ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯೋತ್ಸವ: ಅದ್ಧೂರಿ ಮೆರವಣಿಗೆಗೆ ಆಗ್ರಹ

ಇಲ್ಲದಿದ್ದರೆ ಆಚರಣೆಗೆ ಸಮ್ಮತಿ ಇಲ್ಲ: ಕನ್ನಡಪರ ಸಂಘಟನೆಗಳು
Last Updated 16 ಅಕ್ಟೋಬರ್ 2021, 11:18 IST
ಅಕ್ಷರ ಗಾತ್ರ

ಬೆಳಗಾವಿ: ‘ನಗರದಲ್ಲಿ ಕರ್ನಾಟಕ ರಾಜ್ಯೋತ್ಸವ ಆಚರಣೆ ವೇಳೆ ಅದ್ಧೂರಿ ಮೆರವಣಿಗೆಗೆ ಅವಕಾಶ ಕೊಡಲೇಬೇಕು’ ಎಂದು ಕನ್ನಡಪರ ಸಂಘಟನೆಗಳ ಮುಖಂಡರು ಆಗ್ರಹಿಸಿದರು.

‘ಅದ್ಧೂರಿ ಮೆರವಣಿಗೆ ಇಲ್ಲದ ರಾಜ್ಯೋತ್ಸವ ಆಚರಣೆಗೆ ನಮ್ಮ ಸಮ್ಮತಿ ಇಲ್ಲ. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರವು ಅ.22ರ ಒಳಗೆ ನಿರ್ಧಾರ ಕೈಗೊಂಡು ತಿಳಿಸಬೇಕು. ಅಲ್ಲಿಯವರೆಗೆ ರಾಜ್ಯೋತ್ಸವಕ್ಕೆ ಸಂಬಂಧಿಸಿದಂತೆ ನಡೆಯುವ ಉಪ ಸಮಿತಿಗಳ ಸಭೆಗೆ ನಾವು ಹಾಜರಾಗುವುದಿಲ್ಲ’ ಎಂದು ತಿಳಿಸಿದರು.

ಇಲ್ಲಿನ ಕನ್ನಡ ಸಾಹಿತ್ಯ ಭವನದಲ್ಲಿ ಶನಿವಾರ ನಡೆದ ಸಭೆಯಲ್ಲಿ ಕೈಗೊಳ್ಳಲಾದ ನಿರ್ಣಯಗಳನ್ನು ಜಿಲ್ಲಾ ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿ ಅಧ್ಯಕ್ಷ ಅಶೋಕ ಚಂದರಗಿ ಪತ್ರಕರ್ತರಿಗೆ ತಿಳಿಸಿದರು.

‘ಬೆಳಗಾವಿಯ ಎಲ್ಲ ಶಾಸಕರು ಸರ್ಕಾರದ ಮೇಲೆ ಒತ್ತಡ ತರುವ ಮೂಲಕ ಅದ್ಧೂರಿ ಮೆರವಣಿಗೆಗೆ ಅವಕಾಶ ಸಿಗುವಂತೆ ನೋಡಿಕೊಳ್ಳುವ ಮೂಲಕ ತಮ್ಮ ಹೊಣೆಗಾರಿಕೆ ನಿಭಾಯಿಸಬೇಕು. ನಮ್ಮ ಬೇಡಿಕೆ ಈಡೇರಿಕೆಗೆ ಕ್ರಮ ಕೈಗೊಳ್ಳಬೇಕು’ ಎಂದು ಒತ್ತಾಯಿಸಿದರು.

ಕಾರಣ ಮುಂದಿಡುತ್ತಿದ್ದಾರೆ:

‘ಅಧಿಕಾರಿಗಳು ಕನ್ನಡಪರ ಸಂಘಟನೆಗಳ ಪದಾಧಿಕಾರಿಗಳಿಗೆ ಕರೆ ಮಾಡಿ, ‘ಮೆರವಣಿಗೆಗೆ ಅವಕಾಶ ಕೊಡುವುದಿಲ್ಲ’ ಎಂದು ತಿಳಿಸುತ್ತಿದ್ದಾರೆ. ‘ಉತ್ಸವವನ್ನು ಅದ್ಧೂರಿಯಾಗಿ ಆಯೋಜಿಸಲಾಗುವುದು; ಯಾವುದಕ್ಕೂ ಕೊರತೆ ಆಗದಂತೆ ನೋಡಿಕೊಳ್ಳಲಾಗುವುದು’ ಎಂದು ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಅವರುಈಚೆಗೆ ನಡೆದ ಪೂರ್ವಭಾವಿ ಸಭೆಯಲ್ಲಿ ಪ್ರಕಟಿಸಿದ್ದರು. ಆದರೆ, ಬಳಿಕ ಅಧಿಕಾರಿಗಳು ಕೋವಿಡ್ ಕಾರಣ ಮುಂದಿಡುತ್ತಿರುವುದು ಸರಿಯಲ್ಲ’ ಎಂದು ತಿಳಿಸಿದರು.

‘ಇದೇ ವರ್ಷ ಬೆಳಗಾವಿಯಲ್ಲಿ ನಡೆದ ರಾಜಕೀಯ ಪಕ್ಷಗಳ ಸಭೆ, ಮೆರವಣಿಗೆಗಳಿಗೆ ಅವಕಾಶ ಕೊಡಲಾಗಿದೆ. ಲೋಕಸಭೆ ಉಪ ಚುನಾವಣೆ, ಮಹಾನಗರ ಪಾಲಿಕೆ ಚುನಾವಣೆಗಳಲ್ಲಿ ಸಭೆಗಳಿಗೆ, ಗಣೇಶೋತ್ಸವ ಮತ್ತು ದಸರಾ ಹಬ್ಬದಲ್ಲಿ ಮೆರವಣಿಗೆಗಳಿಗೆ ಅವಕಾಶ ನೀಡಲಾಗಿದೆ. ಆದರೆ, ಕನ್ನಡಿಗರ ಏಕೈಕ ಹಬ್ಬವಾದ ರಾಜ್ಯೋತ್ಸವದ ಮೆರವಣಿಗೆಗೆ ಅವಕಾಶ ನೀಡಲು ಹಿಂದೇಟು ಹಾಕುತ್ತಿರುವುದು ತೀವ್ರ ಖಂಡನೀಯವಾಗಿದೆ. ರಾಜ್ಯೋತ್ಸವಕ್ಕೆ ಕೋವಿಡ್ ನೆಪ ಹೇಳುತ್ತಿರುವುದು ಸಾಧುವಲ್ಲ’ ಎಂದು ತಿಳಿಸಿದರು.

ಮುಖ್ಯಮಂತ್ರಿ ಗಮನಿಸಲಿ:

‘ಮೆರವಣಿಗೆಗೆ ಅವಕಾಶ ನೀಡುವಂತೆ ಜಿಲ್ಲಾಡಳಿತಕ್ಕೆ ಸೂಚನೆ ಕೊಡುವ ಕೆಲಸವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾಡಬೇಕು. ಕನ್ನಡ ಸಂಘಟನೆಗಳ ಸ್ಪಷ್ಟ ನಿರ್ಧಾರವನ್ನು ತಿಳಿಸಲು ಅ.18ರಂದು ಬೆಳಿಗ್ಗೆ 10.30ಕ್ಕೆ ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಅವರನ್ನು ಭೇಟಿಯಾಗುತ್ತೇವೆ. ಮನವಿ ಸಲ್ಲಿಸುತ್ತೇವೆ’ ಎಂದು ಮಾಹಿತಿ ನೀಡಿದರು.

ಮುಖಂಡರಾದ ರಮೇಶ ಸೊಂಟಕ್ಕಿ, ಮಹಾದೇವ ತಳವಾರ, ಮೆಹಬೂಬ ಮಕಾನದಾರ, ದೀಪಕ ಗಡಗನಟ್ಟಿ, ಮಹಾಂತೇಶ ರಣಗಟ್ಟಿಮಠ, ಬಾಬು ಸಂಗೋಡಿ, ಸಾಗರ ಬೋರಗಲ್ಲ, ಕಸ್ತೂರಿ ಭಾವಿ, ವಾಜೀದ ಹಿರೇಕೋಡಿ, ಆರ್. ಅಭಿಲಾಷ, ಸಂಜಯ ರಜಪೂತ, ಗಣೇಶ ರೋಖಡೆ, ಬಾಳು ಜಡಗಿ ಮೊದಲಾದವರು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT