ಕ್ರಮ ಕೈಗೊಳ್ಳಬೇಕು’ ಎಂದು ಸ್ಥಳೀಯರಾದ ನಾಗರಾಜ ದೇಸಾಯಿ ಒತ್ತಾಯಿಸುತ್ತಾರೆ.

ಸಹಾಯವಾಣಿ ಕೇಂದ್ರ ಸ್ಥಾಪನೆ
ಮಳೆಗಾಲದಲ್ಲಿ ಸ್ಥಳೀಯ ದೂರುಗಳಿಗೆ ಸ್ಪಂದಿಸಲು ಮಹಾನಗರ ಪಾಲಿಕೆ ಕಚೇರಿಯಲ್ಲಿ ಸಹಾಯವಾಣಿ ಕೇಂದ್ರ ತೆರೆಯಲಾಗಿದೆ. ಮಳೆಗೆ ಸಂಬಂಧಿಸಿ ಏನೇ ದೂರುಗಳಿದ್ದರೂ 0831–2405337 ಈ ಸಂಖ್ಯೆಗೆ ಕರೆ ಮಾಡಬಹುದು. ‘ಮಳೆ ಸುರಿದಾಗ ಪ್ರತಿದಿನ ಸರಾಸರಿ 10 ಕರೆ ಬರುತ್ತಿವೆ. ಚರಂಡಿಗಳು ಬ್ಲಾಕ್‌ ಆಗಿ ರಸ್ತೆ ಮೇಲೆ ಕೊಳಚೆ ನೀರು ಹರಿಯುವ ಬಗ್ಗೆಯೇ ಜನ ಹೆಚ್ಚಾಗಿ ದೂರುತ್ತಿದ್ದಾರೆ. ದೂರು ಬಂದ ಸ್ಥಳಕ್ಕೆ ಕೂಡಲೇ ಸಿಬ್ಬಂದಿ ಕಳುಹಿಸಿ ಸಮಸ್ಯೆ ಇತ್ಯರ್ಥಪಡಿಸಲಾಗುತ್ತಿದೆ’ ಎಂದು ಸಹಾಯವಾಣಿ ಕೇಂದ್ರದ ಸಿಬ್ಬಂದಿ ಹೇಳಿದರು.

ನೆಲಕ್ಕುರುಳುತ್ತಿರುವ ಮರಗಳು

‘ನಗರದ ಮುಖ್ಯರಸ್ತೆಗಳು ಒಳರಸ್ತೆಗಳಲ್ಲಿನ ಹಲವು ಮರಗಳು ಅಪಾಯದ ಸ್ಥಿತಿಯಲ್ಲಿವೆ. ಮಳೆ– ಗಾಳಿ ಜೋರಾಗುತ್ತಿದ್ದಂತೆ ನೆಲಕ್ಕುರುಳುತ್ತಿವೆ. ಈ ಬಾರಿ ಮಳೆಗಾಲದಲ್ಲೇ ನಗರದಲ್ಲಿ 10ಕ್ಕೂ ಅಧಿಕ ಮರ ಬಿದ್ದಿವೆ. ಪ್ರತಿ ಮರ ಬಿದ್ದಾಗಲೂ ಕೆಲಹೊತ್ತು ಸಂಚಾರ ಸಮಸ್ಯೆ ಎದುರಾಗುತ್ತಲೇ ಇದೆ. ಇಲ್ಲಿ ಅಪಾಯ ತಂದೊಡ್ಡಬಲ್ಲ ಮರಗಳನ್ನು ತ್ವರಿತವಾಗಿ ಕತ್ತರಿಸಬೇಕು’ ಎಂಬ ಆಗ್ರಹ ಜನರಿಂದ ಕೇಳಿಬರುತ್ತಿದೆ.

ಅತಿಕ್ರಮಣ ತೆರವಾಗಲಿ
ಬೆಳಗಾವಿಯ ವಡಗಾವಿಯ ಆನಂದ ನಗರದ ಮನೆಗಳಿಗೆ ಶನಿವಾರ ರಾತ್ರಿ ನೀರು ನುಗ್ಗಿದ್ದರಿಂದ ಜನರು ಪ್ರಯಾಸ ಪಡಬೇಕಾಯಿತು. ‘ಆನಂದ ನಗರದ ನಾಲೆ ಅತಿಕ್ರಮಣವಾಗಿದೆ. ನೀರು ಹರಿಯಬೇಕಿದ್ದ ಜಾಗದಲ್ಲಿ ತಗಡಿನ ಶೆಡ್‌ ತಲೆ ಎತ್ತಿದ್ದು, ಮಳೆನೀರು ನ‌ಮ್ಮ ಮನೆಗಳಿಗೆ ನುಗ್ಗುತ್ತಿದೆ. ಯಾರೋ ಮಾಡಿದ ತಪ್ಪಿನಿಂದ ನಾವು ಶಿಕ್ಷೆ ಅನುಭವಿಸುವಂತಾಗಿದೆ. ಪಾಲಿಕೆ ಅಧಿಕಾರಿಗಳು ಕೂಡಲೇ ಅತಿಕ್ರಮಣ ತೆರವಿಗೆ ಮುಂದಾಗಬೇಕು’ ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT