ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಣಿ ಚನ್ನಮ್ಮ ವಿಶ್ವವಿದ್ಯಾಲಯ: ಬಾರದ ಫಲಿತಾಂಶ, ವಿದ್ಯಾರ್ಥಿಗಳು ಅತಂತ್ರ

ಪರೀಕ್ಷೆ ಮುಗಿದು 2 ತಿಂಗಳಾಗಿವೆ!
Last Updated 9 ಡಿಸೆಂಬರ್ 2021, 19:30 IST
ಅಕ್ಷರ ಗಾತ್ರ

ಬೆಳಗಾವಿ: ರಾಣಿ ಚನ್ನಮ್ಮ ವಿಶ್ವವಿದ್ಯಾಲಯ(ಆರ್‌ಸಿಯು) ವ್ಯಾಪ್ತಿಯಲ್ಲಿ ಸ್ನಾತಕೋತ್ತರ ಕೋರ್ಸ್‌ಗಳ(ಪಿಜಿ) ಅಂತಿಮ ಸೆಮಿಸ್ಟರ್‌ ಪರೀಕ್ಷೆ ‌ಮುಗಿದು 2 ತಿಂಗಳಾದರೂ ಫಲಿತಾಂಶ ಪ್ರಕಟವಾಗದಿರುವುದರಿಂದ ಸಾವಿರಾರು ವಿದ್ಯಾರ್ಥಿಗಳು ಅತಂತ್ರರಾಗಿದ್ದಾರೆ.

ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಸದ್ಯ ಅತಿಥಿ ಉಪನ್ಯಾಸಕರ ನೇಮಕ ಪ್ರಕ್ರಿಯೆ ನಡೆಯುತ್ತಿದೆ. ಖಾಸಗಿ ಪದವಿ ಕಾಲೇಜುಗಳೂ ಅತಿಥಿ ಉಪನ್ಯಾಸಕರನ್ನು ನೇಮಿಸಿಕೊಳ್ಳುತ್ತಿವೆ. ‍‍‍ಪ್ರಸಕ್ತ ಶೈಕ್ಷಣಿಕ ವರ್ಷ ಹೆಚ್ಚಿನ ವಿದ್ಯಾರ್ಥಿಗಳು ಪ್ರವೇಶ ಪಡೆದಿದ್ದು, ರಾಷ್ಟ್ರೀಯ ಶಿಕ್ಷಣ ನೀತಿಯೂ ಅನುಷ್ಠಾನಗೊಂಡಿದೆ. ಹಾಗಾಗಿ ಸರ್ಕಾರಿ ಹಾಗೂ ಖಾಸಗಿ ಎರಡೂ ಪದವಿ ಕಾಲೇಜುಗಳಲ್ಲಿ ಹೆಚ್ಚುವರಿಯಾಗಿ ಅತಿಥಿ ಉಪನ್ಯಾಸಕರ ಹುದ್ದೆಗಳನ್ನೂ ಸೃಜಿಸಲಾಗುತ್ತಿದೆ. ಆದರೆ, ಫಲಿತಾಂಶವೆ ಬಾರದೆ ಯಾವ ಹುದ್ದೆಗೂ ಅರ್ಜಿ ಸಲ್ಲಿಸಲಾಗದ ತ್ರಿಶಂಕು ಸ್ಥಿತಿಗೆ ವಿದ್ಯಾರ್ಥಿಗಳು ಸಿಲುಕಿದ್ದಾರೆ. ಉದ್ಯೋಗವಕಾಶಗಳು ಕೈತಪ್ಪುವ ಆತಂಕವೂ ಕಾಡುತ್ತಿದೆ ಎನ್ನುತ್ತಾರೆ ಅವರು.

2,500 ವಿದ್ಯಾರ್ಥಿಗಳು: ಆರ್‌ಸಿಯು ಕ್ಯಾಂಪಸ್‌, ವಿಜಯಪುರ, ಬಾಗಲಕೋಟೆ, ಜಮಖಂಡಿ ಸ್ನಾತಕೋತ್ತರ ಅಧ್ಯಯನ ಕೇಂದ್ರ ಹಾಗೂ ಮೂರೂ ಜಿಲ್ಲೆಗಳ ಕೆಲವು ಪದವಿ ಕಾಲೇಜುಗಳಲ್ಲಿ ಅಭ್ಯಸಿಸುತ್ತಿದ್ದ 2,500 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. ಸೆಪ್ಟೆಂಬರ್‌ ಕೊನೆಯ ವಾರದಿಂದ ಅಕ್ಟೋಬರ್‌ ಮೊದಲ ವಾರದ ಅವಧಿಯಲ್ಲಿ ವಿವಿಧ ವಿಭಾಗಗಳ ಪರೀಕ್ಷೆ ಮುಗಿದಿದ್ದವು.

ಅವಕಾಶದಿಂದ ವಂಚಿತರಾದೆವು: ‘ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಸಹಾಯಕ ಪ್ರಾಧ್ಯಾಪಕರ ಹುದ್ದೆ ನೇಮಕಾತಿಗೆ ಸರ್ಕಾರ ಈಚೆಗೆ ಅರ್ಜಿ ಆಹ್ವಾನಿಸಿತ್ತು. ರಾಷ್ಟ್ರೀಯ ಅರ್ಹತಾ ಪರೀಕ್ಷೆ ಹಾಗೂ ರಾಜ್ಯಮಟ್ಟದ ಅರ್ಹತಾ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದ ನಾವೂ ಈ ಹುದ್ದೆಗೆ ಅರ್ಜಿ ಸಲ್ಲಿಸಲು ಅವಕಾಶವಿತ್ತು. ಆದರೆ, ಸ್ನಾತಕೋತ್ತರ ಪದವಿಯ 4ನೇ ಸೆಮಿಸ್ಟರ್‌ ಫಲಿತಾಂಶ ಪ್ರಕಟವಾಗದೆ ಇರುವುದರಿಂದ ಅವಕಾಶದಿಂದ ವಂಚಿತರಾದೆವು. ಈಗ ಸರ್ಕಾರಿ ಅಥವಾ ಖಾಸಗಿ ಪದವಿ ಕಾಲೇಜುಗಳಲ್ಲಿನ ಅತಿಥಿ ಉಪನ್ಯಾಸಕರ ಹುದ್ದೆಗಳ ನೇಮಕಾತಿ ಪ್ರಕ್ರಿಯೆ ನಡೆಯುತ್ತಿದೆ. ಅಲ್ಲಿಯೂ ನೌಕರಿ ಸಿಗುವುದು ಅನುಮಾನ ಎಂಬಂತಾಗಿದೆ. ಉನ್ನತ ವ್ಯಾಸಂಗ ಕೈಗೊಳ್ಳಲು ತೊಂದರೆಯಾಗಿದೆ’ ಎಂದು ವಿದ್ಯಾರ್ಥಿಗಳು ಅಳಲು ‘ಪ್ರಜಾವಾಣಿ’ಯೊಂದಿಗೆ ತೋಡಿಕೊಂಡರು.

‘ಫಲಿತಾಂಶ ವಿಚಾರವಾಗಿ ಮಾಹಿತಿಗೆ ಹಲವು ಬಾರಿ ವಿಶ್ವವಿದ್ಯಾಲಯ ಸಂಪರ್ಕಿಸಿದರೂ ಸ್ಪಂದನೆ ಸಿಕ್ಕಿಲ್ಲ. ಅಧಿಕಾರಿಗಳು ಇನ್ನಾದರೂ ಎಚ್ಚೆತ್ತುಕೊಂಡು ತ್ವರಿತವಾಗಿ ಫಲಿತಾಂಶ ಪ್ರಕಟಿಸಬೇಕು. ನಮ್ಮ ಬದುಕಿನೊಂದಿಗೆ ಚೆಲ್ಲಾಟವಾಡಬಾರದು’ ಎಂದು ಅವರು ಕೋರಿದರು.‌

‘ಧಾರವಾಡ ವಿಭಾಗದಲ್ಲಿ 100 ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಿವೆ. ಅತಿಥಿ ಉಪನ್ಯಾಸಕರನ್ನು ನೇಮಿಸಿಕೊಳ್ಳಲು ಆಯಾಕಾಲೇಜುಗಳ ಪ್ರಾಚಾರ್ಯರಿಗೆ ಅನುಮತಿ ನೀಡಲಾಗಿದೆ. ಕೆಲವೆಡೆ ಭರ್ತಿಯಾಗಿವೆ. ಇನ್ನೂ ಕೆಲವೆಡೆ ಅತಿಥಿ ಉಪನ್ಯಾಸಕರ ನೇಮಕ ಪ್ರಕ್ರಿಯೆ ಪ್ರಗತಿಯಲ್ಲಿದ್ದು, ಆಸಕ್ತರು ಅರ್ಜಿ ಸಲ್ಲಿಸಬಹುದು’ ಎನ್ನುತ್ತಾರೆ ಕಾಲೇಜು ಶಿಕ್ಷಣ ಇಲಾಖೆ ಜಂಟಿ ನಿರ್ದೇಶಕ ಡಾ.ವಿ.ಎಸ್‌. ಹನುಮಂತರಾಯ.

ಪ್ರಕಟಿಸಲು ಕ್ರಮ
ಇದೇ ಮೊದಲ ಬಾರಿ ನಮ್ಮಲ್ಲಿ ಡಿಜಿಟಲ್‌ ಮೌಲ್ಯಮಾಪನ ಮಾಡುತ್ತಿದ್ದೇವೆ. ಮೌಲ್ಯಮಾಪಕರಿಗೆ ಈ ವ್ಯವಸ್ಥೆ ಬಗ್ಗೆ ಸಮರ್ಪಕ ಮಾಹಿತಿ ಇಲ್ಲದ್ದರಿಂದ ಫಲಿತಾಂಶ ನೀಡಲು ವಿಳಂಬವಾಗುತ್ತಿದೆ. ಶೀಘ್ರವೇ ಪ್ರಕ್ರಿಯೆ ಪೂರ್ಣಗೊಳಿಸಿ ಫಲಿತಾಂಶ ಪ್ರಕಟಿಸಲಾಗುವುದು.
–ಪ್ರೊ.ಎಂ. ರಾಮಚಂದ್ರಗೌಡ, ಕುಲಪತಿ, ರಾಣಿ ಚನ್ನಮ್ಮ ವಿಶ್ವವಿದ್ಯಾಲಯ, ಬೆಳಗಾವಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT