ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾದರಿಯಾದ ರಾಜಾಪೂರ 'ಜ್ಞಾನ ದೇಗುಲ’

ವಂತಿಗೆ ಕೂಡಿಸಿ ಶಾಲೆಗೆ ನಿವೇಶನ ಖರೀದಿ, ಗಮನಸೆಳೆಯುವ ವಿಜ್ಞಾನ ಮಾದರಿಗಳು
Last Updated 4 ಜನವರಿ 2020, 7:04 IST
ಅಕ್ಷರ ಗಾತ್ರ

ಮೂಡಲಗಿ (ಬೆಳಗಾವಿ ಜಿಲ್ಲೆ): ‘ಶಿಕ್ಷಕರಲ್ಲಿ ಕಲಿಸುವ ಇಚ್ಛಾಶಕ್ತಿ, ಸಮನ್ವಯ ಮತ್ತು ಸಮುದಾಯ ಜನರ ಶೈಕ್ಷಣಿಕ ಸಹಭಾಗಿತ್ವ ಇದ್ದರೆ ಗ್ರಾಮಕ್ಕೆ ಜ್ಞಾನದ ಬೆಳಕು ಹರಿಯತ್ತದೆ’ ಎನ್ನುವುದಕ್ಕೆ ತಾಲ್ಲೂಕಿನ ರಾಜಾಪೂರ ಗ್ರಾಮದ ಸರ್ಕಾರಿ ಪ್ರೌಢಶಾಲೆ ಉದಾಹರಣೆಯಾಗಿದೆ.

ಪಾಲಕರು ಮತ್ತು ಗ್ರಾಮಸ್ಥರಿಗೆ ಶಾಲೆ ಬಗ್ಗೆ ಎಲ್ಲಿಲ್ಲದ ಅಭಿಮಾನವಿದೆ. ಇನ್ನೊಂದೆಡೆ ಶಿಕ್ಷಕರು ವಿದ್ಯಾರ್ಥಿಗಳ ಶೈಕ್ಷಣಿಕ ಸಾಮಾಜಿಕ ಮತ್ತು ನೈತಿಕ ಭವಿಷ್ಯದ ಬಗ್ಗೆ ಅತೀವ ಕಾಳಜಿ ಹೊಂದಿದ್ದಾರೆ. ಹೀಗಾಗಿ, ಶಾಲೆಯು ಗಮನಸೆಳೆಯುತ್ತಿದೆ.

ಆವರಣ ಪ್ರವೇಶಿಸುತ್ತಿದ್ದಂತೆ ಕಾನ್ವೆಂಟ್ ಶಾಲಾ ಆವರಣಕ್ಕೆ ಹೋದ ಅನುಭವವಾಗುತ್ತದೆ. ಗೋಡೆಗಳ ಮೇಲೆ ಗಮನಸೆಳೆಯುವ ಸುಂದರ ಚಿತ್ತಾರಗಳಿವೆ. ಆವರಣದಲ್ಲಿ ಗಿಡಗಳನ್ನು ಬೆಳೆಸಿದ್ದು, ಹಸಿರು ವಾತಾವರಣವಿದೆ. ಮಕ್ಕಳ ಆಟೋಟಕ್ಕೆ ಮೈದಾನವಿದೆ.

ಸಮುದಾಯದ ಸಹಭಾಗಿತ್ವ

ಕೃಷಿ ಹಿನ್ನೆಲೆಯ ಗ್ರಾಮವಾದ ರಾಜಾಪೂರಕ್ಕೆ ಪ್ರೌಢಶಾಲೆಯ ಅಗತ್ಯವನ್ನು ಮನಗಂಡು 2006ರಲ್ಲಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಅನುಮತಿ ಕೊಡಿಸಿದರು. ಗ್ರಾಮದ ಜನರೇ ವಂತಿಗೆ ಸೇರಿಸಿ ಶಾಲಾ ಕಟ್ಟಡ, ಆವರಣಕ್ಕಾಗಿ ಎಕರೆಯಷ್ಟು ಭೂಮಿ ಖರೀದಿಸಿಕೊಟ್ಟರು. ಅದರ ಬೆನ್ನಲ್ಲೇ ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಣ ಅಭಿಯಾನ (ಆರ್‌ಎಂಎಸ್ಎ) ಅಡಿಯಲ್ಲಿ ₹ 68 ಲಕ್ಷ ವೆಚ್ಚದ ಶಾಲೆಯ ಸುಂದರ ಕಟ್ಟಡ ನಿರ್ಮಾಣವಾಗಿ ಗ್ರಾಮೀಣ ಮಕ್ಕಳಿಗೆ ಜ್ಞಾನ ದೇಗುಲವಾಗಿದೆ; ಗ್ರಾಮಕ್ಕೆ ಕಳಶಪ್ರಾಯವಾಗಿದೆ. ಕೊಳವೆಬಾವಿ, ಕಾಂಪೌಂಡ್‌, ಆವರಣಕ್ಕೆ ಟೈಲ್ಸ್ ಅಳವಡಿಸುವ ಕೆಲಸವನ್ನು ಗ್ರಾಮ ಪಂಚಾಯಿತಿಯವರು ಮಾಡಿಸಿಕೊಟ್ಟಿದ್ದಾರೆ. ಮೈಕ್‌ಸೆಟ್‌, ಕ್ರೀಡಾ ಸಮವಸ್ತ್ರ ಮೊದಲಾದವುಗಳನ್ನು ಜನರು ದೇಣಿಗೆ ನೀಡಿದ್ದಾರೆ.

ಇಲ್ಲಿ 8ರಿಂದ 10ನೇ ತರಗತಿವರೆಗೆ ಇದೆ. ಪ್ರಸಕ್ತ ಸಾಲಿನಲ್ಲಿ 412 ವಿದ್ಯಾರ್ಥಿಗಳಿದ್ದಾರೆ. ಶೈಕ್ಷಣಿಕ ವಲಯದ ಸಮನ್ವಯಧಿಕಾರಿಯಾಗಿ ನಾಲ್ಕು ವರ್ಷಗಳ ಕಾರ್ಯನಿರ್ವಹಿಸಿರುವ ಎಲ್.ಆರ್. ಕೊಳವಿ ಮುಖ್ಯಶಿಕ್ಷಕರಾಗಿದ್ದಾರೆ. ಶೈಕ್ಷಣಿಕವಾಗಿ ಎಲ್ಲ ಸಾಧ್ಯತೆಗಳನ್ನೂ ಅನುಷ್ಠಾನಗೊಳಿಸಿದ್ದಾರೆ. ‘6 ಶಿಕ್ಷರಲ್ಲಿ ಇಬ್ಬರು ಎಂ.ಎಸ್ಸಿ, ಬಿ.ಇಡಿ, ಇಬ್ಬರು ಎಂ.ಎ. ಬಿ.ಇಡಿ ಪದವಿಗಳನ್ನು ಹೊಂದಿರುವ ವಿಷಯ ಶಿಕ್ಷಕರಾಗಿದ್ದಾರೆ. ದೈಹಿಕ ಶಿಕ್ಷಣ ಶಿಕ್ಷಕ ಮತ್ತು ಚಿತ್ರಕಲಾ ಶಿಕ್ಷಕರು ಸಹ ಸ್ನಾತಕೋತ್ತರ ಪದವೀಧರರೇ’ ಎಂದು ಶಿಕ್ಷಕರ ಬಗ್ಗೆ ಕೊಳವಿ ಮೆಚ್ಚುಗೆ ಸೂಚಿಸಿದರು. ‘ಯೋಗದಲ್ಲಿ ಡಿಪ್ಲೊಮಾ ಮಾಡಿರುವ ಶಿಕ್ಷಕ ವೈ.ಎನ್. ಲಕ್ಕಿಕೊಪ್ಪ ಪ್ರತಿ ಶನಿವಾರ ಬೆಳಿಗ್ಗೆ ಎಲ್ಲ ಮಕ್ಕಳಿಗೆ ಯೋಗ ಮಾಡಿಸುತ್ತಾರೆ’ ಎನ್ನುತ್ತಾರೆ ಅವರು.

ಈ ಶಾಲೆಯ ಮಕ್ಕಳು, ಪ್ರತಿಭಾ ಕಾರಂಜಿ, ಸತೀಶ ಆವಾರ್ಡ್ಸ್‌ ಮತ್ತು ಕ್ರೀಡೆ, ಭಾಷಣ, ಪ್ರಬಂಧ ಸ್ಪರ್ಧೆ ಹಾಗೂ ನಾಟಕ ಸ್ಪರ್ಧೆ ಸೇರಿದಂತೆ ವಿವಿಧ ಸ್ಪರ್ಧೆಗಳಲ್ಲಿ ರಾಜ್ಯ ಮಟ್ಟದವರೆಗೆ ಸ್ಪರ್ಧಿಸಿ ಪ್ರಶಸ್ತಿಗಳನ್ನು ಗಿಟ್ಟಿಸಿ ಗ್ರಾಮಕ್ಕೆ ಕೀರ್ತಿ ತಂದಿದ್ದಾರೆ.

ಸಂಪರ್ಕಕ್ಕೆ 9449883943 (ಮುಖ್ಯಶಿಕ್ಷಕ).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT